ಚಾಮರಾಜನಗರ: ಜಿಲ್ಲೆಯಲ್ಲಿ ಕಳೆದ 7 ತಿಂಗಳ ಬಳಿಕ ಇದೇ ಪ್ರಥಮ ಬಾರಿಗೆ ಸೋಮವಾರ ಯಾವುದೇ ಕೋವಿಡ್-19 ದೃಢೀಕೃತ ಪ್ರಕರಣ ವರದಿಯಾಗಿಲ್ಲ!
ಭಾನುವಾರ ಸಂಗ್ರಹಿಸಲಾದ 397 ಜನರ ಗಂಟಲು ದ್ರವ ಮಾದರಿಯನ್ನು ಜಿಲ್ಲೆಯ ವೈದ್ಯಕೀಯ ವಿಜ್ಞಾನ ಸಂಸ್ಥೆಗಳ ಆರ್.ಟಿ.ಪಿ.ಸಿ.ಆರ್ ಪ್ರಯೋಗಾಲಯದಲ್ಲಿ ಪರೀಕ್ಷೆಗೆ ಒಳಪಡಿಸಲಾಗಿತ್ತು. ಒಟ್ಟು 397 ಗಂಟಲು ದ್ರವ ಮಾದರಿ ಪರೀಕ್ಷೆಯನ್ನು ಪ್ರಯೋಗಾಲಯ ಸೋಮವಾರ ಪೂರ್ಣಗೊಳಿಸಿದ್ದು ಯಾವುದೇ ಮಾದರಿಯಲ್ಲೂ ಕೋವಿಡ್-19 ದೃಢೀಕೃತವಾಗಿಲ್ಲ ಎಂದು ಆರ್.ಟಿ.ಪಿ.ಸಿ.ಆರ್ ಪ್ರಯೋಗಾಲಯದ ಮುಖ್ಯಸ್ಥರು ವರದಿ ನೀಡಿದ್ದಾರೆ.
ಇದನ್ನೂ ಓದಿ:ಕೆ.ಎಸ್.ಈಶ್ವರಪ್ಪ : ಗೋವಿನ ಶಾಪದಿಂದ ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನ ಕಳೆದುಕೊಂಡರು
ಕಳೆದ 7 ತಿಂಗಳ ಬಳಿಕ ಶೂನ್ಯ ಕೋವಿಡ್ ಪ್ರಕರಣ ವರದಿಯಾಗುವ ಮೂಲಕ ಜಿಲ್ಲೆ ಗಮನಸೆಳೆದಿದೆ. ಆದರೆ ಪ್ರತಿ ದಿನ ಸರಾಸರಿ 1400 ರಷ್ಟು ಗಂಟಲು ದ್ರವ ಮಾದರಿಯನ್ನು ಪರೀಕ್ಷಿಸಲಾಗುತ್ತಿತ್ತು. ಭಾನುವಾರ 393 ಮಾದರಿಗಳನ್ನಷ್ಟೇ ಪರೀಕ್ಷಿಸಲಾಗಿದೆ. ಹೀಗಾಗಿ ದೃಢೀಕೃತ ಪ್ರಕರಣ ಕಂಡುಬಂದಿಲ್ಲ. ಎಂದಿನಂತೆ 1300-1400 ಮಾದರಿಗಳನ್ನು ಪರೀಕ್ಷಿಸಿದ್ದರೆ ನೈಜ ಫಲಿತಾಂಶ ಲಭ್ಯವಾಗುತ್ತಿತ್ತು. ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿರುವವರ ಸಂಖ್ಯೆಯೂ ಶೂನ್ಯವಾಗಿರುವುದು ಸಮಾಧಾನಕರ ಬೆಳವಣಿಗೆಯಾಗಿದೆ.
ಸೋಮವಾರ 9 ಮಂದಿ ಗುಣಮುಖರಾಗಿದ್ದಾರೆ. ಜಿಲ್ಲೆಯಲ್ಲಿ 39 ಕೋವಿಡ್ ಪ್ರಕರಣಗಳು ಸಕ್ರಿಯವಾಗಿವೆ. ಇವರಲ್ಲಿ 29 ಮಂದಿ ಮನೆಯಲ್ಲಿದ್ದುಕೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ. ಇದುವರೆಗೆ 131 ಮಂದಿ ಸೋಂಕಿತರು ಮೃತಪಟ್ಟಿದ್ದಾರೆ. ಒಟ್ಟು 6828 ಪ್ರಕರಣಗಳು ದೃಢಪಟ್ಟಿದ್ದು, ಇವರಲ್ಲಿ, 6658 ಮಂದಿ ಗುಣಮುಖರಾಗಿದ್ದಾರೆ ಎಂದು ತಿಳಿದುಬಂದಿದೆ.
2020ರ ಮಾರ್ಚ್‌ನಿಂದ ರಾಜ್ಯದೆಲ್ಲೆಡೆ ಕೋವಿಡ್ ಪ್ರಕರಣಗಳು ಕಂಡುಬಂದರೂ ಚಾಮರಾಜನಗರ ಜಿಲ್ಲೆಯಲ್ಲಿ 2020ರ ಜೂನ್ 7ರವರೆಗೆ ಒಂದೂ ಕೋವಿಡ್ ಪ್ರಕರಣ ವರದಿಯಾಗಿರಲಿಲ್ಲ. ಚಾಮರಾಜನಗರದ ಜಿಲ್ಲಾ ಕೋವಿಡ್-19 ಆಸ್ಪತ್ರೆ ಮಾಹಿತಿ ನೀಡಿದೆ.