Advertisement
ಅಪ್ಪಚ್ಚಿಯಾಗಿ ಬಿದ್ದಿರುವ ಪ್ಲಾಸ್ಟಿಕ್ ಬಾಟಲಿ, ಖಾಲಿ ಚಿಪ್ಸ್ ಪ್ಯಾಕೆಟ್, ಮದ್ಯದ ಬಾಟಲಿಗಳು, ಪಕ್ಕದಲ್ಲೇ ನನ್ನನ್ನು ಬಳಸಿ ಎಂಬ ಫಲಕ ಹೊತ್ತು ಸೊರಗುತ್ತಿರುವ ಕಸದ ಬುಟ್ಟಿ… ಇದು ಬಹುತೇಕ ಪ್ರವಾಸಿ ತಾಣಗಳಲ್ಲಿ ಕಾಣುವ ಸಾಮಾನ್ಯ ದೃಶ್ಯ. ಪ್ರವಾಸವೆಂದರೆ, ಮೋಜು-ಮಸ್ತಿ ಮಾಡುತ್ತಾ ಸೆಲ್ಫಿ ಕ್ಲಿಕ್ಕಿಸಿಕೊಳ್ಳುವುದು ಎಂದೇ ಭಾವಿಸಿರುವ ನಮಗೆ, ಆ ಸ್ಥಳದ ಸ್ವತ್ಛತೆಯ ಕಡೆ ಗಮನ ಹರಿಯುವುದೇ ಅಪರೂಪ. ಮನುಷ್ಯ ಕಾಲಿಟ್ಟ ಕಡೆಯಲ್ಲೆಲ್ಲ ಒಂದು ಕಸದ ರಾಶಿ ಉತ್ಪತ್ತಿಯಾಗುತ್ತದೆ ಎನ್ನುವುದಕ್ಕೆ, ಮನುಷ್ಯ ವಸತಿ ಇರದ ಕಾಡಿನ ಮಧ್ಯೆ ಇರುವ ಪ್ರವಾಸಿ ತಾಣಗಳ ಬಳಿಯೂ ಕಾಣಸಿಗುವ ತ್ಯಾಜ್ಯವೇ ಸಾಕ್ಷಿ. ಆದರೆ, ಬೆಂಗಳೂರಿನ ಎಂಜಿನಿಯರ್ ಶಿಲ್ಪಿ ಸಾಹು, ಪ್ರವಾಸ ಹೊರಡುವ ರೀತಿಯೇ ಭಿನ್ನ. ಯಾವುದೇ ಬಗೆಯಲ್ಲಿ ಪ್ಲಾಸ್ಟಿಕ್ ಬಳಸದೆ, ಒಂದು ಕಸದ ತುಣುಕನ್ನೂ ಎಸೆಯದೆ, ವಿಮಾನದಲ್ಲೂ ಪ್ಲಾಸ್ಟಿಕ್ ತಟ್ಟೆ-ಲೋಟವನ್ನು ಮುಟ್ಟದೆಯೇ ಝೀರೋ ವೇಸ್ಟೇಜ್ ಟೂರ್ ಮಾಡುವ ಇವರನ್ನು “ಸ್ವತ್ಛ ಭಾರತದ ಶಿಲ್ಪಿ’ ಎನ್ನಲಡ್ಡಿಯಿಲ್ಲ.ಶಿಲ್ಪಿ ಸಾಹು ಕಳೆದ ಮೇನಲ್ಲಿ ಈಶಾನ್ಯ ಭಾರತಕ್ಕೆ ಪ್ರವಾಸ ಹೋಗಿದ್ದರು. ಶಿಲ್ಲಾಂಗ್, ಗ್ಯಾಂಗ್ಟಕ್, ಚಿರಾಪುಂಜಿ ಎಂದು 11 ದಿನಗಳ ಆ ಸುತ್ತಾಟದಲ್ಲಿ ಅವರು ಎಲ್ಲಿಯೂ ಪ್ಲಾಸ್ಟಿಕ್ ವಸ್ತುವನ್ನು ಬಳಸಲಿಲ್ಲ. ಹೋಟೆಲ್ ರೂಮಿನಲ್ಲಿ ಮಿನರಲ್ ಬಾಟಲಿ ಕೊಟ್ಟಾಗ ನೋ ಥ್ಯಾಂಕ್ಸ್ ಎಂದು ಸ್ಟೀಲ್ ಬಾಟಲಿಗೆ, ಹೋಟೆಲ್‌ನಲ್ಲಿ ಸಿಗುವ ನೀರನ್ನೇ ತುಂಬಿಸಿ, ಕುಡಿದಿದ್ದಾರೆ. ರಸ್ತೆಬದಿಯ ಚಹಾದಂಗಡಿಯವನೂ ಇವರ ಸ್ಟೀಲ್ ಲೋಟಕ್ಕೆ ಚಹಾ ಸುರಿದಿದ್ದಾನೆ. ಅಷ್ಟೇ ಯಾಕೆ, ವಿಮಾನದಲ್ಲೂ ಅವರು ಗಗನಸಖೀಯರು ನೀಡುವ ಪ್ಲಾಸ್ಟಿಕ್ ತಟ್ಟೆ, ಲೋಟ, ಬೌಲ್‌ನ ಆಹಾರ ಸೇವಿಸಿಲ್ಲ.
ಕಾಫಿ-ಟೀ ಕುಡಿಯಲು ಬಳಸುವ ಪೇಪರ್ ಲೋಟದ ಮೇಲೂ ಪ್ಲಾಸ್ಟಿಕ್ ಲೇಪನವಿದ್ದು, ಅದು ಮರುಬಳಕೆಗೆ ಯೋಗ್ಯವಲ್ಲ. ಎಸೆಯಲ್ಪಟ್ಟ ಲೋಟಗಳು ಬೇಗ ಕರಗಿ ಮಣ್ಣಾಗುವುದೂ ಇಲ್ಲ. ಅಂಥ ಲೋಟಗಳ ಬಳಕೆಯನ್ನು ತಡೆಯಲು ಶಿಲ್ಪಿ, ಪ್ರವಾಸದ ವೇಳೆ ಸ್ಟೀಲ್ ಲೋಟಗಳನ್ನು ಬಳಸುತ್ತಾರೆ. ಜೊತೆಗೆ ಕಿಟ್‌ನಲ್ಲಿ ಸ್ಟೀಲ್ ತಟ್ಟೆ, ಬಾಟಲಿ, ಬೌಲ್, ಚಮಚವಿರುತ್ತದೆ. ದೊಡ್ಡ ಹೋಟೆಲ್ ಇರಲಿ, ಬೀದಿಬದಿಯ ಚಹಾ ಇರಲಿ, ಯೂಸ್ ಆ್ಯಂಡ್ ತ್ರೋ ಪ್ಲಾಸ್ಟಿಕ್‌ನಲ್ಲಿ ಏನೇ ನೀಡಿದರೂ ಸ್ವೀಕರಿಸುವುದಿಲ್ಲ. ಪ್ರಯಾಣದ ವೇಳೆ ಚಿಪ್ಸ್, ಲೇಸ್, ಕುರುಕುರೆ, ಬಿಸ್ಕೆಟ್, ಚಾಕೋಲೇಟ್ ಇವ್ಯಾವುದನ್ನೂ ಶಿಲ್ಪಿ ಕೊಳ್ಳುವುದಿಲ್ಲ. ಮನೆಯಿಂದ ಹೊರಡುವಾಗಲೇ ತಾಜಾ ಹಣ್ಣು, ಕಾಳುಗಳು, ಒಣಹಣ್ಣುಗಳ ಪ್ಯಾಕ್ ಕೊಂಡೊಯ್ಯುವ ಅವರಿಗೆ, ಚಿಪ್ಸ್ ತಿಂದು ಕವರ್ ಎಸೆಯುವ ಪ್ರಮೇಯವೇ ಬರುವುದಿಲ್ಲ. ಪರ್ವತವೇರುವ ಪ್ಲಾಸ್ಟಿಕ್
ಈಶಾನ್ಯ ಭಾರತದಲ್ಲಿ, ಸಮುದ್ರ ಮಟ್ಟಕ್ಕಿಂತ ಸಾವಿರಾರು ಮೀಟರ್ ಎತ್ತರವಿರುವ ಬುಮ್ಲಾ ಪಾಸ್, ಸೇಲಾ ಪಾಸ್‌ನಂಥ ಪ್ರದೇಶಗಳಲ್ಲೂ ಪ್ಲಾಸ್ಟಿಕ್ ಬಾಟಲಿಗಳು, ಪಾನ್‌ಪರಾಗ್ ಕವರ್, ಚಿಪ್ಸ್ ಪ್ಯಾಕೆಟ್‌ಗಳು ಕಣ್ಣಿಗೆ ರಾಚುತ್ತವಂತೆ. ಆಗಾಗ ವಿದೇಶ ಪ್ರವಾಸವನ್ನೂ ಮಾಡುವ ಶಿಲ್ಪಿ, ವಿದೇಶಿಯರ ಸ್ವತ್ಛತಾ ಮನೋಭಾವ ನಮ್ಮಲ್ಲೂ ಮೂಡಬೇಕಿದೆ ಎನ್ನುತ್ತಾರೆ.
ಹೆಚ್ಚಿನವರಿಗೆ ಅರ್ಥವೇ ಆಗಿಲ್ಲ
ಹೋಟೆಲ್‌ಗಳಲ್ಲಿ ಕೊಡುವ ನೀರಿನ ಬಾಟಲಿಯನ್ನು ನಿರಾಕರಿಸಿದಾಗ ಹೋಟೆಲ್ ಸಿಬ್ಬಂದಿ ಇವರನ್ನು ವಿಚಿತ್ರವಾಗಿ ನೋಡುತ್ತಿದ್ದರಂತೆ. ಮಿನರಲ್ ನೀರು ಬಿಟ್ಟು, ಸಾದಾ ನೀರು ಕುಡಿಯುತ್ತಿದ್ದಾರಲ್ಲಾ ಎಂದು. ಬೀದಿಬದಿಯ ಅಂಗಡಿಯಲ್ಲಿ ಇವರು ಸ್ಟೀಲ್ ಲೋಟ ಹೊರತೆಗೆದಾಗ, ಬಹುಶಃ ಇವರಿಗೆ “ಮಡಿ ಇರಬೇಕು ಅಥವಾ ಮಹಾ ಕ್ಲೀನ್ ಜನ ಇರಬೇಕು’ ಅಂತ ಆಡಿಕೊಳ್ಳುತ್ತಿದ್ದರಂತೆ. ಹೆಚ್ಚಿನವರಿಗೆ ಇವರ ಪರಿಸರ ಕಾಳಜಿ ಅರ್ಥವೇ ಆಗುತ್ತಿರಲಿಲ್ಲ. ಆದರೂ, ತಮ್ಮ ಕೈಲಾದಮಟ್ಟಿಗೆ ಶಿಲ್ಪಿ ದಂಪತಿ, ಪ್ಲಾಸ್ಟಿಕ್‌ನ ಹಾನಿಯ ಬಗ್ಗೆ ಜನರಿಗೆ ಅರ್ಥ ಮಾಡಿಸಲು ಪ್ರಯತ್ನಿಸಿದರಂತೆ.
Related Articles
ಈ ರೀತಿ “ಝೀರೋ ವೇಸ್ಟೇಜ್’ ಪ್ರವಾಸ ಹೊರಡುವ ಯೋಚನೆ ಹೊಳೆದಿದ್ದು ಹೇಗೆ ಅಂತ ಕೇಳಿದರೆ, ಭಾರತೀಯರಿಗೆ ಇದು ಹೊಸತೇ ಎಂದು ಮರುಪ್ರಶ್ನೆ ಹಾಕುತ್ತಾರೆ ಶಿಲ್ಪಿ. ಹಿಂದೆಲ್ಲಾ ಪ್ರವಾಸಕ್ಕೆ ಹೊರಡುವಾಗ ಜನರು, ಅಗತ್ಯದ ವಸ್ತು, ಆಹಾರ, ನೀರನ್ನು ಹೊತ್ತುಕೊಂಡೇ ಹೋಗುತ್ತಿದ್ದರು. ಆಗ ಹೋಟೆಲ್‌ಗಳು, ಅಂಗಡಿಗಳು ಇರಲಿಲ್ಲ. ಪ್ಲಾಸ್ಟಿಕ್‌ನ ಸಂಶೋಧನೆಯೇ ಆಗಿರಲಿಲ್ಲ. ಪ್ಲಾಸ್ಟಿಕ್ ಬಂದಮೇಲೆ ನೀರನ್ನೂ ಬಾಟಲಿಯಲ್ಲಿ ಮಾರುವಂತಾಯ್ತು ಎನ್ನುತ್ತಾರೆ ಶಿಲ್ಪಿ.
Advertisement
ಪರಿಸರಪ್ರೇಮಿ ಕುಟುಂಬಶಿಲ್ಪಿ ಸಾಹು, ಪತಿ ರಿನಾಝ್ ಮೊಹಮ್ಮದ್ ಮತ್ತು ಮಗ ನೀಲ್ ಜೊತೆಗೆ 18 ವರ್ಷಗಳಿಂದ ಬೆಂಗಳೂರಿನಲ್ಲಿ ವಾಸಿಸುತ್ತಿದ್ದಾರೆ. ಕೇವಲ ಪ್ರವಾಸದಲ್ಲಷ್ಟೇ ಅಲ್ಲ, ಮನೆಯಲ್ಲಿಯೂ ಅವರು ಬಳಸಿ ಬಿಸಾಡುವಂಥ ಪ್ಲಾಸ್ಟಿಕ್‌ಅನ್ನು ಉಪಯೋಗಿಸುವುದಿಲ್ಲ. ಪರಿಸರದ ಬಗ್ಗೆ ಅಪಾರ ಕಾಳಜಿ ಹೊಂದಿರುವ ಶಿಲ್ಪಿ, ಸೈಕಲ್ ತುಳಿದೇ ಆಫೀಸ್‌ಗೆ ಹೋಗುತ್ತಾರೆ. ಮನೆಯಲ್ಲಿ ಉತ್ಪತ್ತಿಯಾಗುವ ತ್ಯಾಜ್ಯವನ್ನು ಪ್ರತ್ಯೇಕಗೊಳಿಸಿ, ಸಂಸ್ಕರಿಸಿ ಗೊಬ್ಬರ ತಯಾರಿಸುವ ಪದ್ಧತಿ ರೂಢಿಸಿಕೊಂಡಿದ್ದಾರೆ.
ನಿಮ್ಮ ಮನೆಗೆ ಬಂದ ಅತಿಥಿಗಳು ಮನೆಯ ಆಹಾರ, ನೀರು ಕುಡಿಯದೆ ಪ್ಯಾಕೇಜ್ ಫುಡ್, ಮಿನರಲ್ ವಾಟರ್ ಬಾಟಲ್ ಕೇಳಿದರೆ ಹೇಗಿರುತ್ತದೆ? ಪ್ರವಾಸಕ್ಕೆ ಹೋಗುವುದೆಂದರೆ, ಅಲ್ಲಿನ ಸೌಂದರ್ಯವನ್ನು ಸವಿಯುವುದಷ್ಟೇ ಅಲ್ಲ, ಸ್ಥಳೀಯ ಆಹಾರ ಹಾಗೂ ನೀರನ್ನು ಕುಡಿದು ಅವರ ಜನಜೀವನವನ್ನು ಅರ್ಥ ಮಾಡಿಕೊಳ್ಳುವುದೂ ಹೌದು. ಇಲ್ಲದಿದ್ದರೆ ನಿಮ್ಮ ಪ್ರವಾಸ ಅಪೂರ್ಣ. ಹಾಗೆಯೇ, ಪ್ರವಾಸಿತಾಣದ ಸ್ವತ್ಛತೆ, ಸೌಂದರ್ಯವನ್ನು ಕಾಪಾಡುವುದು ಪ್ರತಿಯೊಬ್ಬ ಪ್ರವಾಸಿಗನ ಕರ್ತವ್ಯ ಮತ್ತು ಅವನು ಆ ಸ್ಥಳಕ್ಕೆ ನೀಡುವ ಗೌರವ.
-ಶಿಲ್ಪಿ ಸಾಹು ಜೊತೆಗಿರುತ್ತೆ ಸ್ವತ್ಛ ಭಾರತ ಕಿಟ್
ಶಿಲ್ಪಿ, ಪ್ರವಾಸಕ್ಕೆಂದು ಬ್ಯಾಗ್ ಪ್ಯಾಕ್ ಮಾಡುವಾಗ ಸ್ವತ್ಛ ಭಾರತ ಕಿಟ್‌ಅನ್ನು ಮರೆಯುವುದೇ ಇಲ್ಲ. ಬಳಸಿ ಬಿಸಾಡುವ ಪ್ಲಾಸ್ಟಿಕ್‌ಅನ್ನು ಉಪಯೋಗಿಸುವುದಿಲ್ಲ ಎಂದು ಶಪಥಗೈದಿರುವ ಅವರು, ದಿನೋಪಯೋಗಿ ಸ್ಟೀಲ್ ಪಾತ್ರೆಗಳನ್ನು ಜೊತೆಗೆ ಕೊಂಡೊಯ್ಯುತ್ತಾರೆ. ನೀವೂ ಹೀಗೆ ಮಾಡಿ
1. ಪ್ರವಾಸದ ವೇಳೆ ಪ್ಲಾಸ್ಟಿಕ್ ಬಳಕೆಯನ್ನು ತಡೆಯಲು ಸ್ಟೀಲ್ ತಟ್ಟೆ-ಲೋಟವನ್ನು ಜೊತೆಗೆ ಒಯ್ಯಿರಿ.
2. ಪ್ಲಾಸ್ಟಿಕ್ ಕವರ್‌ಗಳನ್ನು ಎಲ್ಲೆಂದರೆಲ್ಲಿ ಎಸೆಯುವ ಬದಲು, ಅವನ್ನು ಬಟ್ಟೆಯ ಬ್ಯಾಗ್‌ನಲ್ಲಿ ಸಂಗ್ರಹಿಸಿ ಕಸದಬುಟ್ಟಿಗೆ ಹಾಕಿ.
3. ನೀರಿನ ಬಾಟಲಿಗಳನ್ನು ಖರೀದಿಸುವುದರ ಬದಲು, ಮನೆಯಿಂದಲೇ ನೀರಿನ ಬಾಟಲಿ ತೆಗೆದುಕೊಂಡು ಹೋಗಿ. ಬೇಕೆಂದಾಗ ಅದಕ್ಕೇ ನೀರು ತುಂಬಿಸಿಕೊಳ್ಳಿ.
4. ಚಿಕ್ಕಮಕ್ಕಳ ಡೈಪರ್, ಸ್ಯಾನಿಟರಿ ಪ್ಯಾಡ್‌ಗಳನ್ನು ಮನಸ್ಸಿಗೆ ಬಂದಂತೆ ಬಿಸಾಡಬೇಡಿ.