Advertisement

ಝೆನ್‌ ಬುದ್ಧಿಸಂ ಜ್ಞಾನದ ಮಹಾಮಾರ್ಗ

06:30 AM Mar 04, 2018 | Harsha Rao |

ಒಂದು ಹಳ್ಳಿಯಲ್ಲಿ ಒಬ್ಬ ರೈತನಿದ್ದ. ಅವನ ಬಳಿ ಒಂದು ಕುದುರೆ ಇತ್ತು. ಆ ಕುದುರೆ ಒಂದು ಬೆಳಿಗ್ಗೆ ಓಡಿಹೋಯಿತು. ಹಳ್ಳಿಯ ಜನ ಬಂದು, “”ಛೇ! ನಿನ್ನ ಕುದುರೆ ಕಳೆದುಹೋಗಬಾರದಿತ್ತು” ಎಂದು ಸಂತಾಪ ವ್ಯಕ್ತಪಡಿಸಿದರು. ಮರುದಿನ ಆ ಒಂದು ಕುದುರೆ ಕಾಡಿನಿಂದ ಮೂರು ಕಾಡುಕುದುರೆಗಳನ್ನು ಕರೆದುಕೊಂಡು ಅದೇ ರೈತನ ಮನೆಗೆ ಹಿಂದಿರುಗಿತು. “”ವಾಹ್‌! ಎಷ್ಟು ಒಳ್ಳೆಯದಾಯಿತು” ಎಂದು ಮತ್ತೆ ಉಳಿದ ರೈತರು ಸಂತೋಷ-ಆಶ್ಚರ್ಯ ವ್ಯಕ್ತಪಡಿಸಿದರೂ ರೈತ ಸುಮ್ಮನೆ, “”ಇರಬಹುದು” ಎಂದಷ್ಟೆ ಹೇಳಿದ.

Advertisement

ಮರುದಿನ ಆ ರೈತನ ಮಗ ಕಾಡು ಕುದುರೆ ಹತ್ತಿ ಸವಾರಿ ಮಾಡಲು ಹೋಗಿ ಕಾಲು ಮುರಿದುಕೊಂಡ. ಮತ್ತೆ ಅದೇ ಜನ ಬಂದು, “”ಅಯ್ಯೋ ಪಾಪ ಹೀಗಾಗಬಾರದಿತ್ತು” ಎಂದು ಸಂತಾಪ ವ್ಯಕ್ತಪಡಿಸಿದರು. ರೈತ ಸುಮ್ಮನೆ  “”ಇರಬಹುದು” ಎಂದಷ್ಟೇ ಹೇಳಿದ. ಅದಾದ ಮರುದಿನ ರಾಜನ ಸೈನಿಕರು ಬಂದು, “”ಯುದ್ಧ ಶುರುವಾಗುತ್ತದೆ, ನಿಮ್ಮ ಮನೆಗಳಲ್ಲಿ ಇರುವ ಯುವಕರನ್ನು ಕೂಡಲೇ ಸೈನ್ಯಕ್ಕೆ ಸೇರಿಸಿ” ಎಂದು ಹೇಳಿ ತಕ್ಷಣ ಆ ಹಳ್ಳಿಯ ಎಲ್ಲ ಆರೋಗ್ಯವಂತ ಯುವಕರನ್ನು ಎಳೆದುಕೊಂಡು ಹೋದರು. ಈ ರೈತನ ಮಗನ ಕಾಲು ಮುರಿದಿದ್ದರಿಂದ ಅವನನ್ನು ಅಲ್ಲೇ ಬಿಟ್ಟು ಹೋದರು. ಉಳಿದ ಜನ ಬಂದು, “”ನಿನ್ನ ಮಗನ ಕಾಲು ಮುರಿದದ್ದಕ್ಕೆ ಅಭಿನಂದನೆ” ಎಂದು ಹೇಳಿದರು. ರೈತ ಸುಮ್ಮನೆ “”ಇರಬಹುದು” ಎಂದಷ್ಟೆ ಹೇಳಿದ.
.
ಇದೊಂದು ಜೆನ್‌ ಕಥೆ. ಜೀನದಲ್ಲಿ ಈ ಕಥೆಯಲ್ಲಿ ಬರುವ ರೈತ ಯಾವುದರ ಬಗ್ಗೆಯೂ ನಿರ್ದಿಷ್ಟ ಜಡ್ಜ್ಮೆಂಟ್‌ ಕೊಡದೆ, ಅಭಿಪ್ರಾಯ ಇಟ್ಟುಕೊಳ್ಳದೆ ಆರಾಮವಾಗಿದ್ದ. ಮನುಷ್ಯ ಹೇಗೆ ಜೀವಿಸಬಹುದು ಎಂಬುದರ ಸೂಚನೆ ಈ ಕಥೆ ಮೂಲಕ ಸಿಗುತ್ತದೆ.

ಬೌದ್ಧಧರ್ಮದಲ್ಲಿ ಒಂದು ಕವಲು ಜೆನ್‌ ಬುದ್ಧಿಸಂ. ಅದು ಬೌದ್ಧಧರ್ಮದ ಆಚಾರ್ಯರಿಂದ ಬೆಳೆದದ್ದರಿಂದ  ಹೆಸರು ಬಂದಿದೆ. ಮನುಷ್ಯನ ಅತಿಬೌದ್ಧಿಕತೆ, ಅತಿ ತರ್ಕಕ್ಕೆ ಪೆಟ್ಟು ಕೊಟ್ಟು ದಿಗ್ಭ್ರಮೆ ಉಂಟು ಮಾಡುವುದು ಅದರ ದಾರಿ. ಅದನ್ನು ಕಥೆಗಳ ಮೂಲಕ, ಕೆಲವು ಸಂಜ್ಞೆಗಳ ಮೂಲಕ ಈ ಸಂಪ್ರದಾಯದಲ್ಲಿ ಮಾಡುತ್ತಾರೆ. ಜೆನ್‌ ಬದುಕು ಅದೊಂದು ದಾರಿಯಲ್ಲ. ಅದೊಂದು ಸಾಹಿತ್ಯವಲ್ಲ. ಆದರೆ, ಈಗ ವಿದ್ಯಾವಂತ ಸಮುದಾಯ ಜೆನ್‌ ಅನ್ನು ತನ್ನ ತಿಳಿವಳಿಕೆಯ ಒಂದು ಭಾಗವಾಗಿ ನೋಡುವ ಕ್ರಮ ರೂಢಿಸಿಕೊಂಡಿದೆ. ಈಗ ಕೆಲವು ಕಥೆಗಳನ್ನು ನೋಡಬಹುದು. ನಾನ್‌ಇನ್‌ ಒಬ್ಬ ಜೆನ್‌ ಗುರು. ಅವನಿಗೆ ಮಾಸ್ಟರ್‌ ಎಂದು ಹೆಸರು. ಆತ 19ನೆಯ ಶತಮಾನದಲ್ಲಿ ಬದುಕಿದ್ದ. ಅವನ ಬಳಿ ಒಬ್ಬ ಯೂನಿವರ್ಸಿಟಿ ಪ್ರಾಧ್ಯಾಪಕ ಬಂದು ಕೇಳಿದ:

“”ಜೆನ್‌ ಎಂದರೇನು?”
ಅದಕ್ಕೆ ಜೆನ್‌ ಮಾಸ್ಟರ್‌ ಸುಮ್ಮನೆ ಅವನಿಗೆ ಟೀ ನೀಡಿದ. ಬಂದ ಈ ಅತಿಥಿಯ ಬಟ್ಟಲಿಗೆ ಟೀ ಸುರಿಯತೊಡಗಿದ. ಸುರಿಯುತ್ತಲೇ ಇದ್ದ. ಬಟ್ಟಲು ತುಂಬಿತು, ಟೀ ಹೊರಚೆಲ್ಲತೊಡಗಿತು. ಇದು ಹೀಗೆ ಮುಂದುವರೆಯಿತು. ಸ್ವಲ್ಪ$ ಕಾಲ ನೋಡಿದ ಆ ಪೊ›ಫೆಸರ್‌ “”ಅದು ತುಂಬಿದೆ, ಇನ್ನು ಹೆಚ್ಚು ಟೀ ಅದರೊಳಗೆ ಹೋಗುವುದಿಲ್ಲ” ಎಂದ. ಅದಕ್ಕೆ ಮಾಸ್ಟರ್‌ ಹೇಳಿದ, “”ನೀನು ಕೂಡ ಹೀಗೆ. ನಿನ್ನಲ್ಲಿ ನಿನ್ನದೇ ಆದ ಅಭಿಪ್ರಾಯಗಳು, ಊಹೆಗಳು ತುಂಬಿಕೊಂಡಿವೆ. ನೀನು ಮೊದಲು ನಿನ್ನ ಬಟ್ಟಲು ಖಾಲಿ ಮಾಡಿಕೊಳ್ಳುವ ತನಕ ಜೆನ್‌ ಎಂದರೇನು ಎಂದು ನಿನಗೆ ಹೇಗೆ ತೋರಿಸಲಿ?”

ತುಂಬಿದ ತಲೆ ಹೊಸತನ್ನು ಅರಿಯಲಾರದು. ತನಗೆ ಬೇಕಾದ ಮಾನಸಿಕ ರಚನೆ, ವಿನ್ಯಾಸ, ಕಲ್ಪನೆಗಳನ್ನು ಮಾಡಿಕೊಳ್ಳುತ್ತದೆ. ಇಡೀ ಜಗತ್ತನ್ನು ತನ್ನ ದೃಷ್ಟಿಯಿಂದ ಮಾತ್ರ ಅಳೆಯುತ್ತದೆ. ಇದು ಹೋಗದಿದ್ದರೆ ನೇರವಾಗಿ ಅನುಭವ ಪಡೆಯುವುದು ಸಾಧ್ಯವಾಗುವುದಿಲ್ಲ. ಅನುಭವ ಮುಖ್ಯ. ಅಧ್ಯಾತ್ಮವೆನ್ನಿ ನೈತಿಕ ಜೀವವೆನ್ನಿ ಅದು ನಿಂತಿರುವುದು ಸಹಾನುಭೂತಿಯ ಮೇಲೆ. ಅದು ಬರುವುದು ಜೀವನವನ್ನು ಅನುಭವಿಸುವುದರಿಂದ. ಜೀವನಾನುಭವವೆಂದರೆ ಜೀವನದಲ್ಲಿ ಪಟ್ಟ ಕಷ್ಟ-ಸುಖ ಎಂದು ಸಾಮಾನ್ಯವಾದ ಭಾವನೆ. ಆದರೆ, ಇದು ಸಂಪೂರ್ಣ ನಿಜವಲ್ಲ. ಜೀವನದಲ್ಲಿ ಕಷ್ಟ ಪಟ್ಟವರು ತಾವು ಪುನಃ ಬೇರೆಯವರಿಗೆ ಹಾಗಾದರೆ ಏಕೆ ಗೊತ್ತಿದ್ದೂ ಕಷ್ಟ ಕೊಡುತ್ತಾರೆ? ಜೀವನದಲ್ಲಿ ತಾವು ಯಾವುದನ್ನು ಸುಖ ಎಂದು ಕೊಂಡಿದ್ದಾರೋ ಅದನ್ನು ಗಳಿಸಿದವರು, ಬೇರೆಯವರಿಗೆ ಆ ಸುಖ ಕೊಡಲು ಯಾಕೆ ಹಿಂಜಿರಿಯುತ್ತಾರೆ? ಈ ಪ್ರಶ್ನೆಗಳು ಜೆನ್‌ಗೆ ಮುಖ್ಯವಾಗುತ್ತದೆ. ಆದರೆ, ಜೆನ್‌ ಉಳಿದ ಬೌದ್ಧಧರ್ಮದ ಪಂಥಗಳಂತೆ ಇದನ್ನು ತರ್ಕ, ಪ್ರಮಾಣದ ತಣ್ತೀಶಾಸ್ತ್ರ ಪರಿಭಾಷೆಯಲ್ಲಿ ಮಂಡಿಸಲಿಲ್ಲ. ಸಣ್ಣ ಸಣ್ಣ ಕಥೆಗಳ ಮೂಲಕ ದಾಟಿಸಲು ಯತ್ನಿಸಿತು. ಆದರೆ ತರ್ಕಬದ್ಧ ಮನುಷ್ಯ ಬುದ್ಧಿ ಇದನ್ನು ಕೂಡ ಕ್ಲಿಷ್ಟ ಮಾಡಲು ನೋಡಿತು.

Advertisement

ಮೊದಲಿಗೆ ನೋಡಿದ ಕಥೆಯಲ್ಲಿ ಬರುವ ರೈತ ಒಂದು ದೃಷ್ಟಿಕೋನಕ್ಕೆ ಬದ್ಧನಾಗಿಲ್ಲ. ನಮ್ಮ ಕಾಲ ಅಥವಾ ಯಾವುದೇ ಕಾಲ ಮನುಷ್ಯನ್ನು ನೀನು ಹೀಗೇ ಇರಬೇಕು, ಇಂಥ ಮನೆಯಲ್ಲಿ ಇಂಥ ಜಾತಿಯಲ್ಲಿ , ಧರ್ಮದಲ್ಲಿ, ಲಿಂಗದವರಾಗಿ ಹುಟ್ಟಿದಮೇಲೆ ಹೀಗೆ ಇರಬೇಕು ಎಂದು ಬಹಳ ನಾಜೂಕಾಗಿ ಒತ್ತಡ ಹೇರುತ್ತದೆ. ಘಟನೆಗಳು ನಿರಂತರ, ಕಾಲ ನಿರಂತರ. ಅದನ್ನು ತರ್ಕ ಕತ್ತರಿಸಿ ನೋಡುತ್ತದೆ. ನಂತರ ಅದಕ್ಕೆ ತಕ್ಕ ಸಮರ್ಥನೆಗಳನ್ನು ನೀಡುತ್ತದೆ. ಯಾವಾಗ ಏನು ಬೇಕಾದರೂ ಆಗಬಹುದು ಎಂಬ ಅರಿವು ಜೆನ್‌ ಬುದ್ಧಿಸಂ ಕಲಿಸುವ ಪಾಠ. ಇದರ ಮಧ್ಯೆ ಮನುಷ್ಯ ಸಂತೋಷ ಮಾತ್ರವಲ್ಲ , ಶಾಂತಿಯನ್ನು ಸಹ ಹೊಂದಬೇಕು ಎಂಬುದು ಅದರ ಆಶಯ.

ಈಗ ಇನ್ನೊಂದು ಕಥೆ ನೋಡೋಣ. ಒಬ್ಬ ಗುರು. ಅವನ ಹೆಸರು ಬಾಂಕಿ. ಅವನ ಧ್ಯಾನ ತರಗತಿಗಳಲ್ಲಿ ಕಲಿಯಲು ದೂರದೂರ ಪ್ರದೇಶಗಳಿಂದ ಬಂದು ಶಿಷ್ಯರಾಗುತ್ತಿದ್ದರು. ಒಂದು ಸಲ ಅವನ ಮನೆಯಲ್ಲಿ ಅಂಥ ಒಂದು ಶಿಷ್ಯರ ದಂಡು ಇತ್ತು. ಸವರ ನಡುವೆ ಒಬ್ಬ ಒಂದು ದಿನ ಏನೋ ಕದ್ದು ಸಿಕ್ಕಿಬಿದ್ದ. ಉಳಿದ ಶಿಷ್ಯರು ಅವನನ್ನು ತಂದು ಬಾಂಕಿ ಮುಂದೆ‌ ನಿಲ್ಲಿಸಿ, “”ಇವನಿಗೆ ಶಿಕ್ಷೆ ಕೊಡಿ” ಎಂದರು. ಬಾಂಕಿ ಅದನ್ನು ಲೆಕ್ಕಿಸಲಿಲ್ಲ. ಕೆಲವು ದಿನಗಳ ನಂತರ ಮತ್ತೆ ಅದೇ ಶಿಷ್ಯ ಮತ್ತೆ ಕದ್ದು ಸಿಕ್ಕಿಹಾಕಿಕೊಂಡ. ಉಳಿದ ಶಿಷ್ಯರು ಅವನನ್ನು ಬಾಂಕಿ ಬಳಿ ಕರೆತಂದು ಹೇಳಿದರು. “”ಇವನಿಗೆ ನೀವು ಶಿಕ್ಷೆ ಕೊಡಬೇಕು. ಇಲ್ಲದಿದ್ದರೆ ನಾವು ಸಾಮೂಹಿಕವಾಗಿ ಇಲ್ಲಿಂದ ಹೊರಟು ಹೋಗುತ್ತೇವೆ” ಅಂತ ಹೇಳಿದರು. ಬಾಂಕಿ ತಣ್ಣಗಿದ್ದ. ಅವನು ಈಗ ಬಾಯಿಬಿಟ್ಟ. “”ನೀವೆಲ್ಲ ಕಲಿತವರು, ನಿಮಗೆ ಸರಿ ಯಾವುದು ತಪ್ಪು$ ಯಾವುದು ಅಂತ ಗೊತ್ತು.

ಆದರೆ ಇವನಿಗೆ ಅದೊಂದೂ ಗೊತ್ತಿಲ್ಲ. ನೀವು ಇಲ್ಲಿಂದ ಹೊರಕ್ಕೆ ಹೋಗಿ ಬೇರೆ ಗುರುವಿನ ಆಶ್ರಮ ಸೇರಬಹುದು. ಅದಕ್ಕೆ ನನ್ನ ಅಭ್ಯಂತರ ಇಲ್ಲ. ಏಕೆಂದರೆ, ನಿಮಗೆ ಸರಿ-ತಪ್ಪಿನ ವ್ಯತ್ಯಾಸ ತಿಳಿದಿದೆ. ಆದರೆ, ಇವನನ್ನು ಯಾರು ನೋಡಿಕೊಳ್ಳುತ್ತಾರೆ. ಇವನಿಗೆ ಏನೂ ಗೊತ್ತಿಲ್ಲ. ಇವನು ಮಾತ್ರ ನೀವೆಲ್ಲÉ ಹೋದರೂ ನನ್ನ ಜತೆಯೇ ಇರುತ್ತಾನೆ”.

ಕದ್ದ ಶಿಷ್ಯನ ಕಣ್ಣಲ್ಲಿ ನೀರು ತುಂಬಿತು. ಕದಿಯುವ ಬಯಕೆ ಮಣ್ಣುಪಾಲಾಯಿತು. ಜೆನ್‌ ಅನೇಕರು ಭಾವಿಸುವಂತೆ ಕೇವಲ ಬೌದ್ಧಿಕತೆಗೆ ಪೆಟ್ಟುಕೊಡುವ ಶಾಕಿಂಗ್‌ ವಿಧಾನ ಮಾತ್ರವಲ್ಲ. ಅದು ಜೀವನವನ್ನು ಸಹಜವಾಗಿ ಮಾರ್ಪಡಿಸುವ ಪಥ. ಈ ಕಥೆಯನ್ನು ಸ್ವಲ್ಪ ನೋಡಿ. ಇಲ್ಲಿ ಕದ್ದಿರುವ ಶಿಷ್ಯ ನಿಮ್ಮ ಮಗ, ಸೋದರನಾಗಿದ್ದರೆ ನಮ್ಮ ನಿಮ್ಮ ದೃಷ್ಟಿ ಬೇರೆಯಾಗುತ್ತದೆ. ಅವನು ನಮ್ಮ ಶತ್ರುವಿನ ಮಗನಾದರೆ ನಮ್ಮ ವ್ಯಾಖ್ಯಾನ ಬೇರೆಯಾಗುತ್ತದೆ. ಅವನು ಯಾರೋ ನಮಗೆ ಗೊತ್ತೇ ಇರದವನಾಗಿದ್ದರೆ ನಮ್ಮ ಟೀಕೆ-ಟಿಪ್ಪಣಿ ಭಿನ್ನವಾಗುತ್ತದೆ. ಅಂದರೆ ನಮ್ಮ ತೀರ್ಪು-ತೀರ್ಮಾನಗಳು ಎಷ್ಟು ಕ್ಷಣಿಕ, ಅವು ಎಷ್ಟೊಂದು ಪೊಳ್ಳು ನೆಲದ ಮೇಲೆ ನಿಂತಿವೆ ಎಂಬುದನ್ನು ಪ್ರತಿಕ್ಷಣ ಜೆನ್‌ ಅರಿವಿಗೆ ತಂದುಕೊಡುತ್ತದೆ.

ಒಂದು ಊರಿನಲ್ಲಿ ದೊಂಬರಾಟ ಮಾಡಿ ಜೀವನ ನಡೆಸುವ  ಇಬ್ಬರಿದ್ದರು. ಅದರಲ್ಲಿ ಒಬ್ಬ ಗಂಡು, ಅವನಿಗೆ ಮದುವೆಯಾಗಿ ಹೆಂಡತಿ ಸತ್ತಿದ್ದಳು. ಅವನ ಜತೆ ದೊಂಬರಾಟ ಮಾಡಲು ಒಬ್ಬಳು ತರುಣಿ ಇದ್ದಳು. ಈ ಹಿರಿಯ, ಅವನನ್ನು ಗುರು ಎಂದು ಕರೆಯೋಣ. ಆತ ಹೇಳಿದ, “”ನಾನು ದಿನವೂ ಉದ್ದ ಕೋಲು ಎತ್ತಿ ಹಿಡಿಯುತ್ತೇನೆ, ನೀನು ಅದರ ಮೇಲೆ ಹತ್ತಿ ನಿಲ್ಲುವೆ. ನಾನು ನೇಯತೊಡಗಿದಾಗ ನೀನು ಕೋಲಿನ ಮೇಲೆ ಬ್ಯಾಲೆನ್ಸ್‌ ಮಾಡುತ್ತೀಯ. ಇವತ್ತು ಹೀಗೆ ಮಾಡೋಣ. ನಾನು ನಿನ್ನನ್ನು ನೋಡುತ್ತೇನೆ, ನೀನು ನನ್ನನ್ನು ನೋಡುತ್ತಿರು. ಅದರಿಂದ ಬ್ಯಾಲೆನ್ಸ್‌ ಆಗುತ್ತದೆ. ಇದರಿಂದ ಆಟ ಮುಂದುವರೆದು ನಮ್ಮಿಬ್ಬರ ಜೀವನ ನಿರ್ವಹಣೆಯಾಗುತ್ತದೆ”.

ಅದಕ್ಕೆ ಆ ತರುಣಿ ಹೇಳಿದಳು, “”ನಾವು ಹೊರಗೆ ನೋಡುವುದು ಬೇಡ, ಅಂದರೆ ಪರಸ್ಪರ ನೋಡುವುದು ಬೇಡ. ನಾವು ನಮ್ಮನ್ನೇ ನೋಡಿಕೊಳ್ಳೋಣ. ಅದರಿಂದ ಬ್ಯಾಲೆನ್ಸ್‌ ಆಗುತ್ತದೆ. ಇದರಿಂದ ಆಟ ಮುಂದುವರೆದು ನಮ್ಮಿಬ್ಬರ ಜೀವನ ನಿರ್ವಹಣೆಯಾಗುತ್ತದೆ”.

ನಿಮ್ಮ ನಿಮ್ಮ ತನುವ ಸಂತೈಸಿಕೊಳ್ಳಿ, ನಿಮ್ಮ ನಿಮ್ಮ ಮನವ ಸಂತೈಸಿಕೊಳ್ಳಿ ಎಂದಿದ್ದಾರೆ ವಚನಕಾರ ಅನುಭಾವಿಗಳು. ನಿನ್ನುದ್ಧಾರವೆಷ್ಟಾಯೊ¤ ಎಂದಿದ್ದಾರೆ ಡಿ.ವಿ.ಜಿ.

ನಮ್ಮೊಳಗೆ ಒಂದು ವಿಶಾಲ ಮಾನಸಿಕ ಪ್ರಪಂಚವಿದೆ. ಅದು ಅತ್ಯಂತ ಅಸ್ತವ್ಯಸ್ತವಾಗಿದೆ. ಹೊರಗಿನ ಜಗತ್ತಿನಲ್ಲಿ ಇರುವುದಕ್ಕಿಂತ ಹೆಚ್ಚಿನ ಶಕ್ತಿಯೂ ಅದಕ್ಕೆ ಇದೆ. ಈ ಮಾನಸಿಕ ಪ್ರಪಂಚ ಅನೇಕ ಭ್ರಮಾತ್ಮಕ ಚಿತ್ರ, ಶಬ್ದಗಳನ್ನು ದಿನವೂ ನಮಗೆ ನೂಕಿ ನಮ್ಮನ್ನು ಗಲಿಬಿಲಿ ಮಾಡುತ್ತದೆ. ನಮ್ಮ ಜೀವನದ ಕುದುರೆ ಹುಚ್ಚಾಪಟ್ಟೆ ಓಡುತ್ತದೆ. ಅದನ್ನು ಶಾಂತಗೊಳಿಸಲು ಜೆನ್‌ ಸಹಾಯಕ. ಕದಡಿರುವ ನಮ್ಮ ಮನಸ್ಸೆಂಬ ಸರೋವರವನ್ನು ಶಾಂತಗೊಳಿಸುವುದೇ ಜೆನ್‌ ವಿಧಾನ. ಅದೇ ಮಾನಸಸರೋವರ. ಅದು ನಿಶ್ಚಲ, ನಿರ್ಮಲ. ಆ ಸರೋವರ ಹಿಮಾಲಯದಲ್ಲಿ ಇಲ್ಲ, ಅದಿರುವುದು ನಮ್ಮ ಎದೆಯ ಕೊಳದಲ್ಲಿ.

– ಜಿ.ಬಿ.ಹರೀಶ

Advertisement

Udayavani is now on Telegram. Click here to join our channel and stay updated with the latest news.

Next