Advertisement

ಇಸ್ರೇಲ್‌ನಿಂದ ತಂದಿದ್ದ ಜೀಬ್ರಾ ಸಾವು

11:52 AM Jul 26, 2017 | Team Udayavani |

ಆನೇಕಲ್‌: ಬನ್ನೇರುಘಟ್ಟ ಜೈವಿಕ ಉದ್ಯಾನಕ್ಕೆ 2015ರಲ್ಲಿ ಇಸ್ರೇಲ್‌ನಿಂದ ತರಲಾಗಿದ್ದ ಎರಡು ಜೀಬ್ರಾಗಳ ಪೈಕಿ ಹೆಣ್ಣು ಜೀಬ್ರಾವೊಂದು ಇತ್ತೀಚೆಗೆ ಗುಂಡಿಗೆ ಬಿದ್ದು ಮೃತಪಟ್ಟಿದೆ. ಬೇಸರದ ಸಂಗತಿ ಎಂದರೆ ಸದ್ಯ ಮೃತಪಟ್ಟಿರುವ ಜೀಬ್ರಾ ಇನ್ನು ಕೆಲವೇ ದಿನಗಳಲ್ಲಿ ಮರಿಯೊಂದಕ್ಕೆ ಜನ್ಮ ನೀಡಲಿತ್ತು. 

Advertisement

ಇಸ್ರೇಲ್‌ನ “ಜಿಯೋಲಾಜಿಕಲ್‌ ಸೆಂಟರ್‌ ಟೆಲ್‌ ಅವಿವ್‌ ರಮಾತ್‌ ಗನ್‌’ ಸಫಾರಿಯಿಂದ ಒಂದು ಹೆಣ್ಣು ಮತ್ತು ಒಂದು ಗಂಡು ಜಿಬ್ರಾಗಳನ್ನು ಬನ್ನೇರುಘಟ್ಟಕ್ಕೆ ತರಲಾಗಿತ್ತು. ಸರಿಸುಮಾರು ಒಂದು ವರ್ಷಗಳ ಕಾಲ ಎರಡು ಜಿಬ್ರಾಗಳನ್ನು ಪತ್ಯೇಕ ಸ್ಥಳದಲ್ಲಿ ಇಟ್ಟು ಜೋಪಾನವಾಗಿ ನೋಡಿ ಕೊಳ್ಳಲಾಗಿತ್ತು.

ಸದ್ಯ ಸಾವಿಗೀಡಾಗಿರುವ ಜೀಬ್ರಾವನ್ನು ಹೇಮಾವತಿ ಎಂಬ ಹೆಸರಿನಿಂದ ಕರೆಯಲಾಗುತ್ತಿತ್ತು. ಜೀಬ್ರಾಗಳಿದ್ದ ಆವರಣದಲ್ಲಿ ಮರ ನೆಡಲು ನಾಲ್ಕು ದಿನಗಳ ಹಿಂದೆ ಉದ್ಯಾನದ ಸಿಬ್ಬಂದಿ ಹಳ್ಳ ತೆಗೆದಿದ್ದು, ಅದರಲ್ಲಿ ಬಿದ್ದು ಗರ್ಭಿಣಿ ಜೀಬ್ರಾ ಮೃತಪಟ್ಟಿದೆ. 

ಉದ್ಯಾನವನದ ಬಹು ಆಕರ್ಷಣೆಯ ಪ್ರಾಣಿಗಳಲ್ಲಿ ಈ ಜೋಡಿ ಜಿಬ್ರಾಗಳು ಒಂದಾಗಿದ್ದವು. ಅಷ್ಟೇ ಅಲ್ಲದೆ, ಜಿಬ್ರಾಗಳನ್ನು 24 ಗಂಟೆಗಳ ಕಾಲ ನೋಡಿ ಕೊಳ್ಳಲು ಸಿಬ್ಬಂದಿಯನ್ನೂ ನಿಯೋಜಿಸಲಾಗಿತ್ತು. ತೀವ್ರ ಮುತುವರ್ಜಿಯ ನಡುವೆಯೂ ಜೀಬ್ರಾ ಸಾವಿಗೀಡಾಗಿರುವ ಈ ಪ್ರಕರಣ ಸದ್ಯ ಹಿರಿಯ ಅಧಿಕಾರಿಗಳ ಕೆಂಗಣ್ಣಿಗೆ ಗುರಿಯಾಗಿದೆ. 

ಅಧಿಕಾರಿಗಳ ನಿರ್ಲಕ್ಷ್ಯ: ಇಸ್ರೇಲ್‌ನಿಂದ ತರಲಾಗಿದ್ದ ಎರಡೂ ಜೀಬ್ರಾಗಳನ್ನೂ ಒಂದು ವರ್ಷಗಳ ಕಾಲ ಇಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳುವಂತೆ ಮಾಡಲಾಗಿತ್ತು. ಅದಕ್ಕಾಗಿಯೇ ಪ್ರವಾಸಿಗರ ವೀಕ್ಷಣೆಗೆ ಅವಕಾಶ ಕಲ್ಪಿಸದೆ ನೋಡಿಕೊಳ್ಳಲಾಗಿತ್ತು.

Advertisement

ಆದರೆ, ಜಿಬ್ರಾಗಳ ಆವರಣದೊಳಗೆ ಓಣಗಿದ ಮರವೊಂದನ್ನು ನೆಡಲೆಂದು ದೊಡ್ಡ ಗುಂಡಿ ತೆಗೆದಿದ್ದ ಅಧಿಕಾರಿಗಳು, ಅದರಲ್ಲಿ ಮರವನ್ನೂ ನೆಡೆದೆ, ಪ್ರಾಣಿಗಳು ಹೋಗದಂತೆ ರಕ್ಷಣಾ ಕ್ರಮವನ್ನೂ ಕೈಗೊಳ್ಳದೆ ಹಾಗೆಯೇ ಬಿಟ್ಟಿದ್ದರು. ನಾಲ್ಕು ದಿನಗಳಾದರೂ ಗುಂಡಿ ಹಾಗೇ ಉಳಿದಿತ್ತು. ಹೀಗಿರುವಾಗಲೇ ಜೀಬ್ರಾ ಗುಂಡಿಗೆ ಬಿದ್ದು ಸಾವಿಗೀಡಾಗಿದ್ದು, ಪ್ರಾಣಿ ಪ್ರಿಯರಿಗೆ ಬೇಸರ ತರಿಸಿದೆ. 

ಸದಸ್ಯ ಕಾರ್ಯದರ್ಶಿ ಬೇಟಿ: ಜೀಬ್ರಾ ಮೃತಪಟ್ಟ ಸುದ್ದಿ ತಿಳಿಯುತ್ತಲೇ ಮೈಸೂರಿನಿಂದ ಬನ್ನೇರುಘಟ್ಟಕ್ಕೆ ಆಗಮಿಸಿದ ಮೃಗಾಲಯ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ.ಪಿ.ರವಿ ಎಂಬ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ ಪ್ರಾಣಿ ಸಾವಿಗೆ ನಿಖರ ಕಾರಣ ಹಾಗೂ ಯಾರ ನಿರ್ಲಕ್ಷ್ಯ ಇದೆ ಎಂಬುದರ ಬಗ್ಗೆ ವರದಿ ನೀಡಬೇಕೆಂದು ಅಧಿಕಾರಿಗಳಿಗೆ ಸೂಚಿಸಿದ್ದಾರೆಂದು ತಿಳಿದು ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next