ಹೊಸದಿಲ್ಲಿ : ಭಾರತದ ಮೋಸ್ಟ್ ವಾಂಟೆಡ್ ಭೂಗತ ಪಾತಕಿ ದಾವೂದ್ ಇಬ್ರಾಹಿಂ, ಝಾಕೀರ್ ನಾಯ್ಕ್ ನ ಇಸ್ಲಾಮಿಕ್ ರೀಸರ್ಚ್ ಫೌಂಡೇಶನ್ (ಐಆರ್‌ಎಫ್) ಎನ್‌ಜಿಓ ಸಂಸ್ಥೆಗೆ ಹವಾಲಾ ಹಣ ಒದಗಿಸುತ್ತಿದ್ದ ಎಂಬ ಅತ್ಯಂತ ಮಹತ್ತರ ಸಂಗತಿ ಇದೀಗ ಬಯಲಾಗಿದೆ.
ಈ ವಿಷಯವನ್ನು ಝಾಕೀರ್ ನಾಯ್ಕ್ ನ ಮುಖ್ಯ ಹಣಕಾಸು ಅಧಿಕಾರಿ (ಸಿಎಫ್ಓ) ಆಗಿರುವ ಆಮೀರ್ ಗಝ್ದಾರ್ ಹೇಳಿರುವುದಾಗಿ ಮಾಧ್ಯಮ ವರದಿ ತಿಳಿಸಿದೆ.
ದಾವೂದ್ ಇಬ್ರಾಹಿಂ ತನ್ನ ಮಧ್ಯವರ್ತಿ ಸುಲ್ತಾನ್ ಅಹ್ಮದ ಎಂಬಾತನ ಮೂಲಕ ಝಾಕೀರ್ ನಾಯ್ಕ್ ನ ಇಸ್ಲಾಮಿಕ್ ರೀಸರ್ಚ್ ಫೌಂಡೇಶನ್‌ಗೆ ಹವಾಲಾ ಹಣ ಪೂರೈಸುತ್ತಿದ್ದ ಎಂದು ಕಳೆದ ಫೆ.16ರಂದು ಬಂಧಿತನಾಗಿರುವ ಗಝ್ದಾರ್ ಜಾರಿ ನಿದೇಶನಲಾಯದ ಅಧಿಕಾರಿಗಳ ಮುಂದೆ ಬಾಯಿ ಬಿಟ್ಟಿದ್ದಾನೆ.
ಝಾಕೀರ್ ನಾಯ್ಕ್ ಮತ್ತು ಆತನ ಎನ್‌ಜಿಓ ಪರವಾಗಿ ಗಝ್ದಾರ್ 200 ಕೋಟಿ ರೂ.ಗಳ ಕಾರುಬಾರು ನಡೆಸುತ್ತಿದ್ದ ಎಂದು ಇಡಿ ಅಧಿಕಾರಿಗಳು ಶಂಕಿಸಿದ್ದಾರೆ.
ಗಝ್ದಾರ್ ಬಹಿರಂಗಪಡಿಸಿರುವ ಈ ಸಂಗತಿಯಿಂದ ಝಾಕೀರ್ ನಾಯ್ಕ್ ಗೆ ಪಾಕಿಸ್ಥಾನ ಮತ್ತು ದಾವೂದ್ ನಂಟು ಇತ್ತೆಂಬ ಭಾರತದ ಹೇಳಿಕೆ ಸಾಬೀತಾದಂತಾಗಿದೆ.
ಬಂಧಿತ ಆಮೀರ್ ಗಝ್ದಾರ್‌ನನ್ನು ಫೆ.22ರ ವರೆಗೆ ಹಣ ದುರುಪಯೋಗ ನಿಗ್ರಹ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಪಿ ಆರ್ ಭಾವ್‌ಕೆ ಅವರು ಜಾರಿ ನಿರ್ದೇಶನಾಲಯದ ವಶಕ್ಕೆ ಒಪ್ಪಿಸಿದ್ದಾರೆ.