ಶ್ರೀನಗರ: ಅಲ್ ಖೈದಾ ಉಗ್ರ ಸಂಘಟನೆಯ ಜೊತೆ ಗುರುತಿಸಿಕೊಂಡಿರುವ ಅನ್ಸರ್ ಗಜವತ್ ಉಲ್ ಹಿಂದ್ ಮುಖ್ಯಸ್ಥ ಝಾಕಿರ್ ಮೂಸಾನನ್ನು ದಕ್ಷಿಣ ಕಾಶ್ಮೀರದ ಟ್ರಾಲ್ನಲ್ಲಿ ಭದ್ರತಾ ಪಡೆಗಳು ಹತ್ಯೆಗೈದಿವೆ. ಈ ವೇಳೆ ಭಾರಿ ಪ್ರಮಾಣದ ಶಸ್ತ್ರಾಸ್ತ್ರಗಳನ್ನೂ ವಶಪಡಿಸಿಕೊಳ್ಳಲಾಗಿದೆ ಎಂದು ಸೇನೆಯ ವಕ್ತಾರ ರಾಜೇಶ್ ಕಾಲಿಯಾ ಹೇಳಿದ್ದಾರೆ.
ಹಿರಿಯ ಪೊಲೀಸ್ ಅಧಿಕಾರಿಗಳು ಮತ್ತು ಭದ್ರತಾ ಸಿಬ್ಬಂದಿ ಶೋಧ ಕಾರ್ಯವನ್ನು ದದ್ಸಾರ ಗ್ರಾಮದಲ್ಲಿ ನಡೆಸಿದಾಗ ಉಗ್ರರು ಪರಾರಿಯಾಗಲು ಯತ್ನಿಸಿದ್ದರು. ಈ ವೇಳೆ ಗುಂಡಿನ ದಾಳಿ ನಡೆದಿದೆ. ಶರಣಾಗುವುದಕ್ಕೆ ಉಗ್ರನಿಗೆ ಅವಕಾಶ ನೀಡಲಾಗಿತ್ತು. ಆದರೆ ಇದನ್ನು ನಿರಾಕರಿಸಿದ ಉಗ್ರ ಗ್ರೆನೇಡ್ ದಾಳಿ ನಡೆಸಿದ. ಆಗ ಕತ್ತಲಲ್ಲಿ ಉಗ್ರ ಪರಾರಿಯಾಗದಂತೆ ತಡೆಯಲು ಹೆಚ್ಚಿನ ಪಡೆಯನ್ನು ನಿಯೋಜಿಸಲಾಗಿತ್ತು ಎಂದು ಸೇನೆ ಮೂಲಗಳು ವಿವರಿಸಿವೆ.
Advertisement
ಈ ಘಟನೆಯ ನಂತರ ಗುರುವಾರ ರಾತ್ರಿಯಿಂದಲೇ ಶೋಪಿಯಾನ್, ಪುಲ್ವಾಮ, ಅವಂತಿಪೋರ ಮತ್ತು ಶ್ರೀನಗರದ ಕೆಲವು ಭಾಗಗಳಲ್ಲಿ ಪ್ರತಿಭಟನೆ ಆರಂಭವಾಗಿತ್ತು. ಮೂಸಾ ಪರ ಘೋಷಣೆಗಳನ್ನೂ ಕೂಗಿ ಪ್ರತಿಭಟನೆ ನಡೆಸಲಾಗಿದೆ. ಇದರಿಂದಾಗಿ ಪರಿಸ್ಥಿತಿಯನ್ನು ಹತೋಟಿಗೆ ತರಲು ಮುನ್ನೆಚ್ಚರಿಕೆ ಕ್ರಮವಾಗಿ ಕಣಿವೆಯಲ್ಲಿ ಕಪ್ರ್ಯೂ ವಿಧಿಸಲಾಗಿದೆ. ಅಲ್ಲದೆ ಪುಲ್ವಾಮ, ಶ್ರೀನಗರ, ಅನಂತನಾಗ್ ಮತ್ತು ಬುಡ್‌ಗಾಂವ್ ಜಿಲ್ಲೆಯ ಕೆಲವು ಪ್ರದೇಶಗಳಲ್ಲಿ ಕಟ್ಟೆಚ್ಚರ ವಹಿಧಿಸಲಾಗಿದ್ದು, ಶಾಲೆಗಳನ್ನು ಬಂದ್ ಮಾಡಲಾಗಿದೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ.