“ಬನಾರಸ್’ ಸಿನಿಮಾ ಮೂಲಕ ಭರವಸೆ ಮೂಡಿಸಿದ ನವನಟ ಝೈದ್ ಖಾನ್ ಈಗ ಹೊಸ ಸಿನಿಮಾವೊಂದನ್ನು ಒಪ್ಪಿಕೊಂಡಿದ್ದಾರೆ. ಈ ಚಿತ್ರವನ್ನು ಅನಿಲ್ ನಿರ್ದೇಶಿಸುತ್ತಿದ್ದಾರೆ.
ಬನಾರಸ್ ನಂತರ ಹಲವು ಕಥೆಗಳನ್ನು ಕೇಳುವ ಜೊತೆಗೆ ಹೊಸ ಚಿತ್ರಕ್ಕಾಗಿ ಭರ್ಜರಿ ತಯಾರಿ ನಡೆಸುತ್ತಿದ್ದ ಝೈದ್ ಈಗ ಮತ್ತೆ ಅಖಾಡಕ್ಕೆ ಇಳಿಯಲು ಅಣಿಯಾಗಿದ್ದಾರೆ.
“ದಿಲ್‌ವಾಲ’, “ರ್‍ಯಾಂಬೋ-2′ ಹಾಗೂ ಇತ್ತೀಚೆಗೆ ಚಿಕ್ಕಣ್ಣ ನಟನೆಯ “ಉಪಾಧ್ಯಕ್ಷ’ ಚಿತ್ರ ಮೂಲಕ ಮತ್ತೆ ಗೆಲುವಿನ ನಗೆ ಬೀರಿದ ಅನಿಲ್ ಈಗ ಝೈದ್‌ಗೆ ಹೊಸ ಸಿನಿಮಾ ಮಾಡುತ್ತಿದ್ದಾರೆ.
ಝೈದ್ ಅವರ ಮ್ಯಾನರಿಸಂ ಅನ್ನು ಗಮನದಲ್ಲಿಟ್ಟುಕೊಂಡೇ ಕಥೆ ಮಾಡಿದ್ದು, ಕ್ಲಾಸ್ ಹಾಗೂ ಮಾಸ್‌ಗೆ ಇಷ್ಟವಾಗುವಂತಹ ಸಿನಿಮಾವಾಗಲಿದೆ ಎಂಬ ಭರವಸೆ ತಂಡದ್ದು. ಹೊಸ ಚಿತ್ರದ ಮೂಲಕ ಝೈದ್ ಖಾನ್ “ಸ್ಟೈಲಿಶ್ ಸ್ಟಾರ್’ ಆಗಲಿದ್ದಾರೆ. ಕಥೆ ಹಾಗೂ ಪಾತ್ರ ಹಾಗೇ ಇರುವುದ ರಿಂದ ಮುಂದೆ “ಸ್ಟೈಲಿಶ್ ಸ್ಟಾರ್’ ಆಗಿ ಮಿಂಚಲಿದ್ದಾರೆ.
ಶೀಘ್ರದಲ್ಲೇ ಚಿತ್ರದ ಮುಹೂರ್ತ ನಡೆಯಲಿದ್ದು, ಅದಕ್ಕೂ ಮುನ್ನ ಟೀಸರ್, ಫೋಟೋಶೂಟ್ ಮೂಲಕ ಸಿನಿಮಾ ಪ್ರೇಮಿಗಳಿಗೆ ದರ್ಶನ ನೀಡಲಿದ್ದಾರೆ. ಹೆಸರಾಂತ ನಿರ್ಮಾಣ ಸಂಸ್ಥೆ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದೆ. ನುರಿತ ತಂತ್ರಜ್ಞರ ದೊಡ್ಡ ತಂಡವೇ ಈ ಚಿತ್ರದಲ್ಲಿರಲಿದೆ. ತಾಂತ್ರಿಕವರ್ಗ ಹಾಗೂ ತಾರಾಬಳಗದ ಕುರಿತು ಹೆಚ್ಚಿನ ಮಾಹಿತಿಯನ್ನು ಸದ್ಯದಲ್ಲೇ ನೀಡುವುದಾಗಿ ನಿರ್ದೇಶಕ ಅನಿಲ್ ಕುಮಾರ್ ತಿಳಿಸಿದ್ದಾರೆ.