Advertisement

ಬಿಸಿಸಿಐ ಒಡಂಬಡಿಕೆ ಯುವರಾಜ್‌ ಸಿಂಗ್‌ ಹೊರಕ್ಕೆ?

06:30 AM Mar 01, 2018 | Team Udayavani |

ಹೊಸದಿಲ್ಲಿ: ಬಿಸಿಸಿಐ ಶೀಘ್ರವೇ ಕ್ರಿಕೆಟಿಗರ ವಾರ್ಷಿಕ ಒಡಂಬಂಡಿಕೆಯ ಯಾದಿಯನ್ನು ಪ್ರಕಟಿಸಲಿದ್ದು, ಇದರಿಂದ ಕೆಲವು ಹಿರಿಯ ಆಟಗಾರರು ಹೊರಬೀಳುವ ಸಾಧ್ಯತೆ ಇದೆ. 

Advertisement

ಮುಖ್ಯವಾಗಿ ಟೀಮ್‌ ಇಂಡಿಯಾದಿಂದ ಬೇರ್ಪಟ್ಟಿರುವ ಯುವರಾಜ್‌ ಸಿಂಗ್‌ ಅವರಿಗೆ ಇದರ ಬಿಸಿ ತಟ್ಟಬಹುದು.
2019ರ ತನಕ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಮುಂದುವರಿಯುವುದಾಗಿ ಹೇಳಿರುವ ಯುವರಾಜ್‌ ಸಿಂಗ್‌, 2017ರ ವೆಸ್ಟ್‌ ಇಂಡೀಸ್‌ ಪ್ರವಾಸದ ಬಳಿಕ ಭಾರತ ತಂಡದಲ್ಲಿ ಕಾಣಿಸಿಕೊಂಡಿಲ್ಲ. 

ಯುವಿ ಮುಂದಿನ ವರ್ಷದ ವಿಶ್ವಕಪ್‌ ಪಂದ್ಯಾವಳಿಯನ್ನು ಗುರಿಯಾಗಿಸಿಕೊಂಡರೂ ಈಗಿನ ಸ್ಥಿತಿಯಲ್ಲಿ ಅವರು ಮತ್ತೆ ಟೀಮ್‌ ಇಂಡಿಯಾವನ್ನು ಸೇರಿಕೊಳ್ಳುವುದು ಅಷ್ಟು ಸುಲಭವಲ್ಲ. ಭಾರತದಲ್ಲೀಗ ಯುವ ಆಟಗಾರರ ಪ್ರಮಾಣ ಜಾಸ್ತಿಯಾಗಿದ್ದು, ಅವಕಾಶ ಪಡೆದವರೆಲ್ಲರೂ ಇದನ್ನು ಬಾಚಿಕೊಳ್ಳುತ್ತಿದ್ದಾರೆ. ಹೀಗಿರುವಾಗ ಯುವರಾಜ್‌ ಹಾದಿ ಸುಗಮವಲ್ಲ ಎಂದೇ ಭಾವಿಸಬೇಕಾಗುತ್ತದೆ. ಆದರೆ ಇತ್ತೀಚೆಗೆ ಸುರೇಶ್‌ ರೈನಾ ಟಿ20 ತಂಡಕ್ಕೆ ಮರಳಿದ್ದನ್ನು ಕಂಡಾಗ ಯುವಿಗೂ ಇಂಥದೊಂದು ಅವಾಕಶ ಲಭಿಸಬಹುದೇ ಎಂಬ ಪ್ರಶ್ನೆಯೊಂದು ಮೂಡಿದರೆ ಆಶ್ಚರ್ಯವಿಲ್ಲ.

ದೇಶಿ ಕ್ರಿಕೆಟ್‌ನಲ್ಲೂ ವೈಫ‌ಲ್ಯ
ಯುವರಾಜ್‌ ಸಿಂಗ್‌ ದೇಶಿ ಕ್ರಿಕೆಟ್‌ನಲ್ಲೂ ಗಮನಾರ್ಹ ಸಾಧನೆ ದಾಖಲಿಸಿಲ್ಲ. ಸಯ್ಯದ್‌ ಮುಷ್ತಾಕ್‌ ಅಲಿ ಟೂರ್ನಿಯ 9 ಪಂದ್ಯಗಳಿಂದ ಗಳಿಸಿದ್ದು ಕೇವಲ 208 ರನ್‌ ಮಾತ್ರ. ವಿಜಯ್‌ ಹಜಾರೆ ಟ್ರೋಫಿ ಪಂದ್ಯಾವಳಿಯಲ್ಲೂ ಯುವಿ ವಿಫ‌ಲರಾಗಿದ್ದರು (172 ರನ್‌). ದೇವಧರ್‌ ಟ್ರೋಫಿ ಪಂದ್ಯಾವಳಿಯ ಯಾವ ತಂಡದಲ್ಲೂ ಯುವರಾಜ್‌ ಕಾಣಿಸಿಕೊಂಡಿಲ್ಲ. ಇದನ್ನೆಲ್ಲ ಗಮನಿಸಿದಾಗ ಬಿಸಿಸಿಐ ಒಡಂಬಡಿಕೆ ವ್ಯಾಪ್ತಿಯಿಂದಲೂ ಈ ಹಿರಿಯ ಸವ್ಯಸಾಚಿ ಹೊರಗುಳಿಯುವುದು ಬಹುತೇಖ ಖಚಿತ ಎಂದೇ ಹೇಳಬೇಕಾಗುತ್ತದೆ. ಕಳೆದ ಋತುವಿನ ಒಡಂಬಡಿಕೆಯಲ್ಲಿ ಯುವರಾಜ್‌ “ಬಿ ಗ್ರೇಡ್‌’ನಲ್ಲಿ ಸ್ಥಾನ ಸಂಪಾದಿಸಿದ್ದರು.

ಟರ್ಬನೇಟರ್‌ ಖ್ಯಾತಿಯ ಹರ್ಭಜನ್‌ ಸಿಂಗ್‌ ಕೂಡ ಇತ್ತೀಚಿನ ಕೆಲವು ವರ್ಷಗಳಿಂದ ಸುದ್ದಿಯಲ್ಲಿಲ್ಲ. 37ರ ಹರೆಯದ ಭಜ್ಜಿ 2016ರ ಬಳಿಕ ಯಾವುದೇ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಕಾಣಿಸಿಕೊಂಡಿಲ್ಲ. ಕಳೆದ ಸಾಲಿನಲ್ಲೇ ಹರ್ಭಜನ್‌ ಅವರನ್ನು ಒಡಂಬಡಿಕೆಯ ವ್ಯಾಪ್ತಿಯಿಂದ ಕೈಬಿಡಲಾಗಿತ್ತು. ಈ ಬಾರಿ ಮರಳುವ ಯಾವುದೇ ಸಾಧ್ಯತೆ ಇಲ್ಲ.

Advertisement

“ಸಿ’ ಗ್ರೇಡ್‌ನ‌ಲ್ಲಿದ್ದ ಆಶಿಷ್‌ ನೆಹ್ರಾ ಈಗಾಗಲೇ ವಿದಾಯ ಹೇಳಿದ್ದಾರೆ. ಹಾಗೆಯೇ ಅಂಬಾಟಿ ರಾಯುಡು, ಅಮಿತ್‌ ಮಿಶ್ರಾ, ಜಯಂತ್‌ ಯಾದವ್‌, ಮನ್‌ದೀಪ್‌ ಸಿಂಗ್‌ ಮುಂದುವರಿಯುವ ಬಗ್ಗೆ ಅನುಮಾನವಿದೆ. ಇವರ ಸ್ಥಾನದಲ್ಲಿ ಇತ್ತೀಚಿನ ಅಂಡರ್‌-19 ವಿಶ್ವಕಪ್‌ನಲ್ಲಿ ಮಿಂಚಿದ ಯುವ ಆಟಗಾರರು ಕಾಣಿಸಿಕೊಳ್ಳಬಹುದು.

Advertisement

Udayavani is now on Telegram. Click here to join our channel and stay updated with the latest news.

Next