ಪುನೀತ್ ರಾಜ್‌ಕುಮಾರ್ ಅಭಿನಯದ “ಯುವರತ್ನ’ ಚಿತ್ರದ ಹಾಡುಗಳ ಬಿಡುಗಡೆ ತಡವಾಗಲಿದೆ. ಹೀಗಂತ ಸುಳಿವು ನೀಡಿದವರು ಬೇರಾರು ಅಲ್ಲ, ಸ್ವತಃ ಆ ಚಿತ್ರದ ಸಂಗೀತ ನಿರ್ದೇಶಕ ತಮನ್. ಹೌದು, ಲಾಕ್ ಡೌನ್‌ನಲ್ಲಿದ್ದು ಬೇಸರಗೊಂಡ ಅಭಿಮಾನಿಗಳು ಸ್ಟಾರ್ ಸಿನಿಮಾಗಳ ಆಡಿಯೋ, ಟೀಸರ್ ಯಾವಾಗ ಬಿಡುಗಡೆಯಾಗುತ್ತದೆ ಎಂದು ಕೇಳುತ್ತಿದ್ದಾರೆ. ಅದರಂತೆ ಪುನೀತ್ ರಾಜ್‌ಕುಮಾರ್ ಅವರ ಯುವರತ್ನ ಚಿತ್ರದ ಆಡಿಯೋ ಬಗ್ಗೆಯೂ ಅಭಿಮಾನಿಗಳು ಪ್ರಶ್ನೆ ಮಾಡುತ್ತಿದ್ದರು. ಈಗ ಅದಕ್ಕೆ ಉತ್ತರ ಸಿಕ್ಕಿದೆ.
ಅದೇನೆಂದರೆ ಆಡಿಯೋ ಹೊರಬರೋದು ಸ್ವಲ್ಪ ತಡವಾಗುತ್ತದೆ ಎಂದು. ತೆಲುಗು ಮೂಲದ ತಮನ್, ಕನ್ನಡ ಸಿನಿಪ್ರೇಮಿಗಳಿಗಾಗಿ ಕನ್ನಡದಲ್ಲೇ ಟ್ವೀಟ್ ಮಾಡಿದ್ದಾರೆ. “ಎಲ್ಲರಿಗು ನಮಸ್ಕಾರ. ನಾನು ಚೆನ್ನೈ ಅಲ್ಲಿ ಲಾಕ್ ಡೌನ್‌ನಲ್ಲಿ ಇರುವ ಕಾರಣ ಕೆಲಸಗಳು ನಡೆಯುತ್ತಿಲ್ಲ, ಹಾಡುಗಾರರು ಮತ್ತು ಸಂಗೀತಗಾರರು ಈ ಇಕ್ಕಟ್ಟಿನ ಪರಿಸ್ಥಿತಿ ಯಲ್ಲಿರುವ ಕಾರಣ ಯುವರತ್ನ ಚಿತ್ರದ ಹಾಡುಗಳು ತಡವಾಗಲಿದೆ. ನಿಮಗೆ ಪವರ್ ಫುಲ್ ಆಲ್ಬಮ್ ಕೊಡುವ ಜವಾ ಬ್ದಾರಿ ನಮ್ಮದು.
ದಯವಿಟ್ಟು ಅಭಿಮಾನಿಗಳು ಸಹಕರಿಸಿ..’ ಎಂದು ಟ್ವೀಟ್ ಮಾಡಿದ್ದಾರೆ. ಸಂತೋಷ್ ಆನಂದರಾಮ್ ನಿರ್ದೇಶನದ “ಯುವರತ್ನ’ ಚಿತ್ರವನ್ನು ಹೊಂಬಾಳೆ ಫಿಲಂಸ್ ನಿರ್ಮಿಸುತ್ತಿದೆ. ಈಗಾಗಲೇ ಬಿಡುಗಡೆಯಾಗಿರುವ ಚಿತ್ರದ ಟೀಸರ್ ದೊಡ್ಡ ಮಟ್ಟದಲ್ಲಿ ಹಿಟ್ ಆಗಿದೆ. ಮಾಸ್ ಡೈಲಾಗ್‌ಗಳಂತೂ ಅಭಿಮಾನಿಗಳ ಮನ ಗೆದ್ದಿದೆ. “ಗಂಡಸ್ತನ, ಛರ್ಬಿ, ಮೀಟರ್, ಮಾರ್ಕೇಟ್ ಇವೆಲ್ಲ ಇರೋನೊಬ್ಬ ಬೇಕು? ಸಿಗ್ತಾನಾ..’ ಈ ಡೈಲಾಗ್ ಮೂಲಕ ಟೀಸರ್ ಶುರುವಾಗುತ್ತೆ. ಇಷ್ಟಕ್ಕೂ ಈ ಡೈಲಾಗ್ ಹೇಳ್ಳೋದು ಬೇರಾರೂ ಅಲ್ಲ, “ಡಾಲಿ’ ಧನಂಜಯ್. ಅವರ ವಾಯ್ಸ್‌ನಲ್ಲಿ ಬರುವ ಈ ಡೈಲಾಗ್ ಆರಂಭದಲ್ಲೇ ಸಾಕಷ್ಟು ಕುತೂಹಲ ಕೆರಳಿಸುತ್ತಾ ಸಾಗಿದೆ.
ಈಗ ಅಭಿಮಾನಿಗಳು ಚಿತ್ರದ ಹಾಡುಗಳಿಗೆ ಎದುರು ನೋಡುತ್ತಿದ್ದಾರೆ. ಇನ್ನು ಸಯೇಷಾ ಸೈಗಲ್ ಎಂಬ ಪರಭಾಷಾ ನಟಿ ಶೀಘ್ರದಲ್ಲಿಯೇ “ಯುವರತ್ನ’ ಚಿತ್ರದ ಮೂಲಕ ಚಂದನವನಕ್ಕೆ ಪರಿಚಯವಾಗುತ್ತಿದ್ದಾರೆ. ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯದ “ಯುವರತ್ನ’ ಚಿತ್ರದಲ್ಲಿ ನಾಯಕ ನಟಿಯಾಗಿ ಕಾಣಿಸಿಕೊಂಡಿರುವ ಸಯೇಷಾ ಸೈಗಲ್, ಕನ್ನಡ ಚಿತ್ರರಂಗದಲ್ಲೂ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಅದೇನೇ ಆದರೂ ಯುವರತ್ನ ಚಿತ್ರದ ಕ್ರೇಜ್ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ.
* ರವಿ ರೈ