ಲಂಡನ್: ವಿಶ್ವಕಪ್ ಸೆಮಿಫೈನಲ್ ಸೋಲಿನ ಆಘಾತದಲ್ಲಿರುವ ಭಾರತೀಯ ಆಟಗಾರರ ಮೇಲೆ ಈಗಾಗಲೇ ಹಲವು ಟೀಕೆಗಳು ಕೇಳಿ ಬಂದಿದೆ. ಭಾರತದ ಬ್ಯಾಟಿಂಗ್ ಸರದಿ, ಔಟಾದ ಪರಿಗೆ ಹಲವರು ಟೀಕಾ ಪ್ರಹಾರ ನಡೆಸಿದ್ದಾರೆ.
ಈಗ ಇಂಗ್ಲೆಂಡಿನ ಮಾಜಿ ಆಟಗಾರ ಕೆವಿನ್ ಪೀಟರ್ಸನ್ ಸರದಿ. ಯುವ ಆಟಗಾರ ರಿಷಭ್ ಪಂತ್ ನ್ಯೂಜಿಲ್ಯಾಂಡ್ ವಿರುದ್ಧ ಔಟಾದ ಪರಿಗೆ ಕೆವಿನ್ ಟೀಕೆ ಮಾಡಿದ್ದಾರೆ. ” ಪಂತ್ ಹೀಗೆ ಔಟಾಗಿರುವುದನ್ನು ನಾವು ಎಷ್ಟು ಸಲ ನೋಡಿದ್ದೇವೆ. ಇದೇ ಕಾರಣಕ್ಕೆ ಅವರನ್ನು ಮೊದಲು ಆಯ್ಕೆ ಮಾಡಿರಲಿಲ್ಲ. ಇದು ದಯನೀಯ” ಎಂದು ಟ್ವೀಟ್ ಮಾಡಿದ್ದಾರೆ.
ಕಿವೀಸ್ ವಿರುದ್ಧದ ಪಂದ್ಯದಲ್ಲಿ ಭಾರತ ಐದು ರನ್ ಗೆ ಎರಡು ವಿಕೆಟ್ ಕಳೆದುಕೊಂಡ ಕಠಿಣ ಪರಿಸ್ಥಿತಿಯಲ್ಲಿ ರಿಷಭ್ ಪಂತ್ ಕ್ರೀಸಿಗಿಳಿದಿದ್ದರು. 56 ಎಸೆತ ಎದುರಿಸಿದ್ದ ಪಂತ್ 32 ರನ್ ಗಳಿಸಿದ್ದರು. ರನ್ ವೇಗ ಹೆಚ್ಚಿಸುವ ಉದ್ದೇಶದಿಂದ ಸ್ಪಿನ್ನರ್ ಸ್ಯಾಂಟ್ನರ್ ಬೌಲಿಂಗ್ ಆರಂಭಿಸಿದಾಗ ಎತ್ತಿ ಹೊಡಯಲು ಹೋದ ಪಂತ್ ಗ್ರಾಂಡ್ ಹೋಮ್ ಗೆ ಕ್ಯಾಚ್ ನೀಡಿ ಔಟಾದರು. ಇಂತಹ ಕಠಿಣ ಪರಿಸ್ಥಿತಿಯಲ್ಲಿ ರಿಷಭ್ ಪಂತ್ ರ ಹೊಡೆತದ ಆಯ್ಕೆಯ ಬಗ್ಗೆ ಕೆವಿನ್ ಟೀಕೆ ಮಾಡಿದ್ದಾರೆ.
ಯುವ ಆಟಗಾರನ ಬಗ್ಗೆ ಕೆವಿನ್ ಪೀಟರ್ಸನ್ ಮಾಡಿದ ಈ ಟೀಕೆ ಗಮನಿಸಿದ ಭಾರತದ ಮಾಜಿ ಆಟಗಾರ ಯುವರಾಜ್ ಸಿಂಗ್, ಪಂತ್ ಬೆಂಬಲಕ್ಕೆ ನಿಂತಿದ್ದಾರೆ. ಕೆವಿನ್ ಟ್ವೀಟ್ ಗೆ ಉತ್ತರಿಸಿದ ಯುವಿ, ಪಂತ್ ಇದುವರೆಗೆ ಆಡಿರುವುದು ಕೇವಲ 8 ಏಕದಿನ ಪಂದ್ಯ. ಇದು ಆತನ ತಪ್ಪಲ್ಲ. ಆತ ಮುಂದೆ ಕಲಿಯುತ್ತಾನೆ. ಇದು ದಯನೀಯವಂತೂ ಅಲ್ಲ. ಅದಾಗ್ಯು ನಮ್ಮ ನಮ್ಮ ಅಭಿಪ್ರಾಯ ನಾವು ಹಂಚಿಕೊಳ್ಳಬಹುದು ಎಂದು ಯುವಿ ಹೇಳಿದ್ದಾರೆ.
ಆರಂಭಿಕ ಆಘಾತದ ಹೊರತಾಗಿಯೂ ಭಾರತ ನ್ಯೂಜಿಲ್ಯಾಂಡ್ ವಿರುದ್ಧ ವಿರೋಚಿತವಾಗಿ ಹೋರಾಡಿತ್ತು. ಅಂತಿಮವಾಗಿ ವಿರಾಟ್ ಪಡೆ 18 ರನ್ ಗಳ ಸೋಲನುಭವಿಸಿತ್ತು.