ಬೆಂಗಳೂರು: ನಗರದ ರಂಗಸ್ಥಳ ಯಕ್ಷಮಿತ್ರ ಕೂಟವು ತನ್ನ 17ನೇ ವಾರ್ಷಿಕೋತ್ಸವದ ಅಂಗವಾಗಿ 2017ನೇ ಸಾಲಿನ ರಂಗಸ್ಥಳ ಪ್ರಶಸ್ತಿ ಘೋಷಿಸಿದ್ದು, ಕುಂದಾಪುರ ತಾಲೂಕಿನ ನಾಗೇಶ ಗಾಣಿಗ ಮತ್ತು ಕಾಸರಗೋಡಿನ ಪೂಕಳ ಲಕ್ಷ್ಮೀನಾರಾಯಣ ಭಟ್ಟ ಅವರನ್ನು ಆಯ್ಕೆ ಮಾಡಿದೆ.
ಭಾನುವಾರ (ಜು.30) ರವೀಂದ್ರ ಕಲಾಕ್ಷೇತ್ರದ ಮುಂಭಾಗದಲ್ಲಿರುವ ಎಡಿಎ ರಂಗಮಂದಿರದಲ್ಲಿ ಸಂಜೆ 4.30ಕ್ಕೆ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಜತೆಗೆ ಮಧ್ಯಾಹ್ನ 2.30ರಿಂದ ಶಿವಭಕ್ತ ವೀರಮಣಿ ಯಕ್ಷಗಾನ ತಾಳಮದ್ದಳೆ ಮತ್ತು ಸಂಜೆ 6 ಗಂಟೆಗೆ ಬಾಲ ಕಲಾವಿದರಿಂದ ಉತ್ತರನ ಪೌರುಷ ಯಕ್ಷಗಾನ ಪ್ರದರ್ಶನ ಏರ್ಪಡಿಸಲಾಗಿದೆ.
ನಾಗೇಶ ಗಾಣಿಗ ಅವರು ಬಡಗು ತಿಟ್ಟು ಮತ್ತು ಪೂಕಳ ಲಕ್ಷ್ಮೀನಾರಾಯಣ ಭಟ್ಟ ಅವರು ತೆಂಕು ತಿಟ್ಟಿನ ಯಕ್ಷಗಾನದಲ್ಲಿ ಮಾಡಿದ ಅಪೂರ್ವ ಸಾಧನೆಗಾಗಿ ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಉದ್ಯಮಿ ಡಾ.ಪಿ.ದಯಾನಂದ ಪೈ, ಕೆಪಿಎಸ್‌ಸಿ ಅಧ್ಯಕ್ಷ ಶ್ಯಾಂ ಭಟ್, ದೂರದರ್ಶನ ಕೇಂದ್ರದ ನಿವೃತ್ತ ಹೆಚ್ಚುವರಿ ಮಹಾನಿರ್ದೇಶಕ ನಾಡೋಜ ಡಾ.ಮಹೇಶ್ ಜೋಶಿ, ಹಿರಿಯ ರಂಗಕರ್ಮಿ ಶ್ರೀನಿವಾಸ ಜಿ. ಕಪ್ಪಣ್ಣ, ಹಿರಿಯ ಪತ್ರಕರ್ತ ಎಂ.ಕೆ.ಭಾಸ್ಕರರಾವ್ ಮತ್ತಿತರರು ಭಾಗವಹಿಸಲಿದ್ದಾರೆ ಎಂದು ಯಕ್ಷಮಿತ್ರ ಕೂಟದ ಅಧ್ಯಕ್ಷ ಆರ್.ಕೆ.ನಾಗೂರು ತಿಳಿಸಿದ್ದಾರೆ.
ಪ್ರಶಸ್ತಿ ಪುರಸ್ಕೃತರಿಗೆ ಮಾಸಾಶನ: ರಂಗಸ್ಥಳ ಪ್ರಶಸ್ತಿ ಪಡೆದ ಹಿರಿಯ ಯಕ್ಷಗಾನ ಕಲಾವಿದರಿಗೆ ಉದ್ಯಮಿ ಡಾ.ಪಿ.ದಯಾನಂದ ಪೈ ಅವರು ಮಾಸಿಕ 2 ಸಾವಿರ ರೂ. ಮಾಸಾಶನ ನೀಡುತ್ತಿದ್ದಾರೆ. ಇದರೊಂದಿಗೆ ರಂಗಸ್ಥಳ ಯಕ್ಷಮಿತ್ರ ಕೂಟದಿಂದ ಸಂಕಷ್ಟದ ಜೀವನ ಸಾಗಿಸುತ್ತಿರುವ ಹಿರಿಯ ಯಕ್ಷಗಾನ ಕಲಾವಿದರಿಗೆ ಜೀವನ ಪರ್ಯಂತ ಮಾಸಿಕ 1 ಸಾವಿರ ರೂ. ಮಾಸಾಶನ ನೀಡಲಾಗುತ್ತಿದೆ. ಈಗಾಗಲೇ 12 ಕಲಾವಿದರಿಗೆ ಮಾಸಾಶನ ನೀಡಲಾಗುತ್ತಿದ್ದು, ಅದಕ್ಕಾಗಿಯೇ ದತ್ತಿನಿಧಿ ಸ್ಥಾಪಿಸಲಾಗಿದೆ ಎಂದೂ ಅವರು ಹೇಳಿದ್ದಾರೆ.