Advertisement

ಕಡೂರಿನಲ್ಲಿ ದತ್ತ ಮಾಸ್ತರ್‌ ರಾಜಕೀಯ ಚದುರಂಗದಾಟ

11:33 PM Mar 03, 2023 | Team Udayavani |

ಚಿಕ್ಕಮಗಳೂರು: 2023ರ ವಿಧಾನಸಭೆ ಚುನಾವಣೆಗೆ ದಿನ ಗಣನೆ ಆರಂಭವಾಗಿದ್ದು ಕಾಫಿನಾಡು-ಬಯಲು ಸೀಮೆ ಯಲ್ಲಿ ಕಣ ಕೌತುಕ ಹೆಚ್ಚಿದೆ. ಎಚ್‌.ಡಿ. ದೇವೇಗೌಡ ಅವರ ಮಾನಸ ಪುತ್ರ ವೈಎಸ್‌ವಿ ದತ್ತ ಜೆಡಿಎಸ್‌ ತೊರೆದು ಕಾಂಗ್ರೆಸ್‌ ಸೇರಿದ್ದರಿಂದ ಕಡೂರು ಕ್ಷೇತ್ರ ಕುತೂಹಲ ಮೂಡಿಸಿದೆ.

Advertisement

ಕಾಂಗ್ರೆಸ್‌ ಈ ಚುನಾವಣೆಯಲ್ಲಿ ಹೊಸ ಪ್ರಯೋಗಕ್ಕೆ ಕೈ ಹಾಕಿದೆ. ಆಕಾಂಕ್ಷಿಗಳಿಂದ ಅರ್ಜಿ ಪಡೆದಿದ್ದು, 7 ಜನ ಅರ್ಜಿ ಸಲ್ಲಿಸಿ ಚಾತಕಪಕ್ಷಿಯಂತೆ ಕಾಯುತ್ತಿದ್ದಾರೆ. ಈ ನಡುವೆ ವೈ ಎಸ್‌ವಿ ದತ್ತ ಕಾಂಗ್ರೆಸ್‌ ಸೇರ್ಪಡೆಗೊಂಡಿದ್ದರಿಂದ ಅರ್ಜಿ ಸಲ್ಲಿಸಿದವರಲ್ಲಿ ಟೆನ್ಶನ್‌ ಶುರುವಾಗಿದೆ. ಬಿಜೆಪಿಯಿಂದ ಬೆಳ್ಳಿ ಪ್ರಕಾಶ್‌ ಬಹುತೇಕ ಖಚಿತ ಎನ್ನಲಾಗುತ್ತಿದೆ. ವೈಎಸ್‌ವಿ ದತ್ತ ಜೆಡಿಎಸ್‌ ತೊರೆದಿರುವುದರಿಂದ ಅಲ್ಲಿ ಅನಾಥ ಭಾವ ಕಾಡು ತ್ತಿದೆ. ಅಭ್ಯರ್ಥಿಗಾಗಿ ಹುಡುಕಾಟ ನಡೆಸುತ್ತಿದ್ದು, 3 ಪಕ್ಷಗಳಿಗೆ ಟಾಂಗ್‌ ನೀಡಲು ಪಕ್ಷೇತರವಾಗಿ ಸ್ಪರ್ಧಿಸಲು ಕೆಲವರು ಮುಂದಾಗಿದ್ದಾರೆ.

2018ರ ಚುನಾವಣೆಯಲ್ಲಿ ಬೆಳ್ಳಿಪ್ರಕಾಶ್‌ ಎದುರು ಸೋಲುಂಡಿರುವ ಕೆ.ಎಸ್‌. ಆನಂದ್‌ ಕುರುಬ ಸಮುದಾಯ ದವರಾಗಿದ್ದು ಕಾಂಗ್ರೆಸ್‌ ಟಿಕೆಟ್‌ನ ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಕಳೆದ 50 ವರ್ಷಗಳಿಂದ ಕಾಂಗ್ರೆಸ್‌ನ ನಿಷ್ಠಾವಂತ ಕಾರ್ಯ ಕರ್ತನಾಗಿರುವ ಸಿ.ನಂಜಪ್ಪ ಟಿಕೆಟ್‌ ಆಕಾಂಕ್ಷಿ ಯಾಗಿದ್ದು, ಸಿದ್ದರಾಮಯ್ಯ ಸರಕಾರದ ಅವ ಧಿಯಲ್ಲಿ ರಾಜ್ಯ ತೆಂಗು ಮತ್ತು ನಾರು ಅಭಿವೃದ್ಧಿ ಮಂಡಳಿ ಅಧ್ಯಕ್ಷರಾಗಿದ್ದರು. ಲಿಂಗಾಯತ ಸಮುದಾಯದ ಕೆ.ಎಂ.ವಿನಾಯಕ ಆಕಾಂಕ್ಷಿ ಯಾಗಿದ್ದು, ಜಿಲ್ಲಾ ಕಾಂಗ್ರೆಸ್‌ ಉಪಾಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಮಾಜಿ ಶಾಸಕ ಕೆ.ಎಂ.ಕೃಷ್ಣಮೂರ್ತಿ ಅವರ ಪುತ್ರ, ಶರತ್‌ ಕೃಷ್ಣಮೂರ್ತಿ ಕೂಡ ಆಕಾಂಕ್ಷಿಯಾಗಿದ್ದಾರೆ.

ಪುರಸಭೆ ಸದಸ್ಯರಾಗಿ, ಉಪಾಧ್ಯಕ್ಷರಾಗಿ ರಾಜಕೀಯ ಅನುಭವ ಹೊಂದಿರುವ ತೋಟದಮನೆ ಮೋಹನ್‌, ಗ್ರಾಪಂ ಸದಸ್ಯ ಕಂಸಾಗರ ಸೋಮಶೇಖರ್‌ ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿಯಾಗಿದ್ದಾರೆ. ಪರಿಶಿಷ್ಟ ಜಾತಿ ಸಮುದಾಯಕ್ಕೆ ಸೇರಿರುವ ಎಂ.ಎಚ್‌. ಚಂದ್ರಪ್ಪ ಅರ್ಜಿ ಸಲ್ಲಿಸಿದ್ದಾರೆ.

ಬ್ರಾಹ್ಮಣ ಸಮುದಾಯದ ವೈಎಸ್‌ವಿ ದತ್ತ 2018ರಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಿ ಬೆಳ್ಳಿಪ್ರಕಾಶ್‌ ವಿರುದ್ಧ ಸೋಲುಂಡಿದ್ದರು. ಜೆಡಿಎಸ್‌ ತೊರೆದು ಕಾಂಗ್ರೆಸ್‌ ಸೇರಿರುವ ದತ್ತ ಕೂಡ ಟಿಕೆಟ್‌ ಆಕಾಂಕ್ಷಿಯಾಗಿದ್ದು, ಇದೇ ನನ್ನ ಕೊನೆಯ ಚುನಾವಣೆ ಎನ್ನು ತ್ತಿದ್ದು, ಅರ್ಜಿ ಸಲ್ಲಿಸಿಲ್ಲ. ಆದರೆ ಡಿ.ಕೆ.ಶಿವಕುಮಾರ್‌, ಸಿದ್ದರಾ ಮಯ್ಯ ಸೇರಿದಂತೆ ಪ್ರಬಲ ನಾಯಕರ ಒಡನಾಟ ಹೊಂದಿದ್ದು, ಅರ್ಜಿ ಸಲ್ಲಿಸಿದವರಿಗೆ ಟೆನ್ಶನ್‌ ಶುರುವಾಗಿದೆ. ದತ್ತ ಅಥವಾ ಕೆ.ಎಸ್‌.ಆನಂದ್‌ಗೆ ಟಿಕೆಟ್‌ ನೀಡುವ ಸಾಧ್ಯತೆ ಇದೆ. ಒಂದು ವೇಳೆ ದತ್ತಗೆ ಟಿಕೆಟ್‌ ನೀಡಿದರೆ ಆನಂದ್‌ ಜೆಡಿಎಸ್‌ ಅಥವಾ ಪಕ್ಷೇತರವಾಗಿ ಸ್ಪರ್ಧೆ ಮಾಡುವ ಸಾಧ್ಯತೆ ಇದೆ.

Advertisement

ಜೆಡಿಎಸ್‌ ಕಥೆ ಏನು?: ವೈಎಸ್‌ವಿ ದತ್ತ ಜೆಡಿಎಸ್‌ ತೊರೆದಿ ರುವುದರಿಂದ ಜೆಡಿಎಸ್‌ ಕಡೂರು ಕ್ಷೇತ್ರದಲ್ಲಿ ಅನಾಥವಾಗಿದೆ. ಐದು ಕ್ಷೇತ್ರಗಳಲ್ಲಿ ಮೂರು ಕ್ಷೇತ್ರಗಳ ಅಭ್ಯರ್ಥಿಗಳನ್ನು ಘೋಷಿಸಿರುವ ಜೆಡಿಎಸ್‌ ಕಡೂರು, ತರೀಕೆರೆಯನ್ನು ಬಾಕಿ ಇಟ್ಟಿದೆ. ಜೆಡಿಎಸ್‌ ಕಡೂರು ತಾಲೂಕು ಅಧ್ಯಕ್ಷ ಕೋಡಿಹಳ್ಳಿ ಮಹೇಶ್ವರಪ್ಪ ಟಿಕೆಟ್‌ ಆಕಾಂಕ್ಷಿ ಎನ್ನಲಾಗುತ್ತಿದ್ದು, ಕುರುಬ ಸಮುದಾಯಕ್ಕೆ ಸೇರಿರುವ ಇವರ ತಾಯಿ ಜಿಪಂ ಸದಸ್ಯ ರಾಗಿದ್ದರು. ಪ್ರಬಲವಾಗಿ ಕೇಳಿಬರುತ್ತಿರುವ ಮತ್ತೂಂದು ಹೆಸರು, ದಿ. ಧರ್ಮೇಗೌಡ ಪುತ್ರ ಒಕ್ಕಲಿಗ ಸಮುದಾಯದ ಸೋನಾಲ್‌ಗೌಡ್‌ ಅವರದ್ದು, ಜೆಡಿಎಸ್‌ ಹಿರಿಯ ಮುಖಂಡ ಲಿಂಗಾಯತ ಸಮುದಾಯದ ಕೆ. ಬಿದರೆ ಜಗದೀಶ್‌ ಅವರೂ ಆಕಾಂಕ್ಷೆ ಹೊಂದಿದ್ದಾರೆ.

ಬಿಜೆಪಿಯಿಂದ ಬೆಳ್ಳಿ ಪಕ್ಕಾ?
ಕಡೂರು ಕ್ಷೇತ್ರದ ಹಾಲಿ ಶಾಸಕ ಲಿಂಗಾಯತ ಸಮುದಾಯದ ಬೆಳ್ಳಿಪ್ರಕಾಶ್‌ಗೆ ಬಿಜೆಪಿ ಟಿಕೆಟ್‌ ಎನ್ನುವುದು ಖಾತ್ರಿಯಾಗಿದೆ. ಖುದ್ದು ಮಾಜಿ ಸಿಎಂ ಬಿಎಸ್‌ವೈ ಹಾಗೂ ಸಿಎಂ ಬಸವರಾಜ ಬೊಮ್ಮಾಯಿ ಇದನ್ನು ಸ್ಪಷ್ಟಪಡಿಸಿದ್ದಾರೆ. ಕಾಂಗ್ರೆಸ್‌, ಜೆಡಿಎಸ್‌ ತೊರೆದು ಈಗ ಬಿಜೆಪಿಯಲ್ಲಿ ಭದ್ರ ಬುನಾದಿ ಕಂಡುಕೊಂಡಿದ್ದಾರೆ. ಆರ್‌ಎಸ್‌ಎಸ್‌ ಹಿನ್ನೆಲೆಯ ಟಿ.ಆರ್‌.ಲಕ್ಕಪ್ಪ ಕೂಡ ಟಿಕೆಟ್‌ ನಿರೀಕ್ಷೆಯಲ್ಲಿದ್ದಾರೆ. ಕಾಂಗ್ರೆಸ್‌ನಿಂದ ಕುರುಬ ಸಮುದಾಯಕ್ಕೆ ಸೇರಿರುವ ಮಹೇಶ್‌ ಒಡೆಯರ್‌ ಶಾಸಕ ಬೆಳ್ಳಿ ಪಾಳಯದಲ್ಲಿ ಗುರುತಿಸಿಕೊಂಡಿದ್ದರು. 1 ವರ್ಷದಿಂದ ಅಂತರ ಕಾಯ್ದುಕೊಂಡಿರುವ ಅವರು ಜೆಡಿಎಸ್‌ ಕಡೆ ಒಲವು ತೋರಿದ್ದು, ಒಂದು ವೇಳೆ ಅಲ್ಲಿ ಟಿಕೆಟ್‌ ಸಿಗದಿದ್ದರೆ ಪಕ್ಷೇತರವಾಗಿ ನಿಲ್ಲುವ ಚಿಂತನೆಯಲ್ಲಿದ್ದಾರೆ. ಜಿಪಂ ಮಾಜಿ ಅಧ್ಯಕ್ಷ ಕೆ.ಎಂ. ಕೆಂಪರಾಜು ಅವರ ಪುತ್ರ ಚೇತನ್‌ ಯಾವುದೇ ಪಕ್ಷದಲ್ಲಿ ಗುರುತಿಸಿಕೊಂಡಿಲ್ಲ. ತಂದೆ ಮತ್ತು ದೊಡ್ಡಪ್ಪ(ಕೆ.ಎಂ.ಕೃಷ್ಣಮೂರ್ತಿ) ರಾಜಕೀಯ ಹಿನ್ನೆಲೆ ಹೊಂದಿದ್ದು, ಜೆಡಿಎಸ್‌ ಬಾಗಿಲು ತಟ್ಟುತ್ತಿದ್ದಾರೆ.

-ಸಂದೀಪ ಜಿ.ಎನ್‌. ಶೇಡ್ಗಾರ್‌

Advertisement

Udayavani is now on Telegram. Click here to join our channel and stay updated with the latest news.

Next