ಹೈದರಾಬಾದ್: ಆಂಧ್ರಪ್ರದೇಶದಲ್ಲಿ ಆಡಳಿತಾರೂಢ ಟಿಆರ್‌ಎಸ್ ಮತ್ತು ವೈಎಸ್‌ಆರ್ ಕಾಂಗ್ರೆಸ್ ನಡುವಿನ ಜಟಾಪಟಿ ತೀವ್ರಗೊಂಡಿದ್ದು, ಮಂಗಳವಾರ ಹೈದರಾಬಾದ್‌ನಲ್ಲಿ ಹೈಡ್ರಾಮಾ ನಡೆದಿದೆ.
ಆಂಧ್ರಪ್ರದೇಶ ಮುಖ್ಯಮಂತ್ರಿ ಜಗನ್ ರೆಡ್ಡಿ ಅವರ ಸಹೋದರಿ ವೈ.ಎಸ್. ಶರ್ಮಿಳಾ ಅವರು ಕಾರಿನೊಳಗೆ ಕುಳಿತಿರುವಂತೆಯೇ ಹೈದರಾಬಾದ್ ನಗರ ಪೊಲೀಸರು ಅವರ ಕಾರನ್ನು ಕ್ರೇನ್ ಮೂಲಕ ಟೋಯಿಂಗ್ ಮಾಡಿ ಕೊಂಡೊಯ್ದಿರುವ ಘಟನೆ ನಡೆದಿದೆ. ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಶರ್ಮಿಳಾ ಅವರನ್ನು ಪೊಲೀಸ್ ಠಾಣೆಗೆ ಕರೆದೊಯ್ದಾಗ ಅಲ್ಲೂ ದೊಡ್ಡ ನಾಟಕ ನಡೆದಿದೆ. ಕಾರನ್ನು ಒಳಗಿನಿಂದಲೇ ಲಾಕ್ ಮಾಡಿಕೊಂಡ ಶರ್ಮಿಳಾ ಕಾರಿನಿಂದ ಇಳಿಯುವುದಿಲ್ಲ ಎಂದು ಪಟ್ಟು ಹಿಡಿದರು. ಕೊನೆಗೆ ಪೊಲೀಸರು ಬೀಗ ದುರಸ್ತಿ ಮಾಡುವ ವ್ಯಕ್ತಿಯನ್ನು ಕರೆಸಿಕೊಂಡು, ಶರ್ಮಿಳಾ ಅವರ ಎಸ್‌ಯುವಿ ಬಾಗಿಲನ್ನು ತೆರೆಸಬೇಕಾಯಿತು.
ಇದರ ನಡುವೆ ಪುತ್ರಿಯನ್ನು ಭೇಟಿಯಾಗಲೆಂದು ಹೈದರಾಬಾದ್‌ಗೆ ಹೊರಟ ಶರ್ಮಿಳಾ ಅವರ ತಾಯಿ ವೈ.ಎಸ್. ವಿಜಯಲಕ್ಷ್ಮೀ ಅವರನ್ನು ಪೊಲೀಸರು ಗೃಹಬಂಧನದಲ್ಲಿ ಇರಿಸಿದ್ದಾರೆ.
Related Articles
ಸಿಎಂ ನಿವಾಸಕ್ಕೆ ಘೇರಾವ್ ಯತ್ನ
ಸೋಮವಾರ ವಾರಂಗಲ್‌ನ ಪಾದಯಾತ್ರೆಯೊಂದಕ್ಕೆ ಸಂಬಂಧಿಸಿ ಎರಡೂ ಪಕ್ಷಗಳ ಕಾರ್ಯಕರ್ತರ ನಡುವೆ ಭಾರಿ ಘರ್ಷಣೆ ನಡೆದಿತ್ತು. ಶರ್ಮಿಳಾ ಅವರ ಕ್ಯಾರವಾನ್‌ಗೆ ಟಿಆರ್‌ಎಸ್ ಕಾರ್ಯಕರ್ತರು ಬೆಂಕಿ ಹಚ್ಚಿದ್ದರು. ಹಲವು ವಾಹನಗಳಿಗೂ ಹಾನಿಯಾಗಿತ್ತು. ಈ ಹಿನ್ನೆಲೆಯಲ್ಲಿ ಮಂಗಳವಾರ ಶರ್ಮಿಳಾ ಅವರು ಸಿಎಂ ಕೆ. ಚಂದ್ರಶೇಖರ್ ರಾವ್ ಅವರ ನಿವಾಸಕ್ಕೆ ತೆರಳಿ ಪ್ರತಿಭಟನೆ ನಡೆಸಲು ಮುಂದಾದರು.
ಜತೆಗೆ ಸಿಎಂ ನಿವಾಸಕ್ಕೆ ಘೇರಾವ್ ಹಾಕುವಂತೆ ಬೆಂಬಲಿಗರಿಗೆ ಕರೆ ನೀಡಿದರು. ಅನಂತರ ಅವರು ತಮ್ಮ ಕಾರು ಏರಿ ಚಲಾಯಿಸಲು ಮುಂದಾಗುತ್ತಿದ್ದಂತೆ ಕ್ರೇನ್‌ನೊಂದಿಗೆ ಸ್ಥಳಕ್ಕೆ ಆಗಮಿಸಿದ ಪೊಲೀಸರು, ಶರ್ಮಿಳಾ ಅವರು ಕುಳಿತಿರುವಂತೆಯೇ ಅವರನ್ನು ಕಾರನ್ನು ಟೋಯಿಂಗ್ ಮಾಡಿ ಕೊಂಡೊಯ್ಯತೊಡಗಿದರು. ಈ ವೇಳೆ ಅವರ ಬೆಂಬಲಿಗರು ಕೂಡ ಕಾರಿನ ಹಿಂದೆಯೇ ಓಡಿದರು.