ಆಂಧ್ರಪ್ರದೇಶ: ದೆಹಲಿ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದಂತೆ ಸಂಸದ ಮಾಗುಂಟ ಶ್ರೀನಿವಾಸ ರೆಡ್ಡಿ ಪುತ್ರನನ್ನು ಇಡಿ ಶುಕ್ರವಾರ ಬಂಧಿಸಿದೆ.
ಇದೇ ಪ್ರಕರಣದಲ್ಲಿ ಇತ್ತೀಚೆಗಷ್ಟೇ ಹೈದರಾಬಾದ್ ಮೂಲದ ಚಾರ್ಟರ್ಡ್ ಅಕೌಂಟೆಂಟ್ ಬುಚ್ಚಿ ಬಾಬು ಗೋರಂಟ್ಲಾ ಅವರನ್ನು ಸಿಬಿಐ ಅಧಿಕಾರಿಗಳು ಬಂಧಿಸಿದ್ದರು. ಇದೀಗ ಇಡಿ ಅಧಿಕಾರಿಗಳು ಮಾಗುಂಟ ರಾಘವ ಅವರನ್ನು ಬಂಧಿಸಿದ್ದಾರೆ.
ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರು ದೆಹಲಿಯಲ್ಲಿ ಮದ್ಯದ ದಂಧೆಗೆ ಸಂಬಂಧಿಸಿದಂತೆ ಮಾಗುಂಟ ಶ್ರೀನಿವಾಸಲು ರೆಡ್ಡಿ ಅವರನ್ನು ಭೇಟಿ ಮಾಡಿದ್ದನ್ನು ಇಡಿ ಈ ಪ್ರಕರಣದಲ್ಲಿ ಉಲ್ಲೇಖಿಸಿದೆ.
ಈಗಾಗಲೇ ಈ ಹಗರಣದಲ್ಲಿ ಇಡಿ ಇದುವರೆಗೆ ಎರಡು ಚಾರ್ಜ್ ಶೀಟ್ ದಾಖಲಿಸಿ, ಒಟ್ಟು ಒಂಬತ್ತು ಜನರನ್ನು ಬಂಧಿಸಿದೆ.
ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಮತ್ತು ಸರ್ಕಾರದ ಇತರ ಅಬಕಾರಿ ಅಧಿಕಾರಿಗಳನ್ನು ಸಿಬಿಐ ಮತ್ತು ಇಡಿ ಅಧಿಕಾರಿಗಳು ಆರೋಪಿಗಳೆಂದು ಉಲ್ಲೇಖಿಸಿದೆ.
ರಾಘವ ಮಾಗುಂಟ ಅವರನ್ನು ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್ಎ) ಅಡಿಯಲ್ಲಿ ಬಂಧಿಸಲಾಗಿದ್ದು, ಸ್ಥಳೀಯ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುತ್ತದೆ ಎಂದು ವರದಿ ತಿಳಿಸಿದೆ.