ನೀನು ಸಿಗದಿದ್ದರೆ, ನಾನು ಸತ್ತೋಗುತ್ತೇನೆ ಅಂತೆಲ್ಲಾ ನಾನು ಹೇಳುವುದಿಲ್ಲ, ಏಕೆಂದರೆ ನನ್ನನ್ನು ಪ್ರೀತಿಸಲು ಸಹ ಒಂದು ಕುಟುಂಬವಿದೆ. ಆ ಕುಟುಂಬದವರ ಪ್ರೀತಿ ಪಡೆಯಲು ನಿನಗೆ ಅದೃಷ್ಟವಿಲ್ಲ ಅಂತ ಭಾವಿಸಿ ಸುಮ್ಮನಾಗುತ್ತೀನಿ ಅಷ್ಟೇ.
ಹಾಯ್ ತಿಕ್ಲಿ,
ಐದು ವರ್ಷಗಳ ಪರಿಚಯದಲ್ಲಿ ನಾನು ಸ್ನೇಹಿತನಾಗಿಯೇ ಉಳಿದಿದ್ದೇನೆ. ಆದರೆ, ಪದವಿಯ ಮೂರು ವರ್ಷಗಳ ಒಡನಾಟದಲ್ಲೇ ನಿನ್ನ ಮೇಲೆ ವಿಪರೀತ ಪ್ರೀತಿಯಾಗಿಬಿಟ್ಟಿದೆ. ಈ ಪ್ರೀತಿಯ ವಿಷಯ ನನ್ನ ಅರಿವಿಗೆ ಬಂದದ್ದು ಪದವಿ ಮುಗಿದ ನಂತರವೇ. ಯಾಕೆಂದರೆ, ಡಿಗ್ರಿಯಲ್ಲಿದ್ದಾಗ ದಿನಾಲೂ ಪರಸ್ಪರರನ್ನು ನೋಡುತ್ತಿದ್ದೆವು. ಹೆಚ್ಚಾಗಿ ಮಾತನಾಡದಿದ್ದರೂ ದಿನವೂ ಭೇಟಿಯಾಗುತ್ತಿದ್ದೆವು. ನೋಡುತ್ತಿದ್ದೆವು.
ಆದರೆ ಪದವಿ ಮುಗಿದ ಮೇಲೆ ನಾವು ದಿನವೂ ಭೇಟಿಯಾಗಲು ಸಾಧ್ಯವಿಲ್ಲ ಎಂಬುದು ಅರಿವಾಯ್ತು. ಮತ್ತೆ ನೀನು ಸಿಗುತ್ತೀಯೋ, ಇಲ್ಲವೋ ಎಂಬ ಭಯ ಶುರುವಾಗಿದ್ದು ಆಗಲೇ. ಡಿಗ್ರಿ ಮುಗಿಯಿತು. ಮುಂದೇನು ಮಾಡುವುದು ಎಂಬ ಪ್ರಶ್ನೆಯೂ ನನ್ನನ್ನು ಅಷ್ಟಾಗಿ ಕಾಡಿರಲಿಲ್ಲ. ಇಂಥ ಪರಿಸ್ಥಿತಿಯಲ್ಲಿ ನಿನ್ನ ನೆನಪುಗಳು ನನ್ನನ್ನು ಪದೇ ಪದೆ ಕೆಣಕುತ್ತಿದ್ದವು. ನಿನ್ನನ್ನು ಬಿಟ್ಟು ಬದುಕಲಾಗುವುದಿಲ್ಲ ಅನ್ನಿಸುವಷ್ಟರ ಮಟ್ಟಿಗೆ ನನಗೇ ಗೊತ್ತಿಲ್ಲದೆ ನಾನು ನಿನ್ನನ್ನು ಹಚ್ಚಿಕೊಂಡಿದ್ದೆ.
ನೀನು ಮುಂದೆ ಸ್ನಾತಕೋತ್ತರ ಓದಲೆಂದು ಮೈಸೂರು ವಿಶ್ವವಿದ್ಯಾಲಯಕ್ಕೆ ಅರ್ಜಿ ಸಲ್ಲಿಸಿದ್ದೀಯೆಂದು ಗೊತ್ತಾಯ್ತು. ತಕ್ಷಣವೇ ನಾನೂ ಆನ್‌ಲೈನ್ ಮೂಲಕ ಮೈಸೂರು ವಿ.ವಿ.ಗೆ ಅರ್ಜಿ ಸಲ್ಲಿಸಿದೆ. ಕೆಲದಿನಗಳ ನಂತರ ಪ್ರವೇಶ ಪರೀಕ್ಷೆ ದಿನಾಂಕ ನಿಗದಿಯಾಯಿತು. ಪ್ರವೇಶ ಪರೀಕ್ಷೆ ನೆಪದಲ್ಲಿ ನಾನು ಮೈಸೂರಿಗೆ ಬಂದೆ. ನಿಜ ಹೇಳಬೇಕೆಂದರೆ, ನಿನ್ನನ್ನು ನೋಡಲೆಂದೇ ಮೈಸೂರಿಗೆ ಬಂದಿದ್ದೆ! ನನ್ನ ಅದೃಷ್ಟಕ್ಕೆ, ಪರೀಕ್ಷೆ ಬರೆಯಲು ನಾವಿಬ್ಬರೂ ಒಂದೇ ಕೊಠಡಿಯಲ್ಲಿ ಕೂರಬೇಕಾಯ್ತು. ಅವತ್ತು ಅರ್ಧ ಸಮಯ ನಿನ್ನನ್ನು ನೋಡುವುದರಲ್ಲಿ, ಇನ್ನರ್ಧ ವೇಳೆಯನ್ನು ಪರೀಕ್ಷೆ ಬರೆಯುವುದರಲ್ಲಿ ಕಳೆದೆ! ಪ್ರಶ್ನೆ ಪತ್ರಿಕೆ ನೋಡಿದಾಗಲೇ ಗೊತ್ತಾಗಿತ್ತು ನನಗೆ ಇಲ್ಲಿ ಸೀಟ್ ಸಿಗುವುದಿಲ್ಲ ಅಂತ!
ಈ ನಡುವೆ ಧೈರ್ಯ ಮಾಡಿ ನಿನ್ನ ಬಳಿ ಪ್ರೇಮನಿವೇದನೆ ಮಾಡಿಕೊಂಡೆ. ಅದನ್ನು ನೀನು ನಯವಾಗಿ ತಿರಸ್ಕರಿಸಿಬಿಟ್ಟೆ. ಆದರೂ, ಸ್ನೇಹಿತನೆಂದೇ ಭಾವಿಸಿ ಮೊದಲಿನಂತೆಯೇ ನಡೆದುಕೊಳ್ಳುತ್ತಿದ್ದೆ, ಮಾಮೂಲಿಯಾಗಿಯೇ ಮಾತನಾಡಿಸುತ್ತಿದ್ದೆ. ಆದರೆ ನಾನು ಮಾತ್ರ ಹಳೆಯ ಕನಸಿಗೆ ನೀರು ಎರೆಯುತ್ತಲೇ ಇದ್ದೇನೆ. ಸ್ನಾತಕೋತ್ತರ ಪದವಿಗೆ ಸೇರಿ ಒಂದೂವರೆ ವರ್ಷಗಳಾಯ್ತು. ನನ್ನ ಪ್ರೀತಿಗೆ ಈಗ ಐದು ವರ್ಷ ವಯಸ್ಸು. ನೀನು ಮಾತ್ರ ಬದಲಾಗಿಲ್ಲ. ನನ್ನ ಪ್ರೀತಿಯನ್ನು ಒಪ್ಪಿಕೊಳ್ತೀಯಾ, ಇಲ್ಲವಾ ಗೊತ್ತಿಲ್ಲ.
ನೀನು ಸಿಗದಿದ್ದರೆ, ನಾನು ಸತ್ತೋಗುತ್ತೇನೆ ಅಂತೆಲ್ಲಾ ನಾನು ಹೇಳುವುದಿಲ್ಲ, ಏಕೆಂದರೆ ನನ್ನನ್ನು ಪ್ರೀತಿಸಲು ಸಹ ಒಂದು ಕುಟುಂಬವಿದೆ. ಆ ಕುಟುಂಬದವರ ಪ್ರೀತಿ ಪಡೆಯಲು ನಿನಗೆ ಅದೃಷ್ಟವಿಲ್ಲ ಅಂತ ಭಾವಿಸಿ ಸುಮ್ಮನಾಗುತ್ತೀನಿ.
ಸದಾ ನಿನ್ನನ್ನೇ ಪ್ರೀತಿಸುವ ತಿಕ್ಲ
– ಗಿರೀಶ್ ಚಂದ್ರ ವೈ.ಆರ್.