ಬೆಂಗಳೂರು: ಕೋವಿಡ್-19 ಭೀತಿಯಿಂದ ಶಾಲಾ-ಕಾಲೇಜಿಗೆ ರಜಾ ಘೋಷಣೆ ಮಾಡಲಾಗಿದ್ದು, ಕಾಲೇಜು ವಿದ್ಯಾರ್ಥಿಗಳಿಗೆ ಆನ್‌ಲೈನ್ ತರಗತಿ ನಡೆಯುತ್ತಿದೆ. ಆದರೆ ಶಾಲಾ ಮಕ್ಕಳಿಗೆ ಯಾವುದೇ ಚಟುವಟಿಕೆ ಇಲ್ಲ. ಹೀಗಾಗಿ ಯೂಟ್ಯೂಬ್ ಚಾನಲ್ ಮೂಲಕ ಸೃಜನಶೀಲತೆ ಹೆಚ್ಚಿಸಲು ಸಾರ್ವಜನಿಕ ಶಿಕ್ಷಣ ಇಲಾಖೆ ಮುಂದಾಗಿದ್ದು, ಚಾನಲ್ ಕಾರ್ಯಾರಂಭ ವಿಳಂಬವಾಗುವ ಸಾಧ್ಯತೆಯಿದೆ. ಪ್ರಸಕ್ತ ಸಾಲಿನಲ್ಲಿ ಪ್ರಾಥಮಿಕ ಶಾಲಾ ಮಕ್ಕಳನ್ನು ಪರೀಕ್ಷೆ ಇಲ್ಲದೆ ಉತ್ತೀರ್ಣ ಮಾಡಲಾಗಿದೆ. ಬೇಸಿಗೆ ರಜಾ ಅವಧಿಯೂ ಹೆಚ್ಚಿದೆ. ಮನೆಪಾಠವೂ ಇಲ್ಲ. ಹೀಗಾಗಿ ಮಕ್ಕಳಲ್ಲಿ ಸೃಜನಶೀಲತೆಯ ಕೊರತೆ ಆಗಬಹುದು ಎಂಬ ಉದ್ದೇಶದಿಂದ ಯೂಟ್ಯೂಬ್ ಚಾನೆಲ್ ಮೂಲಕ ಸೃಜನಶೀಲತೆ ತುಂಬಲು ಸಾರ್ವಜನಿಕ ಶಿಕ್ಷಣ ಯೋಜನೆ ರೂಪಿಸಿದೆ. ಆದರೆ, ಲಾಕ್‌ಡೌನ್ ಜಾರಿಯಾಗಿ 20ದಿನ ಕಳೆದರೂ ಯೂಟ್ಯೂಬ್ ಚಾನಲ್ ಮಾತ್ರ ಕಾರ್ಯಾರಂಭಿಸಿಲ್ಲ.
ಹಾಡು, ಕಥೆ, ವಿವಿಧ ಕ್ರಿಯಾಶೀಲ ಚಟುವಟಿಕೆ ಮತ್ತು ಆಟಗಳ ಮೂಲಕ ಮಕ್ಕಳನ್ನು ಸಕ್ರಿಯಗೊಳಿಸುವ ಸಂಬಂಧ ನಿಮ್ಮಲ್ಲಿರುವ ಪರಿಕಲ್ಪನೆಯನ್ನು ಇಲಾಖೆಗೆ ಕಳುಹಿಸುವಂತೆ ಈಗಾಗಲೇ ಶಿಕ್ಷಕರು, ಟೆಕ್ಕಿಗಳು ಹಾಗೂ ಸಾರ್ವಜನಿಕರನ್ನು ಇಲಾಖೆ ಮನವಿ ಮಾಡಿದೆ. ಅದರಂತೆ ಬಹುತೇಕರು ಚಟುಚಟಿಕೆಗಳ ಮಾಹಿತಿಯನ್ನು ರಾಜ್ಯ ಸಮಗ್ರ ಶಿಕ್ಷಣ ವಿಭಾಗಕ್ಕೆ ಕಳುಹಿಸಿಕೊಟ್ಟಿದ್ದಾರೆ. ಸಮಗ್ರ ಶಿಕ್ಷಣ ವಿಭಾಗದಲ್ಲಿ ಬಂದಿರುವ ಎಲ್ಲ ಮಾಹಿತಿಗಳ ಗುಣಮಟ್ಟ
ಪರಿಶೀಲಿಸಿ, ಬಳಸಿಕೊಳ್ಳುವ ಕ್ರಮ ನಡೆಯುತ್ತಿದೆ. ಆದರೆ, ಅನೇಕ ಅಂಶಗಳು ಬಳಸಿಕೊಳ್ಳಲು ಯೋಗ್ಯವಿಲ್ಲದ ಗುಣಮಟ್ಟ ಹೊಂದಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
ಇದೊಂದು ನಿರಂತರ ಪ್ರಕ್ರಿಯೆ ಆಗಿರಬೇಕು ಎನ್ನುವ ದೃಷ್ಟಿಯಿಂದ ಯೋಜನೆ ಸಿದ್ಧವಾಗುತ್ತಿದೆ. ಅನೇಕ ಶಿಕ್ಷಕರು ಹಾಗೂ ಸಾರ್ವಜನಿಕರು ಆಡಿಯೋ, ವಿಡಿಯೋ ಚಟುವಟಿಕೆ ಕಳುಹಿಸಿದ್ದಾರೆ. ಕೆಲವೊಂದರಲ್ಲಿ ವಿಡಿಯೋ ಕ್ವಾಲಿಟಿ ಚೆನ್ನಾಗಿಲ್ಲ, ಇನ್ನು ಕೆಲವೊಂದರಲ್ಲಿ ಆಡಿಯೋ ಪ್ರತಿಧ್ವನಿ ಮತ್ತು ಅಡೆತಡೆ ಹೆಚ್ಚಿದೆ. ಹೀಗಾಗಿ ಇದನ್ನೆಲ್ಲವನ್ನು ಪರಿಶೀಲಿಸುತ್ತಿದ್ದೇವೆ. ಬಹುತೇಕರು ಮೊಬೈಲ್‌ನಲ್ಲೇ ರೆಕಾರ್ಡ್ ಮಾಡಿ ಕಳುಹಿಸುತ್ತಿದ್ದಾರೆ ಎಂದು ವಿವರ ನೀಡಿದರು.
ದಿನಕ್ಕೆ ಒಂದು ಗಂಟೆ ಕಾರ್ಯಕ್ರಮ:
ಇಲಾಖೆಯ ಯೂಟ್ಯೂಬ್ ಚಾನಲ್ ಮೂಲಕ ದಿನಕ್ಕೆ ಒಂದು ಗಂಟೆ ಕಾರ್ಯಕ್ರಮ ನೀಡಲು ನಿರ್ಧರಿಸಲಾಗಿದೆ. ಆದರೆ, ಯಾವ ಸಮಯದಲ್ಲಿ ಪ್ರಸಾರ ಮಾಡಬೇಕು ಎಂಬುದು ಇನ್ನೂ ನಿರ್ಧರಿಸಿಲ್ಲ. ಗ್ರಾಮೀಣ ಭಾಗದ ಅಥವಾ ಇಂಟರ್ನೆಟ್ ಸೌಲಭ್ಯ ಇಲ್ಲದ ಕಡೆಗಳಲ್ಲಿ ಮಕ್ಕಳ ಅನುಕೂಲಕ್ಕಾಗಿ ಆಕಾಶವಾಣಿ
ಅಥವಾ ದೂರದರ್ಶನದ ಮೂಲಕ ಪ್ರಸಾರಕ್ಕೆ ಚಿಂತನೆ ನಡೆಸುತ್ತಿದ್ದೇವೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
ಯೂಟ್ಯೂಬ್ ಚಾನಲ್‌ಗೆ ಬೇಕಾದ ಕಂಟೆಂಟ್ ಸಂಗ್ರಹಿಸಿ, ಸಿದ್ಧಪಡಿಸುತ್ತಿದ್ದೇವೆ. ಕಾರ್ಯಾರಂಭಕ್ಕೆ ಇನ್ನು ಸ್ವಲ್ಪ ದಿನ ಬೇಕಾಗುತ್ತದೆ. ಕಾರ್ಯಕ್ರಮ ವೀಕ್ಷಿಸಿದ ನಂತರ ಯಾವುದೇ ಸಲಹೆ ಇದ್ದರೂ ಕಾಮೆಂಟ್ ಬಾಕ್ಸ್ ನಲ್ಲಿ ನೀಡಲು ಅವಕಾಶ ಇರುತ್ತದೆ. ಅರ್ಹ ಮತ್ತು ಸೂಕ್ತವೆನಿಸಿದ ಸಲಹೆಗಳನ್ನು ಸ್ವೀಕರಿಸಿ, ಉನ್ನತೀಕರಿಸಿಕೊಳ್ಳುತ್ತಿರುತ್ತೇವೆ.
ಡಾ.ಟಿ.ಎಂ.ರೇಜು, ರಾಜ್ಯ ಯೋಜನಾ ನಿರ್ದೇಶಕ, ಸಮಗ್ರ ಶಿಕ್ಷಣ