ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (ಕೆಐಎಎಲ್) ರಸ್ತೆಯಲ್ಲಿ ಗುರುವಾರ ರಾತ್ರಿ ಪಾನಮತ್ತ ಯುವಕರ ಗುಂಪೊಂದು ಚಲಿಸುತ್ತಿದ್ದ ಕಾರಿನ ರೂಫ್ ಟಾಪ್ ಮೇಲೆ ನಿಂತು ಪುಂಡಾಟ ನಡೆಸಿದ ಸಂಬಂಧ ಚಿಕ್ಕಜಾಲ ಸಂಚಾರ ಠಾಣೆ ಪೊಲೀಸರು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ಕೇರಳದ ಮಲ್ಲಪ್ಪುರಂ ಮೂಲದ ಮೂವರು ವಿದ್ಯಾರ್ಥಿಗಳು ಸೇರಿ ನಾಲ್ವರನ್ನು ಬಂಧಿಸಿ, ವಿಚಾರಣೆ ಬಳಿಕ ಠಾಣಾ ಜಾಮೀನು ನೀಡಿ ಬಿಡುಗಡೆ ಮಾಡಿದ್ದಾರೆ.
ದಾಸರಹಳ್ಳಿಯ ಖಾಸಗಿ ಕಾಲೇಜೊಂದರ ಅಂತಿಮ ವರ್ಷದ ಬಿಬಿಎ ವಿದ್ಯಾರ್ಥಿಗಳಾದ ನಾಸೀಮ್ ಅಬ್ಟಾಸ್(21), ಸಲ್ಮಾನುಲ್ ಫಾರಿಸ್(21), ಮೊಹಮ್ಮದ್ ನುಸೀಫ್(21) ಹಾಗೂ ಕೇರಳ ಮಲ್ಲಪುರಂನ ಸಲ್ಮಾನ್ ಫಾರಿಸ್(21) ಬಂಧಿತರು.
ಆರೋಪಿಗಳ ವಿರುದ್ಧ ಅತಿವೇಗ ಮತ್ತು ನಿರ್ಲಕ್ಷ್ಯದ ಚಾಲನೆ, ಸಾರ್ವಜನಿಕ ಮಾರ್ಗದಲ್ಲಿ ಸಂಚಾರಕ್ಕೆ ಅಡಚಣೆ ಅಡಿಯಲ್ಲಿ ಎಫ್ಐಆರ್ ದಾಖಲಿಸಿ, ವಿಚಾರಣೆ ನಡೆಸಿ ಠಾಣಾ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ ಎಂದು ಸಂಚಾರ ಪೊಲೀಸರು ಮಾಹಿತಿ ನೀಡಿದರು.
ಏರ್‌ಪೋರ್ಟ್ ನೋಡಲು ಹೋಗಿದ್ದರು!: ಕೇರಳದ ಮಲ್ಲಪುರಂ ನ ಸಲ್ಮಾನ್ ಫಾರಿಸ್ ತಂದೆ ದೆಹಲಿ ನೋಂದಣಿ ಸಂಖ್ಯೆಯ ಸೆಕೆಂಡ್ ಹ್ಯಾಂಡ್ ಕಾರು ಖರೀದಿಸಿದ್ದರು. ಹೀಗಾಗಿ ಸಲ್ಮಾನ್, ಕಾರನ್ನು ತೆಗೆದುಕೊಂಡು ಬೆಂಗಳೂರಿನಲ್ಲಿದ್ದ ಮೂವರು ಸ್ನೇಹಿತರನ್ನು ಭೇಟಿ ಯಾಗಲು ಬಂದಿದ್ದ. ಅದರಂತೆ ಡಿ.14 ರಂದು ಮಧ್ಯರಾತ್ರಿ ನಾಲ್ವರು ಸ್ನೇಹಿತರು ಮೊದಲ ಬಾರಿಗೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ವೀಕ್ಷಿಸಲು ಕಾರಿನಲ್ಲಿ ಹೊರಟ್ಟಿದ್ದರು. ಈ ವೇಳೆ ಮಾರ್ಗ ಮಧ್ಯೆ ಕಾರಿನ ಸನ್‌ರೂಫ್ ಟಾಪ್ ಹಾಗೂ ಕಿಟಕಿಯಲ್ಲಿ ತಲೆ ಹೊರಗೆ ಹಾಕಿ ನೃತ್ಯ ಮಾಡಿದ್ದರು ಎಂಬುದು ವಿಚಾರಣೆಯಿಂದ ತಿಳಿದು ಬಂದಿದೆ. ಯುವಕರು ನೃತ್ಯ ಮಾಡಿದ ವಿಡಿಯೋ ವೈರಲ್ ಆಗಿತ್ತು.