ವಾಡಿ: ತಿಪ್ಪೆ ಕಸದಲ್ಲಿ ಮುಚ್ಚಿಹೋಗಿದ್ದ ಪ್ರಾಚೀನ ಕಾಲದ ದೇಗುಲವೊಂದು ಯುವಕರ ಪತ್ತೆ ಕಾರ್ಯದಿಂದ ಬೆಳಕಿಗೆ ಬಂದಿದೆ. ಕಸದಲ್ಲಿ ಹುದುಗಿದ್ದ ಶಿಲೆಯೊಂದರ ಜಾಡು ಹಿಡುದು ಉತ್ಖನನಕ್ಕೆ ಮುಂದಾದ ಯುವಕರ ತಂಡಕ್ಕೆ 12 ಕಂಬದ ದೇವಾಲಯ ಗೋಚರಿಸಿದ್ದು, ಜಿಲ್ಲೆಯ ಇತಿಹಾಸ ತಜ್ಞರ ಗಮನ ಸೆಳೆದಿದೆ.
ಚಿತ್ತಾಪುರ ತಾಲೂಕು ರಾವೂರಿನಲ್ಲಿ ದೇಗುಲ ಕಾಣಿಸಿಕೊಂಡಿದ್ದು, ಚಿತ್ತಾಪುರದ ನಾಗಾವಿ ಪರಿಸರದಲ್ಲಿ ಪತ್ತೆಯಾದ 62 ಕಂಬದ ದೇಗುಲದಂತೆ ರಾವೂರಿನ ದೇಗುಲ 48 ಕಂಬಗಳಿಂದ ಕೂಡಿದೆ ಎನ್ನಲಾಗಿದೆ. ಗ್ರಾಮಸ್ಥರಲ್ಲಿ ಕುತೂಹಲ ಮೂಡಿಸಿದೆ. ತಿಪ್ಪೆ ಗುಂಡಿ ಸುರಂಗ ಮಾರ್ಗದಿಂದ ಒಳಹೊಕ್ಕ ಗ್ರಾಮದ ಕನಕ ನಗರದ ಯುವಕರು, ಕಲ್ಲು ಮಣ್ಣು ತೆಗೆದು ಮುಚ್ಚಿದ್ದ ಪ್ರಾಚೀನ ದೇವಸ್ಥಾನವನ್ನು ಪತ್ತೆ ಹಚ್ಚಿದರು.
ಹಾಳು ಹಂಪೆಯಂತೆ ರಾವೂರಿನ ನೆಲ ಇತಿಹಾಸ ಹೊತ್ತು ನಿಂತಿದೆ. ಈ ಹಿಂದೆ ಇದೇ ಗ್ರಾಮದಲ್ಲಿ ಮುಚ್ಚಿ ಹೋಗಿದ್ದ ದೇವಾಲಯಗಳು ಪತ್ತೆಯಾಗಿದ ಉದಾಹರಣೆಗಳಿವೆ. ಇನ್ನೂ ಅನೇಕ ಕಟ್ಟಡಗಳು ನೆಲದಡಿಯಲ್ಲಿ ಮುಚ್ಚಿಕೊಂಡಿವೆ. ಇಲ್ಲಿ ಮನೆಗೊಂದು ಪುರಾತನ ಬಾವಿಗಳಿದ್ದು, ನೀರಿನ ಸೆಲೆ ಹೊಂದಿ ಇಂದಿಗೂ ಅವು ಬಳಕೆಯಾಗುತ್ತಿವೆ. ಪತ್ತೆಯಾದ ದೇಗುಲಗಳ ಸಂರಕ್ಷಣೆಯಾಗದ ಕಾರಣ ಅವು ಮತ್ತೆ ತಿಪ್ಪೆಯತ್ತ ಮುಖಮಾಡಿಕೊಳ್ಳುತ್ತಿವೆ. ಇಂತಹ ಎಷ್ಟೇ ದೇಗುಲಗಳು ಬೆಳಕಿಗೆ ಬಂದರೂ ಪ್ರಾಚ್ಯವಸ್ತು ಇಲಾಖೆ ಮಾತ್ರ ಕಿಂಚಿತ್ತೂ ಗಮನಹರಿಸುತ್ತಿಲ್ಲ. ಮಣ್ಣಿನಲ್ಲಿ ಸಿಕ್ಕ ಐತಿಹಾಸಿಕ ಕುರುಹುಗಳು ಪುನಃ ಮಣ್ಣಿಗೆ ಸೇರುತ್ತಿವೆ ವಿನಃ ಅವು ಅಭಿವೃದ್ಧಿ ಹೊಂದುತ್ತಿಲ್ಲ ಎಂಬುದು ಗ್ರಾಮಸ್ಥರ ಅಳಲಾಗಿದೆ.
ರಾವೂರಿನ ನೆಲದಲ್ಲಿ ಗೋಚರಿಸುವ ದೇವಾಲಯಗಳು ಯಾವ ಕಾಲದ್ದು, ಇದರ ಚರಿತ್ರೆ ಏನು? ರಾಜರ ಕಾಲದಲ್ಲಿ ಈ ರಾವೂರ ಏನಾಗಿತ್ತು ಎಂಬುದನ್ನು ತಿಳಿದುಕೊಳ್ಳುವ ಕುತೂಹಲ ಅನೇಕರಿಗಿದ್ದು, ಸಂಶೋಧನೆ ಮಾಡಿ ಸತ್ಯ ಹೊರಹಾಕಬೇಕಾದ ಪುರಾತತ್ವ ಇಲಾಖೆ ಜಾಣ ಅಂಧತ್ವ ಪ್ರದರ್ಶಿಸಿದೆ. ಸದ್ಯ ಪತ್ತೆಯಾಗಿರುವ ದೇಗುಲದಲ್ಲಿ ಹಲವು ಕಂಬಗಳಿವೆ. ಇನ್ನೂ ಆಳಕ್ಕೆ ಉತನನ ನಡೆದರೆ ಇನ್ನಷ್ಟು ಕುರುಹುಗಳು ಪತ್ತೆಯಾಗಲಿವೆ ಎಂದು ಕನಕ ನಗರದ ಯುವ ಮುಖಂಡ ಜಗದೀಶ ಪೂಜಾರಿ ತಿಳಿಸಿದ್ದಾರೆ.