ಮಡಿಕೇರಿ: ಕುಶಾಲನಗರದ ದ್ವಿಚಕ್ರ ವಾಹನದ ಶೋರೂಂ ನಲ್ಲಿ ನಡೆದ ಕಲಹದಲ್ಲಿ ಕತ್ತರಿಯಿಂದ ಇರಿತಕ್ಕೊಳಗಾದ ಯುವಕನೊಬ್ಬ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿ ಕೊಡಗು ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ.
ಮಡಿಕೇರಿ ನಗರದ ಗಣಪತಿ ಬೀದಿ ನಿವಾಸಿ ಸಾಜಿದ್ (22) ಮೃತಪಟ್ಟ ಯುವಕ. ಕತ್ತರಿಯಿಂದ ಹಲ್ಲೆ ನಡೆಸಿದ ಆರೋಪದಡಿ ಶೋರೂಂ ಮಾಲಕ ಶ್ರೀನಿಧಿ ಹಾಗೂ ಬೆಂಬಲ ನೀಡಿದ ಆರೋಪದಡಿ ಆತನ ಸ್ನೇಹಿತ ಅಲೀಂನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ದ್ವಿಚಕ್ರ ವಾಹನದ ಸರ್ವಿಸ್‌ಗೆಂದು ಫೆ. 5ರಂದು ತನ್ನ ಇಬ್ಬರು ಸ್ನೇಹಿತರೊಂದಿಗೆ ಸಾಜಿದ್ ಶೋರೂಂಗೆ ತೆರಳಿದ್ದಾಗ ಘಟನೆ ನಡೆದಿದೆ. ಶೋರೂಂ ಮಾಲಕ ಶ್ರೀನಿಧಿಯ ಕುರ್ಚಿಯಲ್ಲಿ ಸಾಜಿದ್ ಕುಳಿತ್ತಿದ್ದ ಎನ್ನುವ ಕಾರಣಕ್ಕೆ ಏರ್ಪಟ್ಟ ಕಲಹ ತಾರಕಕ್ಕೇರಿದೆ. ಈ ಸಂದರ್ಭ ಶ್ರೀನಿಧಿ ಕತ್ತರಿಯಿಂದ ಸಾಜಿದ್‌ಗೆ ಇರಿದಿದ್ದಾನೆ ಎಂದು ಆರೋಪಿಸಲಾಗಿದೆ. ಗಾಯಗೊಂಡ ಸಾಜಿದ್‌ನನ್ನು ಕುಶಾಲನಗರ ಆಸ್ಪತ್ರೆಯಿಂದ ಮೈಸೂರು ಆಸ್ಪತ್ರೆಗೆ ಕರೆದೊಯ್ಯಲಾಯಿತ್ತಾದರು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ.
ತತ್‌ಕ್ಷಣ ಕಾರ್ಯಪ್ರವೃತ್ತರಾದ ಕುಶಾಲನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಶ್ರೀನಿಧಿ ಹಾಗೂ ಜತೆಯಲ್ಲಿದ್ದ ಆತನ ಸ್ನೇಹಿತ ಅಲೀಂ ನನ್ನು ವಶಕ್ಕೆ ಪಡೆದು ಕಾನೂನು ಕ್ರಮ ಕೈಗೊಂಡಿದ್ದಾರೆ.
ಐಜಿ ಭೇಟಿ
ದಕ್ಷಿಣ ವಲಯದ ಪೊಲೀಸ್ ಉಪ ಮಹಾನಿರೀಕ್ಷಕ ಅಮಿತ್ ಸಿಂಗ್ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಅವರು ಘಟನೆ ನಡೆದ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಪಡೆದು ತನಿಖಾಧಿಕಾರಿಗಳಿಗೆ ಸೂಕ್ತ ಸಲಹೆ ಸೂಚನೆಗಳನ್ನು ನೀಡಿದರು.