Advertisement

ರಾಣಿಬೆನ್ನೂರಲ್ಲಿ ಯುವ ಚೈತನ್ಯ ಶಿಬಿರ: ಹಿರೇಮಠ

03:09 PM Jun 20, 2017 | |

ಹುಬ್ಬಳ್ಳಿ: ರಾಜಕೀಯ ಪಕ್ಷಗಳ ಜನ ವಿರೋಧಿ ನೀತಿ ಹಾಗೂ ರಾಜ್ಯದ ಕಾಂಗ್ರೆಸ್‌ ಸರಕಾರ ಅಕ್ರಮ ಗಣಿಗಾರಿಕೆ ವಿಚಾರದಲ್ಲಿ ಮಹಾ ವಿಶ್ವಾಸಘಾತ ಕುರಿತಾಗಿ ಜೂ.24- 25ರಂದು ಹಾವೇರಿ ಜಿಲ್ಲೆ ರಾಣಿಬೆನ್ನೂರಿನಲ್ಲಿ ಯುವ ಚೈತನ್ಯ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ಸಮಾಜ ಪರಿವರ್ತನೆ ಸಮುದಾಯ ಸಂಸ್ಥೆಯ ಎಸ್‌.ಆರ್‌.ಹಿರೇಮಠ ತಿಳಿಸಿದರು. 

Advertisement

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಾಜ ಪರಿವರ್ತನೆ ಸಮುದಾಯ ಸಂಸ್ಥೆ ಹಾಗೂ ಜನ ಸಂಗ್ರಾಮ ಪರಿಷತ್‌ನಿಂದ ನಡೆಯುವ ತರಬೇತಿಯಲ್ಲಿ ಯುವಕರು ಹಾಗೂ ಮಹಿಳೆಯರು ಪಾಲ್ಗೊಳ್ಳಲಿದ್ದಾರೆ ಎಂದರು. ಅಕ್ರಮ ಗಣಿಗಾರಿಕೆ ಕುರಿತಾಗಿ ಅಧಿಕಾರಕ್ಕೆ ಬಂದ ಹೊಸತಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಹುದೊಡ್ಡ ನಿರೀಕ್ಷೆ ಮೂಡಿಸಿದ್ದರು.

ಅಕ್ರಮ ಗಣಿಗಾರಿಕೆ ವಿರುದ್ಧ ಕ್ರಮ ಹಾಗೂ ತಪ್ಪಿಸ್ಥರ ವಿರುದ್ಧ ಕಠಿಣ ಕ್ರಮದ ಜತೆಗೆ ಗಣಿ ಬಾಧಿತ ಪ್ರದೇಶಗಳ ಪುನರುಜ್ಜೀವನಕ್ಕೆ ಅಗತ್ಯ ಕ್ರಮದ ಭರವಸೆ ಮೂಡಿಸಿದ್ದರು. ಆದರೆ, ಕಳೆದ ನಾಲ್ಕು ವರ್ಷಗಳಲ್ಲಿ ಈ ಎಲ್ಲ ಕ್ರಮದ ಸೂಚನೆಗಳು ಕೇವಲ ಕಾಗದಗಳಿಗೆ ಮಾತ್ರ ಸೀಮಿತವಾಗಿವೆ ಎಂದು ಆರೋಪಿಸಿದರು.

ವಿಶೇಷವಾಗಿ “ಸಿ’ ಕೆಟಗರಿ ಗಣಿಗಳಿಂದ ಆಗಿರುವ ಪರಿಸರ, ಜನ-ಜಾನುವಾರು, ಕೃಷಿ, ತೋಟಗಾರಿಕೆ, ಜಲಮೂಲಗಳಿಗೆ ಆಗಿರುವ ದುಷ್ಪರಿಣಾಮ ಹಾಗೂ ಹಾನಿಯನ್ನು ಸರಿಪಡಿಸುವ ಕಾರ್ಯ ಆಗಿಲ್ಲ. ಗಣಿ ಬಾಧಿತ ಪ್ರದೇಶಗಳಲ್ಲಿ ಸುಧಾರಣೆ ಮತ್ತು ಪುನರ್ವಸತಿ ಕುರಿತಾಗಿ ವಿಶೇಷ ಉದ್ದೇಶದ ವಾಹನ(ಎಸ್‌ಪಿವಿ) ಸ್ಥಾಪನೆಯೂ ಯಾವುದೇ ರೀತಿಯಲ್ಲಿ  ಕಾರ್ಯಗತಗೊಂಡಿಲ್ಲ.

ಅಕ್ರಮಗಣಿಗಾರಿಕೆಯಿಂದಾಗಿ ಕೃಷಿ ಭೂಮಿ ಹಾಗೂ ರಸ್ತೆಗಳು ಹಾಳಾಗಿವೆ ಎಂದರು. ಸಚಿವ ಸಂತೋಷ ಲಾಡ್‌ ಒಡೆತನದ ಗಣಿ ಕಂಪೆನಿ ಸಾಕಷ್ಟು ಹಾನಿಗೀಡು ಮಾಡಿದ್ದು, ಸಮರ್ಪಕ ಸುಧಾರಣೆ ಹಾಗೂ ಪುನರ್ವಸತಿ ಕ್ರಮಗಳನ್ನು ಕೈಗೊಂಡಿಲ್ಲ. ಅದೇ ರೀತಿ ಅಕ್ರಮ ಗಣಿಗಾರಿಕೆಯಲ್ಲಿ ಅವರ ಹೆಸರಿದ್ದರೂ ಅವರನ್ನು ಮತ್ತೆ ಸಂಪುಟಕ್ಕೆ ಸೇರಿಸಿಕೊಳ್ಳಲಾಗಿದೆ.

Advertisement

ಇದೆಲ್ಲವನ್ನು ನೋಡಿದರೆ ಅಕ್ರಮ ಗಣಿಗಾರಿಕೆ ವಿರುದ್ಧ ಪಾದಯಾತ್ರೆ ನಡೆಸಿದ್ದು, ಅಧಿಕಾರಕ್ಕೆ ಬಂದರೆ ಅಕ್ರಮ ಗಣಿಗಾರಿಕೆ ವಿರುದ್ಧ ಕಠಿಣ ಕ್ರಮವೆಂದು ಸಾರಿದ್ದ, ಸರಕಾರದ ಆರಂಭದಲ್ಲಿ ವಿವಿಧ ಆದೇಶಗಳೊಂದಿಗೆ ಭರವಸೆ ಮೂಡಿಸಿದ್ದ ಆ ಸಿದ್ದರಾಮಯ್ಯ ಇದೀಗ ಎಲ್ಲಿ ಕಳೆದು ಹೋಗಿದ್ದಾರೆ ಎಂಬ ಭಾವನೆ ವ್ಯಕ್ತವಾಗುತ್ತಿದೆ ಎಂದರು. ಅಕ್ರಮ ಗಣಿಗಾರಿಕೆ ವಿಚಾರಕ್ಕೆ ಬಂದರೆ ಬಿಜೆಪಿ, ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಎಲ್ಲವೂ ಸಮಾನ ಮನಸ್ಕರು ಎಂಬಂತಿದ್ದಾರೆ.

ಮಾಜಿ ಸಚಿವ ಜನಾರ್ಧನ ರೆಡ್ಡಿ ನೂರಾರು ಕೋಟಿ ರೂ. ವೆಚ್ಚ ಮಾಡಿ ಮಗಳ ಮದುವೆ ಮಾಡಿ ಸುಳ್ಳು ಲೆಕ್ಕ ನೀಡಿದ್ದರೂ ಅದನ್ನು ಕೇಳುವವರು ಇಲ್ಲವಾಗಿದ್ದಾರೆ. ಪ್ರಧಾನಿ ನರೇಂದ್ರ  ಮೋದಿಯವರು ಕಪ್ಪು ಹಣದ ಬಗ್ಗೆ ದೊಡ್ಡ ಭಾಷಣ ಮಾಡುತ್ತಾರೆ. ಅವರದ್ದೇ ಪಕ್ಷದ ಮಾಜಿ ಸಚಿವರೊಬ್ಬರು ಮದುವೆಗೆ ನೂರಾರು ಕೋಟಿ ವೆಚ್ಚ ಕಪ್ಪು ಹಣ ಅಲ್ಲದೆ ಯಾವ ಬಣ್ಣದ್ದು ಎಂಬುದನ್ನು ಸ್ಪಷ್ಟಪಡಿಸಬೇಕು ಎಂದರು. 

Advertisement

Udayavani is now on Telegram. Click here to join our channel and stay updated with the latest news.

Next