Advertisement

ಮೌಲ್ಯಗಳ ಸಂರಕ್ಷಣೆಯಲ್ಲಿ ಯುವಶಕ್ತಿ ಜಾಗೃತಗೊಳ್ಳಲಿ

07:42 PM Feb 28, 2018 | |

ಬಾಳೆಹೊನ್ನೂರು: ಯುವ ಜನಾಂಗ ಈ ದೇಶದ ಅಮೂಲ್ಯ ಸಂಪತ್ತು. ಯುವ ಜನಾಂಗದಲ್ಲಿ ಧರ್ಮ ಪ್ರಜ್ಞೆ ಮತ್ತು ರಾಷ್ಟ್ರ
ಪ್ರಜ್ಞೆ ಬೆಳೆದು ಬರುವ ಅಗತ್ಯವಿದೆ. ಮೌಲ್ಯಗಳ ಸಂರಕ್ಷಣೆಯಲ್ಲಿ ಯುವಶಕ್ತಿ ಜಾಗೃತಗೊಂಡರೆ ಸಾಧನೆ ಮಾಡಲು ಸಾಧ್ಯ ಎಂದು ಶ್ರೀ
ರಂಭಾಪುರಿ ಜಗದ್ಗುರು ಪ್ರಸನ್ನ ರೇಣುಕ ಡಾ|ವೀರಸೋಮೇಶ್ವರ ಶಿವಾಚಾರ್ಯ ಭಗವತ್ಪಾದರು ಅಭಿಪ್ರಾಯಪಟ್ಟರು.

Advertisement

ಅವರು ಶ್ರೀ ರಂಭಾಪುರಿ ಪೀಠದಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ ಹಾಗೂ ಕ್ಷೇತ್ರನಾಥ ಶ್ರೀ ವೀರಭದ್ರಸ್ವಾಮಿ ಮಹಾರಥೋತ್ಸವದ ಅಂಗವಾಗಿ ನಡೆದ “ರಾಷ್ಟ್ರದ ಸಂಪತ್ತು ಯುವ ಜನಾಂಗ’ ವಿಚಾರ ವೇದಿಕೆಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ದೇಶ ನಮಗೇನು ಕೊಟ್ಟಿದೆ ಎನ್ನುವುದಕ್ಕಿಂತ ನಾವು ದೇಶಕ್ಕಾಗಿ ಏನು ಕೊಟ್ಟಿದ್ದೇವೆ
ಎನ್ನುವುದನ್ನು ಆಲೋಚಿಸಬೇಕು. ನಾಡು ನುಡಿಗಳ ಬಗೆಗೆ ದೇಶದ ಬಗೆಗೆ ಪ್ರತಿಯೊಬ್ಬರೂ ಸ್ವಾಭಿಮಾನ ಭಕ್ತಿ ಶ್ರದ್ಧೆಗಳನ್ನು
ಹೊಂದಬೇಕು. ಯುವ ಜನಾಂಗಕ್ಕೆ ಮೌಲ್ಯಗಳನ್ನು ಬೋಧಿಸಿ ಅವರನ್ನು ಸನ್ಮಾರ್ಗಕ್ಕೆ ಕರೆರೆತಂದಲ್ಲಿ ಎಲ್ಲ ರಂಗಗಳಲ್ಲಿ ಸಾಧನೆ
ಮಾಡಲು ಸಾಧ್ಯ ಎಂದು ತಿಳಿಸಿದರು.

ಸಮಾರಂಭ ಉದ್ಘಾಟಿಸಿದ ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಬಡತನದ ಬಾಳುವೆಗೆ ಸೌಕರ್ಯ ಕಲ್ಪಿಸುವುದೇ ನಿಜವಾದ ನಾಗರೀಕತೆಯ ಲಕ್ಷಣ. ಯುವ ಜನಾಂಗದಲ್ಲಿ ಒಂದು ಗುರಿ ಇರಲಿ. ಆ ಗುರಿ ಸಾಧನೆಗೆ ಗುರು ಒಬ್ಬನಿರಬೇಕಾಗುತ್ತದೆ. ದುಷ್ಟ ಚಟಗಳ ದಾಸರಾಗದೇ ಆಚಾರ ವಿಚಾರ ಸಂಪನ್ನರಾಗಲು ಮುಂದಾಗಬೇಕಾಗಿದೆ ಎಂದರು. 
ಬಂಕಾಪುರದ ವಿನಯ ಕುಮಾರ್‌ ಆರ್‌. ಅರಳೆಲೆಮಠ ಉಪನ್ಯಾಸ ನೀಡಿದರು. 

ಬೆಂಗಳೂರಿನ ವಿಭೂತಿಪುರ ಮಠದ ಡಾ| ಮಹಂತಲಿಂಗ ಶಿವಾಚಾರ್ಯರು, ಮಾನಿಹಳ್ಳಿ ಪುರವರ್ಗ ಮಠದ ಮಳೆಯೋಗೀಶ್ವರ
ಶಿವಾಚಾರ್ಯರು, ಮೈಸೂರು ಜಪದಕಟ್ಟೆ ಮಠದ ಡಾ| ಮುಮ್ಮಡಿ ಚಂದ್ರಶೇಖರ ಶಿವಾಚಾರ್ಯರು ಮಾತನಾಡಿ, ಯುವ
ಜನಾಂಗದಲ್ಲಿ ಸಂಸ್ಕಾರ ಸದ್ವಿಚಾರ ಬೆಳೆಸುವ ಅಗತ್ಯ ಇದೆ ಎಂಬುದರ ಬಗೆಗೆ ತಮ್ಮ ನುಡಿ ಸೇವೆ ಸಲ್ಲಿಸಿದರು.

ಕೊಟ್ಟೂರು ಚಾನುಕೋಟಿಮಠದ ಡಾ| ಸಿದ್ಧಲಿಂಗ ಶಿವಾಚಾರ್ಯರು, ಶಕಾಪುರದ ಸಿದ್ಧರಾಮ ಶಿವಾಚಾರ್ಯರು, ಧಾರವಾಡದ
ಆರ್‌.ಜಿ. ಬೇಲೂರಮಠ, ಬೆಳಗಾವಿ ಡಾ| ಪಿ. ಶಿವರಾಮ ಅವರಿಗೆ ಗೌರವ ಗುರುರಕ್ಷೆ ನೀಡಿ ಸತ್ಕರಿಸಿದರು. ಬಂಕಾಪುರದ ರೇವಣಸಿದ್ಧ
ಶಿವಾಚಾರ್ಯರು, ಸುಳ್ಳದ ಶಿವಸಿದ್ಧರಾಮೇಶ್ವರ ಶಿವಾಚಾರ್ಯರು, ಬಿಳಿಕಿ ರಾಚೋಟೇಶ್ವರ ಶಿವಾಚಾರ್ಯರು, ಹರಪನಹಳ್ಳಿ
ವರಸದ್ಯೋಜಾತ ಶಿವಾಚಾರ್ಯರು ಭಾಗವಹಿಸಿದ್ದರು.

Advertisement

ಎಡೆಯೂರು ಕ್ಷೇತ್ರದ ರೇಣುಕ ಶಿವಾಚಾರ್ಯರು ನೇತೃತ್ವ ವಹಿಸಿದ್ದರು. ಶಿವಮೊಗ್ಗದ ಜಿ.ಜಿ. ರಕ್ಷಿತಾ ಅವರಿಂದ ಭರತ ನಾಟ್ಯ ಪ್ರದರ್ಶನ ನಡೆಯಿತು. ಶಿವಮೊಗ್ಗದ ನಾಗರತ್ನ ಚಂದ್ರಶೇಖರಯ್ಯ ಅವರಿಂದ ಸಂಗೀತ ಸೌರಭ ಜರುಗಿತು. ಸಮಾರಂಭದ ನಂತರ ಕ್ಷೇತ್ರನಾಥ ಶ್ರೀ ವೀರಭದ್ರಸ್ವಾಮಿ ಚಿಕ್ಕ ರಥೋತ್ಸವ ನಡೆಯಿತು. ಬೆಳಿಗ್ಗೆ ಶ್ರೀ ವೀರಭದ್ರಸ್ವಾಮಿಗೆ ಗುಗ್ಗುಳ ಸೇವೆ ಜರುಗಿತು. ಶ್ರೀ ಜಗದ್ಗುರು ರೇಣುಕಾಚಾರ್ಯರಿಗೆ, ಶ್ರೀ ಸೋಮೇಶ್ವರ ಲಿಂಗಕ್ಕೆ ಹಾಗೂ ಕ್ಷೇತ್ರದ ಎಲ್ಲ ದೈವಗಳಿಗೆ ರುದ್ರಭಿಷೇಕ ಬಿಲ್ವಾರ್ಚನೆ ಅಷ್ಟೋತ್ತರ ಮಹಾ ಪೂಜೆ ಸಂಭ್ರಮದಿಂದ ಜರುಗಿತು. 

Advertisement

Udayavani is now on Telegram. Click here to join our channel and stay updated with the latest news.

Next