Advertisement

ಸಮರ್ಥ ನಾಯಕತ್ವ ಕೊರತೆಯಿಂದ ಯುವ ಸಮೂಹ ಹತಾಶೆ: ಸ್ವಾಮೀಜಿ

11:25 AM Aug 07, 2017 | Team Udayavani |

ಹುಬ್ಬಳ್ಳಿ: ಸ್ವಾತಂತ್ರ್ಯ ನಂತರದಲ್ಲಿ ಸಮರ್ಥ ನಾಯಕತ್ವದ ಕೊರತೆಯಿಂದಾಗಿ ಯುವ ಸಮೂಹ ಹತಾಶೆ, ನಿರಾಸೆಗೊಳಗಾಗುವಂತಾಗಿದೆ. ಮಕ್ಕಳಿಗೆ ಸರಿಯಾದ ಮಾರ್ಗದರ್ಶನ ಹಾಗೂ ನಾಯಕತ್ವದ ಪರಿಕಲ್ಪನೆ ಮೂಡಿಸಬೇಕಾಗಿದೆ ಎಂದು ಗದುಗಿನ ತೋಂಟದಾರ್ಯ ಮಠದ ಡಾ| ಸಿದ್ದಲಿಂಗ ಸ್ವಾಮೀಜಿ ಅಭಿಪ್ರಾಯಪಟ್ಟರು. 

Advertisement

ಇಲ್ಲಿನ ರೋಟರಿ ಕ್ಲಬ್‌-ಪೂರ್ವ ಘಟಕ ಆಯೋಜಿಸಿದ್ದ ಕರ್ನಾಟಕ, ಮಹಾರಾಷ್ಟ್ರ ಹಾಗೂ ಗೋವಾ ರಾಜ್ಯಗಳ ವಿದ್ಯಾರ್ಥಿಗಳ ಸಂವಾದ ನಾಯಕತ್ವ ವೇದಿಕೆ 2017-18ರ ಉದ್ಘಾಟನೆ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. ಸ್ವಾತಂತ್ರ್ಯ ಹೋರಾಟದಲ್ಲಿ ಅನೇಕ ಮಹನೀಯರು ಸಮರ್ಥ ಹಾಗೂ ಅರ್ಥಪೂರ್ಣ ನಾಯಕತ್ವದೊಂದಿಗೆ ಹೋರಾಡಿ ಸ್ವಾತಂತ್ರ್ಯ ತಂದು ಕೊಟ್ಟರು.

ಅನಂತರದಲ್ಲಿ ದೇಶಕ್ಕೆ ಸಮರ್ಥ ನಾಯಕತ್ವದ ಕೊರತೆ ಕಂಡಿದ್ದರಿಂದ ಯುವಕರು ಹತಾಶೆಗೊಳ್ಳುವಂತಾಗಿದೆ ಎಂದರು. ಭಾರತ ಬಹು ಜಾತಿ, ಸಂಸ್ಕೃತಿ, ಧರ್ಮಗಳನ್ನೊಳಗೊಂಡ ಹಾಗೂ ಭೌಗೋಳಿಕವಾಗಿಯೂ ವ್ಯತ್ಯಾಸ ಹೊಂದಿದ್ದರೂ ಏಕತೆಯನ್ನು ಸಾಧಿಸಿಕೊಂಡು ನಡೆದಿದೆ.

ವಿದ್ಯಾರ್ಥಿಗಳಿಗೆ ಮಾನವೀಯತೆ, ಸಾಮಾಜಿಕ ಚಿಂತನೆ ಹಾಗೂ ಸೇವೆಯಂತಹ ಗುಣಗಳನ್ನು ಕಲಿಸಿಕೊಡಬೇಕಾಗಿದ್ದು, ಆ ನಿಟ್ಟಿನಲ್ಲಿ ರೋಟರಿ ಕ್ಲಬ್‌ ಅಂತಹ ಕಾರ್ಯಕ್ಕೆ ಮುಂದಾಗಿರುವುದು ಶ್ಲಾಘನೀಯ ಎಂದರು. ರೋಟರಿ ಕ್ಲಬ್‌ ವಿಶ್ವವನ್ನೇ ಪೋಲಿಯೋ ಮುಕ್ತವಾಗಿಸುವ ನಿಟ್ಟಿನಲ್ಲಿ ಮಹತ್ವದ ಕಾರ್ಯ ಮಾಡಿದೆ.

ಸುಮಾರು 60 ಸಾವಿರ ಕೋಟಿ ರೂ. ವೆಚ್ಚದಲ್ಲಿ ಪೋಲಿಯೋ ವಿರುದ್ಧ ಸಮರ ಸಾರಿದ್ದು, ಪಾಕಿಸ್ತಾನ, ಅಪಘಾನಿಸ್ತಾನದಲ್ಲಿ ಕೆಲವೇ ಕೆಲವು ಪೋಲಿಯೋ ಪ್ರಕರಣ ಬಿಟ್ಟರೆ ವಿಶ್ವದ ಯಾವುದೇ ದೇಶದಲ್ಲಿ ಪೋಲಿಯೋ ಪ್ರಕರಣ ಕಂಡು ಬಂದಿಲ್ಲ ಎಂದರು. 

Advertisement

ರೋಟರಿ ಜಿಲ್ಲ ಗರ್ವನರ್‌ ಆನಂದ ಕುಲಕರ್ಣಿ ಮಾತನಾಡಿ, ವ್ಯಕ್ತಿತ್ವ ವಿಕಸನ, ವಿಜ್ಞಾನ, ತಂತ್ರಜ್ಞಾನ ನಿಟ್ಟಿನಲ್ಲಿ ಅನೇಕರು ಬಹುದೊಡ್ಡ ಕೊಡುಗೆಗಳನ್ನು ನೀಡಿದ್ದಾರೆ. ಅದೇ ರೀತಿ ರೋಟರಿ ಕ್ಲಬ್‌ ಸಂವಾದ  ನಾಯಕತ್ವದ ವೇದಿಕೆಯನ್ನು ವಿದ್ಯಾರ್ಥಿಗಳಿಗೆ ಕೊಡುಗೆಯಾಗಿ ನೀಡಿದೆ ಎಂದರು. ವೇದಿಕೆ ನಿರ್ಗಮಿತ ಮುಖ್ಯಸ್ಥ ಶಶಾಂಕ ಮಾತನಾಡಿದರು.

ನೂತನ ಮುಖ್ಯಸ್ಥೆಯಾಗಿ ಅಧಿಕಾರ ವಹಿಸಿಕೊಂಡ ಬೆಳಗಾವಿ ಜಿಲ್ಲೆಯ ದೇವಿಯಾನಿ ಧರ್ಮಾಧಿಕಾರಿ ವೇದಿಕೆ ಮುಂದಿನ ಕಾರ್ಯಕ್ರಮ ಕುರಿತು ವಿವರಿಸಿದರು. ಇದೇ ಸಂದರ್ಭದಲ್ಲಿ ರಾಷ್ಟ್ರೀಯ ಶೌರ್ಯ ಪ್ರಶಸ್ತಿ ಪಡೆದ ಸಿಯಾ ಖೋಡೆ ಅವರನ್ನು ಸನ್ಮಾನಿಸಲಾಯಿತು. ರೋಟರಿ ಕ್ಲಬ್‌ನ ಪ್ರಕಾಶ ಚಂದ್ರ, ಶಿವಪ್ರಸಾದ, ಶಿವಾನಂದ, ಮಹೇಶ ಇನ್ನಿತರರು ಇದ್ದರು.  

Advertisement

Udayavani is now on Telegram. Click here to join our channel and stay updated with the latest news.

Next