ಶಿವಮೊಗ್ಗ: ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ವಿಚಾರ ಸಂಬಂಧಿಸಿದಂತೆ ಸಚಿವ ಕೆ.ಎಸ್.ಈಶ್ವರಪ್ಪ ಕೂಡಲೇ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ಯುವ ಕಾಂಗ್ರೆಸ್ ಪ್ರತಿಭಟನೆ ನಡೆಸುತ್ತಿದೆ. ಶಿವಮೊಗ್ಗದ ಮಲ್ಲೇಶ್ವರ ನಗರದಲ್ಲಿರುವ ಸಚಿವ ಕೆ.ಎಸ್.ಈಶ್ವರಪ್ಪ ಮನೆಗೆ ಯುವ ಕಾಂಗ್ರೆಸ್ ಕಾರ್ಯಕರ್ತರ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಸಚಿವ ಕೆ.ಎಸ್.ಈಶ್ವರಪ್ಪ ವಿರುದ್ಧ ಕಮಿಷನ್ ಆರೋಪ ಮಾಡಿದ್ದ ಬೆಳಗಾವಿಯ ಗುತ್ತಿಗೆದಾರ ಸಂತೋಷ್ ಪಾಟೀಲ್ ಇಂದು ಉಡುಪಿಯ ಖಾಸಗಿ ಲಾಡ್ಜೊಂದರಲ್ಲಿ ಆತ್ಮಹತ್ಯೆಗೆ ಶರಣಾಗಿದ್ದರು. ಸಾವಿಗೆ ಸಚಿವ ಈಶ್ವರಪ್ಪನವರೇ ಕಾರಣ ಎಂದು ಸಂತೋಷ್ ಪಾಟೀಲ್ ಡೆತ್ ನೋಟ್ ನಲ್ಲಿ ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ:ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ: ಸಿಎಂ ಬೊಮ್ಮಾಯಿ ಈಶ್ವರಪ್ಪ ಕುರಿತು ಹೇಳಿದ್ದೇನು ?
ಗುತ್ತಿಗೆದಾರನ ಆತ್ಮಹತ್ಯೆಗೆ ಕಾರಣವಾಗಿರುವ ಈಶ್ವರಪ್ಪ ಅವರು ಕೂಡಲೇ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಅವರನ್ನು ಬಂಧಿಸಬೇಕು ಎಂದು ಆಗ್ರಹಿಸಿ ನೂರಕ್ಕೂ ಹೆಚ್ಚು ಯುವ ಕಾಂಗ್ರೆಸ್ ಕಾರ್ಯಕರ್ತರು ಈಶ್ವರಪ್ಪ ಮನೆಗೆ ಮುತ್ತಿಗೆ ಹಾಕಿದರು.
ಈಶ್ವರಪ್ಪ ಅವರ ಮನೆಗೆ ನುಗ್ಗಲು ಯತ್ನಿಸಿದ ಯುವ ಕಾಂಗ್ರೆಸ್ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸಚಿವ ಈಶ್ವರಪ್ಪ ಮನೆಗೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.