Advertisement

ಸಹಕಾರಿ ಕ್ಷೇತ್ರದತ್ತ ಬರಲಿ ಯುವ ಸಮುದಾಯ

06:00 AM Jun 24, 2018 | |

ಸಹಕಾರ ಸಂಘಗಳು ಕೇವಲ ಸಾಲ ನೀಡುವ, ಹಾಲು ಸಂಗ್ರಹಣೆ ಮಾಡುವ, ಮನೆಕಟ್ಟಿ ಕೊಡುವ ಸಂಸ್ಥೆಗಳಲ್ಲ. ಅವು ದೇಶ ಕಟ್ಟುವ ಸತ್ಕಾರ್ಯದಲ್ಲಿ ತೊಡಗಿವೆ ಎಂಬುದನ್ನು ಮೊದಲು ಅರ್ಥ ಮಾಡಿಕೊಳ್ಳಬೇಕು. ಶಿಕ್ಷಣ ಕ್ಷೇತ್ರವನ್ನು ಹೊರತುಪಡಿಸಿದರೆ ಇಡೀ ದೇಶದ ಗ್ರಾಮಗ್ರಾಮಗಳಲ್ಲೂ ತನ್ನ ಕಾರ್ಯವ್ಯಾಪ್ತಿಯನ್ನು ವಿಸ್ತರಿಸಿಕೊಂಡಿರುವ ಬಹುದೊಡ್ಡ ಕ್ಷೇತ್ರವೆಂದರೆ ಸಹಕಾರ ಕ್ಷೇತ್ರ.

Advertisement

21ನೇ ಶತಮಾನ ಯುವಕರ ಯುಗ. ಯುನೈಟೆಡ್‌ ನೇಷನ್ಸ್‌ ಪಾಪುಲೇಶನ್‌ ಫ‌ಂಡ್ಸ್‌ನ ಅಂಕಿ ಅಂಶಗಳ ಪ್ರಕಾರ ನಮ್ಮ ದೇಶದಲ್ಲಿ 35 ಕೋಟಿಗೂ ಹೆಚ್ಚು ಯುವಜನರಿದ್ದಾರೆ. ಬೇರೆ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಯುವಶಕ್ತಿ ಜಾಸ್ತಿ. ಮುಂದಿನ 4 ಸ್ಥಾನಗಳಲ್ಲಿ ಚೀನಾ, ಇಂಡೋನೇಷಿಯಾ, ಅಮೆರಿಕ ಹಾಗೂ ಪಾಕಿಸ್ತಾನಗಳಿವೆ. ಭಾರತದ ಯುವಜನತೆ ಯಲ್ಲಿ ಸುಮಾರು 18 ಕೋಟಿ ಯುವಜನರು ಮತದಾರ ರಾಗಿದ್ದಾರೆ. ಮುಂದಿನ ದಿನಗಳಲ್ಲಿ ಮತದಾನದ ಅರ್ಹತೆ ಪಡೆಯುವ ಯುವಜನರ ಸಂಖ್ಯೆ ಬೆಳೆಯುತ್ತಲೇ ಹೋಗು ತ್ತದೆ. ಹಿಂದೆಂದಿಗಿಂತಲೂ ಈಗ ಯುವಕರು ಸಾಮಾಜಿಕ ಆಗುಹೋಗುಗಳಲ್ಲಿ ಭಾಗವಹಿಸುತ್ತಿದ್ದಾರೆ. ಇತ್ತೀಚಿನವರೆಗೂ ಯುವಕರು ಹೆಚ್ಚಾಗಿ ಹಿರಿಯರ ಅಧೀನಕ್ಕೆ ಒಳಪಡುತ್ತಿದ್ದರು. ಸಮಾಜವನ್ನು ರೂಪಿಸುವಲ್ಲಿ ಅವರ ಪಾತ್ರ ಕಿರಿದಾಗಿಯೇ ಇರುತ್ತಿತ್ತು. ಆದರೆ ಈಗ ಯುವಶಕ್ತಿ ಎಲ್ಲೆಲ್ಲಿಯೂ ಜಾಗೃತವಾಗುತ್ತಿದ್ದು, ದೇಶದ ಪ್ರಗತಿಯಲ್ಲಿ ಯುವಕರು ವಿಶೇಷ ಪಾತ್ರವನ್ನು ವಹಿಸುತ್ತಿರುವುದು ಕಂಡುಬರುತ್ತಿದೆ.

ಯಾವುದೇ ಕ್ಷೇತ್ರದಲ್ಲಿ ಬದಲಾವಣೆ ಯುವಕರಿಂದಲೇ ಪ್ರಾರಂಭವಾಗುವುದು. ಅಸ್ತಿತ್ವದಲ್ಲಿರುವ ಹಳೆಯ ಪದ್ಧತಿಗಳನ್ನು ಜೀವನ ವಿಧಾನಗಳನ್ನು ವಿರೋಧಿಸಿ ಹೋರಾಡುವ, ಪ್ರಶ್ನಿಸುವ ಮನೋಭಾವ ಯುವಕರ ಪ್ರಧಾನ ಲಕ್ಷಣ. ಇಂಡಿಯಾ ಯೂಥ್‌ ಶೈನಿಂಗ್‌ ಫೋಬ್ಸ್ì ಮ್ಯಾಗಝೀನ್‌ ಪ್ರಕಟಿಸಿದ 450 ಸಾಧಕರ ಪಟ್ಟಿಯಲ್ಲಿ ಭಾರತೀಯ ಮೂಲದ 23 ಯುವಕ ಯುವತಿಯರು 
ಸ್ಥಾನ ಪಡೆದಿದ್ದರು. ಪೆಪ್ಸಿಕೋ, ಮೈಕ್ರೋಸಾಫ್ಟ್ನಂತಹ ಪ್ರಭಾವಿ ಬಹುರಾಷ್ಟ್ರೀಯ ಕಂಪನಿಗಳ ಮುಖ್ಯಹುದ್ದೆಗಳು ಭಾರತೀಯರ ಪಾಲಾಗಿವೆ. ನಾಸಾ ಸೇರಿದಂತೆ ಜಗತ್ತಿನ ಹಲವು ಬಾಹ್ಯಾಕಾಶ ಸಂಶೋಧನಾ ಸಂಸ್ಥೆಗಳು ಭಾರತೀಯ ಪ್ರತಿಭೆಗಳಿಗೆ ಮಣೆ ಹಾಕುತ್ತಿವೆ. ವೈದ್ಯಕೀಯ ಮತ್ತು ವಿಜ್ಞಾನ ಕ್ಷೇತ್ರಗಳಲ್ಲಿನ ಮಹತ್ತರವಾದ ಸಂಶೋಧನೆಗಳ ಹಿಂದೆ ಭಾರತೀಯರ ಮೆದುಳಿದೆ. ಇಂದು ಜಾಗತಿಕ ಉದ್ಯೋಗ ಮಾರುಕಟ್ಟೆ ಭಾರತ ದತ್ತ ಮುಖಮಾಡಿದೆ. ಅದಕ್ಕೆ ಕಾರಣ ಭಾರತದ ಯುವಶಕ್ತಿ.

ಈ ಶತಮಾನದ ಭಾರತ ನಿಜಕ್ಕೂ ಯಂಗ್‌ ಇಂಡಿಯಾ. ಯುವಜನಾಂಗದಲ್ಲಿರುವ ಹೊಸತನದ ಬಯಕೆ, ಆಶಾವಾದ, ಸ್ವಾತಂತ್ರ್ಯ ಪ್ರವೃತ್ತಿ, ಏನನ್ನಾದರೂ ಸಾಧಿಸಬೇಕೆಂಬ ಛಲ, ಸುಲಭವಾಗಿ ಸೋಲೊಪ್ಪಿಕೊಳ್ಳದ ಮನೋಭಾವ, ನಿರಂತರ ಪ್ರಯತ್ನ, ಕ್ರಿಯಾಶೀಲತೆ ಇವೆಲ್ಲವೂ ನವ ನಿರ್ಮಾಣದ ಹೊಳಹುಗಳಾಗಿ ಕಂಡುಬರುತ್ತಿವೆ. ಈ ಅಂಶಗಳು ಸಹಕಾರ ಕ್ಷೇತ್ರಕ್ಕೂ ಅನಿವಾರ್ಯವಾಗಿವೆ. ಸಹಕಾರ ಸಂಘಗಳು ಕೇವಲ ಸಾಲ ನೀಡುವ, ಹಾಲು ಸಂಗ್ರಹಣೆ ಮಾಡುವ, ಮನೆಕಟ್ಟಿ ಕೊಡುವ ಸಂಸ್ಥೆಗಳಲ್ಲ. ಅವು ದೇಶ ಕಟ್ಟುವ ಸತ್ಕಾರ್ಯದಲ್ಲಿ ತೊಡಗಿವೆ ಎಂಬುದನ್ನು ಮೊದಲು ಅರ್ಥ ಮಾಡಿಕೊಳ್ಳಬೇಕು. ಶಿಕ್ಷಣ ಕ್ಷೇತ್ರವನ್ನು ಹೊರತುಪಡಿಸಿದರೆ ಇಡೀ ದೇಶದ ಗ್ರಾಮಗ್ರಾಮಗಳಲ್ಲೂ ತನ್ನ ಕಾರ್ಯವ್ಯಾಪ್ತಿಯನ್ನು ವಿಸ್ತರಿಸಿಕೊಂಡಿರುವ ಬಹು ದೊಡ್ಡ ಕ್ಷೇತ್ರವೆಂದರೆ ಸಹಕಾರ ಕ್ಷೇತ್ರ. 8 ಕೋಟಿಗೂ ಹೆಚ್ಚು ಮಾನವ ಸಂಪನ್ಮೂಲವನ್ನು ಒಳಗೊಂಡಿರುವ ಈ ಕ್ಷೇತ್ರವು ದೇಶದ ಹಸಿರು ಕ್ರಾಂತಿ, ಕ್ಷೀರ ಕ್ರಾಂತಿ, ನೀಲಿಕ್ರಾಂತಿ ಮುಂತಾದ ವಿಶಿಷ್ಟ ಕಾರ್ಯಕ್ರಮಗಳ ಮೂಲಕ ಬಡತನ ನಿವಾರಣೆ, ಉದ್ಯೋಗ ಸೃಷ್ಟಿ, ಆಹಾರ ಭದ್ರತೆಯಂತಹ ಅಭಿವೃದ್ಧಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿದೆ. ಈ ಕ್ಷೇತ್ರ ನಾಯಕತ್ವವನ್ನು ಬೆಳೆಸುವ ಮತ್ತು ಸಮಾಜ ಸೇವೆಗೆ ಅರ್ಪಿಸಿಕೊಳ್ಳುವ ಒಂದು ಉತ್ತಮ ಕ್ಷೇತ್ರ. ಈ ಕ್ಷೇತ್ರಕ್ಕೆ ಯುವಜನತೆಯನ್ನು ಹೆಚ್ಚಿನ ಪ್ರಮಾಣದಲ್ಲಿ ಈ ಕೆಳಕಂಡ ಕ್ರಮಗಳ ಮೂಲಕ ಬರಮಾಡಿಕೊಳ್ಳಬಹುದು.

1    ಮಾಧ್ಯಮಗಳ ನೆರವಿನೊಂದಿಗೆ ಕ್ಷೇತ್ರದ ಸಾಧನೆಗಳನ್ನು ಪ್ರಚಾರಪಡಿಸಿ ಯುವಜನತೆಗೆ ನಿರಂತರ ಮಾಹಿತಿಯನ್ನು ಒದಗಿಸುವುದು.

Advertisement

2    ಸಹಕಾರ ವ್ಯವಸ್ಥೆಯ ವಿಷಯಗಳನ್ನು ಶಾಲಾ ಕಾಲೇಜ್‌ಗಳ ಪಠ್ಯಕ್ರಮದಲ್ಲಿ ಅಳವಡಿಸುವುದು.

3    ಯುವಜನತೆ ಈ ಕ್ಷೇತ್ರದಲ್ಲಿಯೂ ಹೊಸ ಸಾಧನೆಗಳನ್ನು ಮಾಡಲು ಸಾಧ್ಯ ಎಂಬುದನ್ನು ಮನವರಿಕೆ ಮಾಡಿಕೊಡುವುದು.

4    ಸಹಕಾರ ಕ್ಷೆತ್ರದಲ್ಲಿ ಸಾಧನೆ ಸವಾಲುಗಳ ಬಗ್ಗೆ ಅಧ್ಯಯನ ನಡೆಸಿ ಹೊಸದನ್ನು ಅಳವಡಿಸಿಕೊಳ್ಳುವ ಬಗ್ಗೆ ಸಂಶೋಧನೆ ಮೌಲ್ಯಮಾಪನ ನಡೆಸಲು ವಿ.ವಿ.ಗಳ ಮೂಲಕ ಯುವಜನರನ್ನು ಪೋತ್ಸಾಹಿಸುವುದು.

5    ಸಹಕಾರ ಕ್ಷೇತ್ರದಲ್ಲಿ ಹೆಚ್ಚು ಶಿಕ್ಷಣ ಪಡೆದ ಪದವೀಧರ ಯುವಕರಿಗೆ ಸಹಕಾರ ಸಂಘ ಸಂಸ್ಥೆಗಳಲ್ಲಿ ಆಕರ್ಷಕ ಉದ್ಯೋಗವಕಾಶಗಳನ್ನು ಒದಗಿಸುವುದು.

6    ಸಹಕಾರ ಸಂಸ್ಥೆಗಳು ಗ್ರಾಮೀಣ ಜನತೆಗೆ ಹೆಚ್ಚಿನ ಸೌಲಭ್ಯಗಳನ್ನು ಸಕಾಲದಲ್ಲಿ ಒದಗಿಸುವುದು.
7    ಆದಾಯಕರ ಕಸುಬು ಮತ್ತು ಉಪಕಸುಬುಗಳನ್ನು ಹಮ್ಮಿಕೊಳ್ಳಲು ಪ್ರೋತ್ಸಾಹಿಸುವುದು.

ಈ ಮೂಲಕ ನಮ್ಮ ನಾಡಿನ ಗ್ರಾಮೀಣ ಯುವಜನತೆ ತಮ್ಮ ಹಳ್ಳಿಗಳಲ್ಲಿ ನೆಲೆಸುವಂತೆ ಮಾಡುವುದು ಗುರಿಯಾಗ ಬೇಕಾಗಿದೆ. ಪ್ರತಿಭಾನ್ವಿತರನ್ನು ಉತ್ಪಾದಕ ಕ್ಷೇತ್ರಗಳಲ್ಲಿ ಹೆಚ್ಚು ತೊಡಗಿಸಿಕೊಳ್ಳುವಂತೆ ಮಾಡಬೇಕಾಗಿದೆ. ಸಂಖ್ಯಾಪ್ರಾಬಲ್ಯ ವಿರುವ ಯುವಜನತೆಯಿಂದ ಸಹಕಾರ ಕ್ಷೇತ್ರವನ್ನು ಪ್ರಬಲ ಗೊಳಿಸಬೇಕಾಗಿದೆ. ಆದ್ದರಿಂದ ಯುವಜನತೆಗೆ ಸಹಕಾರ ಕ್ಷೇತ್ರದ ಬಗ್ಗೆ ತಿಳಿವಳಿಕೆ ನೀಡಿ ಅವರನ್ನು ಈ ಕ್ಷೇತ್ರದತ್ತ ಕರೆತರುವ ವ್ಯವಸ್ಥೆಯಾಗಬೇಕಾಗಿದೆ. ಅಳಿವಿನಂಚಿನಲ್ಲಿರುವ ಹಲವಾರು ಕಸುಬುಗಳಿಗೆ ಮರುಜೀವ ನೀಡಬೇಕಾಗಿದೆ.

ಅದರ ಜೊತೆಗೆ ಸಹಕಾರ ರಂಗದಲ್ಲಿ ವಿದ್ಯಾವಂತರು ತೊಡಗಿಕೊಳ್ಳುವಂತೆ ಮಾಡಲು ಹಲವಾರು ರೀತಿಯ ಅವಕಾಶಗಳಿವೆ. ಇತ್ತೀಚಿನ ದಿನಗಳಲ್ಲಿ ಬಹಳಷ್ಟು ಯುವಕ ಯುವತಿಯರು ಉನ್ನತ ಪದವಿ ಗಳಿಸಿದ್ದರೂ ಉದ್ಯೋಗ ಪಡೆಯುವಲ್ಲಿ ವಿಫ‌ಲರಾಗುತ್ತಿದ್ದಾರೆ. ಕೆಲವರು ಸರಕಾರಿ ಕೆಲಸವನ್ನೋ ಖಾಸಗೀ ಕೆಲಸವನ್ನೋ ನೆಚ್ಚಿಕೊಳ್ಳದೆ ಈಗಾಗಲೇ ಕೃಷಿ ಕ್ಷೇತ್ರದಲ್ಲಿ ಹೈನುಗಾರಿಕೆಯಲ್ಲಿ ತಮ್ಮ ಬದುಕನ್ನು ಕಂಡುಕೊಳ್ಳುತ್ತಿದ್ದಾರೆ. ಅಂತಹ ಮನೋಭಾವದ ಯುವ ಸಮುದಾಯಕ್ಕೆ ಸಹಕಾರಿ ರಂಗದ ವಿವಿಧ ದುಡಿಮೆಯ ಮಾರ್ಗಗಳ ಬಗ್ಗೆ ಕೌಶಲ್ಯಾಧಾರಿತ ತರಬೇತಿಗಳನ್ನು ನೀಡಿ ತಂತ್ರಜಾnನಗಳ ಮಾಹಿತಿ ಒದಗಿಸಿ ಉದ್ಯೋಗ ನೀಡುವ ಕಾರ್ಯವನ್ನು ಸಹಕಾರ ಕ್ಷೇತ್ರದಲ್ಲಿ ಮಾಡಬೇಕು. ನಂತರದ ದಿನಗಳಲ್ಲಿ ಅವರಿಗೆ ಹುದ್ದೆಯಾಧಾರಿತ ತರಬೇತಿಗಳನ್ನು ನೀಡಿ ಪರಿಣತಿ ಸಾಧಿಸಿದವರನ್ನು ಉನ್ನತ ಹುದ್ದೆಗಳಿಗೆ ನಿಯುಕ್ತಿ ಗೊಳಿಸುವ ಕೆಲಸವಾಗಬೇಕು. ಮತ್ತೆ ಖಾಲಿಯಿರುವ ಆರಂಭಿಕ ಕೆಲಸಗಳಿಗೆ ಮೊದಲ ಪ್ರಕ್ರಿಯೆಯಂತೆಯೇ ಆಯ್ಕೆ ಮಾಡುತ್ತಾ ಯುವಜನತೆಯ ಸಂಪೂರ್ಣ ಶ್ರಮವನ್ನು ಈ ಕ್ಷೇತ್ರದಲ್ಲಿ ತೊಡಗಿಸುವುದರಿಂದ ನಿರುದ್ಯೋಗ ಸಮಸ್ಯೆಯ ಪ್ರಮಾಣವೂ ಕಡಿಮೆಯಾಗುತ್ತದೆ. ಸಹಕಾರ ರಂಗವೂ ಮುನ್ನೆಲೆಗೆ ಬರುತ್ತದೆ.

ಸೋಮು ಕುದರಿಹಾಳ

Advertisement

Udayavani is now on Telegram. Click here to join our channel and stay updated with the latest news.

Next