ಗಜೇಂದ್ರಗಡ: ಪರಿಸರವನ್ನು ವಿಪತ್ತಿನಿಂದ ಕಾಪಾಡುವುದಕ್ಕಾಗಿ ಯುವ ಸಮೂಹ ಪರಿಸರ ರಕ್ಷಣೆಯ ಹೊಣೆ ಹೊರಬೇಕಾದ ಅಗತ್ಯವಿದ್ದು, ಹಸಿರು ಕಾನನ ಉಳಿವಿಗಾಗಿ ಎಲ್ಲರೂ ಸಸಿ ನೆಡುವ ಸಂಕಲ್ಪ ಮಾಡಬೇಕು ಎಂದು ಪಿಎಸ್‌ಐ ಆರ್.ವೈ. ಜಲಗೇರಿ ಹೇಳಿದರು.
ಪಟ್ಟಣದ ಪೊಲೀಸ್ ಠಾಣೆಯಲ್ಲಿ ಬುಧವಾರ ಸಸಿ ನೆಡುವ ಮೂಲಕ ವಿಶ್ವ ಪರಿಸರ ದಿನ ಆಚರಿಸಿ ಅವರು ಮಾತನಾಡಿದರು.
ಸಮಾಜದಲ್ಲಿ ಬದಲಾವಣೆ ಗಾಳಿ ಬೀಸಬೇಕಾದರೆ ಯುವಕರಿಗೆ ಮೊದಲ ಆದ್ಯತೆ ನೀಡಲಾಗುತ್ತದೆ. ಅವರಲ್ಲಿನ ಉತ್ಸಾಹ ಹೊಸ ಅಧ್ಯಾಯ ಬರೆಯಲು ಸಾಧ್ಯ. ಹೀಗಾಗಿ ಯುವ ಶಕ್ತಿ ಒಂದಾಗಿ ಪರಿಸರ ರಕ್ಷಣೆ ಜವಾಬ್ದಾರಿ ಹೊರಬೇಕು ಎಂದರು.
ದೇಶದ ಶ್ರೀಮಂತಿಕೆ ಹೆಚ್ಚಿಸುವ ಅಂಶಗಳಲ್ಲಿ ಅರಣ್ಯವು ಒಂದಾಗಿದೆ. ಅದನ್ನು ಉಳಿಸುವ ಹೊಣೆಗಾರಿಗೆ ಎಲ್ಲರೂ ಹೊರಬೇಕಿದೆ. ಗಣಿಗಾರಿಕೆ, ಕೈಗಾರೀಕರಣ, ನಗರೀಕರಣ, ಮರಭೂಮೀಕರಣ ಹಾಗೂ ಜನಸಂಖ್ಯಾ ಸ್ಫೋಟದಿಂದಾಗಿ ಅರಣ್ಯ ಸಂಪತ್ತು ಕಣ್ಮರೆಯಾಗುತ್ತಿದೆ. ಸಸ್ಯದಲ್ಲಿ ಕಾಣಬಹುದಾದ ಹಲವು ಪ್ರಭೇಧಗಳು ಅವಸಾನದ ಅಂಚಿನಲ್ಲಿವೆ ಎಂದು ಹೇಳಿದರು.
ಅಶೋಕ ದಿವಾಣದ, ರಾಜಾರಾಂ ಕಲಾಲ, ಬಸವರಾಜ ಯಲಿಗಾರ, ಮುತ್ತು ದಿವಾಣದ, ಸುರೇಶ ಮಂತಾ, ನಿಂಗಪ್ಪ ಹಲಬಾಗಿಲ, ಎಸ್.ಎಸ್ ಹೂಗಾರ, ವೈ.ಎಸ್. ಮೇದಾರ, ಪ್ರೇಮಾ ಶಿರಹಟ್ಟಿ, ಬಿ.ಎನ್. ಗುಡ್ಡದ ಇದ್ದರು.
ಜಗದಂಬಾ ಆಂಗ್ಲ ಮಾಧ್ಯಮ ಶಾಲೆ: ಪಟ್ಟಣದ ಶ್ರೀ ಜಗದಂಬಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆಗೆ ತಹಶೀಲ್ದಾರ್ ಗುರುಸಿದ್ದಯ್ಯ ಹಿರೇಮಠ ಚಾಲನೆ ನೀಡಿದರು. ಟಿ.ವಿ. ರಾಯಬಾಗಿ, ಸೂಡಿ ಗ್ರಾಪಂ ಉಪಾಧ್ಯಕ್ಷ ಶಶಿಧರ ವಕ್ಕಲರ, ಭಾಸ್ಕರ ರಾಯಬಾಗಿ, ಕೆ.ಎಸ್. ಪವಾರ, ಜಿ.ಎಚ್. ರಂಗ್ರೇಜಿ, ಬಸವರಾಜ ಕೊಟಗಿ ಇತರರು ಉಪಸ್ಥಿತರಿದ್ದರು.