ಹುಡುಗಿ,
ಈ ಬದುಕು ಒಂದು ಹೋರಾಟ, ಅದು ನನಗೆ ಗೊತ್ತು, ನಿನಗೂ ಕೂಡ. ಹಾಗಂತ ಹೆದರಿ ಕೂತರೆ ಬದುಕಿನ ಬಂಡಿ ಮುಂದೆ ಹೋಗುವುದಿಲ್ಲ ಎನ್ನುವುದೂ ನನಗೆ ಗೊತ್ತಿದೆ. ಬರೀ ಭಾವನೆಗಳೊಂದಿಗೆ ಬದುಕುತ್ತಿದ್ದ ನನಗೆ ವಾಸ್ತವದ ಪರಿಚಯ ಮಾಡಿಕೊಟ್ಟವಳು ನೀನು. ಬದುಕನ್ನು ನೀನೆಷ್ಟೇ ಪ್ರ್ಯಾಕ್ಟಿಕಲ್ ಆಗಿ ಕಂಡರೂ, ನಿನ್ನೊಳಗೆ ಒಂದು ಭಾವ ಜೀವವಿದೆ. ಆದರೆ ಅದನ್ನು ನೀನು ಅದುಮಿಟ್ಟು ಬದುಕುತ್ತಿದ್ದೀಯ. ಅದರಿಂದ ಸಾಧಿಸುವುದೇನಿದೆ ಹೇಳು?
ಬದುಕು ನಾವಂದುಕೊಂಡಷ್ಟು ಕಷ್ಟವೇನಲ್ಲ, ಹಾಗೆಯೇ ಸುಲಭವೂ ಇಲ್ಲ. ಎಲ್ಲವೂ, ಬದುಕನ್ನು ನಾವು ನೋಡುವ ದೃಷ್ಟಿಕೋನದಲ್ಲಿ ಅಡಗಿದೆ. ಬದುಕಿನಲ್ಲಿ ಎಲ್ಲರೂ ಹೆಚ್ಚಾಗಿ ನೆನಪಿಸಿಕೊಳ್ಳೋದು ಸಂತೋಷದ ದಿನಗಳನ್ನು. ಆದ್ದರಿಂದ, ಎಷ್ಟು ಸಾಧ್ಯವೋ ಅಷ್ಟು ಸಂತೋಷದಿಂದ ಇರಲು ಪ್ರಯತ್ನಿಸಬೇಕು. ಆದರೆ ನಿನಗೆ ಇಂಥ ಮಾತುಗಳಾಗಲೀ, ನನ್ನ ರೀತಿ ಬದುಕುವುದಾಗಲೀ ಸುತಾರಾಂ ಇಷ್ಟ ಇಲ್ಲ. ಇದೊಂದೇ ನನಗೂ ನಿನಗೂ ಇರುವ ವ್ಯತ್ಯಾಸ.
ನಮ್ಮ ಕಾಲೇಜಿನ ಎದುರಿದ್ದ ಗಾರ್ಡನ್‌ನ ಮರಗಳ ಮೇಲೆ ನಾವು ಕೆತ್ತಿದ್ದ ನಮ್ಮ ಹೆಸರುಗಳು ಈಗಲೂ ಹಾಗೆಯೇ ಉಳಿದುಕೊಂಡಿವೆ. ನಾವು ತಿಂದು ಎಸೆದಿದ್ದ ಮಾವಿನ ಹಣ್ಣಿನ ಬೀಜಗಳು ಇಂದು ಮೊಳಕೆ ಒಡೆದು ಮರಗಳಾಗಿ ಬೆಳೆದಿವೆ. ಕ್ಯಾಂಪಸ್‌ನಲ್ಲಿ ಈಗ ನಾನು ಒಂಟಿಯಾಗಿ ಅಲೆಯುವಾಗ, ಭವಿಷ್ಯದ ಬಗ್ಗೆ ನಾವಾಡಿದ ಮಾತುಗಳು ಪ್ರತಿಧ್ವನಿಯಂತೆ ಕೇಳಿಸುತ್ತವೆ. ನಿನಗೆ, ನಮ್ಮ ಭವಿಷ್ಯದ ಬಗ್ಗೆ ತುಂಬಾ ಯೋಚನೆ ಇತ್ತು. ನಿನಗೇ ಗೊತ್ತಿರುವಂತೆ, ಬದುಕು ಕಟ್ಟಿಕೊಳ್ಳುವ ಶಕ್ತಿ ಇಬ್ಬರಲ್ಲೂ ಇದೆ. ಯಾವ ಅಡೆತಡೆಗಳು ಬಂದರೂ ನಮ್ಮ ಬದುಕಿನ ಬಂಡಿ ಎಲ್ಲೂ ನಿಲ್ಲದೆ ಸಾಗಬೇಕು, ಸಾಗುತ್ತದೆ. ಆದರೆ, ಎಲ್ಲವೂ ನಿಂತಿರುವುದು ನಿನ್ನ ಮನಸ್ಸಿನ ಮೇಲೆಯೇ. ಹಾಗಂತ, ಈಗಲೇ ನನ್ನನ್ನು, ನನ್ನ ಪ್ರೀತಿಯನ್ನು ಒಪ್ಪಿಕೋ, ಆ ಮೂಲಕ ನನ್ನ ಕನಸುಗಳನ್ನು ನನಸು ಮಾಡು ಎಂದೇನೂ ನಾನು ಹೇಳುತ್ತಿಲ್ಲ. ನಿನ್ನ ಮೇಲೆ ಅಧಿಕಾರ ಚಲಾಯಿಸುತ್ತಿಲ್ಲ, ಒತ್ತಾಯಿಸುತ್ತಿಲ್ಲ. ಹಾಗೆ ಕೇಳಲು ನನ್ನ ಮನಸ್ಸು ಒಪ್ಪುವುದಿಲ್ಲ. ಒತ್ತಾಯದಿಂದ ಪ್ರೀತಿ ಪಡೆಯಲು ಸಾಧ್ಯವಿಲ್ಲ ಎಂದು ನನಗಂತೂ ಚೆನ್ನಾಗಿ ಗೊತ್ತಿದೆ.
ಇಷ್ಟು ಹೇಳಿದ ಮೇಲೆ, ಮತ್ತೆ ವಿವರಿಸಿ ಹೇಳಲು ಏನೂ ಉಳಿದಿಲ್ಲ. ಮಿಕ್ಕ ವಿಷಯ ನಿನಗೇ ಬಿಟ್ಟಿದ್ದು. ಇಬ್ಬರೂ ಪ್ರ್ಯಾಕ್ಟಿಕಲ್ ಆಗಿಯೇ ಇದ್ದರೆ ಬದುಕು ಯಾಂತ್ರಿಕವಾಗಿಬಿಡುತ್ತದೆ. ಅದಕ್ಕೇ ನಾನು ಭಾವ ಜೀವಿಯಾಗಿಯೇ ಇರಲು ಇಚ್ಛಿಸುತ್ತೇನೆ. ನೀನೂ ಕೂಡ ನಿನ್ನ ಹಾಗೆಯೇ ಇರು.. ಆದರೆ ನನ್ನ ಜೊತೆಗಿರು..
– ಈರಯ್ಯ ಉಡೇಜಲ್ಲಿ, ಹುಬ್ಬಳ್ಳಿ