ನನಗೂ ಯಾಕೋ ಈ ತುಟ್ಟಿ ಕಾಲದಾಗ ಬರೀ ಐದರಿಂದ ಏಳು ಗ್ರಾಮದ ಬಂಗಾರದ ಚೈನ್ ಹಾಕೊಬೇಕಂತ ಅನಸೆತಿ. ನನ್ನ ಕಡೆ ಈಗಾಗಲೇ ಬಂಗಾರದ ಚೈನ್ ಐತಿ ಅಂತ ನಿನಗೂ ಗೊತ್ತದ. ಆದರೆ, ನನಗೆ ನಿನ್ನ ಕಡೆಯಿಂದ ಬೇಕಾಗೆತಿ. ಬರೀ ಮಾತಿನ್ಯಾಗ ಅಷ್ಟ ನೀ ನನ್ನ ಬಂಗಾರ, ಚಿನ್ನ, ರನ್ನ ಅಂತಾ ಅನ್ನೋದ್.
ಜಗತ್ತಿನ್ಯಾಗ ಪ್ರೇಮಿಗಳಿಗೆ ಅರ್ಧಂಬರ್ಧ ಹುಚ್ಚರು ಅಂತಾ ಕರೀತಾರ. ನಾವಿಬ್ರು ಮಾತ್ರ ಅಂಥ ಹುಚ್ಚರು ಅಲ್ಲ ಬಿಡು. ಯಾಕಂದ್ರ, ನಾವು ಜೀವನದ ಹಕೀಕತ್ತನ್ಯಾಗ ಬದುಕೋರು. ಏನ್ ಬರತೈತಿ ಅದನ್ನ ಎದುರಿಸಾಕ ಎದೆ ಸೆಟೆಸಿ ನಿಂತವ್ರು. ಬೇರೆದವರ ಹಂಗ, ಆಕಾಶದಾಗಿನ ಚಂದ್ರ, ನಕ್ಷತ್ರಗಳ ಕಿತ್ತುಕೊಂಡು ಬಾ ಅಂತ ಹೇಳಿದ್ದಕ್ಕಿ ನಾನಲ್ಲ; ನೀನೂ ಎಂದೂ ಕಿತ್ಕೊಂಡು ಬರ್ತೇನಿ ಅಂದಾವ ಅಲ್ಲ ಅಂತ ನಾ ಒಪ್ಕೊತೇನಿ.
ಅಲ್ಲಾ, ವಿಜ್ಞಾನ ಇಷ್ಟು ಮುಂದುವರೆದಿದ್ರೂ ಇನ್ನೂ ಚಂದ್ರ, ನಕ್ಷತ್ರಗಳ ಅಧ್ಯಯನ ನಿಂತಿಲ್ಲ. ಅಂತಾದ್ರಾಗ ಈ ಹುಚ್ಚು ಕೋಡಿ ಮನಸ್ಸಿನ ಜನ ಅದ್ಹೆಂಗ್ ಚಂದ್ರ, ನಕ್ಷತ್ರ ಕಿತ್ತುಕೊಂಡು ಬಾ ಅಂತಾರೋ ಗೊತ್ತಿಲ್ಲ. ಅವರೇನ ತಮ್ಮ ಪ್ರೇಮಿಗಳನ್ನ ವಿಜ್ಞಾನಿ ಅಂತ ತಿಳ್ಕೊಂಡರೆನೋ ಗೊತ್ತಿಲ್ಲ. ನಾವ್ ಮಾತ್ರ ಅಂಥವರಲ್ಲ; ವಾಸ್ತವ ಅಂದ್ರ ವಾಸ್ತವದಾಗ ಬದುಕೋರು.
ಪ್ಯಾಟ್ಯಾಗಿನ ದುಂಡು ಮಲ್ಲಿಗೆ ಮಾಲಿ ಒಂದು ಮಾರ್,ತಿನ್ನಾಕ ಕುಂದಾ, ಪೇಡೆ ಇಲ್ಲಾಂದ್ರ ಹೋಗ್ಲಿ , ಒಂದು ರೇಷ್ಮಿ ಸೀರೆ ಬೇಕ್ ಅಂದ್ರ ಯಾರಾದ್ರೂ ತಂದುಕೊಡ್ತಾರ. ಅದ ಬಿಟ್ಟು ಅದು ಬೇಕು ಇದು ಬೇಕು ಅಂದ್ರ ಹೆಂಗ?
ಅಂದ್ಹಂಗ, ಒಂದು ವಿಷಯ ನೆನಪಾತು ನೋಡ. ಬಂಗಾರದ ರೇಟ್ ಏನೊ 40000ದ ಗಡಿ ದಾಟೆತಿ, ಇನ್ನು ಭಾಳ ತುಟ್ಟಿ ಆಗತೈತಿ ಹೌದಾ? ನನಗೂ ಯಾಕೋ ಈ ತುಟ್ಟಿ ಕಾಲದಾಗ ಬರೀ ಐದರಿಂದ ಏಳು ಗ್ರಾಮದ ಬಂಗಾರದ ಚೈನ್ ಹಾಕೊಬೇಕಂತ ಅನಸೆತಿ. ನನ್ನ ಕಡೆ ಈಗಾಗಲೇ ಬಂಗಾರದ ಚೈನ್ ಐತಿ ಅಂತ ನಿನಗೂ ಗೊತ್ತದ. ಆದರೆ, ನನಗೆ ನಿನ್ನ ಕಡೆಯಿಂದ ಬೇಕಾಗೆತಿ. ಬರೀ ಮಾತಿನ್ಯಾಗ ಅಷ್ಟ ನೀ ನನ್ನ ಬಂಗಾರ, ಚಿನ್ನ, ರನ್ನ ಅಂತಾ ಅನ್ನೋದ್. ಅನ್ನೋದ್ ಖರೆನ ಆದ್ರ, ಬಾಳ ಅಲ್ಲ, ಬರೀ ಐದರಿಂದ ಏಳು ಗ್ರಾಮದಾಗ ಸಣ್ಣ ಡಿಸೈನ್ಡ ಚೈನ್ ಯಾಕ್ ನೀ ಮಾಡಿಸಿಕೊಡಬಾರ್ದು? ಅಂತ ವಿಚಾರ ಬಂದೈತಿ. ಭಾಳ ತುಟ್ಟಿ ವಸ್ತುಗ ಆಸೆ ಪಡ್ತೀನಿ ಅಂತ ತಿಳ್ಕೊಬ್ಯಾಡ. ನಾನೂ ನಿನಗ ಬಂಗಾರದ ವಸ್ತುನ ಈ ನವರಾತ್ರಿಗೆ ಗಿಫ್ಟ್ ಅಂತ ಕೊಡಬೇಕ್ ಅನ್ಕೊಂಡೆನಿ. ಈ ನವರಾತ್ರಿ ಮತ್ತು ದೀಪಾವಳಿ ಹಬ್ಬಗಳಿಗೆ ಒಬ್ಬರಿಗೊಬ್ರ ಏನಾರ ಉಡುಗೊರೆ ಕೊಡೋದು ರೂಢಿ ಅಂತ.ಅದರಿಂದ ಪ್ರೀತಿ, ವಿಶ್ವಾಸ ಹೆಚ್ಚತದಂತ. ಸಾಮಾನ್ಯವಾಗಿ ಮನುಷ್ಯರಲ್ಲಿರೊ ದೋಷಗೊಳ ನಮ್ಮಲ್ಲೂ ಅದಾವ. ಈ ನಮ್ಮ ಪ್ರೀತಿ ಅದನ್ನ ಮಾಯ ಮಾಡೈತಿ. ಸೂರ್ಯ, ಚಂದ್ರ ಇರೊವರೆಗೂ ಅಂತ ಈ ಕವಿಗೊಳ ಹೇಳುವಂಗ ನಮ್ಮ ಪ್ರೀತಿ ಶಾಶ್ವತ, ಅಮರ ಅಂತ ಹೇಳ್ಳೋ ಜರೂರತ್ ಇಲ್ಲ ನೋಡ್. ಅದು ನಮಗ ಗೊತ್ತದ. ಅದನ್ನ ಇಡೀ ಜಗತ್ತಿಗೆ ಡಂಗರಾ ಸಾರೊ ಅವಶ್ಯಕತೆ ಇಲ್ಲ. ನಮ್ಮ ಪ್ರೀತಿ ನಮಗೆ ಗೊತ್ತಿದ್ರ ಸಾಕ್. ಯಾಕಂದ್ರ, ನಾವ್ ಸಾಮಾನ್ಯರು. ಅಸಾಮಾನ್ಯರ ಅಲ್ಲ.
ಇಬ್ರೂ ದುಡಿತೀವಿ. ಪಗಾರ ಅದ. ದುಡ್ಡಿಂದ ಏನು ತೊಂದ್ರೆ ಇಲ್ಲ. ನಮ್ಮ ಪ್ರೀತಿಯ ದ್ಯೋತಕವಾಗಿ ಹಿಂಗ್ ಗಿಫ್ಟ್ ಕೊಡೊನು ಅನ್ನಿಸ್ತ. ಅದೂ ಅಲ್ಲದ, ನಾ ನಿನಗ ಬಂಗಾರ, ನೀ ನನಗ ಬಂಗಾರ, ಅನ್ನೋದೂ ಅಷ್ಟ ಖರೇ. ಈ ವಿಷಯಾನ ಯಾಕ ಕಾರ್ಯ ರೂಪಕ್ಕತರಬಾರ್ದು ಅಂತ ಈ ಪ್ಲಾನ್ ಮಾಡೇನಿ. ನೀ ಇದಕ್ಕ ನಕ್ಕಿ ಒಪ್ಪುತಿ ಅಂತ ಖಾತ್ರಿ ಅದ. ನೀ ಯಾವ್ ಮಾಟೀನ, ಯಾವ ಡಿಸೈನ್ ದರ ತಂದ್ರು ನಾ ತಕರಾರ ತಗ್ಯಾಂಗಿಲ್ಲ ಅಂತ ಬೇಕಾದ್ರ ಆಣಿ ಮಾಡ್ತನ. ಹಂಗ ನೀನೂ ತಕರಾರ ತಗ್ಯಾಂಗಿಲ್ಲ ಅಂತ ಅನ್ಕೊಂಡೆನಿ. ಅದಕ್ಕ ಈ ನವರಾತ್ರಿಗೆ ಬಂಗಾರವನ್ನು ಕೊಡೋ ತೊಗೊಳ್ಳೋ ಮೂಲಕ ಪ್ರೀತಿ ಹಂಚಿಕೊಳ್ಳೊನು ಅಂತ ಬಹಳ ಆಸೆ ಅದ ನೋಡ್.ನನ್ನ ಮಾತಿಗೆ ಒಪ್ಪತಿ ಅಂತ ಗ್ಯಾರಂಟಿ ಅದ. ಯಾಕಂದ್ರ ನೀ ನನ್ನ ಬಂಗಾರ.ಹೌದಲ್ಲ ಮತ್ತ!!!!
ಇಂತಿ ನಿನ್ನ
ಬಂಗಾರ.
ಮಾಲಾ ಅಕ್ಕಿಶೆಟ್ಟಿ