Advertisement
ಒಂದು ಉತ್ಪನ್ನ ಅಥವಾ ಪ್ರಾಡಕ್ಟಿನ ಯಶಸ್ವಿ ವಿನ್ಯಾಸ (ಸಕ್ಸಸ್‌ಫುಲ್ ಡಿಸೈನ್) ಯಾವುದು? ಅದರ ಸೌಂದರ್ಯವೇ, ಅದರ ಬಳಕೆ ಮತ್ತು ಉಪಯುಕ್ತತೆಯೇ, ಅದರ ಕಾರ್ಯ ಕ್ಷಮತೆಯೇ? ಕೊನೆಗೂ ಒಂದು ಪ್ರಾಡಕ್ಟಿನ ವ್ಯಾವಹಾರಿಕ ಯಶಸ್ಸು (ಕಮರ್ಷಿಯಲ್ ಸಕ್ಸಸ್) ಅದರ ಸೇಲ್ಸ್ ಅಥವಾ ಮಾರಾಟವೆಂದರೂ ಒಂದು ವ್ಯಕ್ತಿ ಆ ವಸ್ತುವನ್ನು ನೋಡುವುದು ಯಾವಾಗ? ಸ್ವೀಕರಿಸುವುದು ಯಾವಾಗ? ಟಿವಿ ಹಚ್ಚಿ ಜಾಹೀರಾತನ್ನು ನೋಡಿ, ದಿನಪತ್ರಿಕೆಯನ್ನು ನೋಡಿ, ರಸ್ತೆ ಅಥವಾ ಮಾಲ್‌ಗಳ ಹೋರ್ಡಿಂಗ್‌ಗಳನ್ನು ನೋಡಿ. ಯಾವುದೇ ಜಾಹೀರಾತನ್ನು ನೋಡಿದರೂ “ನವೀನ’, “ಹೊಸ’ ಎನ್ನುವ ಶಬ್ದ ರಾಚುತ್ತಿರುತ್ತದೆ. ಹೊಸ ಬೋರ್ನ್ವೀಟಾದಿಂದ ಹಿಡಿದು ಹೊಸ ಕ್ರೋಸಿನ್ನಿನವರೆಗೂ. ಮಾರುಕಟ್ಟೆಯಲ್ಲಿ ಹೊಸ ಎಂದು ಬರೆದ ಹೆಚ್ಚಿನ ಸಾಮಾನನ್ನು ತೆಗೆದುಕೊಳ್ಳುತ್ತೇವೆ. ಇದನ್ನು ಒಂದು ಹಂತದಲ್ಲಿ ಒಪ್ಪಲೇಬೇಕು. ಹಾಗಾದರೆ, ಈ ಮೇಲಿನ ವಾಕ್ಯ ನಿಜವೆನಿಸಿದ್ದರೆ ಕಳೆದ ಇಪ್ಪತ್ತು ಬಾರಿ ನೀವು ಹೊಟೇಲಿಗೆ ಹೋಗಿದ್ದನ್ನು ಗಮನಿಸಿ, ಇಪ್ಪತ್ತು ಬಾರಿ ಹಾಡುಗಳನ್ನು ಕೇಳಿದ್ದನ್ನು ಗಮನಿಸಿ, ಇಪ್ಪತ್ತು ಬಾರಿ ಬಟ್ಟೆ ಅಂಗಡಿಗೆ ಹೋಗಿದ್ದನ್ನು ಗಮನಿಸಿ, ಹೆಚ್ಚಾಗಿ ನಿಮಗೆ ಎಂದೂ ಇಷ್ಟವಾಗುವ ಪನ್ನೀರನ್ನೇ ಆರ್ಡರ್ ಮಾಡಿರುತ್ತೀರಿ, ಅದೇ ನಿಮಗಿಷ್ಟವಾಗುವ ಗುಲಾಮ್ ಅಲಿ/ಲತಾಜಿಯ ಹಾಡನ್ನೇ ಕೇಳಿರುತ್ತೀರಿ, ಮತ್ತೆ ಅದೇ ಬ್ಲೂ ಜೀನ್ಸ್ ಬ್ಲ್ಯಾಕ್ ಶರ್ಟ್, ಸೀರೆ, ಚೂಡಿದಾರ… ಹಾಗಾದರೆ ನಾವು ಅತ್ಯಂತ ಪರಿಚಿತ ವಸ್ತುವನ್ನೇ ಖರೀದಿಸುತ್ತೇವೆ ಎಂದಾಯಿತಲ್ಲ. ಹೀಗೇ ಆದರೆ ಹೊಸದಕ್ಕೆ ಅರ್ಥವೇನು? ವ್ಯಾಪಾರ ವಹಿವಾಟಿನ ಗತಿ ಏನು? ಇದಕ್ಕೂ ಮುಖ್ಯವಾಗಿ ಮೂಲಭೂತ ದಾರಿಯಾದ ಒಂದು ವಸ್ತುವಿನ ಹೊಸ ಸೃಷ್ಟಿಯ ಅರ್ಥವೇನು?
Related Articles
Advertisement
ಈ ಸೂತ್ರವು ಪ್ರಾಥಮಿಕವಾಗಿ ಪ್ರಾಡಕ್ಟ್ ವಿನ್ಯಾಸಕ್ಕೆ ಸಂಬಂಧಿಸಿದ್ದಾದರೂ ಇದು ಮೂಲಭೂತ ವಿಷಯವಾದ್ದರಿಂದ ಅನೇಕ ಕ್ಷೇತ್ರಗಳಿಗೆ ಅನ್ವಯಿಸಬಹುದಾಗಿದೆ.
ಉದಾಹರಣೆಗೆ ಒಂದು ಸಿಡಿ ಅಥವಾ ಪ್ಲೇಲಿಸ್ಟ್ ನಲ್ಲಿ ನಮಗೆ ಇನ್ನೂ ಗೊತ್ತಿಲ್ಲದ ಮೂವತ್ತು ಹಾಡು ಇದೆ ಎಂದು ಅಂದುಕೊಳ್ಳೋಣ. ನಾವು ಹೆಚ್ಚಾಗಿ ಆ ಸಿಡಿಯನ್ನು ಮುಟ್ಟುವುದೇ ಇಲ್ಲ! ಆದರೆ, ಅದೇ ಸಿಡಿಯಲ್ಲಿ ಆ ಮೂವತ್ತು ಹಾಡುಗಳೊಡನೆ ನಮಗೆ ಗೊತ್ತಿರುವ ಲತಾಜಿ, ಕಾಳಿಂಗ ರಾವ್, ಅಶ್ವಥ್, ಅನಂತಸ್ವಾಮಿ, ಗುಲಾಮ್ ಅಲಿಯ ನಾಲ್ಕಾರು ಹಾಡುಗಳು ಇದ್ದರೆ ನಾವು ಆ ಎಲ್ಲ ಹಾಡುಗಳನ್ನೂ ಕೇಳುತ್ತೇವೆ. ತುಂಬಾ ಒಳ್ಳೆಯ ಕತೆಯನ್ನು ಸಿನಿಮಾ ಮಾಡಲಿಕ್ಕೆ ಸಂಪೂರ್ಣ ಹೊಸ ಕಲಾವಿದರನ್ನು ಹಾಕಿಕೊಂಡರೆ ಅದು ಪೂರ್ತಿ ಜನರನ್ನು ಮುಟ್ಟಲು ಯಶಸ್ಸು ಗಳಿಸಲು ಕಷ್ಟವಾಗಬಹುದು. ಅಂತೆಯೇ ಮಧುರವಾದ ಹಾಡುಗಳು ಒಂದು ಫ್ಲಾಪ್ ಚಿತ್ರದಲ್ಲಿದ್ದರೆ ಮುಟ್ಟುವವರನ್ನೂ ಮುಟ್ಟದು. ಇಂತಹ ಕ್ಷೇತ್ರಗಳಲ್ಲಿ ಒಂದು ಪ್ರಾಡಕ್ಟ್ ಎನ್ನುವುದು ಎರಡು ಮೂರು ಮುಖ್ಯ ಮಾಧ್ಯಮದ ಮಿಶ್ರಣದಿಂದಾದದ್ದು.
ಅದೇ ಅಟೊಮೊಬೈಲ್ ಕ್ಷೇತ್ರದಲ್ಲಿ – ತನ್ನ ಕಂಪೆನಿಯ ವಿಶಿಷ್ಟ ಗುರುತನ್ನು ಹಾಗೇ ಹಿಡಿದಿಟ್ಟುಕೊಂಡ ಅದೇ ಚೌಕಟ್ಟಿನಲ್ಲೇಹೊಸದಾಗಿ ಅಭಿವ್ಯಕ್ತಿಸುತ್ತ¤ ಪ್ರತಿವರುಷವೂ ಹೊಸ ಕಾರಿನೊಂದಿಗೆ ಮಾರುಕಟ್ಟೆ ಪ್ರವೇಶಿಸುವ ಕಾರು ಕಂಪೆನಿಗಳನ್ನು ನೋಡಿದ್ದೀರಿ. ಹಾಗಾಗೇ ನಿಮಗೆ ಐವತ್ತು ವರ್ಷಗಳಿಂದ ಮರ್ಸಿಡಿಸ್ ಯಾವುದು ಎಂದು ಹೇಳಬೇಕಾಗಿಲ್ಲ. ಆ ಲೊಗೊ, ಪ್ರೊಪೊರ್ಶನ್, ಎದುರಿನ ಗ್ರಿಲ್‌ಗಳನ್ನು ಕಂಡಾಗ ನೀವು ಕ್ಷಣಾರ್ಧದಲ್ಲಿ ಗುರುತು ಹಿಡಿಯುತ್ತೀರಿ. ಇದನ್ನು ಆ ಕಂಪೆನಿಯ ಡಿಸೈನ್ ವ್ಯಾಲ್ಯು, ಡಿಸೈನ್ ಲಾಂಗ್ವೇಜ್, ಡಿಎನ್‌ಎ ಎಂದೆಲ್ಲ ಕರೆಯುತ್ತಾರೆ. ಗ್ರಾಹಕರನ್ನು (ಸೆಗೆ¾ಂಟ್ ಸ್ಪೆಸಿಫಿಕ್) ಜಾಸ್ತಿ ಗೊಂದಲ ಮಾಡುವ ಮನಸ್ಸು ಕಂಪೆನಿಗಿರುವುದಿಲ್ಲ. ಗೊಂದಲ ಹೆಚ್ಚಾಗಿ ಖರೀದಿ ಕಡಿಮೆಯಾದರೆ ಲಾಭವೂ ಕಡಿಮೆಯಲ್ಲವೆ ! ನನಗೆ ಮೊದಲು ಬಹಳ ಆಶ್ಚರ್ಯವಾಗಿದ್ದಿದೆ. ಯಾವಾಗ ನೋಡಿದರೂ ನಮ್ಮಲ್ಲಿ ಕೃಷ್ಣಸಂಧಾನ, ಗದಾಯುದ್ಧ, ಕರ್ಣಪರ್ವ ಯಕ್ಷಗಾನ, ತಾಳಮದ್ದಲೆಗಳು ನಡೆಯುತ್ತಲೇ ಇವೆ. ಅದೇ ಕತೆ, ಅದೇ ಕಲಾವಿದರು. ಅದೇ ಪ್ರೇಕ್ಷಕ ಐವತ್ತು-ಅರವತ್ತು ವರ್ಷಗಳಿಂದ ನೋಡುತ್ತಲೇ ಇದ್ದಾನೆ. ಈ ಬರುವ ವಾರ ಹತ್ತಿರದ ದೇವಸ್ಥಾನದಲ್ಲಿ ಏಳೂ ದಿವಸ ಒಂದೇ ಆಖ್ಯಾನ ಕರ್ಣ ಪರ್ವ ತಾಳಮದ್ದಲೆ ಇದೆ ಮತ್ತು ಎಲ್ಲ ದಿವಸವೂ ಅದೇ ಕಲಾವಿದರು ಎಂದು ಹೇಳಿ. ಅದೇ ಜನ (ಪ್ರೇಕ್ಷಕ) ಒಂದು ದಿನ ಬಿಡದೆ ಕುಂತು ನೋಡಿಯಾರು. ಇದು ಭಾರತೀಯ ಶಾಸ್ತ್ರೀಯ ಸಂಗೀತಕ್ಕೂ ಹೊರತಲ್ಲ. ಹಾಗಾದರೆ, ಯಾಕೆ ಹೀಗೆ ಎನ್ನುವುದು ಸಹಜ ಪ್ರಶ್ನೆಯೇ! ಒಂದು ಪ್ರಾಡಕ್ಟನ್ನು ಸರಳೀಕರಿಸಿದಂತೇ ಒಂದು ಕಲೆಯ ಅಮೂರ್ತ ಅನುಭೂತಿಯನ್ನು ಸರಳೀಕರಿಸುವಂತಿಲ್ಲವಾದರೂ ಅದೇ ಪರಿಚಿತ ಕತೆಯ ಆವರಣದಲ್ಲಿ ಸಿದ್ಧ ಸಂಭಾಷಣೆಯಿಲ್ಲದ ಆಶು ಮತ್ತು ತನ್ನ ಪದರಗಳನ್ನು ಬಿಚ್ಚಿಕೊಳ್ಳುವ ರೀತಿ, ಪ್ರಾರಂಭ
ದಿಂದ ಕೊನೆಯ ನಿಮಿಷದವರೆಗೂ ಹೊಸ ಸೃಷ್ಟಿಯ ಪಾಕ ನಡೆಯುತ್ತಿರುವುದರಿಂದಲೇ ಅದು ಪ್ರೇಕ್ಷಕನನ್ನು ಹಿಡಿದಿಟ್ಟು ಕೊಳ್ಳುವುದು. ಈ ಕಲೆಯ ಬಂಧ ಮತ್ತು ಸ್ವರೂಪವೇ ವಿರಾಟ. ಇಲ್ಲೂ MAYA ಇಣುಕುತ್ತದೆ. – ಯಕ್ಷಗಾನದ ಪ್ರಸ್ತುತಿ ಯಾವಾಗ ಶಾಸ್ತ್ರೀಯವಾಗುವುದು? ಅಂತೆಯೆ ಯಾವುದು ಶಾಸ್ತ್ರೀಯ ಅಭಿವ್ಯಕ್ತಿ? ಎನ್ನುವುದು ಯಕ್ಷಗಾನಕ್ಕೆ ಸಂಬಂಧಪಟ್ಟು ಯಾವತ್ತೂ ಚರ್ಚೆಯಾದ, ಇಂದೂ ಚರ್ಚೆಯಾಗುತ್ತಿರುವ ಪ್ರಶ್ನೆ. ಸುಮಾರು ವರ್ಷಗಳ ಹಿಂದೆ ಶಂಭು ಹೆಗಡೆಯವರು ಎತ್ತಿದ ಮಾತೊಂದಿದೆ. ಹುಟ್ಟುವ ಮಗು ತಾಯಿಯನ್ನು ಕೊಂದು ಹೊರಗೆ ಬರುವುದೇ? ಯಾವ ಸೃಷ್ಟಿ ಕ್ರಿಯೆಯಲ್ಲಿ ಇಬ್ಬರಿಗೂ ಧನ್ಯತೆ ಇರುತ್ತದೆಯೋ ಅದೇ ನಿಜವಾದ ಸೃಷ್ಟಿ ಎಂದು. ಇನ್ನೂ ಸ್ವಲ್ಪ ಸೂಕ್ಷ್ಮವಾಗಿ ಗಮನಿಸಿದರೆ MAYA ವಿನ್ಯಾಸದ ಸೂತ್ರ, ಹೆಚ್ಚಿನ ಜನಸಮೂಹಕ್ಕೆ ಹೌದಾದರೂ ಫ್ಯಾಶನ್, ಕಲೆಗೆ ಸಂಬಂಧ ಪಟ್ಟ ಕಲಾವಿದರು, ಆರ್ಟ್ ಜೂರಿಗಳು (ಪ್ರೇಕ್ಷಕರ ಲ್ಲದ) ಪರಿಚಿತಕ್ಕಿಂತ ಹೆಚ್ಚು ಹೊಸತಕ್ಕೆ ಆದ್ಯತೆ ಕೊಡುತ್ತಾರೆನ್ನುವ ವಾದವನ್ನು ಅಲ್ಲಗಳೆಯುವಂತಿಲ್ಲ. (ಅದೊಂದು ಮಿಶ್ರಣವಾದುದ ರಿಂದ ವ್ಯತ್ಯಯದ ಯಾವುದಾದರೊಂದು ಹೆಚ್ಚು ಆಗಬಹುದಲ್ಲ!) ನಮಗೆ ಇನ್ನೂ ಗೊತ್ತಿಲ್ಲದ ಹೊಸದೊಂದು ತಂತ್ರಜ್ಞಾನ ಮತ್ತು ಅದರ ಬಳಕೆಯಿಂದ ಒಂದು ಪ್ರಾಡಕ್ಟ್ ಬಂದರೆ ಅದನ್ನು ಈ ಸೂತ್ರಕ್ಕೆ ಸಮೀಕರಿಸಬಾರದು ಕೂಡ. ಆದರೆ, ಎರಡೂ ಗ್ರಾಹಕರಿಗೆ ಮುಖ್ಯವಾದುದು ಆ ವಸ್ತುವಿನ ಒರಿಜಿನಾಲಿಟಿ ಎನ್ನುವುದನ್ನು ಒಪ್ಪಲೇ ಬೇಕು. ಎಲ್ಲವನ್ನೂ ಈ ಸೂತ್ರದಡಿ ಸರಳೀಕರಿಸಬಾರದೆಂದು ಮೊದಲೇ ಉಲ್ಲೇಖೀಸಿದೆ. ಪ್ರಾಡಕ್ಟಿನ ಯಶಸ್ಸು ಸೌಂದರ್ಯದ ವ್ಯಾಖ್ಯಾನ ಸುಲಭದ್ದಲ್ಲ. ಇವು ಒಂದು ಕಡೆಯಿಂದ ತೆರೆದು ಕೊಂಡಂತೇ ಇನ್ನೊಂದು ಕಡೆ ಮುಚ್ಚಿಕೊಳ್ಳುತ್ತ ಬರುತ್ತವೆ. ದೇಶ, ಕಾಲ, ಮನಸ್ಥಿತಿ, ನಂಬಿಕೆ, ಮಾರ್ಕೆಟ್ ಸೆಗೆ¾ಂಟ್ ಹೀಗೆ ಹತ್ತು ಹಲವು ವ್ಯತ್ಯಯ (ವೇರಿಯೆಬಲ್) ಗಳಿಂದಾದದ್ದು. ಇದಕ್ಕೆ ದರ ಎನ್ನುವ ಒಂದು ವ್ಯತ್ಯಯ ಸೇರಿಸಿದರೂ ನಮ್ಮ ಲೆಕ್ಕಾಚಾರ ತಲೆ ಕೆಳಗಾಗಬಹುದು. ಅದರ ಯಶಸ್ಸು ಅದರ ಒಟ್ಟೂ ಮಾರಾಟದ ಸಂಖ್ಯೆ ಎನ್ನುವುದು ಸರಳೀಕೃತ ಸತ್ಯ! ಮುಗಿಸುವ ಮುನ್ನ…
MAYAದ ಸೂತ್ರದಾರಿ ರೈಮಂಡ್ ಲೂಯಿಯ ಒಂದು ಬಹಳ ಮುಖ್ಯವಾದ ವಿನ್ಯಾಸವೆಂದರೆ ನಾಸಾದ ಸ್ಪೇಸ್ ಸ್ಟೇಶನ್ನಿನ (ಸ್ಕೈಲ್ಯಾಬ್) ಒಳವಿನ್ಯಾಸ. ಅಂತರಿಕ್ಷದಲ್ಲಿರುವಷ್ಟು ದಿವಸ ಈ ಭೂಮಿಯ, ಮನೆಯ ವಾತಾವರಣವನ್ನು ನೆನಪಿಸುವಂತೇ ಸ್ಪೇಸ್ ಸ್ಟೇಷನ್ನಿನ ಒಳಗೆ ಸೋಫಾ, ಕುರ್ಚಿ, ಸ್ನಾನ ಮಾಡುವ ಬಾತ್‌ಟಬ್ ಇತ್ಯಾದಿಗಳನ್ನು ವಿನ್ಯಾಸಗೊಳಿಸಿದ. ಅಷ್ಟೇ ಅಲ್ಲ, ಅಂತರಿಕ್ಷದಲ್ಲಿ ಕುಂತ ಗಗನಯಾತ್ರಿಯನ್ನು ಭೂಮಿಯಿಂದ ಬೇರ್ಪಡಿಸಬಾರದೆಂದು ಸ್ಪೇಸ್ ಸ್ಟೇಶನ್ನಿನ ಕವಚದಲ್ಲಿ ಒಂದು ದೊಡ್ಡ ರಂಧ್ರ ಕೊರೆದು ಅಲ್ಲಿ ಗಾಜನ್ನು ಕೂರಿಸಿ ಕಿಟಕಿ ಮಾಡಿದ. ಸಮಯ ಸಿಕ್ಕಾಗಲೆಲ್ಲ ಗಗನಯಾತ್ರಿ ಕಿಟಕಿಯಿಂದ ಬೇರೆ ಬೇರೆ ಗ್ರಹಗಳನ್ನೂ ನೋಡಿರಬಹುದು. ಆದರೆ, ಹೆಚ್ಚಿನಕಾಲ ತನಗೆ ಪರಿಚಿತವಿರುವ ಭೂಮಿಯನ್ನೇ ನೋಡುತ್ತಿದ್ದನಂತೆ. ಈ “ಪರಿಚಿತ’ ಮತ್ತು “ಹೊಸ’ದರ ಅನುಭವ ಹೀಗೂ ಆಗುತ್ತದೆ. ಇನ್ನೇನು ಇಪ್ಪತ್ತು ನಿಮಿಷಗಳಲ್ಲಿ ವಿಮಾನ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಇಳಿಯುತ್ತದೆ ಎಂದು ಗಗನಸಖೀ ಘೋಷಿಸುತ್ತಿದ್ದಂತೇ ಕಣ್ಣು ವಿಮಾನದ ಕಿಟಕಿಯಿಂದ ಅತ್ಯಂತ ಪರಿಚಿತವಿರುವ ಬೆಂಗಳೂರನ್ನೇ ಆಶ್ಚರ್ಯದಿಂದ ನೋಡಲು ಪ್ರಾರಂಭಿಸುತ್ತದೆ. ವಿಮಾನ ತುಮಕೂರಿನ ಕಡೆಯಿಂದ ಬಂತೋ ಅಥವಾ ಹೈದರಾಬಾದ್ ಕಡೆಯಿಂದ ಬಂತೋ-ಎಂದು. ಈ ಪರಿಚಿತ ಊರು ಮೇಲಿನಿಂದ ಹೇಗೆ ಕಾಣುತ್ತದೆ ಎನ್ನುವ ಕುತೂಹಲ, ತವಕ! ಮತ್ತು ನೆಲ ಸೇರುತ್ತಿ ದ್ದೇನಲ್ಲ ಎನ್ನುವ ನಿರುಮ್ಮಳ ಭಾವ. ಸಚ್ಚಿದಾನಂದ ಹೆಗಡೆ ಫೊಟೊ : ಸ್ವಯಂಪ್ರಭಾ