Advertisement

ರಾತ್ರಿ ಆಟೋಗಾಗಿ ಕಾದು ಕೂತ ಹುಡುಗೀನ ನೋಡಿದಾಗ ನಿಮ್ಮ ಸೋದರಿ ನೆನಪಾಗಲಿ

03:50 AM Jul 07, 2017 | |

ಯಾಕೋ ಈ ಸ್ತ್ರೀ, ಹೆಣ್ಣು, ಹುಡುಗಿ ಅಂತ ಮಾತಾಡುವಾಗೆಲ್ಲ ಕೆ.ಎಸ್‌.ನ ಮತ್ತೆ ಮತ್ತೆ ಎದೆಯ ತೋಟದ ತುಂಬೆಲ್ಲಾ ಕೆಂಗುಲಾಬಿ ಅರಳಿಸಿಬಿಡುತ್ತಾರೆ. ಕುವೆಂಪು ತೀವ್ರವಾಗಿ ಕಾಡಿಬಿಡುತ್ತಾರೆ.  ಹೆಣ್ಣನ್ನು ಶುದ್ಧ ಮತ್ತು ನಿಷ್ಕಳಂಕ ಅಂತಃಕರಣದಿಂದ ನೋಡುವ, ಒಳಗೊಳ್ಳುವ ಕೆಎಸ್‌ನ ದೃಷ್ಟಿಕೋನ, ಯಾಕೋ ನಮ್ಮಲ್ಲಿ ಮಾಯವಾಗಿಯೇ ಬಿಟ್ಟಿದೆ ಅನ್ನಿಸುತ್ತಿದೆ. ಅಕ್ಕಿ ಆರಿಸುವಾಗ ಸಿಕ್ಕ ನುಚ್ಚಿನ ನಡುವೆ ಬಂಗಾರವಿಲ್ಲದ ಬೆರಳು… ತಗ್ಗಿರುವ ಕೊರಳಿನ ಸುತ್ತ ಕರಿಮಣಿ ಒಂದೇ ಸಿಂಗಾರ ಕಾಣದ ಹೆರಳು… ಹೀಗೆ ಹೆಣ್ಣಿನ ಅಂತರಂಗದ ಗುಡಿಯೊಳಗೆ ಹೊಕ್ಕುತ್ತಾ ಅವಳ ಬಡತನವನ್ನೇ ಹೇಳಿಬಿಡುವ ಹೆಣ್ಣಿನ ಚಿತ್ರ ಸ್ತ್ರೀಯ ಕುರಿತು ಏಕಕಾಲಕ್ಕೆ ಗೌರವವನ್ನೂ, ನಿಷ್ಕಳಂಕ ಪ್ರೀತಿಯನ್ನೂ ಹುಟ್ಟಿಸಿಬಿಡುವ ಪರಿಯೇ ಚೆಂದ ಅನ್ನಿಸುತ್ತೆ. 

Advertisement

ಮೊನ್ನೆ ದೂರದ ಗೆಳತಿಯೊಬ್ಬಳ ಬಳಿ ವಾಟ್ಸಾಪ್‌ನಲ್ಲಿ ಅದ್ಯಾವುದರ ಬಗ್ಗೆಯೋ ಮಾತಾಡುತ್ತಿರುವಾಗ, “ಹಿಂದೆ ನಮ್ಮ ಕಾಲೇಜಿನಲ್ಲಿ ಕಲಿಸುತ್ತಿದ್ದ ಉಪನ್ಯಾಸಕರೊಬ್ಬರು ಈಗ ನಿಮ್ಮೂರಿನ ಕಾಲೇಜಿಗೆ ಬಂದಿದ್ದಾರಲ್ಲ? ಹೇಗಿದ್ದಾರೆ ಚೆನ್ನಾಗಿ ಕಲಿಸುತ್ತಾರಾ? ಕಥೆ ಎಲ್ಲಾ ಚೆನ್ನಾಗ್‌ ಹೇಳ್ತಾರಾ ಕ್ಲಾಸಲ್ಲಿ’ ಅಂತ ಕೇಳಿದೆ.

“ಪಾಠ ಏನೋ ತೊಂದ್ರೆ ಇಲ್ಲ ಮಾಡ್ತಾರೆ. ಆದರೆ, ಅವರು ಹೆಣ್ಣುಮಕ್ಕಳನ್ನು ನೋಡೋ ದೃಷ್ಟಿ ಸರಿಯಿಲ್ಲ. ವಿಚಿತ್ರ ಹಾವಭಾವ ಹೊಕ್ಕಿಬಿಡುತ್ತೆ ನಮ್ಮತ್ರ ಮಾತಾಡೋವಾಗ ಹುಡುಗಿಯರನ್ನು ಸಹಜವಾಗಿ ನೋಡುವ ಕಣ್ಣುಗಳು ಅವರಿಗಿಲ್ಲವೇನೋ? ಅದಕ್ಕೆ ಅವರನ್ನು ಕಂಡ್ರೆ ತುಂಬಾ ಹುಡುಗಿಯರಿಗೆ ಆಗಲ್ಲ’ ಅಂತ ಸ್ನೇಹಿತೆ ವಾಟ್ಸಾಪ್‌ ಸಂದೇಶ ಕೊಟ್ಟಾಗ ನಾನು ದಂಗಾಗಿ ಹೋದೆ. ಅದೇ ಉಪನ್ಯಾಸಕ ನಮಗೂ ಚೆನ್ನಾಗಿ ಪಾಠ ಮಾಡ್ತಾ ಇದ್ದುದು ನೆನಪಿಗೆ ಬಂತು. ಆದರೆ ನಮಗೆ ಬುದ್ಧಿ ಬರುತ್ತಲೇ ಹೋದಂತೆಲ್ಲ, ಯೋಚಿಸುವ ಮೆಚೂರಿಟಿ ಬಂದಂತೆಲ್ಲ ಇವನದ್ದು ಒಣ ಉಪದೇಶ, ಕ್ಲಾಸ್‌ನಲ್ಲಿ ರಾಷ್ಟ್ರೀಯ ನಾಯಕನಂತೆ ಮಾತಾಡುವ ಈತ ಹೊರಗೆ ಬೇರೆಯದ್ದೇ ಮುಖವಾಡ ಹಾಕುತ್ತಾನೆ, ಹೊರಗೆ ಪುಣ್ಯಕೋಟಿಯ ಕತೆ ಹೇಳುತ್ತ ನಾನು ಪುಣ್ಯಕೋಟಿಯ ಮನಸ್ಸಿನಂಥ‌ವನು ಅಂತ ಸಾರುವ ಈತ ತನ್ನ ವೈಯಕ್ತಿಕ ಲೋಕದಲ್ಲಿ ಅಥವಾ ಚೆಂದದ ಹುಡುಗಿಯೊಬ್ಬಳನ್ನು ನೋಡುತ್ತ ಹೋಗುವ ಪ್ರಕ್ರಿಯೆಯಲ್ಲಿ ಏನೇನೋ ಆಗಿಬಿಡುತ್ತಾನೆ… ಅವನೊಳಗೆ ನರಿಯೋ, ನಾಯಿಯೋ, ಆಸೆಯಿಂದ ಕೊಬ್ಬಿದ ಹುಲಿಯೋ, ಆ ಕ್ಷಣ ಚೇತನವಾಗುತ್ತ, ಮತ್ತೂ ಮತ್ತೂ ಹಸಿಯುತ್ತಾ ಹೋಗುತ್ತದೆ.

ಕ್ಲಾಸ್‌ನಲ್ಲಿ ಈತ ಬಿಡುವ ಉಪದೇಶಗಳ ಬಗ್ಗೆ ಸಮ್ಮೊàಹನಕ್ಕೆ ಒಳಗಾಗಿ ಇವನು ಭಾರೀ ಒಳ್ಳೆ ಮನುಷ್ಯ ಅಂತಲೂ, ಈತ ಹೆಣ್ಣಿನ ಕುರಿತಾಗಿ ಮಾತಾಡುವಾಗ ಅಗಾಧ ಗೌರವದಿಂದ ಮಾತಾಡೋದನ್ನ ನೋಡಿದಾಗ ಹೆಣ್ಣನ್ನು ಎಲ್ಲರೂ ಇದೇ ರೀತಿಯಲ್ಲಿ ತುಂಬು ಗೌರವದಿಂದ ಕಂಡರೆ ಅತ್ಯಾಚಾರವೆನ್ನುವ ಪದವೇ ಕಿವಿಗೆ ಕೇಳುತ್ತಿರಲಿಲ್ಲವೇನೋ ಅನ್ನಿಸಿಬಿಡುತ್ತಿತ್ತು. ಆದರೆ, ಇವೆಲ್ಲ ಕ್ಲಾಸಿನ ಬೋರ್ಡಿನ ಎದುರು, ಒಂದ್ಹ‌ತ್ತು ಎಳೆ ಮನಸ್ಸುಗಳ ಎದುರು ಮಾತ್ರ ಇವನು ಹಾಕುವ ಪೊಗದಸ್ತಾದ ವೇಷ ಅನ್ನಿಸಿದಾಗ ಆ ಉಪನ್ಯಾಸಕನ ಬಗ್ಗೆ ಯಾರಿಗಾದರೂ ಗೌರವ ಉಳಿಯುತ್ತದಾ ಹೇಳಿ? ನಂಗೆ ತುಂಬಾ ಅಚ್ಚರಿಯಾಗೋದು ಅಂದ್ರೆ ಆ ಉಪನ್ಯಾಸಕನಿಗೂ ಮದುವೆ ಆಗಿ ಇಬ್ಬರು ಹೆಣ್ಣು ಮಕ್ಕಳೂ ಇದ್ದಾರೆ. ತನ್ನ ಮಕ್ಕಳನ್ನು ಯಾವ ಹುಡುಗು ಕಣ್ಣುಗಳು ಅಪ್ಪಿತಪ್ಪಿಯೂ ನೋಡಬಾರದು ಅಂತೆಲ್ಲ ಜೋಪಾನ ಮಾಡುವ ಈತನಿಗೆ ತನ್ನ ಕಾಲೇಜಿನ ಹುಡುಗಿಯರನ್ನು ಕಂಡಾಗ, ಸ್ಟಾಫ‌ು ರೂಮಿನಲ್ಲಿ ಗಮ್‌ ಗಮ್‌ ಅಂತ ಪರಿಮಳ ಹರಡಿಕೊಂಡು ಕೂತ ಇಂಗ್ಲಿಷ್‌ ಮೇಡಂ ಅನ್ನು ನೋಡಿದಾಗ ತಾನು ಕ್ಲಾಸಿನಲ್ಲಿ ಬಿಟ್ಟ ವೇದಾಂತ ಸೂತ್ರಗಳೆಲ್ಲಾ, ಹೆಣ್ಣನ್ನು ನೋಡುವ ಗೌರವಾಮೃತದ‌ ಸವಿಮಾತುಗಳೆಲ್ಲಾ ನೆನಪಾಗೋದಿಲ್ಲವಾ? ಇವನು ಅಷ್ಟು ಬೇಗ ಪುಣ್ಯಕೋಟಿಯ ವೇಷದಲ್ಲಿಯೇ ಹುಲಿರಾಯನೊಳಗೆ ಪರಕಾಯ ಪ್ರವೇಶ ಮಾಡಿಬಿಟ್ಟನಾ? ನನ್ನ ಸ್ನೇಹಿತೆಯೇ ಅವರು ಹೆಣ್ಣು ಮಕ್ಕಳನ್ನು ನೋಡುವ ದೃಷ್ಟಿಕೋನವೇ ಸರಿಯಿಲ್ಲ ಎನ್ನುವ ವಾಕ್ಯವನ್ನು ಹುಡುಗಿಯೊಬ್ಬಳೊಳಗೆ ಹುಟ್ಟಿಸಿಬಿಡುವಂತೆ ಮಾಡಿದನಲ್ಲ, ಈ ಪುಣ್ಯಾತ್ಮ, ಇವನಿಗೆ ಯಾಕೆ ನಂಗೂ ಮಗಳಿದ್ದಾಳೆ, ಹೆಂಡತಿಯಿದ್ದಾಳೆ, ಅವರಿಗೂ ಹೀಗೇ ನೋಡಲ್ವಾ ಯಾರಾದರೂ ಗಂಡು ಹುಡುಗ- ಅಂತ ಅನ್ನಿಸಲಿಲ್ಲವಾ? ಅಥವಾ ಮನೆಮನೆಯಲಿ ದೀಪ ಉರಿಸಿ. ಹೊತ್ತು ಹೊತ್ತಿಗೆ ಅನ್ನ ಉಣಿಸಿ ತಂದೆ ಮಗುವ ತಬ್ಬಿದಾಕೆ… ನಿನಗೆ ಬೇರೆ ಹೆಸರು ಬೇಕೆ ಸ್ತ್ರೀ ಎಂದರೆ ಅಷ್ಟೇ ಸಾಕೇ ಅಂತ ಹೆಣ್ಣೊಬ್ಬಳನ್ನು ಬಣ್ಣಿಸುತ್ತಿದ್ದ ಕವಿ ಜಿ.ಎಸ್‌.ಎಸ್‌. ಸಾಲುಗಳನ್ನು ಕ್ಲಾಸಿನಲ್ಲಿ ರಮ್ಯವಾಗಿ ಒದರುತ್ತಿದ್ದ ಇವನಿಗೆ ಈಗ ಆ ಸಾಲುಗಳೇಕೆ ನೆನಪಾಗಿಲ್ಲ? ಅನ್ನೋ ಪ್ರಶ್ನೆ ಹಠಾತ್ತಾಗಿ ಮತ್ತು ಪ್ರಖರವಾಗಿ ಕಾಡಿಬಿಡುತ್ತದೆ. ಉತ್ತರಗಳು ನನ್ನೊಳಗಿಲ್ಲ.

ಕಾಲೇಜಿನಲ್ಲಿ ತನ್ನ ಕ್ಲಾಸಿನಲ್ಲಿಯೇ ಓದುತ್ತಿದ್ದ ಚಂದದ ಹುಡುಗಿಯೊಬ್ಬಳನ್ನು ಮನಸಾರೆ ಇಷ್ಟ ಪಟ್ಟ, ಪ್ರತೀಕ್ಷಣವೂ ಅವಳನ್ನೇ ಧ್ಯಾನಿಸುತ್ತ, ಆಸ್ವಾದಿಸುತ್ತ ಹೋದ ಅವಳದ್ದೇ ವಯಸ್ಸಿನ ಹುಡುಗನೊಬ್ಬನ ತಲ್ಲಣಗಳಾಗಿದ್ದರೆ ನಾನು ಎಷ್ಟು ಬೇಕಾದರೂ ವರ್ಣಿಸುತ್ತಿದ್ದೆ. ಆದರೆ ವಯಸ್ಸಾದ ಉಪನ್ಯಾಸಕನೊಬ್ಬ ತನ್ನ ಮಗಳ ವಯಸ್ಸಿಗೆ ಬಂದ ಹುಡುಗಿಯೊಬ್ಬಳನ್ನು ಯಾಕೆ ಆ ರೀತಿ ನೋಡುತ್ತಾನೆ, ಯಾಕೆ ಅವಳ ಮೈಯನ್ನೇ ತಿನ್ನುವಂತೆ ನೋಡುತ್ತಾನೆ ಎನ್ನುವುದನ್ನು ವರ್ಣಿಸೋಕೆ ಸಾಧ್ಯವಿಲ್ಲ ನನಗೆ. ವರ್ಣಿಸುವ ಸಂಗತಿಯೂ ಅದಲ್ಲ ಬಿಡಿ. 

Advertisement

ಯಾಕೋ ಈ ಸ್ತ್ರೀ, ಹೆಣ್ಣು, ಹುಡುಗಿ ಅಂತ ಮಾತಾಡುವಾಗೆಲ್ಲ ಕೆಎಸ್‌ನ ಮತ್ತೆ ಮತ್ತೆ ಎದೆಯ ತೋಟದ ತುಂಬೆಲ್ಲಾ ಕೆಂಗುಲಾಬಿ ಅರಳಿಸಿಬಿಡುತ್ತಾರೆ. ಕುವೆಂಪು ತೀವ್ರವಾಗಿ ಕಾಡಿಬಿಡುತ್ತಾರೆ. ಹೆಣ್ಣನ್ನು ಶುದ್ಧ ಮತ್ತು ನಿಷ್ಕಳಂಕ ಅಂತಃಕರಣದಿಂದ ನೋಡುವ, ಒಳಗೊಳ್ಳುವ ಕೆಎಸ್‌ನ ದೃಷ್ಟಿಕೋನ, ಯಾಕೋ ನಮ್ಮಲ್ಲಿ ಮಾಯವಾಗಿಯೇ ಬಿಟ್ಟಿದೆ ಅನ್ನಿಸುತ್ತಿದೆ. ಅಕ್ಕಿ ಆರಿಸುವಾಗ ಸಿಕ್ಕ ನುಚ್ಚಿನ ನಡುವೆ ಬಂಗಾರವಿಲ್ಲದ ಬೆರಳು… ತಗ್ಗಿರುವ ಕೊರಳಿನ ಸುತ್ತ ಕರಿಮಣಿ ಒಂದೇ ಸಿಂಗಾರ ಕಾಣದ ಹೆರಳು… ಹೀಗೆ ಹೆಣ್ಣಿನ ಅಂತರಂಗದ ಗುಡಿಯೊಳಗೆ ಹೊಕ್ಕುತ್ತಾ ಅವಳ ಬಡತನವನ್ನೇ ಹೇಳಿಬಿಡುವ ಹೆಣ್ಣಿನ ಚಿತ್ರ ಸ್ತ್ರೀಯ ಕುರಿತು ಏಕಕಾಲಕ್ಕೆ ಗೌರವವನ್ನೂ, ನಿಷ್ಕಳಂಕ ಪ್ರೀತಿಯನ್ನೂ ಹುಟ್ಟಿಸಿಬಿಡುವ ಪರಿಯೇ ಚೆಂದ ಅನ್ನಿಸುತ್ತೆ. ಪ್ರೇಯಸಿ ಸಹಧರ್ಮಿಣಿ… ಹೆಂಡತಿ ತಾಯಿ… ಲೌಕಿಕ ಸಂಬಂಧಕ್ಕೆ  ಬಾಯಿ ತೊದಲಿದಂತೆ… ಅಂತ ಹೆಣ್ಣಲ್ಲೂ ತನ್ನ ಹೆಂಡತಿಯಲ್ಲೂ ತಾಯಿಯಲ್ಲೇ ಕಂಡ, ಜನನಿಯ ಜೋಗುಳ ವೇದದ ಘೋಷ… ಜನನಿಗೆ ಜೀವವೂ ನಿನ್ನಾವೇಶ.. ಅಂತ ಪ್ರತೀ ಹೆಣ್ಣಿನಲ್ಲೂ ತಾಯಿಯ ತುಂಬಿದ ಚೈತನ್ಯವನ್ನೇ ಕಂಡ ಕುವೆಂಪು ಮತ್ತೆ ಮತ್ತೆ ನೆನಪಾಗಿಯೇ ಆಗುತ್ತಾರೆ. ಯಾಕೆಂದರೆ, ಇವರೆಲ್ಲಾ ಬದುಕಿದಂತೆಯೇ ಬರೆದವರು. ಬರೆದಂತೆ ಬದುಕಿದವರು.

ವಿಚಿತ್ರ ಗೌರವದಿಂದಲೇ ಹೆಣ್ಣನ್ನು ನಾವು ಒಳಗೊಳ್ಳಬೇಕು. ಅಥವಾ ಒಂದು ಹೆಣ್ಣು ಜೀವ ಕಂಡ ಕೂಡಲೇ ಎದ್ದು ನಿಂತು ಮಹಾತಾಯಿ… ಶ್ರೀದೇವಿ ಅಂತ ನಮಸ್ಕಾರ ಬೀಳಬೇಕು ಅಂತೆಲ್ಲಾಹೇಳುತ್ತಿಲ್ಲ. ಹೆಣ್ಣಿನ ಕುರಿತ ಆ ಗೌರವ ಸಹಜವಾಗಿಯೇ ಬರಬೇಕು. ತುಂಬಿದ ಸಂತೆಯಲ್ಲಿ ತರಕಾರಿ ಹೆಂಗಸೊಂದಿಗೆ ಚೌಕಾಶಿ ಮಾಡುವವಳನ್ನು ನೋಡುತ್ತಲೇ ದೂರದೂರಿನಲ್ಲಿರುವ ನಮ್ಮ ಅಕ್ಕ ನೆನಪಾಗಬೇಕು. ಒಂಟಿ ರಸ್ತೆಯ ಇರುಳಿನಲ್ಲಿ ರಿಕ್ಷಾಗಾಗಿ ಕಾಯುತ್ತ  ಕೂತು ಚಡಪಡಿಕೆಯಲ್ಲಿರುವ ಚಂದದ ಹುಡುಗಿಯನ್ನು ನೋಡುವಾಗ ನಮ್ಮ ಪುಟ್ಟ ತಂಗಿ ನೆನಪಾಗಬೇಕು. ಬಸ್ಸಿನಲ್ಲಿ ಸೀಟಿಲ್ಲದೇ ತ್ರಾಸದಿಂದ ನಿಂತ ಹೆಂಗಸನ್ನು ಕಂಡಾಗ ನಮ್ಮ ಅಮ್ಮ ನೆನಪಾಗಿ ಮರುಕ್ಷಣದಲ್ಲಿಯೇ ಆ ಹೆಂಗಸಿಗೆ ಸೀಟುಬಿಟ್ಟುಕೊಡಬೇಕು. ಒಟ್ಟಾರೆ ಹೆಣ್ಣು ಅನ್ನುವುದು ನಮಗೆ ಸಹಜವಾಗಿ ಮನುಷ್ಯ ಸಂಬಂಧಗಳನ್ನು ಪೊರೆಯುವ ಮಮತೆಯಾಗಿ ಕಂಡರೆ ಅಷ್ಟೇ ಸಾಕು.

– ಪ್ರಸಾದ್‌ ಶೆಣೈ

Advertisement

Udayavani is now on Telegram. Click here to join our channel and stay updated with the latest news.

Next