Advertisement

ನಿನಗಿರುವ ವಿವೇಕ, ಆಗ ನನಗೂ ಇರಲಿಲ್ಲ…

10:34 PM Sep 28, 2019 | mahesh |

ಕರಮಚಂದ ಗಾಂಧಿ ಹಾಗೂ ಪುತಲೀಬಾಯಿಯ ಮಗನಾಗಿ, 1969 ಅಕ್ಟೋಬರ್‌ 2ರಂದು ಪೋರಬಂದರ್‌ನಲ್ಲಿ ಗಾಂಧೀಜಿ ಜನಿಸಿದರು-
ಇದು, ಗಾಂಧೀಜಿಯ ಕುರಿತು ಎಲ್ಲರೂ ಓದಿರುವ ಸಾಲು. ಮಹಾತ್ಮ, ರಾಷ್ಟ್ರ ಪಿತ, ಅರೆಬೆತ್ತಲೆ ಫ‌ಕೀರ, ಬಾಪೂ ಎಂದೆಲ್ಲ ಕರೆಸಿಕೊಂಡವರು ಗಾಂಧೀಜಿ. ಅವರ ಬದುಕಿನಲ್ಲಿ ನಡೆದ, ಅವರ ಸಹನೆ, ಶಿಸ್ತು, ಸಮಯಪಾಲನೆ, ಅವರ ಮಾತಿನಿಂದ ಆದ ಬದಲಾವಣೆಯನ್ನು
ಹೇಳುವ ಸ್ವಾರಸ್ಯಕರ ಪ್ರಸಂಗಗಳ ವಿವರಣೆ ಇಲ್ಲಿದೆ…

Advertisement

ಗಾಂಧಿ ಅಂದಾಕ್ಷಣ ನಮ್ಮ ಕಣ್ಮುಂದೆ ಎರಡು ಚಿತ್ರಗಳು ಬಂದು ನಿಲ್ಲುತ್ತವೆ. ಒಂದು-ಬೊಚ್ಚು ಬಾಯಿನ ಮಹಾತ್ಮಗಾಂಧಿಯದ್ದು. ಇನ್ನೊಂದು-ಗಾಂಧಿ ಟೋಪಿಯದ್ದು. ಗಾಂಧೀಜಿಯವರಷ್ಟೇ ಅಥವಾ ಅವರಿಗಿಂತ ಒಂದು ಕೈ ಜಾಸ್ತಿ ಎನ್ನುವಷ್ಟು ಹೆಸರು ಮಾಡಿರುವುದು ಗಾಂಧಿಟೋಪಿ. ಒಂದು ಕಾಲದಲ್ಲಂತೂ, ಗಾಂಧಿ ಟೋಪಿ ಧರಿಸಿದವರನ್ನೆಲ್ಲ ದೇಶಭಕ್ತರು ಎಂದು ನಂಬಲಾಗುತ್ತಿತ್ತು. ನಂತರ ಆ ಹೆಗ್ಗಳಿಕೆಯನ್ನು ದೇಶಭಕ್ತರಿಂದ ನಮ್ಮ ಕಪಟ ರಾಜಕಾರಣಿಗಳು “ಹೊಡೆದುಕೊಂಡರು’.

ವಿಷಯ ಅದಲ್ಲ. ಹಿಂಬಾಲಕರು ಅನ್ನಿಸಿಕೊಂಡ ಲಕ್ಷ ಲಕ್ಷ ಜನರು ದೊಡ್ಡ ಪ್ರೀತಿ- ಭಕ್ತಿ-ಗೌರವದಿಂದ, ಒಂದು ಹೆಮ್ಮೆಯಿಂದ ಗಾಂಧಿ ಟೋಪಿ ಧರಿಸಿದರು ತಾನೆ? ಹಾಗಿದ್ದರೂ ಗಾಂಧೀಜಿಯವರು ಅದೇಕೆ ಗಾಂಧಿಟೋಪಿ ಧರಿಸಲಿಲ್ಲ? ಟೋಪಿ ಧರಿಸಿ ಪ್ರಾರ್ಥನೆಗೆ ಕೂತ, ಭಾಷಣಕ್ಕೆ ನಿಂತ, ಪ್ರತಿಭಟನೆಗೆ ಹೊರಟ ಗಾಂಧೀಜಿಯ ಒಂದೇ ಒಂದು ಚಿತ್ರವೂ ನೋಡಲು ಸಿಗುವುದಿಲ್ಲವಲ್ಲ ಏಕೆ? ಗಾಂಧೀಜಿಯವರು ಎಂದೂ ಟೋಪಿ ಧರಿಸಲೇ ಇಲ್ಲವೇ? ಅಥವಾ ಟೋಪಿ ಧರಿಸಿದ ಚಿತ್ರವನ್ನು ತೆಗೆಯಲು ಯಾರಿಗೂ ಅವಕಾಶ ಕೊಡಲಿಲ್ಲವೇ? ಇಂಥವೇ ಕುತೂಹಲಕರ ಪ್ರಶ್ನೆಗಳಿಗೆ ಇಲ್ಲಿ ಉತ್ತರವಿದೆ.

ಏನೆಂದರೆ- ಗಾಂಧೀಜಿಯವರೂ ಆರಂಭದಲ್ಲಿ ಉಳಿದೆಲ್ಲರಂತೆ ಹೆಮ್ಮೆಯಿಂದಲೇ ಟೋಪಿ ಧರಿಸುತ್ತಿದ್ದರು. ಒಂದು ದಿನ ಅವರು ಪ್ರಾರ್ಥನೆಗೆ ಕೂರುವ ಹೊತ್ತಿನಲ್ಲಿ-ಮೈತುಂಬ ಅತ್ತರು ಪೂಸಿಕೊಂಡ ಫ‌ುಡಾರಿಯೊಬ್ಬ ಆ ಸಭೆಗೆ ಠಾಕುಠೀಕಾಗಿ ನಡೆದು ಬಂದ. ಪ್ರತಿ ಐದೈದು ನಿಮಿಷಕ್ಕೂ ಆತ ಎಲ್ಲರಿಗೂ ಕಾಣುವಂತೆ ಟೋಪಿಯನ್ನು ಸರಿಮಾಡಿಕೊಳ್ಳುತ್ತಿದ್ದ.

ಅದನ್ನು ಕಂಡ ಮರುಕ್ಷಣವೇ, ಗಾಂಧೀಜಿ ತಮ್ಮ ಟೋಪಿಯನ್ನು ಕಳಚಿಟ್ಟರು. ಜತೆಗಿದ್ದವರು ಬೆರಗಿನಿಂದ-ಗಾಂಧೀಜಿ, ಇದ್ಯಾಕೆ ನೀವು ಟೊಪ್ಪಿ ತೆಗೆದು ಕೆಳಗಿಟ್ಟಿರಿ ಎಂದಾಗ- “ಈಗ ತಾನೆ ಒಬ್ಬ ಕಡುಭ್ರಷ್ಟನ ತಲೆಯ ಮೇಲೆ ಗಾಂಧಿ ಟೋಪಿ ಇದ್ದುದನ್ನು ಕಂಡೆ. ಇನ್ನು ಮುಂದೆ ನನ್ನ ತಲೆಯಲ್ಲಿ ಗಾಂಧಿ ಟೊಪ್ಪಿಗೆ ಅವಕಾಶವಿಲ್ಲ’ ಎಂದರಂತೆ!

Advertisement

ಗಾಂಧೀಜಿಯವರು ಹರಿಜನ ಸೇವಾ ಆಂದೋಲನ ಆರಂಭಿಸಿದ್ದ ದಿನಗಳಲ್ಲಿ ನಡೆದ ಪ್ರಸಂಗ ಇದು. ಒಂದು ದಿನ ಮಹಿಳೆಯೊಬ್ಬಳು ತನ್ನ ಒಡವೆಗಳನ್ನು ದಾನ ಮಾಡುವ, ಆ ಮೂಲಕ ಹರಿಜನ ಸೇವಾ ಚಳವಳಿಗೆ ತನ್ನ ಕಿರುಕಾಣಿಕೆ ಸಲ್ಲಿಸುವ ಉದ್ದೇಶದಿಂದ, ಗಾಂಧೀಜಿಯವರನ್ನು ತನ್ನ ಮನೆಗೆ ಕರೆದುಕೊಂಡು ಹೋದಳು. ವಿಷಯ ತಿಳಿದ ಪಕ್ಕದ ಮನೆಯ ಹೆಂಗಸು, ತಾನೂ ಬಂದದ್ದಲ್ಲದೆ, ತನ್ನಲ್ಲಿದ್ದ ಅಷ್ಟೂ ಚಿನ್ನದ ಒಡವೆಗಳನ್ನು ಗಾಂಧೀಜಿಯವರಿಗೆ ಕೊಟ್ಟುಬಿಟ್ಟಳು. ನಂತರ ಆ ಮಹಿಳೆಯ ಪತಿಯೂ ಅಲ್ಲಿಗೆ ಬಂದು ಕೈ ಮುಗಿದ. ಗಾಂಧೀಜಿಯವರಿಗೆ ಪರಿಚಯ ಹೇಳಿಕೊಂಡ. ಗಾಂಧೀಜಿ ಕೇಳಿದರು: “ನಿಮ್ಮ ಹೆಂಡತಿ, ತನ್ನೆಲ್ಲ ಚಿನ್ನದ ಒಡವೆಗಳನ್ನೂ ನನಗೆ ದಾನವಾಗಿ ಕೊಟ್ಟಿ¨ªಾರೆ. ಈ ಸಂಗತಿ ನಿಮಗೆ ಗೊತ್ತಿದೆ ತಾನೆ? ಹೀಗೆ ಒಡವೆಗಳನ್ನು ಬಿಚ್ಚಿಕೊಡಲು ನೀವು ಆಕೆಗೆ ಅನುಮತಿ ನೀಡಿದ್ದೀರಾ?’ ಆ ಪತಿರಾಯ ಹೀಗೆಂದ: “ಹೌದು, ಆಕೆ ನನಗೆ ಮೊದಲೇ ವಿಷಯ ತಿಳಿಸಿದಳು. ಒಡವೆಗಳನ್ನು ದಾನ ಮಾಡಲು ನನ್ನ ಅನುಮತಿಯನ್ನೂ ಬೇಡಿದಳು. ಆದರೆ, ಒಡವೆಗಳು ಆಕೆಯವು. ಆಕೆ ಅವುಗಳನ್ನು ಯಾರಿಗೆ ಬೇಕಾದರೂ ಕೊಡಲಿ. ಅದನ್ನು ತಡೆಯಲು ನನಗೆ ಅಧಿಕಾರವಿಲ್ಲ ಅಂದ್ಕೊತೀನಿ’ ಈ ಮಾತು ಕೇಳಿ- “ಎಲ್ಲ ಗಂಡಂದಿರೂ ನಿಮ್ಮಷ್ಟು ವಿವೇಕಿಗಳಾಗಿರೊಲ್ಲ’ ಎಂದು ಉದ್ಗರಿಸಿದ ಗಾಂಧೀಜಿ ಮುಂದುವರಿದು- “ಈಗ ನಿಮ್ಮ ವಯಸ್ಸೆಷ್ಟು?’ ಅಂದರು.

ಆ ಪತಿರಾಯ ಸ್ವಲ್ಪ ಸಂಕೋಚದಿಂದ- “ನನಗೀಗ 30 ವರ್ಷ’ ಅಂದ. ತಕ್ಷಣವೇ ಗಾಂಧೀಜಿ- “ಆ ವಯಸ್ಸಿನಲ್ಲಿ ನಿಮಗಿರುವ ವಿವೇಕ ನನಗೂ ಇರಲಿಲ್ಲ’ ಎಂದು ಮತ್ತೂಮ್ಮೆ ಉದ್ಗರಿಸಿದರು.

ಗಾಂಧೀಜಿಯವರ ಅನುಯಾಯಿಗಳ ಗುಂಪಿನಲ್ಲಿ ಭನಸಾಲಿ ಎಂಬ ಅಧ್ಯಾಪಕರೂ ಇದ್ದರು. ಬಾಪೂ ಅವರ ಮಾತು ವೇದಕ್ಕಿಂತ ದೊಡ್ಡದು ಎಂದೇ ಅವರು ನಂಬಿದ್ದರು. ಪ್ರಾಧ್ಯಾಪಕರಾಗಿದ್ದರಲ್ಲ, ಅದೇ ಕಾರಣಕ್ಕೋ ಏನೋ, ಭನಸಾಲಿ ಸ್ವಭಾವದಿಂದ ಸ್ವಲ್ಪ ವಾಚಾಳಿ. ಆದರೆ ಅವರ ಮಾತು- ಗಾಂಧೀಜಿಯ ತತ್ವಚಿಂತನೆ, ಸತ್ಯ, ಅಹಿಂಸೆಗಳ ಬಗ್ಗೆಯೇ ಇರುತ್ತಿತ್ತು. ಒಮ್ಮೆ ಆಶ್ರಮದಲ್ಲಿದ್ದ ಇತರರೂ ಭನಸಾಲಿಯವರ ವಾಚಾಳಿತನದ ಬಗ್ಗೆ ಬಾಪೂ ಅವರ ಬಳಿ ದೂರಿದ್ದರು. ಒಂದೆರಡು ಸಲ ಬಾಪೂ, ಭನಸಾಲಿಯರಿಗೆ ಶುಕ್ರವಾರ ಮೌನವ್ರತ ಕೈಗೊಳ್ಳಲಿಕ್ಕೆ ಹೇಳಿದ್ದರು. ಅದಕ್ಕೆ ಒಪ್ಪಿದ ಭನಸಾಲಿ ಶುಕ್ರವಾರ ಮಾತೇ ಆಡುತ್ತಿರಲಿಲ್ಲ ನಿಜ. ಆದರೆ ಗುರುವಾರ, ಶನಿವಾರ ತಲೆ ಸಿಡಿಯುವಷ್ಟು ಮಾತಾಡಿ, ಜತೆಗಿದ್ದವರಿಗೆ ಕಿರಿಕಿರಿ ಉಂಟುಮಾಡುತ್ತಿದ್ದರು.

ಇದನ್ನು ಗಮನಿಸಿದ ಗಾಂಧೀಜಿ, ಒಮ್ಮೆ ತಮ್ಮ ವಾಡಿಕೆಯ ಪ್ರೇಮದಲ್ಲಿ ಸ್ವಲ್ಪ ಕೋಪ ಬೆರೆಸಿ ಹೇಳಿದರು: “ಭನಸಾಲಿ, ನಿನ್ನ ಮಾತು ಬಹಳವಾಯಿತು. ತುಟಿ ಹೊಲಿದುಕೊಂಡು ಇರು’ ಗಾಂಧೀಜಿಯ ಮಾತು ಅಂದರೆ ವೇದವಾಕ್ಯ ಎಂದು ನಂಬಿದ್ದರಲ್ಲ? ಅದೇ ಕಾರಣದಿಂದ, ಭನಸಾಲಿ ತಮ್ಮ ಕೋಣೆಗೆ ಹೋದವರೇ ಸೂಜಿದಾರ ತೆಗೆದುಕೊಂಡು ಎರಡೂ ತುಟಿಗಳನ್ನು ಜೋಡಿಸಿಕೊಂಡು ಹೊಲಿದುಕೊಂಡು ಬಿಟ್ಟರು. ಗಾಂಧೀಜಿಯ ಭಕ್ತಿ, ವಿಶ್ವಾಸದ ನೆಪದಲ್ಲಿ ದೇಹವನ್ನು ದಂಡಿಸಿದರೆ ಅದು ತಡೆದೀತೆ? ತುಟಿಗಳು ಊದಿಕೊಂಡವು. ರಕ್ತಸ್ರಾವ ಎಷ್ಟೋ ಹೊತ್ತು ಮುಂದುವರಿದಿತ್ತು.ಆದರೂ ಭನಸಾಲಿ ನೋವಿನಿಂದ ಚೀರಲಿಲ್ಲ.

ಸಾಯಂಕಾಲ ಬಂತು. ಪ್ರಾರ್ಥನೆಯ ಹೊತ್ತಾಯಿತು. ಏನು ಬಿಟ್ಟರೂ ಪ್ರಾರ್ಥನೆಯನ್ನು ಬಿಡುತ್ತಿರಲಿಲ್ಲ ಭನಸಾಲಿ. ಏಕೆಂದರೆ, ಪ್ರತಿ ಸಭೆಯಲ್ಲಿ ಗಾಂಧೀಜಿ ಎರಡು ಹೊಸ ಮಾತುಗಳನ್ನು ಹೇಳುತ್ತಿದ್ದರು. ಭನಸಾಲಿ, ಕರವಸ್ತ್ರದಿಂದ ಬಾಯಿ ಮುಚ್ಚಿಕೊಂಡು ಪ್ರಾರ್ಥನಾ ಸಭೆಗೆ ನಡೆದರು. ದಾರಿಯಲ್ಲಿ ಸ್ನೇಹಿತರು ಕಂಡಾಗ ತಲೆಬಾಗಿ ನಮಸ್ಕರಿಸುತ್ತಿದ್ದರು. ಗಾಂಧೀಜಿಯವರು ಅಂದು ಯಾಕೋ ಎಂದಿಗಿಂತ ಸಭೆಗೆ ಬೇಗ ಬಂದವರೇ-

ಭನಸಾಲಿಯ ಅವಸ್ಥೆ ಕಂಡು – “ಅದೇನು ಭನಸಾಲಿ, ಕೈ ತೆಗೆಯಿರಿ’ ಎಂದರು. ಭನಸಾಲಿ ಬಾಯ ಮೇಲಿದ್ದ ಕೈ ಬದಿಗೆ ಸರಿಸಿದಾಗ ಅವರ ಸ್ಥಿತಿ ಕಂಡು ಗಾಂಧೀಜಿ ಚಕಿತರಾದರು. ಅವರಿಗೆ ಮೌನ ಸಾಧನೆಯ ಇತಿಮಿತಿ ಗೊತ್ತಿತ್ತು. ಸಾಮೂಹಿಕ ಶಿಸ್ತು, ಪ್ರಚೋದನೆ ದೃಷ್ಟಿಯಿಂದ ಜತೆಗಿದ್ದವರೊಂದಿಗೆ ಸ್ವಲ್ಪ ಕಟುವಾಗಿ ಮಾತಾಡುವುದು ಗಾಂಧೀಜಿಗೆ ಅನಿವಾರ್ಯವಾಗಿತ್ತು. ಭನಸಾಲಿಯ ವಿಷಯದಲ್ಲಿ ತಮ್ಮ ಮಾತಿಂದ ಆದ ಅನಾಹುತ ಕಂಡು ಗಾಂಧೀಜಿ ತುಂಬ ನೊಂದುಕೊಂಡರು.

ಹೋರಾಟ, ಕಾರ್ಯಕ್ರಮ, ಒಪ್ಪಂದದಂಥ ಕೆಲಸಗಳ ಕಾರಣಕ್ಕಾಗಿ, ಗಾಂಧೀಜಿ ಆಗಿಂದಾಗ್ಗೆ ವಿದೇಶಗಳಿಗೆ ಹೋಗಬೇಕಾಗುತ್ತಿತ್ತು. ಅವರು ತಮ್ಮ ಜೀವಿತಾವಧಿಯಲ್ಲಿ ಒಟ್ಟು 15 ಬಾರಿ ವಿದೇಶ ಪ್ರವಾಸ ಮಾಡಿದ್ದರು. ಆದರೆ, ಒಂದೇ ಒಂದು ಬಾರಿಯೂ ವಿಮಾನದಲ್ಲಿ ಪ್ರಯಾಣಿಸಲಿಲ್ಲ. ಅವರದೇನಿದ್ದರೂ ಸಮುದ್ರಯಾನ. ಹಾಗೊಮ್ಮೆ ಲಂಡನ್‌ನಿಂದ ಡರ್ಬಾ ನ್‌ಗೆ ಪ್ರಯಾಣ ಮಾಡುವ ಸಂದರ್ಭದಲ್ಲಿ, ಹಡಗಿನಲ್ಲಿ ಕುಳಿತೇ 275 ಪುಟಗಳ ಪುಸ್ತಕವೊಂದನ್ನು ಬರೆದರು. ಅದರ ಹೆಸರು- ಹಿಂದ್‌ ಸ್ವರಾಜ…’.

ಗಾಂಧೀಜಿ, ಕೈಗೆ ವಾಚು ಕಟ್ಟುತ್ತಿರಲಿಲ್ಲ. ಬದಲಿಗೆ, ಸೊಂಟದಲ್ಲಿ ಒಂದು ಸ್ಟಾಫ್ ವಾಚ್‌ ಇಟ್ಟುಕೊಳ್ಳುತ್ತಿದ್ದರು. ಯಾವುದೇ ಕಾರ್ಯಕ್ರಮವಿರಲಿ, ಒಂದೇ ಒಂದು ನಿಮಿಷ ತಡವಾಗಿ ಅವರು ಹೋದವರಲ್ಲ. ಅದೊಂದು ಸಂದರ್ಭದಲ್ಲಿ ಮಾತ್ರ ಯಡವಟ್ಟಾಗಿ ಹೋಯಿತು. ಒಂದು ಕಾರ್ಯಕ್ರಮಕ್ಕೆ ಬರುವುದಾಗಿ ಗಾಂಧೀಜಿ ಒಪ್ಪಿದ್ದರು. ಕಾರ್ಯಕ್ರಮದ ಸಿದ್ಧತೆ ಕೂಡ ಜೋರಾಗಿ ನಡೆದಿತ್ತು. ಆದರೆ, ಮನೆಯಿಂದ ಹೊರಡುವುದೇ ತುಸು ತಡವಾಯಿತು. ಪರಿಣಾಮ, ಕಾರ್ಯಕ್ರಮ ಶುರುವಾಗಲು ಇನ್ನು ಐದೇ ನಿಮಿಷ ಬಾಕಿ ಇದೆ ಅನ್ನುವಾಗ ಆ ಜಾಗದಿಂದ ಒಂದು ಕಿ.ಮೀ. ಹಿಂದಿದ್ದರು ಗಾಂಧೀಜಿ. ಹೇಗಾದರೂ ಸರಿ, ಸಮಯಕ್ಕೆ ಸರಿಯಾಗಿ ಆ ಜಾಗ ತಲುಪಬೇಕು ಅನಿಸಿದ ತಕ್ಷಣ-ಒಂದೇ ಸಮನೆ ಓಡಲು ಶುರು ಮಾಡಿದರು. ಹಾಗೆ ಎಕ್ಸ್‌ಪ್ರೆಸ್‌ ವೇಗದಲ್ಲಿ ಓಡಿ, ಮೂರೇ ನಿಮಿಷದಲ್ಲಿ ಆ ಜಾಗ ತಲುಪಿದರು. ನಂತರ ಎರಡು ನಿಮಿಷ ರೆಸ್ಟ… ತೆಗೆದುಕೊಂಡರು. ಮರುಕ್ಷಣವೇ, ಗಾಂಧೀಜಿಯ ಭಾಷಣ ಶುರುವಾಗಿ ಹೋಯಿತು!

ಅದೊಂದು ಸಭೆ. ಅಲ್ಲಿ ಗಾಂಧೀಜಿಯ ಭಾಷಣವಿತ್ತು. ಸಭೆಗೆ ಅವರ ವಿರೋಧಿಗಳೂ ಬಂದಿದ್ದರು. ಗಾಂಧಿಯ ಭಾಷಣ ಶುರುವಾಗುವ ಮೊದಲೇ ವಿರೋಧಿಗಳ ಪೈಕಿ ಒಬ್ಬ ವೇದಿಕೆ ಹತ್ತಿ, ಗಾಂಧೀಜಿಯನ್ನು ಯದ್ವಾ ತದ್ವಾ ಬೈದ. ನಂತರ ಪ್ರತಿಭಟನೆಯ ಸಂಕೇತವಾಗಿ ಕಪ್ಪು ಬಾವುಟ ನೀಡಿದ. ಆಗ ಗಾಂಧಿ ಹೇಳಿದರಂತೆ: ಸರಿ, ಇದನ್ನು ನಿನ್ನ ನೆನಪಿಗೆ ಇಟ್ಕೊàತೀನಿ. ಗೆಳೆಯಾ, ನಿನ್ನ ಮನಸನ್ನಾದರೂ ಬೆಳ್ಳಗೆ ಇಟ್ಟುಕೋ’

ಒಂದು ಹಳ್ಳಿ. ಅಲ್ಲಿ ಏಳೆಂಟು ಮಂದಿಯ ಗುಂಪಿತ್ತು. ಅದು ಪುಂಡರ ಗುಂಪು. ಅವನು ಕುಡಿತ, ಜೂಜು, ಸಿಗರೇಟು ಅವರಿಗೆ ನಿತ್ಯದ ಹಾಬಿ’ ಆಗಿತ್ತು. ಹೀಗಿದ್ದಾಗಲೇ, ಊರಿಗೆ ಬಂದ ಸ್ವಾತಂತ್ರ್ಯ ಹೋರಾಟ ಗಾರ ರೊಬ್ಬರು- “ಧೂಮಪಾನ ಮಾಡಬಾರದು, ಮದ್ಯಪಾನ ಮಾಡ ಬಾರದು, ಮಾಂಸ ತಿನ್ನಬಾರದು’ ಎಂದು ಗಾಂಧೀಜಿ ಹೇಳಿದ್ದಾರೆ ಎಂದರು. ಆನಂತರ ನಡೆದಿದ್ದನ್ನು ನಂಬಲು ಕಷ್ಟ. ಗಾಂಧಿವಾದಿಯ ಮಾತು ಆ ಯುವಕರನ್ನು ಬಹುವಾಗಿ ತಟ್ಟಿತು. ಛೆ, ಗಾಂಧೀಜಿ ಹೇಳಿದ ಮೇಲೆ ಅದನ್ನು ಪಾಲಿಸದೆ ಇರುವುದು ಹೇಗೆ ಅಂದುಕೊಂಡ. ಅವ ರೆಲ್ಲ, ಅಂದಿನಿಂದಲೇ ಎಲ್ಲ ದುರಭ್ಯಾಸಗಳಿಗೂ ಸಲಾಂ ಹೊಡೆದರು!

ಇಂಥ ಪ್ರಸಂಗಗಳನ್ನು ಮತ್ತೆ ಮತ್ತೆ ನೆನಪಿಸಿಕೊಂಡೇ ಹೇಳ್ಳೋಣ: ಗಾಂಧೀಜಿ, ಮೂರು ದಿನ ಮುಂಚಿತವಾಗಿ, ನಿಮಗೆ ಹುಟ್ಟುಹಬ್ಬದ ಶುಭಾಶಯಗಳು.

– ಎ.ಆರ್‌.ಮಣಿಕಾಂತ್‌

Advertisement

Udayavani is now on Telegram. Click here to join our channel and stay updated with the latest news.

Next