ಯಾಕೆ ಪ್ರೀತಿ ಮಾಡೋದು ಅಂತ ಕೇಳಿದರೆ ಏನು ಹೇಳಲಿ? ನಿನ್ನ ಪ್ರೀತಿಯ ಗಟ್ಟಿಗೆ ನಾನು ಸೋಲದೆ ಇರಲಾಗಲಿಲ್ಲ ಕಣೋ ಹುಡುಗ ಅಂತ ನೀನು ಅಂದಾಗ ಪಕ್ಕನೆ ನನ್ನ ಕಣ್ಣಲ್ಲಿ ಹನಿಯೊಂದು ಜಾರಿತು.
ಒಂಟಿ ಬರಗಾಲಕ್ಕೆ ಒಣಗಿ ಹೋಗಿದ್ದ ಕನಸುಗಳಿಗೆ ನಿನ್ನೆಯಷ್ಟೇ ಒಂದು ಹನಿಯಷ್ಟು ಚಿಗುರು ಮೂಡಿದೆ. ನೋಡು, ಹಾದಿಯೂ ಕೂಡ ಎಷ್ಟು ಸಂಭ್ರಮಿಸುತ್ತಿದೆ?! ಅದಕ್ಕೊಂದು ಫಲಿತಾಂಶದ ಖುಷಿ. ಹಾದಿಯ ಪಾಲಿಗಿದು ಡಿಸ್ಟಿಂಕ್ಷನ್. ನಾನು ಪಾಸಾದೆ. ನನ್ನ ಪ್ರೇಮಕ್ಕೆ, ಕನವರಿಕೆಗೆ ರ್‍ಯಾಂಕ್ ಪಡೆದ ಖುಷಿ. ಮಾರ್ಕ್ಸ್ ಕಾರ್ಡ್ ಕೊಡಲು ನೀನೇ ಬರುತ್ತೀಯಲ್ವಾ?
ನಿನ್ನನ್ನು ನೋಡಿದ್ದು ಊರ ದಾರಿಯ ಹುಡಿ ಮಣ್ಣಿನಲ್ಲಿ ಮೂಡಿದ ನಿನ್ನ ಪಾದಗಳ ಗುರುತಿನಲ್ಲಿ. ನಿನ್ನ ಹೆಜ್ಜೆ ಊರಿಸಿಕೊಂಡ ಮಣ್ಣು ಕೂಡ ಒಂದೊಳ್ಳೇ ಲಹರಿಯಲ್ಲಿತ್ತು. ಅಷ್ಟು ಚೆಂದದ ಪಾದಗಳನ್ನು ಈ ಬರಗೆಟ್ಟ ಕಣ್ಣುಗಳು ನೋಡಿಯೇ ಇರಲಿಲ್ಲ. ಊರ ತೇರಿನ ನೂರು ಹಬ್ಬಗಳು ಒಮ್ಮೆಲೇ ಆದಂಥ ಖುಷಿ ಮೊದಲ ಬಾರಿಗೆ ನನ್ನ ಕಣ್ಣಲ್ಲಿ. ಪಾದಗಳ ಗುರುತನ್ನು ಬೆನ್ನು ಹತ್ತಿದವನಿಗೆ ಸಿಕ್ಕಿದ್ದು ನೀನು.
ನಿಜ ಹೇಳಾ!? ನಿನ್ನ ನೋಡಿದಾಗ ಮೊದಲ ಬಾರಿಗೆ ಅನಿಸಿದ್ದು- ಅದ್ಭುತ ರೂಪವತಿ ಅಂತ ಅಂದಾಜು ಮಾಡಿರಿ¤àವಲ್ಲ; ಅಂಥವಳು ದಿಢೀರ್ ಎದುರು ನಿಂತಾಗ ಆಗುವ ಪುಳಕ! ಅದೇ ಕಾರಣಕ್ಕೆ ನಾನು ನಿನ್ನ ಮುಂದೆ ಪೆಕರನಂತೆ ನಿಂತುಬಿಟ್ಟೆ. ಇವನ್ಯಾರೋ ಹುಚ್ಚನಿರಬೇಕು ಅಂತ ಎದೆಯ ಮೇಲಿಂದ ಹಾದು ಮಲಗಿದ್ದ ಜಡೆಯನ್ನು ಹಿಂದಕ್ಕೆ ಎಸೆದು ನೀನು ನಡೆದುಬಿಟ್ಟೆ. ಆಮೇಲೆ ನೋಡುತ್ತಾ ನಿಂತಿದ್ದು ನಿನ್ನ ಪಾದಗಳನ್ನು. ಈ ಪತ್ರದೊಂದಿಗೆ ನಾನು ಅವತ್ತು ಕ್ಲಿಕ್ಕಿಸಿದ ಹುಡಿ ಮಣ್ಣಿನಲ್ಲಿ ಮೂಡಿದ ನಿನ್ನ ಹೆಜ್ಜೆ ಗುರುತುಗಳ ಚಿತ್ರಗಳನ್ನು ಲಗತ್ತಿಸಿದ್ದೇನೆ ನೋಡು.
ನೀನು ಪರಿಚಯವಾದ ನಂತರ, ನಿರುದ್ಯೋಗಿಯಾಗಿದ್ದ ನನಗೊಂದು ಕೆಲಸ ಸಿಕ್ಕಿತು ನೋಡು. ಪ್ರೀತಿ ಗೆಲ್ಲಲು ಹೊರಟವನದು ಅದೆಂಥ ರಿಸ್ಕಿನ ಕೆಲಸ ಎಂಬುದು ಈ ಜನರಿಗೇನು ಗೊತ್ತು. ಅವರು ಗೇಲಿ ಮಾಡುವುದನ್ನು ಕಂಡು ಪಾಪ ಎನಿಸುತ್ತದೆ. ನಾನು ಇದಕ್ಕಾಗಿ ಖರ್ಚು ಮಾಡಿದ್ದು ಬರೋಬ್ಬರಿ ಏಳು ವರ್ಷಗಳನ್ನು. ಅಷ್ಟು ದಿನಗಳಲ್ಲಿ ನನ್ನ ಪಾಲಿಗಿದ್ದಿದ್ದು ಕೇವಲ ಮಂಪರಿನಂಥ ಒಂದಿಡೀ ನಿದ್ದೆ, ಬದುಕಲು ನಾಲ್ಕಾರು ತುತ್ತು ಅನ್ನ, ರಾಶಿ ರಾಶಿ ಕನಸುಗಳು, ತೀರದ ಪ್ರಯತ್ನ ಮತ್ತು ನನ್ನ ಹುಚ್ಚಾಟಗಳಿಗೆ ಕ್ಯಾರೇ ಅನ್ನದ ನೀನು.
ಅವತ್ತು ನನ್ನ ಪ್ರೀತಿ ಅರಸುವಿಕೆಯ ಮ್ಯಾರಥಾನ್ ಓಟಕ್ಕೆ ಬ್ರೇಕ್ ಹಾಕಿಬಿಟ್ಟೆ ನೀನು. ಯಾಕೋ ಹುಡುಗ ಇಷ್ಟು ಹಠ? ನನ್ನಲ್ಲಿ ಅಂಥದ್ದು ಏನಿದೆ? ಯಾಕೆ ಹೀಗೆ ಸಾಯುವಷ್ಟು ಇಷ್ಟ ಪಡ್ತೀಯ? ಅಂದಾಗ ನನ್ನ ಬಳಿ ಮಾತುಗಳಿರಲಿಲ್ಲ. ಯಾಕೆ ಪ್ರೀತಿ ಮಾಡೋದು ಅಂತ ಕೇಳಿದರೆ ಏನು ಹೇಳಲಿ? ನಿನ್ನ ಪ್ರೀತಿಯ ಗಟ್ಟಿಗೆ ನಾನು ಸೋಲದೆ ಇರಲಾಗಲಿಲ್ಲ ಕಣೋ ಹುಡುಗ ಅಂತ ನೀನು ಅಂದಾಗ ಪಕ್ಕನೆ ನನ್ನ ಕಣ್ಣಲ್ಲಿ ಹನಿಯೊಂದು ಜಾರಿತು. ಕದ್ದು ಜಾರಿದ ಹನಿಯನ್ನು ಕೊನೆಗೂ ನೀನು ನೋಡಿಬಿಟ್ಟೆ. ಲೇ ಇದೇನೋ ಹುಡುಗನಾಗಿ ಕಣ್ಣೀರು? ಅಂದಾಗ ಮಾತಾಡದೆ ಸುಮ್ಮನೇ ನಿಲ್ಲುವುದಷ್ಟೇ ನನ್ನಿಂದ ಸಾಧ್ಯವಾಗಿದ್ದು. ನಿಧಾನಕ್ಕೆ ಎದ್ದ ನಿನ್ನ ಕೈಗಳು ನನ್ನ ಕೈ ಹಿಡಿದವು ನೋಡು, ಆಗ ನಮ್ಮ ಪ್ರೀತಿಗೆ ಅಧಿಕೃತ ಮುದ್ರೆ ಬಿತ್ತು!
ಸದಾಶಿವ್ ಸೊರಟೂರು.