ಝುವಾಲಜಿ ಹುಡುಗಿ,
ನನಗೆ ನಿದ್ದೆ ಅಂದ್ರೆ ಬಹಳ ಇಷ್ಟ. ಬಿಟ್ಟರೆ ದಿನದ 22 ಗಂಟೆಯೂ ನಿದ್ದೆ ಮಾಡ್ತೀನಿ. ಜಗತ್ತಿನಲ್ಲಿ ಅತ್ಯಂತ ಪ್ರಿಯವಾದದ್ದು ಏನು ಅಂತ ಯಾರಾದ್ರೂ ಕೇಳಿದ್ರೆ, ನಿದ್ದೆಗಣ್ಣಿನಲ್ಲೂ ನಾನು ನಿದ್ದೆ ಅಂತಾನೇ ಹೇಳ್ಳೋದು. ಅಂತ ನಿದ್ದೆರಾಮನ ನಿದ್ದೆಗೆಡಿಸಿದ ಹುಡುಗಿ ನೀನು. ಅಂದ್ರೆ, ನಿನ್ನ ಕಣ್ಣೋಟ ಎಂಥ ಪವರ್‌ಫುಲ್ ಇರೊದು ಲೆಕ್ಕ ಹಾಕು!
ಕಾಲೇಜು ಒಂಥರಾ ರಂಗುರಂಗಿನ ಲೋಕ. ಎಷ್ಟೇ ಜನ ಫ್ರೆಂಡ್ಸ್ ಇದ್ದರೂ, ನನಗೂ ಒಬ್ಬಳು ಲವರ್ ಇದ್ದಿದ್ರೆ ಅಂಥ ಅನ್ನಿಸೋ ವಯಸ್ಸು. ಆದರೂ, ನಾನು ಯಾರನ್ನೂ ಕಣ್ಣೆತ್ತಿ ನೋಡದೆ, ಸಿಂಗಲ್ ಆಗೇ ಇದ್ದೆ. ಎಲ್ಲಿಯವರೆಗೆ ಅಂದರೆ, ನೀನು ಕಣ್ಣಿಗೆ ಬೀಳುವವರೆಗೆ.
ನಿನ್ನನ್ನು ನೋಡಿದ ಕ್ಷಣ, “ಲವ್ ಅಟ್ ಫಸ್ಟ್ ಸೈಟ್’ ಅಂತಾರಲ್ಲ, ಅದು ನನ್ನ ಪಾಲಿಗೆ ನಿಜವಾಯ್ತು. “ಯಾರಪ್ಪಾ ಇವಳು?’ ಅಂತ ಹುಡುಕಾಡಿದಾಗ, ನೀನು ಸೈನ್ಸ್ ಸ್ಟೂಡೆಂಟ್ ಅಂತ ಗೊತ್ತಾಯ್ತು. ನಿನಗೆ ದಿನಾ ಬೆಳಗ್ಗೆ ಬೇಗ ಕ್ಲಾಸ್ ಇರುತ್ತಾ? ಅದ್ಯಾಕೆ ಅಷ್ಟು ಬೇಗ ಕಾಲೇಜಿಗೆ ಬರಿ¤àಯ? ನಿನ್ನನ್ನು ನೋಡುವ ಆಸೆಯಿಂದ ನಾನೂ ಈಗ ಬೆಳಗ್ಗೆ ಬೇಗ ಎದ್ದು ರೆಡಿಯಾಗಿ, ಕಾಲೇಜಿಗೆ ಬರುತ್ತೇನೆ. ನಾನು ಪರೀಕ್ಷೆ ಟೈಮಲ್ಲೂ ಬೇಗ ಎದ್ದವನಲ್ಲ. ಅಂಥವನು ಈಗ ದಿನಾಲೂ 5 ಗಂಟೆಗೇ ಎದ್ದು, ಸ್ನಾನ ಮುಗಿಸಿ, “ಆ ಹುಡುಗಿ ಸಿಗುವಂತೆ ಮಾಡಪ್ಪಾ’ ಅಂತ ದೇವರಿಗೆ ಒಂದು ಪ್ರಾರ್ಥನೆಯನ್ನೂ ಸಲ್ಲಿಸಿ, ಅವಸರದಲ್ಲೇ ಕಾಲೇಜಿಗೆ ಓಡಿ ಓಡಿ ಬರಿ¤ದೀನಿ.
ನಿನಗೆ ಪ್ರಪೋಸ್ ಮಾಡಬೇಕು ಅಂತ ಎಷ್ಟೋ ಸಲ ಅಂದುಕೊಂಡಿದ್ದೇನೆ. ಆದರೇನು ಮಾಡುವುದು? ನೀನು ಝುವಾಲಜಿ, ನಾನು ಜರ್ನಲಿಸಂ. ಎತ್ತಣ ಮಾಮರ, ಎತ್ತಣ ಕೋಗಿಲೆ ಅಲ್ವಾ? ಆರ್ಟ್ಸ್ ಹುಡುಗ ಅಂತ ನೀನೆಲ್ಲಿ ನನ್ನನ್ನು ತಿರಸ್ಕರಿಸಿಬಿಡ್ತೀಯೋ ಅಂತ ಹೆದರಿ ಸುಮ್ಮನಿದ್ದೇನೆ. ನಾನು ನಿಂಗೆ ಪ್ರಪೋಸ್ ಮಾಡ್ತೀನೋ, ಇಲ್ವೋ? ನೀನು ಸಿಗ್ತಿಯೋ, ಸಿಗಲ್ವೋ ಅಂತೆಲ್ಲಾ ನಂಗೊತ್ತಿಲ್ಲ. ಆದ್ರೆ, ಬೆಳಗ್ಗೆ ಬೇಗ ಏಳುವುದಕ್ಕೆ ಕಾರಣ ಹುಡುಕಿ ಕೊಟ್ಟಿದ್ದಕ್ಕೆ, ಥ್ಯಾಂಕ್ಸ್ ಆಯ್ತಾ!
ಬಾಬು ಪ್ರಸಾದ್ ಎ., ಬಳ್ಳಾರಿ