ಹರಾರೆ: ಪಾಕಿಸ್ಥಾನದ ಬ್ಯಾಟಿಂಗ್ ಕೋಚ್ ಆಗಿದ್ದ ವೇಳೆ ಯೂನಿಸ್ ಖಾನ್ ತನ್ನ ಗಂಟಲಿಗೆ ಚೂರಿ ಹಿಡಿದು ಬೆದರಿಸಿದ್ದರು ಎಂಬ ಆಘಾತಕಾರಿ ಸಂಗತಿಯನ್ನು ಜಿಂಬಾಬ್ವೆಯ ಗ್ರ್ಯಾಂಟ್ ಫ್ಲವರ್ ಬಹಿರಂಗಪಡಿಸಿದ್ದಾರೆ.
ಗ್ರ್ಯಾಂಟ್ ಫ್ಲವರ್ 2014-2019ರ ಅವಧಿಯಲ್ಲಿ ಪಾಕಿಸ್ಥಾನ ತಂಡದ ಬ್ಯಾಟಿಂಗ್ ಕೋಚ್ ಆಗಿ ಕರ್ತವ್ಯ ನಿಭಾಯಿಸಿದ್ದರು. ಆಸ್ಟ್ರೇಲಿಯ ಪ್ರವಾಸದ ವೇಳೆ ಈ ವಿಚಿತ್ರ ಘಟನೆ ನಡೆಯಿತು ಎಂಬುದಾಗಿ ಫ್ಲವರ್ ಕ್ರಿಕೆಟ್ ಕಾರ್ಯಕ್ರಮವೊಂದರ ವೇಳೆ ಹೇಳಿದರು.
“ಯೂನಿಸ್ ಖಾನ್? ಅವರನ್ನು ಅರ್ಥೈಸಿಕೊಳ್ಳುವುದೇ ಕಷ್ಟ. ಬ್ರಿಸ್ಬೇನ್‌ನಲ್ಲಿ ನಡೆದ ಘಟನೆಯೊಂದು ನೆನಪಿಗೆ ಬರುತ್ತದೆ. ಅಂದಿನ ಟೆಸ್ಟ್ ಪಂದ್ಯದ ಬ್ರೇಕ್ ಒಂದರ ವೇಳೆ ನಾನು ಯೂನಿಸ್‌ಗೆ ಕೆಲವು ಬ್ಯಾಟಿಂಗ್ ಟಿಪ್ಸ್ ನೀಡಲು ಮುಂದಾಗಿದ್ದೆ. ಆದರೆ ಅವರು ಇದನ್ನು ಕೇಳುವ ಸ್ಥಿತಿಯಲ್ಲಿರಲಿಲ್ಲ. ಕೂಡಲೇ ಚೂರಿಯೊಂದನ್ನು ತಂದು ನನ್ನ ಗಂಟಲಿಗೆ ಹಿಡಿದರು. ನನಗೆ ಏನಾಗುತ್ತದೆಂದೇ ತಿಳಿಯಲಿಲ್ಲ. ಪಕ್ಕದಲ್ಲೇ ಕುಳಿತ್ತಿದ್ದ ಮಿಕ್ಕಿ ಆರ್ಥರ್ ಬಂದು ತಡೆದರು…’ ಎಂದು ಅಂದಿನ ವಿಲಕ್ಷಣ ಘಟನೆ ಕುರಿತು ಗ್ರ್ಯಾಂಟ್ ಫ್ಲವರ್ ಹೇಳಿದರು.
ಆದರೆ ಇದಕ್ಕೆ ಯೂನಿಸ್ ಖಾನ್ ಅವರಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಅವರೀಗ ಇಂಗ್ಲೆಂಡ್ ಪ್ರವಾಸದಲ್ಲಿರುವ ಪಾಕಿಸ್ಥಾನ ತಂಡದ ಬ್ಯಾಟಿಂಗ್ ಕೋಚ್ ಆಗಿದ್ದಾರೆ.
2016ರ ಬ್ರಿಸ್ಬೇನ್ ಟೆಸ್ಟ್…
ಈ ಘಟನೆ 2016ರ ಬ್ರಿಸ್ಬೇನ್ ಟೆಸ್ಟ್ ಪಂದ್ಯದ ವೇಳೆ ನಡೆದದ್ದಿರಬೇಕು ಎಂದು ಭಾವಿಸಲಾಗಿದೆ. ಈ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಯೂನಿಸ್ ಖಾನ್ ಸೊನ್ನೆಗೆ ಔಟಾಗಿದ್ದರು. ಈ ಸಂದರ್ಭದಲ್ಲಿ ಗ್ರ್ಯಾಂಟ್ ಫ್ಲವರ್ ಪಾಕ್ ಬ್ಯಾಟ್ಸ್‌ಮನ್‌ಗೆ ಟಿಪ್ಸ್ ನೀಡಲು ಮುಂದಾಗಿದ್ದರು. ದ್ವಿತೀಯ ಇನ್ನಿಂಗ್ಸ್‌ನಲ್ಲಿ ಯೂನಿಸ್ ಖಾನ್ 65 ರನ್ ಹೊಡೆದರೆ, ಸಿಡ್ನಿಯ ಅಂತಿಮ ಟೆಸ್ಟ್‌ನಲ್ಲಿ ಅಜೇಯ 175 ರನ್ ಸಿಡಿಸಿದರು.