ಸಾಗರ: ಶನಿವಾರ ದೇವಸ್ಥಾನಕ್ಕೆ ಹೋಗುತ್ತೇನೆಂದು ತೆರಳಿದ ಯುವಕ ಕೆರೆಯಲ್ಲಿ ಶವವಾಗಿ ಪತ್ತೆಯಾದ ಘಟನೆ ನಗರದ ಹೊರಭಾಗದಲ್ಲಿ ಆ.13ರ ಭಾನುವಾರ ನಡೆದಿದೆ.
ಮೃತ ಯುವಕನನ್ನು ಶ್ರೀಧರ ನಗರದ ಉಮೇಶ್(24) ಎಂದು ಗುರುತಿಸಲಾಗಿದೆ.
ಶನಿವಾರದಂದು ಬೆಳಿಗ್ಗೆ 10 ಗಂಟೆ ಸಮಯದಲ್ಲಿ ಶ್ರೀಧರ ನಗರದಿಂದ ಶ್ರೀಗಂಧದ ಸಂಕೀರ್ಣದ ಸಮೀಪದ ಆಂಜನೇಯ ದೇವಸ್ಥಾನಕ್ಕೆ ನೀಲಿ ಶರ್ಟ್, ಕಪ್ಪು ಪ್ಯಾಂಟ್ ಧರಿಸಿ ತೆರಳಿದ್ದ ಉಮೇಶ್ ನಾಪತ್ತೆಯಾದ ಕುರಿತು ಗಾರೆ ಕೆಲಸದ ವೃತ್ತಿಯಲ್ಲಿರುವ ಅವನ ತಂದೆ ವಿನಾಯಕ ಎಂಬವರು ನಗರ ಠಾಣೆಯಲ್ಲಿ ದೂರು ಸಲ್ಲಿಸಿದ್ದರು.
ತುಸು ಮಾನಸಿಕ ಅಸ್ಥಿರತೆ ಹಾಗೂ ಅಂಗ ವೈಕಲ್ಯದಿಂದ ಕೂಡಿದ ಯುವಕ ಭಾನುವಾರ ಎಪಿಎಂಸಿಯಿಂದ ಕೆಳದಿ ರಸ್ತೆಗೆ ತೆರಳುವ ಬೈಪಾಸ್ ರಸ್ತೆಯ ಮೈಲುತುತ್ತದ ಕಾರ್ಖಾನೆ ಪಕ್ಕದ ಕೆರೆಯಂತಹ ತಗ್ಗು ಪ್ರದೇಶದಲ್ಲಿ ಶವವಾಗಿ ಪತ್ತೆಯಾಗಿದ್ದಾನೆ. ಮೂತ್ರ ವಿಸರ್ಜನೆಗೆ ತೆರಳಿದ ಉಮೇಶ್ ಕಾಲುಜಾರಿ ನೀರಿಗೆ ಬಿದ್ದು ಸಾವನ್ನಪ್ಪಿರಬಹುದು ಎಂದು ಪ್ರಾಥಮಿಕವಾಗಿ ಅಂದಾಜಿಸಲಾಗಿದೆ.
ಯುವಕನ ತಂದೆ ವಿನಾಯಕ ನಗರ ಠಾಣೆಯಲ್ಲಿ ಅಸಹಜ ಸಾವಿನ ಪ್ರಕರಣ ಕುರಿತಂತೆ ದೂರು ಸಲ್ಲಿಸಿದ್ದು, ಪೊಲೀಸರು ವಿಚಾರಣೆ ನಡೆಸಿದ್ದಾರೆ.