ಕಾಸರಗೋಡು: “ಒಂದು ದೇಶ, ಒಂದು ಜನತೆ’ ಎಂಬ ಸಂದೇಶ ದೊಂದಿಗೆ 21ನೇ ವಯಸ್ಸಿನಲ್ಲಿ ಏಕಾಂಗಿಯಾಗಿ ಈಶಾನ್ಯ ರಾಜ್ಯಗಳಿಗೆ ಬೈಕ್‌ನಲ್ಲಿ ಪ್ರಯಾಣ ಆರಂಭಿಸಿದ್ದ ಕುಂಬಳೆ ನಿವಾಸಿ ಅಮೃತಾ ಜೋಶಿ ತಮ್ಮ 60 ದಿವಸಗಳ ಪ್ರಯಾಣವನ್ನು ಯಶಸ್ವಿಯಾಗಿ ಪೂರೈಸಿದ್ದಾರೆ.
2022 ಫೆ. 5ರಂದು ಕೇರಳದ ಕಲ್ಲಿಕೋಟೆಯಿಂದ ಆರಂಭಿಸಿ ತಮಿಳುನಾಡು, ಆಂಧ್ರ ಪ್ರದೇಶ, ಒರಿಸ್ಸಾ, ಪಶ್ಚಿಮ ಬಂಗಾಲ, ಅಸ್ಸಾಂ, ಮೇಘಾಲಯ, ತ್ರಿಪುರಾ, ಮಿಜೋರಾಂ, ಮಣಿಪುರ, ನಾಗಾ ಲ್ಯಾಂಡ್, ಅರುಣಾಚಲ ಪ್ರದೇಶ, ಸಿಕ್ಕಿಂ ರಾಜ್ಯಗಳನ್ನು ಸಂದ ರ್ಶಿಸಿ ನೆರೆಯ ಬಾಂಗ್ಲಾದೇಶ, ಮ್ಯಾನ್ಮಾರ್‌ಗಳನ್ನು ಕೂಡ ಅಮೃತಾ ಸಂದರ್ಶಿಸಿದ್ದಾರೆ. ಅವರು ಇದು ವರೆಗೆ 8,040 ಕಿ.ಮೀ. ಯಾನ ಪೂರೈಸಿದ್ದಾರೆ.
ಅಪಾರ ಬೆಂಬಲಿಗರ, ಹಿತೈಷಿಗಳ ಸಹಾಯ, ಸಹಕಾರ, ಪ್ರೋತ್ಸಾಹದಿಂದ ಪ್ರೇರಿತರಾಗಿ ಉಳಿದ ರಾಜ್ಯಗಳಿಗೂ ತಮ್ಮ ಪ್ರಯಾಣವನ್ನು ವಿಸ್ತರಿಸುವ ಸಾಹಸಕ್ಕೆ ಕೈ ಹಾಕಿದ್ದಾರೆ.
ನೇಪಾಲದಿಂದ ಆರಂಭಿಸಿ ಬಿಹಾರ, ಝಾರ್ಖಂಡ್, ಛತ್ತೀಸ್‌ಗಢ, ಉತ್ತರ ಪ್ರದೇಶ, ಉತ್ತರಾ ಖಂಡ, ಹಿಮಾಚಲ ಪ್ರದೇಶ, ಜಮ್ಮು – ಕಾಶ್ಮೀರ, ಲಡಾಖ್, ಪಂಜಾಬ್, ಹರಿಯಾಣ, ದಿಲ್ಲಿ, ರಾಜಸ್ಥಾನ, ಗುಜರಾತ್, ಮಧ್ಯಪ್ರದೇಶ, ಮಹಾ ರಾಷ್ಟ್ರ, ತೆಲಂಗಾಣ, ಗೋವಾ, ಕರ್ನಾಟಕ ಮತ್ತು ಕೊನೆ ಯಲ್ಲಿ ಕೇರಳದ ಕಾಸರಗೋಡಿನಲ್ಲಿ ತಮ್ಮ ಯಾತ್ರೆಯನ್ನು ಮುಕ್ತಾಯ ಗೊಳಿಸಲಿದ್ದಾರೆ.
“ಸಿ.ಆರ್.ಎಫ್. ವುಮನ್ ಆನ್ ವೀಲ್ಸ್’ ಎಂಬ ಕ್ಲಬ್ ಸದಸ್ಯೆಯಾಗಿರುವ ಅಮೃತಾ ಜೋಶಿ ಕುಂಬಳೆ ನಿವಾಸಿಗಳಾದ ದಿ| ಅಶೋಕ್ ಜೋಶಿ ಮತ್ತು ಅನ್ನಪೂರ್ಣಾ ಜೋಶಿ ದಂಪತಿಯ ಕಿರಿಯ ಪುತ್ರಿ.
ನಾನು ಈಶಾನ್ಯ ರಾಜ್ಯದಲ್ಲಿ ಪ್ರಯಾಣ ಆರಂಭಿಸಿದಾಗ ಎಲ್ಲರೂ ಆ ರಾಜ್ಯಗಳು ಸುರಕ್ಷಿತವಲ್ಲ ಎಂದಿದ್ದರು. ಆದರೆ ನಾನು ಈ ಯಾನದ ಬಳಿಕ ಈಶಾನ್ಯವು ತುಂಬಾ ಸುರಕ್ಷಿತ ಸ್ಥಳ ಮತ್ತು ಜನರು ಮೃದು ಮನಸ್ಸಿನವರು ಎಂದು ಹೇಳಬಲ್ಲೆ. ಅವರ ಪ್ರೀತಿ ಮತ್ತು ಬೆಂಬಲದಿಂದಾಗಿ ನಾನು ಇಡೀ ಭಾರತ ಯಾನವನ್ನು ಪೂರ್ಣಗೊಳಿಸಲು ನಿರ್ಧರಿಸಿದೆ.
– ಅಮೃತಾ ಜೋಶಿ