ಬೆಂಗಳೂರು: ಪ್ರಾಪ್ತ ಬಾಲಕನಿಗೆ ಆತನ ಪೋಷಕರೇ ಬಲವಂತವಾಗಿ ಮದುವೆ ಮಾಡಿಸಿರುವ ಪ್ರಕರಣ ಬೆಳಕಿಗೆ ಬಂದಿದ್ದು, ಈ ಸಂಬಂಧ ಪುಟ್ಟೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹದಿನಾರು ವರ್ಷದ ತಮ್ಮ ಪುತ್ರ ಹತ್ತೂಂಬತ್ತು ವರ್ಷದ ಯುವತಿಯನ್ನು ಪ್ರೀತಿಸುತ್ತಿದ್ದ ವಿಚಾರ ತಿಳಿದ ಬಾಲಕನ ಪೋಷಕರು ಇಬ್ಬರಿಗೂ ಬಲವಂತವಾಗಿ ಮದುವೆ ಮಾಡಿಸಿದ್ದಾರೆ.
ಈ ವಿಚಾರ ತಿಳಿದ ಬನಶಂಕರಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಕಚೇರಿ ಅಧಿಕಾರಿಗಳು ಮತ್ತು ಪೊಲೀಸರು ಬಾಲ್ಯ ವಿವಾಹಿತರನ್ನು ಬೇರ್ಪಡಿಸಿ, ಬಾಲಕನನ್ನು ರಕ್ಷಿಸಿ ಬಾಲಮಂದಿರಕ್ಕೆ ಕಳುಹಿಸಿದ್ದಾರೆ. ಯುವತಿ ಊರ್ಮಿಳಾ (19) ಹಾಗೂ ಬಾಲಕನ ಪೋಷಕರ ವಿರುದ್ಧ ಬಾಲ್ಯವಿವಾಹ ನಿಷೇಧ ಕಾಯ್ದೆ ಅಡಿ ಠಾಣೆಯಲ್ಲಿ ಪ್ರಕರಣ ದಾಖಲಿಸಿ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ ಎಂದು ಪೊಲೀಸರು ಹೇಳಿದರು.
ನೇಪಾಳ ಮೂಲದ ಮಾನಸಿಂಗ್ ಮತ್ತು ಲಕ್ಷ್ಮೀ ಸಿಂಗ್ 20 ವರ್ಷಗಳ ಹಿಂದೆ ಕೂಲಿ ಅರಸಿ ನಗರಕ್ಕೆ ಬಂದಿದ್ದು, ಮೈಕೋ ಲೇಔಟ್‌ನ ಅರಕೆರೆಯ ಬಾಡಿಗೆ ಮನೆಯಲ್ಲಿ ವಾಸವಾಗಿದ್ದಾರೆ. ಮಾನಸಿಂಗ್ ಆಟೋರಿಕ್ಷಾ ಓಡಿಸುತ್ತಿದ್ದು, ಲಕ್ಷ್ಮೀ ಸಿಂಗ್ ಮನೆ ಕೆಲಸ ಮಾಡುತ್ತಿದ್ದಾರೆ. ಬಾಲಕ ಎಂಟನೇ ತರಗತಿ ವ್ಯಾಸಂಗ ಅರ್ಧಕ್ಕೆ ಮೊಟಕುಗೊಳಿಸಿ, ಗ್ಯಾಸ್ ಏಜೆನ್ಸಿಯಲ್ಲಿ ಸಿಲಿಂಡರ್ ಡೆಲಿವರಿ ಕೆಲಸ ಮಾಡಿಕೊಂಡಿದ್ದಾನೆ.
ಯುವತಿ ನೇಪಾಳ ಮೂಲದವರಾಗಿದ್ದು, ಆಕೆಗೆ ತಂದೆ-ತಾಯಿ ಇಲ್ಲ. ಪುಟ್ಟೇನಹಳ್ಳಿಯಲ್ಲಿ ತನ್ನ ಅತ್ತೆಯ ಮನೆಯಲ್ಲಿ ವಾಸವಾಗಿದ್ದು, ಹತ್ತನೇ ತರಗತಿವರೆಗೂ ಓದಿದ್ದಾಳೆ. ಮನೆ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಳು. ಎರಡು ಕುಟುಂಬಸ್ಥರು ಒಂದೇ ಸಮುದಾಯಕ್ಕೆ ಸೇರಿದವರಾಗಿದ್ದು, ದೂರದ ಸಂಬಂಧಿಕರು ಎಂಬುದು ಇದುವರೆಗಿನ ವಿಚಾರಣೆಯಲ್ಲಿ ಗೊತ್ತಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದರು.
ಅಪ್ರಾಪ್ತ ಪ್ರೀತಿ: ಪ್ರೇಮಿಗಳ ಕುಟುಂಬಸ್ಥರು ದೂರದ ಸಂಬಂಧಿಕರಾಗಿರುವುದರಿಂದ ಯುವತಿ ಮತ್ತು ಬಾಲಕನ ನಡುವೆ ಪರಿಚಯವಾಗಿತ್ತು. ಬಳಿಕ ಇಬ್ಬರ ನಡುವೆ ಪ್ರೇಮಾಂಕುರವಾಗಿದ್ದು, ಆರು ತಿಂಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಈ ವಿಚಾರ ಬಾಲಕನ ಪೋಷಕರಿಗೆ ಗೊತ್ತಾಗಿದೆ. ಈ ವಿಚಾರ ಮಾತನಾಡುವ ನೆಪದಲ್ಲಿ ಫೆ.15ರಂದು ಯುವತಿಯನ್ನು ಮನೆಗೆ ಕರೆಸಿಕೊಂಡಿದ್ದಾರೆ. ಪುತ್ರನ ಜತೆಗಿನ ಪ್ರೀತಿ ವಿಚಾರ ಖಚಿತವಾಗುತ್ತಿದ್ದಂತೆ ಇಬ್ಬರಿಗೂ ಬಲವಂತವಾಗಿ ವಿವಾಹ ಮಾಡಿದ್ದಾರೆ. ಈ ಘಟನೆ ತಿಳಿದ ಸ್ಥಳೀಯರೊಬ್ಬರು ಫೆ.19ರಂದು ಮಕ್ಕಳ ಸಹಾಯವಾಣಿಗೆ ದೂರು ನೀಡಿದ್ದರು.
ಬಲವಂತವಾಗಿ ಪ್ರೇಮಿಗಳ ವಿವಾಹ: ಬನಶಂಕರಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಕಚೇರಿಯ ಅಧಿಕಾರಿಗಳ ತಂಡ ಹಾಗೂ ಪುಟ್ಟೇನಹಳ್ಳಿ ಪೊಲೀಸರು ಮೈಕೋ ಲೇಔಟ್‌ನಲ್ಲಿರುವ ಬಾಲಕನ ಮನೆಗೆ ಭೇಟಿ ನೀಡಿ ಪರಿಶೀಲಿಸಿದಾಗ ಘಟನೆ ಬೆಳಕಿಗೆ ಬಂದಿದೆ. ಯವತಿ ಮತ್ತು ಬಾಲಕ ಪರಸ್ಪರ ಪ್ರೀತಿಸುತ್ತಿದದ್ದು ನಿಜ. ಆದರೆ, ಇಬ್ಬರಿಗೂ ಈಗಲೇ ಮದುವೆ ಮಾಡಿಕೊಳ್ಳಲು ಇಷ್ಟ ಇರಲಿಲ್ಲ. ಪೋಷಕರು ಬಲವಂತವಾಗಿ ಮದುವೆ ಮಾಡಿಸಿದ್ದಾರೆ ಎಂಬುದು ಗೊತ್ತಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದರು.