ಬೆಂಗಳೂರು: ನಗರದ ಪೊಲೀಸ್ ವಸತಿ ಗೃಹದಲ್ಲಿ ಯುವತಿಯೊಬ್ಬರನ್ನು ಅಕ್ರಮ ಬಂಧನದಲ್ಲಿಟ್ಟ ಆರೋಪದಡಿ ವಿಜಯಪುರ ಜಿಲ್ಲೆಯ ಪೊಲೀಸ್ ಪೇದೆ ಮಹಾದೇವ ಎಂಬಾತನನ್ನು ಕಾಟನ್‌ಪೇಟೆ ಪೊಲೀಸರು ಬಂಧಿಸಿದ್ದಾರೆ.
ಇದೇ ವೇಳೆ ಹನಿಟ್ರ್ಯಾಪ್ ಮಾದರಿಯಲ್ಲಿ ಪೊಲೀಸ್ ಪೇದೆಯನ್ನು ಬೆದರಿಸಿ, ಒಂದು ಲಕ್ಷ ರೂ.ಗೆ ಬೇಡಿಕೆ ಇಟ್ಟ ಆರೋಪದ ಮೇಲೆ ಯುವತಿ ಹಾಗೂ ಆಕೆಯ ಪ್ರಿಯಕರನನ್ನು ಸಹ ಪೊಲೀಸರು ಬಂಧಿಸಿದ್ದಾರೆ. ಸಂಗೀತಾ (ಹೆಸರು ಬದಲಾಯಿಸಲಾಗಿದೆ), ಆಕೆಯ ಪ್ರಿಯಕರ ರಮೇಶ್ ಕುಮಾರ್ (26) ಹಾಗೂ ವಿಜಯಪುರ ಜಿಲ್ಲೆಯ ಪೊಲೀಸ್ ಪೇದೆ ಮಹಾದೇವ (32) ಬಂಧಿತರು.
ಎಂಟು ತಿಂಗಳ ಹಿಂದೆ ಇಮೋ ಎಂಬ ಮೊಬೈಲ್ ಆ್ಯಪ್ ಮೂಲಕ ಪರಿಚಯವಾದ ವಿದ್ಯಾರ್ಥಿನಿ ಜತೆ ಪೇದೆ ಮಹಾದೇವ ಆತ್ಮೀಯತೆ ಹೊಂದಿದ್ದು, ಇಬ್ಬರೂ ನಗರ ಪೊಲೀಸ್ ವಸತಿ ಗೃಹದ ಕೊಠಡಿಯೊಂದರಲ್ಲಿ 2-3 ಬಾರಿ ಖಾಸಗಿಯಾಗಿ ಕಾಲ ಕಳೆದಿದ್ದರು. ಇತ್ತೀಚೆಗೆ ವಿಜಯಪುರದಿಂದ ಬಂದ ಪೇದೆ ಮಹಾದೇವನನ್ನು ಸಂಗೀತಾ ಪೊಲೀಸ್ ವಸತಿ ಗೃಹದ ಕೊಠಡಿಯಲ್ಲಿ ಭೇಟಿಯಾಗಿದ್ದಳು. ಈ ವೇಳೆ ಪೇದೆಗೆ ಒಂದು ಲಕ್ಷ ರೂ. ಕೊಡುವಂತೆ ಆಕೆ ಬೇಡಿಕೆ ಇಟ್ಟಿದ್ದಳು. ಆದರೆ, ಪೇದೆ ಹಣ ಕೊಡಲು ನಿರಾಕರಿಸಿದ್ದ.
ಬಳಿಕ ಪ್ರಿಯಕರ ರಮೇಶ್ ಕುಮಾರ್‌ಗೆ ಕರೆ ಮಾಡಿದ ಸಂಗೀತಾ, ಮಹಾದೇವ್ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದು, ಕೂಡಲೇ ಪೊಲೀಸರನ್ನು ಕರೆತರುವಂತೆ ಹೇಳಿದ್ದಳು. ಈ ಹಿನ್ನೆಲೆಯಲ್ಲಿ ರಮೇಶ್ ಕುಮಾರ್ ಪೊಲೀಸರನ್ನು ವಸತಿ ಗೃಹಕ್ಕೆ ಕರೆದೊಯ್ದು ಪ್ರೇಯಸಿಯನ್ನು ರಕ್ಷಣೆ ಮಾಡಿದ್ದ.
ಈ ಸಂಬಂಧ ಸಂಗೀತಾ, ಪೇದೆ ಮಹಾದೇವ ವಿರುದ್ಧ ಕಾಟನ್‌ಪೇಟೆ ಠಾಣೆಯಲ್ಲಿ ವಂಚನೆ ಆರೋಪದಡಿ ಪ್ರಕರಣ ದಾಖಲಿಸಿದ್ದಳು. ಮತ್ತೂಂದೆಡೆ ಪೇದೆ ಮಹಾದೇವ ಕೂಡ, ಪ್ರಿಯಕರ ರಮೇಶ್ ಕುಮಾರ್ ಜತೆ ಸೇರಿ ಸಂಗೀತಾ ಬ್ಲಾಕ್‌ವೆುಲ್ ಮಾಡುತ್ತಿದ್ದಾರೆ ಎಂದು ಆರೋಪಿಸಿ ಪ್ರತಿ ದೂರು ನೀಡಿದ್ದ. ಈ ಹಿನ್ನೆಲೆಯಲ್ಲಿ ಮೂವರನ್ನೂ ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.