ತೆಕ್ಕಟ್ಟೆ: ಕುಂದಾಪುರ ತಾಲೂಕಿನ ಕುಂಭಾಶಿಯಿಂದ ಕಾಶ್ಮೀರದ ತನಕ ಸುಮಾರು 7ಸಾವಿರ ಕಿ.ಲೋ ಮೀಟರ್ ಪ್ರಯಾಣ, 15 ದಿನಗಳ ಗುರಿ, ಮಹಿಳಾ ಸಶಕ್ತಿಕರಣದ ಜಾಗೃತಿಯ ಸಂದೇಶದೊಂದಿಗೆ ಕುಂಭಾಶಿಯ ಸಾಕ್ಷಿ ಹೆಗಡೆ ಅಂತಹದ್ದೊಂದು ಸಾಹಸಕ್ಕೆ ಮುಂದಾದ ಯುವತಿ.
ಏಕಾಂಗಿಯಾಗಿ ಬೈಕ್ ಯಾತ್ರೆ ಹೊರಟು ಕಾಶ್ಮೀರ ತಲುಪಿ, ಮತ್ತೆ ಅಲ್ಲಿಂದ ಉಜ್ಜಯಿನಿ ತನಕ ಹಿಂದಿರುಗಿದ್ದು , ಜೂ.6 ರಂದು ಕುಂಭಾಶಿಯ ತನ್ನ ನಿವಾಸಕ್ಕೆ ಬಂದು ತಲುಪಲಿದ್ದಾರೆ.
ಮೂಲತಃ ಇಡುಗುಂಜಿಯವರಾದ, ಪ್ರಸ್ತುತ ಕುಂಭಾಶಿಯಲ್ಲಿ ನೆಲೆಸಿರುವ ಶಿವರಾಮ ಹೆಗಡೆ ಹಾಗೂ ಪುಷ್ಪಾ ದಂಪತಿಗಳ ತೃತೀಯ ಪುತ್ರಿಯಾದ ಸಾಕ್ಷಿ, ಕುಂದಾಪುರ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ತೃತೀಯ ಬಿ.ಕಾಂ. ವ್ಯಾಸಂಗ ಮಾಡುತ್ತಿದ್ದಾಳೆ. ಬೈಕ್ ಬಗ್ಗೆ ಅತೀವ ಕ್ರೇಜ್ ಹೊಂದಿದ್ದ ಈಕೆ ಸ್ನೇಹಿತರ ಸಹಾಯದಿಂದ ಬೈಕ್ ಚಲಾಯಿಸೋದನ್ನೂ ಕಲಿತುಕೊಂಡಿದ್ದಳು.ಕಳೆದ ಒಂದೂವರೆ ತಿಂಗಳ ಹಿಂದೆ ಪಲ್ಸರ್ ಎನ್.ಎಸ್ 125ಸಿಸಿ ಬೆ„ಕ್ ಖರೀದಿಸಿ, ರಸ್ತೆ ಸುರಕ್ಷತೆ ಬಗ್ಗೆ ಸೋಲೋ ಬೈಕ್ ರೈಡ್ ಪ್ರಭಾವಿತಳಾದ ಇವಳು ಕಾಶ್ಮೀರ ಟ್ರಿಪ್ ಪ್ಲ್ಯಾನ್ ಮಾಡಿದ್ದಳು. ಅದಕ್ಕೆ ಮನೆಯವರ ಬೆಂಬಲ, ಸ್ನೇಹಿತರು ಹಾಗೂ ಕುಂದಾಪುರ ಹಿಂದೂ ಜಾಗರಣ ವೇದಿಕೆಯವರು ಸಂಪೂರ್ಣ ನೆರವು ನೀಡಿ ಪ್ರೋತ್ಸಾಹಿಸಿದರು.
ಮೇ.25 ರಂದು ಬೆಳಿಗ್ಗೆ 7.30ಕ್ಕೆ ಕುಂಭಾಶಿಯಿಂದ ಹೊರಟ ಸಾಕ್ಷಿ, ಸಂಜೆ 5 ಗಂಟೆಯ ವೇಳೆಗೆ ಮಹಾರಾಷ್ಟ್ರದ ಕೊಲ್ಲಾಪುರಕ್ಕೆ ಸುಮಾರು 520 ಕಿ.ಮೀ ದೂರ ರೈಡ್ ಮಾಡಿದ್ದಾಳೆ. 2ನೇ ದಿನದಲ್ಲಿ 380 ಕಿ.ಮೀ ಸಂಚಾರಿಸಿ ಪನ್ವೇಲ್ ತಲುಪಿದ್ದಾಳೆ. ಈ ಮಧ್ಯೆ ಗರಿಷ್ಠ 700ಕಿ.ಮೀ ರೈಡ್ ಮಾಡಿದ್ದೂ ಇದೆ. 6ನೇ ದಿನ ಕಾಶ್ಮೀರ ತಲುಪಿದ್ದಳು. ಅಲ್ಲಿಂದ ಚಂಡಿಘಡ್, ಹರಿಯಾಣ ರಾಜ್ಯಗಳನ್ನು ದಾಟಿ ಜೂನ್ 3ರಂದು ಮಧ್ಯಪ್ರದೇಶದ ಉಜ್ಜಯಿನಿಗೆ ಹಿಂದಿರುಗಿದ್ದಾಳೆ.
ಪ್ರತಿದಿನ ಬೆಳಗ್ಗೆ 4 ಗಂಟೆಗೆ ಹೊರಟರೆ ಸಂಜೆ 7 ಗಂಟೆಯ ಒಳಗೆ ಯಾವುದಾದರೂ ನಗರದಲ್ಲಿ ರೂಮ್‌ನಲ್ಲಿ ಉಳಿದುಕೊಳ್ಳೋದು. ಮತ್ತೆ ರೈಡ್, ದಾರಿ ಮಧ್ಯೆ ಸಿಗುವ ಮಹಿಳೆಯೊಂದಿಗೆ ಒಂದಿಷ್ಟು ಮಾತುಕತೆ, ಪ್ರೇರಣೆ ತುಂಬುವ ಕೆಲಸ. ಉತ್ತರ ಭಾರತದ ಊಟ ತಿಂಡಿ, ಮಾರ್ಗ ಮಧ್ಯದಲ್ಲಿ ಹತ್ತಿರ ಸಿಗುವ ಪ್ರವಾಸಿ ತಾಣಗಳಿಗೂ ಭೇಟಿ. ಇದು ಸಾಕ್ಷಿಯ ಸದ್ಯದ ದಿನಚರಿ.
ಕುಂಭಾಶಿಯಿಂದ ಕಾಶ್ಮೀರ ತಲುಪುವ ಹಂಬಲ ವ್ಯಕ್ತಪಡಿಸಿದಾಗ ಮನೆಯವರ ಒಪ್ಪಿಗೆ ನೀಡಿದರು. ಬಳಿಕ ಸ್ನೇಹಿತರು ಹಾಗೂ ಕುಂದಾಪುರ ಹಿಂದೂ ಜಾಗರಣ ವೇದಿಕೆಯವರು ಬೈಕ್ ರೈಡಿಗೆ ಬೇಕಾಗುವ ಅಗತ್ಯ ವಸ್ತುಗಳು, ಪೆಟ್ರೋಲ್, ಊಟ, ವಸತಿಯ ವೆಚ್ಚವನ್ನು ನೀಡಿ ಸಹಕರಿಸಿದ್ದಾರೆ. ಮಹಿಳಾ ಸಶಕ್ತಿಕರಣದ ಜಾಗೃತಿಯ ಮೂಡಿಸುವ ಜತೆಗೆ ಸಾಮಾಜಿಕ ಕಾರ್ಯದಲ್ಲಿ ಏನಾದರೂ ಸಾಧನೆ ಮಾಡಬೇಕು ಎನ್ನುವ ಬಯಕೆಗೆ ವೇದಿಕೆ ದೊರಕಿದ್ದು ನಿಜಕ್ಕೂ ಸಂತಸ ತಂದಿದೆ.
– ಸಾಕ್ಷಿ ಹೆಗಡೆ ಕುಂಭಾಶಿ
ಟಿ.ಲೋಕೇಶ್ ಆಚಾರ್ಯ ತೆಕ್ಕಟ್ಟೆ (ವರದಿ)