ಬೆಂಗಳೂರು: ಉದ್ಯೋಗ ಕೊಡಿಸುವ ನೆಪದಲ್ಲಿ ಯುವತಿಯರನ್ನು ಹೋಟೆಲ್‌ಗಳಿಗೆ ಕರೆಸಿಕೊಂಡು ಅಸಭ್ಯವಾಗಿ ವರ್ತಿಸುತ್ತಿದ್ದ ವ್ಯಕ್ತಿಯನ್ನು ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ. ಆರ್.ಆರ್.ನಗರ ನಿವಾಸಿ ಅನಂತ್ ಹೆಬ್ಟಾರ್ ಬಂಧಿತ.
ಉದ್ಯೋಗ ಜಾಲತಾಣಗಳಲ್ಲಿ ಉದ್ಯೋಗ ಹುಡುಕುತ್ತಿರುವ ಯುವತಿಯರನ್ನು ನಕಲಿ ಹೆಸರುಗಳ ಮೂಲಕ ಪರಿಚಯಿಸಿಕೊಳ್ಳುತ್ತಿದ್ದ ಆರೋಪಿ ಸಂದರ್ಶನದ ನೆಪದಲ್ಲಿ ದೌರ್ಜನ್ಯ ಎಸಗುತ್ತಿದ್ದ. 2017ರ ಮೇನಲ್ಲಿ ಇದೇ ರೀತಿಯ ಪ್ರಕರಣಗಳಲ್ಲಿ ಯಶವಂತಪುರ ಪೊಲೀಸರು ಬಂಧಿಸಿ ಜೈಲಿಗೆ ಕಳುಹಿಸಿದ್ದರು. ಬಿಡುಗಡೆಯಾಗಿ ಬಂದು ಮತ್ತೆ ಕೃತ್ಯ ಪ್ರಾರಂಭಿಸಿದ್ದ ಎಂದು ಸೈಬರ್ ಪೊಲೀಸರು ತಿಳಿಸಿದ್ದಾರೆ.
ಫೇಸ್‌ಬುಕ್‌ನ ಎಚ್‌ಆರ್ ಮ್ಯಾನೇಜರ್, ಪ್ರತಿಷ್ಠಿತ ಕಂಪನಿ ಹಿರಿಯ ಅಧಿಕಾರಿ, ಟ್ಯಾಲೆಂಟ್ ಸೋರ್ಸ್‌ರ್ ಮುಖ್ಯಸ್ಥ ಎಂದು ಬರೆದುಕೊಳ್ಳುತ್ತಿದ್ದ ಅನಂತ್ ಹೆಬ್ಟಾರ್, ಮಹೇಶ್ ರಾವ್, ದಿನೇಶ್ ರಾಜ್ ಗೌಡ ಸೇರಿದಂತೆ ಹತ್ತಾರು ನಕಲಿ ಹೆಸರುಗಳಲ್ಲಿ ವಂಚಿಸಿದ್ದಾನೆ.
ಅಲ್ಲದೆ ಉದ್ಯೋಗ ಜಾಲತಾಣದಲ್ಲಿ ಪರಿಚಯವಾದ ಯುವತಿಯರಿಗೆ ಐಷಾರಾಮಿ ಹೋಟೆಲ್ ಹಾಗೂ ರೆಸ್ಟೋರೆಂಟ್‌ಗಳಿಗೆ ಸಂದರ್ಶನಕ್ಕೆ ಬರುವಂತೆ ಹೇಳುತ್ತಿದ್ದ. ಬರಲು ಒಪ್ಪಿದ ಮಹಿಳಾ ಅಭ್ಯರ್ಥಿಗಳಿಗೆ ಅಂಗಾಂಗ ಪ್ರದರ್ಶಿಸುವ ವಸ್ತ್ರ ಧರಿಸಿಕೊಂಡು ಬರಬೇಕು. ಹೋಟೆಲ್ ಬಿಲ್ ತಾವೇ ಪಾವತಿಸಬೇಕು. ಜತೆಗೆ ಅಲ್ಲಿ ಸಂದರ್ಶನ ನಡೆಸುವ ಬಾಸ್‌ಗೆ ಎಲ್ಲ ರೀತಿಯಲ್ಲಿ ಸಹಕರಿಸಬೇಕು ಎಂದು ಪ್ರತ್ಯೇಕವಾಗಿ ವಾಟ್ಸ್‌ಆ್ಯಪ್ ಸಂದೇಶದ ಮೂಲಕ ಅಶ್ಲೀಲವಾಗಿ ಸಂಭಾಷಣೆ ನಡೆಸುತ್ತಿದ್ದ.
ಇತ್ತೀಚೆಗೆ ಮಹಿಳಾ ಟೆಕ್ಕಿಯೊಬ್ಬರಿಗೆ ಈ ರೀತಿ ಸಂಭಾಷಣೆ ನಡೆಸಿದ್ದು,ಆಕೆ ಜುಲೈ 7ರಂದು ದೂರು ನೀಡಿದ್ದರು. ಅನಂತರ ಸಂದರ್ಶನಕ್ಕೆ ಹೋಗುವ ರೀತಿಯಲ್ಲಿ ಮಾಗಡಿ ರಸ್ತೆಯಲ್ಲಿರುವ ಮಾಲ್‌ವೊಂದರ ಬಳಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದರು.