Advertisement

‘ಯುವ ಜನತೆ ಜೀವನ ಪ್ರೀತಿ ಬೆಳೆಸಿಕೊಳ್ಳಲಿ’

12:40 PM Apr 08, 2020 | Harsha Rao |

ಮಣಿಪಾಲ: ಸುವರ್ಣ ಸಂಭ್ರಮ ದಲ್ಲಿರುವ ಉದಯವಾಣಿ ದಿನಪತ್ರಿಕೆಯು ಸ್ವಾಮಿ ವಿವೇಕಾನಂದರ ಜನ್ಮದಿನದ ಹಿನ್ನೆಲೆಯಲ್ಲಿ ವಿವಿಧ ಶಿಕ್ಷಣ ಸಂಸ್ಥೆಗಳ ಸಹಭಾಗಿತ್ವದಲ್ಲಿ ಶನಿವಾರ ‘ರಾಷ್ಟ್ರೀಯ ಯುವ ದಿನ’ವನ್ನು ಆಚರಿಸಿತು. ಮಂಗಳೂರು, ಪುತ್ತೂರು, ಉಡುಪಿ ಮತ್ತು ಕುಂದಾಪುರಗಳಲ್ಲಿ ನಡೆದ ಕಾರ್ಯಕ್ರಮದಲ್ಲಿ ನಾಲ್ವರು ಚಿಂತಕರು ಸ್ವಾಮಿ ವಿವೇಕಾನಂದರ ಕುರಿತು ಉಪನ್ಯಾಸ ನೀಡಿದರು.

Advertisement

ಮಂಗಳೂರಿನ ಕೊಡಿಯಾಲಬೈಲಿನ ಶಾರದಾ ಸಮೂಹ ಶಿಕ್ಷಣ ಸಂಸ್ಥೆಯ ಜ್ಞಾನ ಮಂದಿರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕುದ್ರೋಳಿ ಶ್ರೀ ನಾರಾಯಣ ಗುರು ಕಾಲೇಜಿನ ಕನ್ನಡ ಉಪನ್ಯಾಸಕ ಕೇಶವ ಬಂಗೇರ ಮಾತನಾಡಿ, ವಿದ್ಯಾರ್ಥಿಗಳು ಬಗೆ ಬಗೆಯ ತುಮುಲಗಳಿಗೆ ಒಳಗಾಗಿ ಜೀವನಉತ್ಸಾಹ ಕಳೆದುಕೊಳ್ಳುತ್ತಿರುವುದು ಬೇಸರದ ಸಂಗತಿ. ವಿವೇಕಾನಂದರ ಜೀವನ ಸ್ಫೂರ್ತಿಯ ಸಂದೇಶಗಳ ಅನುಷ್ಠಾನದ ಮುಖೇನ ವಿದ್ಯಾರ್ಥಿ ಗಳು ಜೀವನ ಪ್ರೀತಿ ಬೆಳೆಸಿಕೊಳ್ಳಲು ಸಾಧ್ಯ ಎಂದರು. ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಪ್ರೊ| ಎಂ.ಬಿ.ಪುರಾಣಿಕ್‌ ಅಧ್ಯಕ್ಷತೆ ವಹಿಸಿದ್ದರು. ಪ್ರಾಂಶುಪಾಲೆ ಸುನೀತಾ ವಿ. ಮಡಿ ಉಪಸ್ಥಿತರಿದ್ದರು.

ಪುತ್ತೂರು: ನಗರದ ಶ್ರೀ ರಾಮಕೃಷ್ಣ ಪ್ರೌಢಶಾಲೆ ಯಲ್ಲಿ ಸವಣೂರು ಸ.ಪ.ಪೂ. ಕಾಲೇಜಿನ ಉಪನ್ಯಾಸಕ ಬಿ.ವಿ. ಸೂರ್ಯನಾರಾಯಣ ಉಪನ್ಯಾಸ ನೀಡಿ, ಓರ್ವ ಸನ್ಯಾಸಿಯಾಗಿ ಜಗತ್ತಿನ ಮನ ಗೆದ್ದ ಮತ್ತು ಪ್ರೇರಣದಾಯಕ ವ್ಯಕ್ತಿತ್ವವನ್ನು ಹೊಂದಿದ್ದವರು ವಿವೇಕಾನಂದರು. ಕೇವಲ 39 ವರ್ಷ ಬದುಕಿದ್ದರೂ ಪರಿಣಾಮಕಾರಿ ಬದುಕು ಸಾಗಿಸಿದರು ಎಂದರು. ಪ್ರೌಢಶಾಲೆಯ ಸಂಚಾಲಕ ಹೇಮನಾಥ ಶೆಟ್ಟಿ ಕಾವು ಅಧ್ಯಕ್ಷತೆ ವಹಿಸಿದ್ದರು.

ಶಿರ್ವ: ಬಂಟಕಲ್ಲು ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಮಣಿಪಾಲದ ಸ್ಕೂಲ್‌ ಆಫ್‌ ಮ್ಯಾನೇಜ್ಮೆಂಟ್‌ನ ಪ್ರಾಧ್ಯಾಪಕ ಪ್ರೊ| ನಂದನ್‌ ಪ್ರಭು ಉಪನ್ಯಾಸ ನೀಡಿ, ವಿಶ್ವದ ಚಿಂತನ ಕ್ರಮಕ್ಕೆ ವಿವೇಕಾನಂದರ ಕೊಡುಗೆ, ಅವರ ಇಡೀ ಚಿಂತನೆಯ ಸಾರ, ಭಾರತದ ಪ್ರಜೆಯ ಮೇಲೆ ಅವರ ಪ್ರಭಾವಗಳ ಬಗ್ಗೆ ವಿವಿಧ ದೃಷ್ಟಿಕೋನಗಳಿಂದ ವಿಶ್ಲೇಷಣೆ ನಡೆಸಿದರು. ಸಂಸ್ಥೆಯ ಕಾರ್ಯದರ್ಶಿ ರತ್ನಕುಮಾರ್‌ ಕಾರ್ಯ ಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಕುಂದಾಪುರ: ಇಲ್ಲಿನ ಡಾ| ಬಿ.ಬಿ. ಹೆಗ್ಡೆ ಕಾಲೇಜಿನ ಆಶ್ರಯದಲ್ಲಿ ಕಾಲೇಜಿನ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೋಟೇಶ್ವರದ ಶ್ರೀ ಕಾಳಾವರ ವರದರಾಜ ಎಂ. ಶೆಟ್ಟಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ| ರಾಜೇಂದ್ರ ಎಸ್‌. ನಾಯಕ್‌ ಮಾತನಾಡಿ, ಸ್ವಾಮಿ ವಿವೇಕಾನಂದರ ಜೀವನ ಶೈಲಿಯೇ ಯುವ ಸಮೂಹಕ್ಕೆ ಪ್ರೇರಣೆ ಎಂದರು. ಗುರ್ಮೆ ಸುರೇಶ್‌ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿದರು. ಕಾಲೇಜಿನ ನಿರ್ದೇಶಕ ಪ್ರೊ| ದೋಮ ಚಂದ್ರಶೇಖರ್‌ ಅಧ್ಯಕ್ಷತೆ ವಹಿಸಿದ್ದರು.

Advertisement

ಸ್ವಾಮಿ ವಿವೇಕಾನಂದರ ಜೀವನ ಸ್ಫೂರ್ತಿಯ ಸಂದೇಶಗಳ ಅನುಷ್ಠಾನದ ಮುಖೇನ ವಿದ್ಯಾರ್ಥಿಗಳು ಜೀವನ ಪ್ರೀತಿ ಬೆಳೆಸಿಕೊಳ್ಳಲು ಸಾಧ್ಯ.
-ಕೇಶವ ಬಂಗೇರ, ಕನ್ನಡ ಉಪನ್ಯಾಸಕರು

ಸ್ವಾಮಿ ವಿವೇಕಾನಂದರ ಜೀವನ ಶೈಲಿಯೇ ಯುವ ಸಮೂಹಕ್ಕೆ ಪ್ರೇರಣೆ.
-ರಾಜೇಂದ್ರ ನಾಯಕ್‌, ಪ್ರಾಂಶುಪಾಲರು

ಓರ್ವ ಸನ್ಯಾಸಿಯಾಗಿ ಜಗತ್ತಿನ ಮನ ಗೆದ್ದ ಮತ್ತು ಪ್ರೇರಣದಾಯಕ ವ್ಯಕ್ತಿತ್ವವನ್ನು ಹೊಂದಿದ್ದವರು ವಿವೇಕಾನಂದರು.
-ಸೂರ್ಯನಾರಾಯಣ, ಉಪನ್ಯಾಸಕರು

ವಿಶ್ವದ ಚಿಂತನ ಕ್ರಮಕ್ಕೆ ವಿವೇಕಾನಂದರ ಕೊಡುಗೆ ಅಪಾರ.
– ಪ್ರೊ| ನಂದನ್‌ ಪ್ರಭು, ಪ್ರಾಧ್ಯಾಪಕರು

Advertisement

Udayavani is now on Telegram. Click here to join our channel and stay updated with the latest news.

Next