Advertisement

ಯುವಜನತೆ ಸಾವಲಂಬಿ ಬದುಕು ಕಟ್ವಿಕೊಳ್ಳಬೇಕು

12:55 PM Jun 16, 2017 | Team Udayavani |

ಮೈಸೂರು: ಸಮಾಜದಲ್ಲಿ ಪ್ರತಿಯೊಂದು ವೃತ್ತಿಗೂ ಅದರದ್ದೇ ಆದ ಗೌರವವಿದೆ. ಯುವಜನತೆ ವೃತ್ತಿ ಕೌಶಲ್ಯ ಬೆಳೆಸಿಕೊಂಡು ಸ್ವಾವಲಂಬಿಯಾಗಿ ಬದುಕು ಕಟ್ಟಿಕೊಳ್ಳಬೇಕು ಎಂದು ಸಂಸದ ಪ್ರತಾಪ್‌ಸಿಂಹ ಹೇಳಿದರು.

Advertisement

ಪ್ರಧಾನಮಂತ್ರಿ ಕೌಶಲ್ಯ ವಿಕಾಸ ಯೋಜನೆಯು ಕೇಂದ್ರ ಸರ್ಕಾರದ ಕೌಶಲ್ಯ ಅಭಿವೃದ್ಧಿ ಹಾಗೂ ಉದ್ಯಮಶೀಲತೆ ಮಂತ್ರಾಲಯದಿಂದ ಮೈಸೂರು ತಾಲೂಕಿನ ಇಲವಾಲದಲ್ಲಿ ಆರಂಭಿಸಿರುವ ಪ್ರಧಾನ ಮಂತ್ರಿ ಕೌಶಲ್ಯ ಕೇಂದ್ರದ ಮೈಸೂರು ಶಾಖೆ ಗುರುವಾರ ಉದ್ಘಾಟಿಸಿ ಮಾತನಾಡಿದರು.

ಇತ್ತೀಚಿನ ದಿನಗಳಲ್ಲಿ ಗಾರೆ ಕೆಲಸ, ಮರಗೆಲಸ, ಪ್ಲಂಬಿಂಗ್‌ ಸೇರಿದಂತೆ ಇನ್ನಿತರ ಕೆಲಸಗಳನ್ನು ಮಾಡುವವರ ಸಂಖ್ಯೆ ಕಡಿಮೆಯಾಗುತ್ತಿದ್ದು, ಸಮಾಜದಲ್ಲಿ ಇಂತಹ ವೃತ್ತಿಗಳು ಕಡಿಮೆಯಾದಂತೆ ಸಾರ್ವಜನಿಕರ ಜೀವನದ ಮೇಲೆ ಹೆಚ್ಚಿನ ಪರಿಣಾಮ ಬೀರಲಿದೆ. ಹೀಗಾಗಿ ಪ್ರತಿಯೊಂದು ವೃತ್ತಿಗೂ ತನ್ನದೇ ಆದ ಗೌರವವಿದ್ದು, ಯುವಜನತೆ ಇದನ್ನು ಅರಿತುಕೊಂಡು ವೃತ್ತಿಕೌಶಲ್ಯ  ಬೆಳೆಸಿಕೊಂಡು ಸ್ವಾವಲಂಬಿ ಜೀವನ ರೂಪಿಸಿಕೊಳ್ಳಬೇಕಿದೆ ಎಂದರು.

ವೃತ್ತಿಕೌಶಲ್ಯ ತರಬೇತಿ: ದೇಶದ 125 ಕೋಟಿ ಜನಸಂಖ್ಯೆಯಲ್ಲಿ ಶೇ.61 ಭಾಗ 35 ವರ್ಷದೊಳಗಿನವರಿದ್ದು, ಇವರುಗಳಿಗೆ ಸರ್ಕಾರದಿಂದ ಕೆಲಸ ನೀಡುವುದು ಅಸಾಧ್ಯ ಎಂಬುದನ್ನು ಅರಿತ ಪ್ರಧಾನಿ ನರೇಂದ್ರ ಮೋದಿ ವೃತ್ತಿ ಕೌಶಲ್ಯ ಕೇಂದ್ರಗಳನ್ನು ಆರಂಭಿಸಿ, ಖಾಸಗಿ ಸಂಘ-ಸಂಸ್ಥೆಗಳ ಸಹಕಾರೊಂದಿಗೆ ನಿರುದ್ಯೋಗಿ ಯುವಕ-ಯುವತಿಯರಿಗೆ ವೃತ್ತಿ ಕೌಶಲ್ಯ ತರಬೇತಿ ನೀಡಿದರು.

ಅದರಂತೆ ದೇಶದ 6 ಕೋಟಿ ಯುವಜನತೆ ನಾನಾ ತರಬೇತಿ ಪಡೆದಿದ್ದು, ಇವರುಗಳಿಗೆ ಪ್ರಮಾಣ ಪತ್ರ ಸಹ ವಿತರಿಸಲಾಗಿದೆ. ಅಲ್ಲದೆ ಮುದ್ರಾ ಯೋಜನೆಯ ಮೂಲಕ ಸ್ವಂತವಾಗಿ ಉದ್ದಿಮೆ, ವ್ಯಾಪಾರ-ವಹಿವಾಟು ಆರಂಭಿಸುವವರಿಗೆ ಸಾಲ ಸೌಲಭ್ಯ ನೀಡಲಾಗಿದೆ. ಇದಕ್ಕಾಗಿ ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ 2.44 ಲಕ್ಷ ಕೋಟಿ ರೂ.ಗಳನ್ನು ಸಹ ಮೀಸಲಿಡಲಾಗಿದೆ.

Advertisement

ಇಲವಾಲದಲ್ಲಿ ನೂತನವಾಗಿ ಆರಂಭಿಸಿರುವ ಕೌಶಲ್ಯ ತರಬೇತಿ ಕೇಂದ್ರದಲ್ಲಿ ವಾರ್ಷಿಕ 900 ಮಂದಿಗೆ ತರಬೇತಿ ನೀಡುವ ಗುರಿ ಹೊಂದಲಾಗಿದ್ದು, ಯುವಜನತೆ ಇದರ ಸದ್ಬಳಕೆ ಮಾಡಿಕೊಳ್ಳಬೇಕು ಎಂದರು. ತರಬೇತಿ ಪಡೆಯಿರಿ: ಶಾಸಕ ಜಿ.ಟಿ.ದೇವೇಗೌಡ ಮಾತನಾಡಿ, ದೇಶದ ನಿರುದ್ಯೋಗ ಸಮಸ್ಯೆ ಹೋಗಲಾಡಿಸುವ ಭರವಸೆ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ ಇದಕ್ಕಾಗಿ ಹಲವು ಕಾರ್ಯಕ್ರಮಗಳನ್ನು ರೂಪಿಸುತ್ತಿದ್ದಾರೆ.

ಇತ್ತೀಚಿಗೆ ರೈತರು ಮಳೆ ಹಾಗೂ ಬೆಳೆ ಅಭಾವ ಎದುರಿಸುತ್ತಿದ್ದು, ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಶಿಕ್ಷಣವನ್ನು ಅರ್ಧಕ್ಕೆ ಮೊಟಕುಗೊಳಿಸಿ ವಿವಿಧ ಕೆಲಸಗಳಿಗೆ ತೊಡಗಿಸಿಕೊಳ್ಳುತ್ತಿದ್ದಾರೆ. ಆದರೆ ಯುವಜನರಿಗೆ ವೃತ್ತಿಕೌಶಲ್ಯ ತರಬೇತಿ ಅಗತ್ಯವಿದ್ದು, ಹೀಗಾಗಿ ಯುವಜನತೆ ಕೇಂದ್ರವನ್ನು ಸದುಉಪಯೋಗ ಮಾಡಿಕೊಂಡು ವೃತ್ತಿಕೌಶಲ್ಯ ತರಬೇತಿ ಪಡೆದುಕೊಳ್ಳಬೇಕು ಎಂದು ಹೇಳಿದರು.

ಇಲವಾಲ ಗ್ರಾಪಂ ಉಪಾಧ್ಯಕ್ಷ ಗಂಗಾಧರಗೌಡ, ರಾಜ್ಯ ಹೋಟೆಲ್‌ ಮಾಲೀಕರ ಸಂಘದ ಅಧ್ಯಕ್ಷ ಎಂ.ರಾಜೇಂದ್ರ, ಪ್ರಧಾನಮಂತ್ರಿ ವೃತ್ತಿಕೌಶಲ್ಯ ತರಬೇತಿ ಕೇಂದ್ರದ ವಲಯ ವ್ಯವಸ್ಥಾಪಕ ಎಸ್‌.ಜಿ.ಸುಧಾಕರ್‌, ಚಾಮುಂಡೇಶ್ವರಿ ಕ್ಷೇತ್ರದ ಬಿಜೆಪಿ ಅಧ್ಯಕ್ಷ ಅರುಣ್‌ಕುಮಾರ್‌ಗೌಡ, ಉಪಾಧ್ಯಕ್ಷ ಬಾಲಕೃಷ್ಣ ಇನ್ನಿತರರು ಹಾಜರಿದ್ದರು.

ಯಾವ್ಯಾವ ತರಬೇತಿ:  ಇಲವಾಲದ ಬಸ್‌ನಿಲ್ದಾಣದ ಕಟ್ಟಡದಲ್ಲಿ ನೂತನವಾಗಿ ಆರಂಭಿಸಿರುವ ಪ್ರಧಾನಮಂತ್ರಿ ಕೌಶಲ್ಯ ಕೇಂದ್ರದಲ್ಲಿ 18 ರಿಂದ 35 ವರ್ಷದ ಯುವಕ-ಯುವತಿಯರಿಗೆ ಅರ್ಹ ವಿದ್ಯಾರ್ಹತೆಗೆ ತಕ್ಕಂತೆ 6 ವೃತ್ತಿಪರ ಕೌಶಲ್ಯ ತರಬೇತಿ ಉಚಿತವಾಗಿ ನೀಡಲಾಗುತ್ತದೆ.

ಅದರಂತೆ ಅಸಿಸ್ಟೆಂಟ್‌ ಎಲೆಕ್ಟ್ರಿಷನ್‌, ಫ‌ುಡ್‌ ಅಂಡ್‌ ಬೆವೆರೆಜಸ್‌-ಸ್ಟಿವಾರ್ಡ್‌, ರೀಟೆಲ್‌ ಸೇಲ್ಸ್‌ ಅಸೋಸಿಯೇಟ್ಸ್‌, ಡೊಮೆಸ್ಟಿಕ್‌ ಐಟಿ ಹೆಲ್ಪ್ ಡೆಸ್ಕ್ ಅಟೆಂಡೆಂಟ್‌, ಫೀಲ್ಡ್‌ ಟೆಕ್ನಿಷನ್‌-ಅದರ್‌ ಹೋಮ್‌  ಅಪ್ಲೆ„ಯನ್ಸ್‌ಸ್‌, ಫೀಲ್ಡ್‌ ಟೆಕ್ನಿಷನ್‌-ಕಂಪ್ಯೂಟರ್‌ ಅಂಡ್‌ ಪೆರಿಪರಲ್ಸ್‌ ತರಬೇತಿಗಳನ್ನು ನೀಡಲಾಗುವುದು. ಆಸಕ್ತರು ಸೂಕ್ತ ದಾಖಲೆಗಳನ್ನು ಸಲ್ಲಿಸಿ ಹೆಸರು ನೋಂದಣಿ ಮಾಡಿಕೊಳ್ಳಬಹುದು. ಮಾಹಿತಿಗಾಗಿ ದೂ: 0821-2403671 ಅನ್ನು ಸಂಪರ್ಕಿಸಬಹುದು.

Advertisement

Udayavani is now on Telegram. Click here to join our channel and stay updated with the latest news.

Next