ಮೂಡಬಿದಿರೆ: ನಮಗೆ ಬದುಕಬೇಕಾದರೆ ಆಹಾರ ಮುಖ್ಯ. ಕೃಷಿ ನಮಗೆ ಆಹಾರಕ್ಕೆ ಮಾತ್ರವಲ್ಲ ಅದು ನಮ್ಮ ಸಂಸ್ಕೃತಿ. ಉತ್ತಮ ಆಹಾರ, ಸಂಸ್ಕೃತಿ ಮುಂದೆ ಕೂಡ ಸಿಗಬೇಕಾದರೆ ಯುವಜನತೆ ಕೃಷಿಯತ್ತ ಬರಬೇಕು. ಗದ್ದೆಯೆಡೆಗಿನ ಹೆಜ್ಜೆ ಕೃಷಿಯ ಜತೆ ಯುವಜನರ ನಂಟನ್ನು ಬೆಸೆಯುವಲ್ಲಿ ಸಹಕಾರಿ ಎಂದು ಮೂಡಬಿದಿರೆ ರೈತ ಸಂಘದ ಅಧ್ಯಕ್ಷ ಧನಕೀರ್ತಿ ಬಲಿಪ ಹೇಳಿದರು. ರೋಟರಿ ಎಜುಕೇಶನ್ ಸೊಸೈಟಿ ಹಾಗೂ ರೋಟರಿ ಕ್ಲಬ್ ಮೂಡ ಬಿದಿರೆ ಟೆಂಪಲ್ ಟೌನ್ ಹಾಗೂ ಮೂಡಬಿದಿರೆ ಪ್ಲೆಸ್‌ಕ್ಲಬ್ ಆಶ್ರಯದಲ್ಲಿ ‘ಗದ್ದೆಯೆಡೆಗೆ ಮಕ್ಕಳ ನಡಿಗೆ’ ಎಂಬ ವಿಶಿಷ್ಟ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ರೋಟರಿ ವಿದ್ಯಾಸಂಸ್ಥೆಗಳ 800 ವಿದ್ಯಾರ್ಥಿಗಳು ತಮ್ಮ ವಿದ್ಯಾಲಯದ ಸಮೀಪವೇ ಇರುವ ದೊಡ್ಮನೆ ರಸ್ತೆ ತೋಟ ಮನೆಯ ಹದಮಾಡಿಟ್ಟ ಕೆಸರಗದ್ದೆಯಲ್ಲಿ ನಾಟಿ ನಡೆಸಿದರು. ಕಂಬಳ ಪ್ರಾತ್ಯಕ್ಷಿಕೆ ಹಾಗೂ ಕೆಸರುಗದ್ದೆಯಲ್ಲಿ ಗ್ರಾಮೀಣ ಕ್ರೀಡಾಕೂಟಗಳನ್ನು ಆಯೋಜಿಸಲಾಗಿತ್ತು.
ರೋಟರಿ ಎಜುಕೇಶನ್ ಸೊಸೈಟಿ ಸಂಚಾಲಕ ಡಾ| ಯತಿಕುಮಾರ ಸ್ವಾಮಿ ಗೌಡ ಅಧ್ಯಕ್ಷತೆ ವಹಿಸಿದ್ದರು. ರೋಟರಿ ನಿಯೋಜಿತ ಅಧ್ಯಕ್ಷ ಡಾ| ರಮೇಶ್, ಪುರಸಭಾ ಪರಿಸರ ಅಧಿಕಾರಿ ಶಿಲ್ಪಾ, ರೋಟರಿ ಟೆಂಪಲ್ ಟೌನ್ ಅಧ್ಯಕ್ಷ ಬಲರಾಮ್ ಕೆ.ಎಸ್., ಮೂಡಬಿದಿರೆ ಪ್ರಸ್‌ಕ್ಲಬ್ ಅಧ್ಯಕ್ಷ ಜೈಸನ್ ತಾಕೊಡೆ, ಗದ್ದೆಯ ಯಜಮಾನ ಓಮಯ್ಯ ಪೂಜಾರಿ, ರೋಟರಿ ವಿದ್ಯಾಸಂಸ್ಥೆಗಳ ಪ್ರಾಂಶುಪಾಲ ವಿನ್ಸೆಂಟ್ ಡಿ’ಕೋಸ್ತ, ಆಡಳಿತಾಧಿಕಾರಿ ಶುಭಕರ ಅಂಚನ್ ಹಾಗೂ ವಿವಿಧ ವಿಭಾಗಗಳ ಮುಖ್ಯಸ್ಥರು, ಸಿಬಂದಿ ಉಪಸ್ಥಿತರಿದ್ದರು. ದಿವ್ಯಾ ನಿರೂಪಿಸಿದರು.