ಮಂಗಳೂರು: ನಾಲ್ಕನೇ ಕೈಗಾರಿಕಾ ಕ್ರಾಂತಿ ಆರಂಭ ಗೊಂಡಿದ್ದು ಅಭೂತಪೂರ್ವ ಗತಿಯಲ್ಲಿ ತಂತ್ರ ಜ್ಞಾನದ ಬೆಳವಣಿಗೆ ಸಾಗಲಿದೆ. ಇದು ವ್ಯಕ್ತಿಗತವಾಗಿ ಮತ್ತು ಸಾಮಾಜಿಕವಾಗಿ ಮಹತ್ತರ ಬದಲಾವಣೆಗಳನ್ನು ಹುಟ್ಟು ಹಾಕಲಿದ್ದು ಈ ಕಾಲಘಟ್ಟದಲ್ಲಿ ವಿದ್ಯಾರ್ಥಿ ಯುವಜನತೆ ಮೂಕ ಪ್ರೇಕ್ಷಕರಾಗದೆ ಇದರಲ್ಲಿ ಸಕ್ರಿಯ ಭಾಗೀ ದಾರಿಗಳಾಗಿ ಸಕಾರಾತ್ಮಕ ಪರಿವರ್ತನೆಯ ಹರಿಕಾರರಾಗಬೇಕು ಎಂದು ಸಿಂಗಾಪುರ ನಾನ್ಯಾಂಗ್ ತಾಂತ್ರಿಕ ವಿಶ್ವ ವಿದ್ಯಾನಿಲಯದ ಅಧ್ಯಕ್ಷ ಪ್ರೊ| ಸುಬ್ರ ಸುರೇಶ್ ಹೇಳಿದರು.
ಕೊಣಾಜೆ ಮಂಗಳಗಂಗೋತ್ರಿಯಲ್ಲಿ ಸೋಮವಾರ ಜರಗಿದ ಮಂಗಳೂರು ವಿಶ್ವವಿದ್ಯಾನಿಲಯದ 36ನೇ ವಾರ್ಷಿಕ ಘಟಿಕೋತ್ಸವದಲ್ಲಿ ಫಟಿಕೋತ್ಸವ ಭಾಷಣ ಮಾಡಿದ ಅವರು ನಾಲ್ಕನೇ ಕೈಗಾರಿಕಾ ಕ್ರಾಂತಿ ಬೌದ್ಧಿಕ ಜಗತ್ತು, ತಂತ್ರಜ್ಞಾನ ಜಗತ್ತು ಹಾಗೂ ಜೈವಿಕ ಜಗತ್ತು ಅನ್ನು ಆವರಿಸಿಕೊಂಡು ಸಾಗಲಿದೆ. ತಂತ್ರಜ್ಞಾನದ ಬೆಳವಣಿಗೆ ಅತ್ಯಂತ ವೇಗದ ಗತಿಯಲ್ಲಿ ಸಾಗಲಿದೆ. ವ್ಯಕ್ತಿಗತವಾಗಿ ಮತ್ತು ಸಾಮಾಜಿಕವಾಗಿ ತಂತ್ರಜ್ಞಾನ ಮತ್ತು ಮಾನವೀಯತೆಯ ನಡುವೆ ಎಚ್ಚರಿಕೆಯ ಸಮತೋಲನವನ್ನು ಕಾಯ್ದು ಕೊಂಡಾಗ ತಂತ್ರಜ್ಞಾನದ ಗರಿಷ್ಠ ಲಾಭವನ್ನು ಪಡೆದು ಕೊಳ್ಳಬಹುದು ಮತ್ತು ದುಷ್ಪಾರಿ ಣಾಮಗಳನ್ನು ಕನಿಷ್ಠ ಗೊಳಿಸಬಹುದು. ಮಾನವ ಮತ್ತು ತಂತ್ರಜ್ಞಾನದ ನಡುವಣ ಸಂವಹನದ ಸ್ವರೂಪ ನಾಲ್ಕನೇ ಕೈಗಾರಿಕಾ ಕ್ರಾಂತಿ ಹೆಚ್ಚು ಧನಾತ್ಮಕವಾಗಿರುತ್ತದೆಯೋ ಅಥವಾ ಹೆಚ್ಚು ಋಣಾತ್ಮಕವಾಗಿರುತ್ತದೆಯೋ ಎಂಬುದನ್ನು ನಿರ್ಧರಿಸುತ್ತದೆ ಎಂದರು.
ಇಂದಿನ ಜ್ಞಾನಾಧಾರಿತ ಯುಗದಲ್ಲಿ ವಿಶ್ವವಿದ್ಯಾನಿಲಯ ಶಿಕ್ಷಣದ ಉದ್ದೇಶ ಕೇವಲ ಶ್ರೇಯಾಂಕ ಪಡೆಯುವುದು, ಕೋರ್ಸ್‌ಗಳನ್ನು ಹೊಂದುವುದು ಅಥವಾ ಉದ್ಯೋಗಾವಕಾಶಗಳನ್ನು ಪಡೆದು ಜೀವನಾಧಾರ ಭದ್ರತೆಯನ್ನು ಗಳಿಸುವುದು ಮಾತ್ರವಲ್ಲ, ಜ್ಞಾನ ಮತ್ತು ಕೌಶಲಗಳ ನಿರಂತರ ಉನ್ನತೀಕರಣ, ರಚನಾತ್ಮಕ ಪ್ರಜೆಯಾಗಿ ಸಾಮಾಜಿಕ ಸ್ಪಂದನೆಗೆ ಮಾರ್ಗದರ್ಶಕವಾಗುವುದು ಕೂಡ ವಿಶ್ವ ವಿದ್ಯಾನಿಲಯ ಶಿಕ್ಷಣ ಗುರಿಯಾಗಿರಬೇಕು ಎಂದು ಹೇಳಿದರು.
“ಮಂಗಳೂರು ವಿವಿಯಲ್ಲಿ ನೀವು ಪಡೆದಿರುವ ಶಿಕ್ಷಣ ಜೀವನದಲ್ಲಿ ಎದುರಾಗುವ ಸವಾಲುಗಳನ್ನು ಎದುರಿಸಿ ಸಾಗುವ ಮತ್ತು ಪರಿವರ್ತನೆಯ ಶಕ್ತಿಯಾಗಿ ರೂಪಿಸಿದೆ’ ಎಂದರು.
ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಡಾ| ಕೆ. ಭೈರಪ್ಪ ಅವರು ವಿಶ್ವ ವಿದ್ಯಾನಿಲಯದ ಘಟಿಕೋತ್ಸವ ಘೋಷಿಸಿದರು.
ಗೌರವ ಡಾಕ್ಟರೇಟ್ ಪ್ರದಾನ
ಸಿಂಗಾಪುರ ನಾನ್ಯಾಂಗ್ ತಾಂತ್ರಿಕ ವಿಶ್ವವಿದ್ಯಾನಿಲಯದ ಅಧ್ಯಕ್ಷ ಪ್ರೊ| ಸುಬ್ರ ಸುರೇಶ್ ಅವರಿಗೆ ಮಂಗಳೂರು ವಿವಿ ಕುಲಪತಿ ಡಾ| ಕೆ. ಭೈರಪ್ಪ ಅವರು ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಿದರು.
ವಿವಿ ಕುಲಸಚಿವ ಪ್ರೊ| ಬಿ.ಎಸ್. ನಾಗೇಂದ ಪ್ರಕಾಶ್ ಅವರು ಸ್ವಾಗತಿಸಿ ಪ್ರಸ್ತಾ ವನೆಗೈದರು. ಪರಿಕ್ಷಾಂಗ ಕುಲ ಸಚಿವ ಪ್ರೊ| ಎ.ಎಂ.ಖಾನ್ ಉಪಸ್ಥಿತ ರಿದ್ದರು. ವಿಶ್ವವಿದ್ಯಾನಿಲಯ ಸಿಂಡಿಕೇಟ್ ಸದಸ್ಯರು, ಶೈಕ್ಷ ಣಿಕ ಮಂಡಳಿ ಸದಸ್ಯರು, ವಿವಿಧ ವಿಭಾಗ ಗಳ ಮುಖ್ಯಸ್ಥರು ಉಪಸ್ಥಿತ ರಿದ್ದರು.
97 ಮಂದಿಗೆ ಡಾಕ್ಟರೇಟ್ ಪದವಿ
ಘಟಿಕೋತ್ಸವದಲ್ಲಿ ಮಂಗಳೂರು ವಿವಿಯಿಂದ 97 ಮಂದಿಗೆ ಡಾಕ್ಟರೇಟ್ ಪದವಿ (ಕಲೆ-17, ವಿಜ್ಞಾನ 74, ವಾಣಿಜ್ಯ-04, ಶಿಕ್ಷಣ-02), 45 ಮಂದಿಗೆ ಚಿನ್ನದ ಪದಕ ಮತ್ತು 75 ಮಂದಿಗೆ ನಗದು ಬಹುಮಾನ ಪ್ರದಾನ ಮಾಡ ಲಾಯಿತು. ವಿವಿಧ ಕೋರ್ಸುಗಳ ಒಟ್ಟು 242 ರ್‍ಯಾಂಕ್‌ಗಳಲ್ಲಿ ಪ್ರಥಮ ರ್‍ಯಾಂಕ್ ಪಡೆದ 65 ಮಂದಿಗೆ ರ್‍ಯಾಂಕ್ ಪ್ರಮಾಣ ಪತ್ರ (ಸ್ನಾತ ಕೋತ್ತರ ಪದವಿ-48 ಮತ್ತು ಪದವಿ-17: ಕಲೆ-17, ವಿಜ್ಞಾನ ಮತ್ತು ತಂತ್ರಜ್ಞಾನ-33, ವಾಣಿಜ್ಯ-10, ಶಿಕ್ಷಣ-02, ಸ್ನಾತಕೋತ್ತರ ಡಿಪ್ಲೋಮಾ-03) ನೀಡಲಾಯಿತು.
ಕುಲಾಧಿಪತಿಗಳು, ಸಹಕುಲಾಧಿಪತಿಗಳಿಲ್ಲದ ಘಟಿಕೋತ್ಸವ
ಮಂಗಳೂರು ವಿಶ್ವವಿದ್ಯಾನಿಲಯದ ಕುಲಾಧಿಪತಿ, ರಾಜ್ಯಪಾಲ ವಜೂ ಭಾಯ್ ರೂಡಾಭಾಯ್ ವಾಲಾ ಹಾಗೂ ಸಹಕುಲಾಧಿಪತಿ ಹಾಗೂ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ಆಗಮಿಸಿರಲಿಲ್ಲ, ಅವರ ಅನುಪ ಸ್ಥಿತಿ ಯಲ್ಲಿ ಕುಲಪತಿ ಪ್ರೊ| ಕೆ. ಭೈರಪ್ಪ ಅವರು ಘಟಿಕೋತ್ಸವದ ಆರಂಭ ವನ್ನು ಘೋಷಿಸಿ ದರು. ಚಿನ್ನದ ಪದಕ ಮತ್ತು 75 ಮಂದಿಗೆ ನಗದು ಬಹುಮಾನ ಹಾಗೂ ರ್‍ಯಾಂಕ್ ಪ್ರಮಾಣ ಪತ್ರಗಳನ್ನು ಕುಲಪತಿ ಪ್ರದಾನ ಮಾಡಿದರು.
ಪದವಿಯಲ್ಲಿ ತಪ್ಪಿದ ರ್‍ಯಾಂಕ್ ಸ್ನಾತಕೋತ್ತರದಲ್ಲಿ: ಭವ್ಯಾ
ಉಳ್ಳಾಲ: ಮಂಗಳಗಂಗೋತ್ರಿ ಕ್ಯಾಂಪಸ್‌ನ ವಿದ್ಯಾರ್ಥಿನಿಯಾಗಿದ್ದು ಸ್ನಾತಕೋತ್ತರ ಭೌತಶಾಸ್ತ್ರ ವಿಭಾಗದಲ್ಲಿ ಪ್ರಥಮ ರ್‍ಯಾಂಕ್‌ನೊಂದಿಗೆ ಎರಡು ಚಿನ್ನದ ಪದಕ ಮತ್ತು ಐದು ನಗದು ಪ್ರಶಸ್ತಿಯನ್ನು ಪಡೆದಿರುವ ಕುಂದಾಪುರ ಕೋಟೇಶ್ವರ ನಿವಾಸಿ. ಖಾಸಗಿ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮಹಾಬಲ ದೇವಾಡಿಗ ಲೈಲಾ ದಂಪತಿಯ ಪುತ್ರಿ ಶ್ರೀಷ್ಮಲ್ ಭವ್ಯಾ ಅವರು ಭಂಡಾರ್‌ಕಾರ್ ಕಾಲೇಜಿನಲ್ಲಿ ಬಿಎಸ್ಸಿಯಲ್ಲಿ ಒಂದು ಪರ್ಸಂಟೇಜ್‌ನಲ್ಲಿ ರ್‍ಯಾಂಕ್ ವಂಚಿತರಾಗಿದ್ದರು. ಪದವಿಯಲ್ಲಿ ತಪ್ಪಿದ ರ್‍ಯಾಂಕ್ ಇಲ್ಲಿ ಸಿಕ್ಕಿದೆ. ಭವ್ಯಾ ಕಾರ್ಕಳದ ಜ್ಞಾನಸುಧಾ ಪ.ಪೂ. ಕಾಲೇಜಿನಲ್ಲಿ ಉಪನ್ಯಾಸಕಿಯಾಗಿದ್ದು, ಮುಂದೆ ಸಂಶೋಧನೆ ನಡೆಸುವ ಇಚ್ಛೆ ವ್ಯಕ್ತಪಡಿಸಿದ್ದಾರೆ.
ದೃಷ್ಟಿ ದೋಷವಿದ್ದರೂ ಅಡ್ಡಿಯಾಗಿಲ್ಲ : ಚಂದನಾ
ಉಡುಪಿ ತೆಂಕನಿಡಿಯೂರಿನ ಕನ್ನಡ ಅಧ್ಯಯನ ಸ್ನಾತಕೋತ್ತರ ಪದವಿಯಲ್ಲಿ ರ್‍ಯಾಂಕ್‌ನೊಂದಿಗೆ 1 ಚಿನ್ನದ ಪದಕ ಮತ್ತು 5 ನಗದು ಪ್ರಶಸ್ತಿ ಪಡೆದಿರುವ ಚಂದನಾ ಕೆ.ಎಸ್. ಅವರ ಒಂದು ಕಣ್ಣಿನಲ್ಲಿ ದೃಷ್ಟಿದೋಷವಿದ್ದರೂ ಸಾಧನೆಗೆ ಅಡ್ಡಿಯಾಗಿಲ್ಲ. ಎನ್‌ಇಟಿಯನ್ನು ಜೆಆರ್‌ಎಫ್‌ನೊಂದಿಗೆ ಪ್ರಥಮ ಪ್ರಯತ್ನದಲ್ಲೇ ತೇರ್ಗಡೆಯಾಗಿರುವ ಅವರು ಕುಂದಾಪುರದ ಬಿಎಸ್‌ಎನ್‌ಎಲ್ ಉದ್ಯೋಗಿ ಗಮಕಿ ಹಾಗೂ ಸಾಹಿತಿಯಾಗಿರುವ ಶ್ರೀಕೃಷ್ಣ ಅಹಿತಾನಾಲ ಮತ್ತು ಸೌಧಾಮಿನಿ ಅವರ ಪುತ್ರಿ. ಪದವಿಯಲ್ಲಿಯೂ 10ನೇ ರ್‍ಯಾಂಕ್ ಪಡೆದಿರುವ ಅವರು ಆಧುನಿಕ ಕನ್ನಡ ಸಾಹಿತ್ಯದಲ್ಲಿ ಸಂಶೋಧನೆ ನಡೆಸುವ ಉದ್ದೇಶ ಹೊಂದಿದ್ದು, ಪ್ರಸ್ತುತ ಕೋಟಾ ಪಡುಕೆರೆ ಪ್ರಥಮ ದರ್ಜೆ ಕಾಲೇಜಿನಲ್ಲಿ ಉಪನ್ಯಾಸಕಿ.
ಶಿಕ್ಷಣಕ್ಕೆ ಆರ್ಥಿಕ ಸಹಾಯ ನೀಡುತ್ತೇನೆ : ಶಕುಂತಳಾ
ಮಂಗಳಗಂಗೋತ್ರಿ ಕ್ಯಾಂಪಸ್‌ನಲ್ಲಿ ಕೈಗಾರಿಕಾ ರಸಾಯನ ಶಾಸ್ತÅದಲ್ಲಿ ಎರಡು ಚಿನ್ನದ ಪದಕ ಪಡೆದಿರುವ ಶಕುಂತಳಾ ಬ್ರಹ್ಮಾವರದ ನಿವಾಸಿ ದಿ. ಕರಿಯ ಪೂಜಾರಿ ಮತ್ತು ಕಮಲಾ ಅವರ ಪುತ್ರಿ. ಬಡಕುಟುಂಬದಿಂದ ಬಂದಿರುವ ಶಕುಂತಳಾ ಅವರಿಗೆ ತಾಯಿ ಮಾತ್ರ ಇದ್ದು, ಕೃಷಿ ಕೂಲಿ ಮಾಡಿ ಶಿಕ್ಷಣಕ್ಕೆ ಪ್ರೋತ್ಸಾಹ ನೀಡಿದ್ದರು. ಉಡುಪಿ ಡಾ| ಜಿ. ಶಂಕರ್ ಮಹಿಳಾ ಕಾಲೇಜಿನಲ್ಲಿ ಪದವಿ ಶಿಕ್ಷಣ ಪಡೆದಿದ್ದರು. ದಾನಿಗಳ ಸಹಕಾರದಿಂದ ವಿದ್ಯಾಭ್ಯಾಸ ಮಾಡಿರುವ ಶಕುಂತಳಾ ಅವರು ಮುಂದಿನ ದಿನಗಳಲ್ಲಿ ನಾನೂ ಆರ್ಥಿಕವಾಗಿ ಬಲಿಷ್ಠರಾಗುವ ಮೂಲಕ ಇತರರಿಗೆ ಶಿಕ್ಷಣಕ್ಕೆ ಆರ್ಥಿಕ ಸಹಾಯ ಮಾಡುತ್ತೇನೆ ಎನ್ನುತ್ತಾರೆ. ಸಂಶೋಧನೆಯನ್ನು ನಡೆಸುವ ಯೋಜನೆ ಹಾಕಿರುವ ಇವರು ಪ್ರಸ್ತುತ ಮಂಗಳಗಂಗೋತ್ರಿ ಕ್ಯಾಂಪಸ್‌ನಲ್ಲಿ ಕೈಗಾರಿಕಾ ರಸಾಯನ ಶಾಸ್ತÅ ವಿಭಾಗದಲ್ಲಿ ಅತಿಥಿ ಉಪನ್ಯಾಸಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಬಡತನವಿದ್ದರೂ ಕಲಿಕೆಗೆ ಪ್ರೋತ್ಸಾಹ: ನವ್ಯಶ್ರೀ ಜಲ್ಲಿಗುಡ್ಡೆ
ಕನ್ನಡ ಸ್ನಾತಕೋತ್ತರ ವಿಭಾಗದಲ್ಲಿ ರ್‍ಯಾಂಕ್ ಪಡೆದಿರುವ ನವ್ಯಶ್ರೀ 1 ಚಿನ್ನದ ಪದಕದೊಂದಿಗೆ ನಾಲ್ಕು ನಗದು ಪ್ರಶಸ್ತಿ ಪಡೆದಿದ್ದಾರೆ. ಮಂಗಳೂರು ಜಲ್ಲಿಗುಡ್ಡೆಯ ಸದಾಶಿವ ಮತ್ತು ಸಬಿತಾ ದಂಪತಿಗಳ ಪುತ್ರಿಯಾಗಿರುವ ನವ್ಯಶ್ರೀ ಅವರ ತಂದೆ ಸದಾಶಿವ ಟ್ಯಾಂಕರ್ ಡ್ರೈವರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದು, ಬಾಲ್ಯದಲ್ಲಿ ಬಡತನವಿದ್ದರೂ ತಂದೆ ನಮಗೆ ಓದಿಗೆ ಪ್ರೋತ್ಸಾಹ ನೀಡಿದ್ದರಿಂದ ಈ ಸಾಧನೆಯನ್ನು ಮಾಡಲು ಸಾಧ್ಯವಾಯಿತು ಎಂದಿದ್ದಾರೆ.
ಕೃಷಿ ಕಾಯಕ ಮಾಡಿ ರ್‍ಯಾಂಕ್ ಪಡೆದ ಭರತ್
ಮಂಗಳೂರು ವಿವಿಯ ಚಿಕ್ಕಅಳುವಾರು ಸ್ನಾತ ಕೋತ್ತರ ಕೇಂದ್ರದಲ್ಲಿ ಇತಿಹಾಸ ವಿಭಾಗದಲ್ಲಿ ಅಧ್ಯಯನ ನಡೆಸಿರುವ ಭರತ್ ಎ.ಸಿ.ಎರಡು ಚಿನ್ನದ ಪದಕದೊಂದಿಗೆ ಮೂರು ನಗದು ಪ್ರಶಸ್ತಿಯನ್ನು ಪಡೆದಿದ್ದು, ಮುಂದಿನ ದಿನಗಳಲ್ಲಿ ಸಂಶೋಧನೆ ನಡೆಸುವ ಯೋಜನೆ ಹಾಕಿಕೊಂಡಿದ್ದಾರೆ.
ಚಿಕ್ಕಅಳುವಾರದ ಕೃಷಿಕರಾದ ಚಂದ್ರಶೇಖರ್ ಮತ್ತು ಭಾಗ್ಯ ದಂಪತಿಯ ಪುತ್ರನಾಗಿರುವ ಭರತ್ ಕೃಷಿ ಕಾಯಕದೊಂದಿಗೆ ಅಧ್ಯಯನ ನಡೆಸಿದ್ದರು.
ಪತ್ರಿಕೋದ್ಯಮದಲ್ಲಿ ರ್‍ಯಾಂಕ್ ಪಡೆದ ಶ್ರೀ ಗೌರಿ
ಆಳ್ವಾಸ್ ಕಾಲೇಜಿನ ಪತ್ರಿಕೋದ್ಯಮ ಸ್ನಾತ ಕೋತ್ತರ ವಿಭಾಗದಲ್ಲಿ ಅಧ್ಯಯನ ನಡೆಸಿ ರ್‍ಯಾಂಕ್‌ನೊಂದಿಗೆ 2 ಚಿನ್ನದ ಪದಕ, 4 ನಗದು ಬಹುಮಾನ ಪಡೆದಿರುವ ಗದಗ ಮೂಲದ ಶ್ರೀ ಗೌರಿ ಎಸ್. ಜೋಶಿ ಪಿಯುಸಿ ಯಲ್ಲಿ ವಿಜ್ಞಾನ ವಿದ್ಯಾರ್ಥಿನಿ ಯಾಗಿದ್ದು, ಪದವಿಯಿಂದ ಸ್ನಾತಕೋತ್ತರ ವರೆಗೆ ಆಳ್ವಾಸ್‌ನಲ್ಲಿ ಪತ್ರಿಕೋದ್ಯಮದಲ್ಲಿ ಅಧ್ಯಯನ ನಡೆಸಿ ಪ್ರಸ್ತುತ ಅಳ್ವಾಸ್‌ನಲ್ಲಿ ಉಪನ್ಯಾಸಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ರ್‍ಯಾಂಕ್ ನಿರೀಕ್ಷಿಸಿರಲಿಲ್ಲ : ಪವಿತ್ರಾ
ಪುತ್ತೂರಿನ ಫಿಲೋಮಿನಾ ಕಾಲೇಜಿನಲ್ಲಿ ಅರ್ಥ ಶಾಸ್ತ್ರದಲ್ಲಿ ಅಧ್ಯಯನ ನಡೆಸಿರುವ ಪವಿತ್ರಾ ಜಿ. ಪ್ರಥಮ ರ್‍ಯಾಂಕ್‌ನೊಂದಿಗೆ ಎರಡು ಚಿನ್ನದ ಪದಕ ಮತ್ತು ಮೂರು ನಗದು ಪ್ರಶಸ್ತಿಯನ್ನು ಪಡೆದಿದ್ದಾರೆ, ಗುತ್ತಿಗೆದಾರರಾಗಿರುವ ನಾರಾಯಣ ನಾಯಕ್ ಮತ್ತು ಗುಣವತಿ ಅವರ ಪುತ್ರಿಯಾಗಿರುವ ಪವಿತ್ರಾ ಫಿಲೋಮಿನಾದಲ್ಲಿ ಪದವಿಯನ್ನು ಪೂರೈಸಿ ಅದೇ ಕಾಲೇಜಿನಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದರು. ಪ್ರಸ್ತುತ ಗೋಣಿಕೊಪ್ಪ ಕಾವೇರಿ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿದ್ದಾರೆ.