ಬೆಂಗಳೂರು: ದೇಶದ ಭವಿಷ್ಯ ಯುವ ಜನಾಂಗವನ್ನು ಆಧರಿಸಿದ್ದು, ಈ ನಿಟ್ಟಿನಲ್ಲಿ ಯುವಕರು ರಾಜಕೀಯದಲ್ಲಿ ಸಕ್ರಿಯರಾಗಬೇಕು ಎಂದು ಬೆಂಗಳೂರು ದಕ್ಷಿಣ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ಕರೆ ನೀಡಿದರು.
ಎಚ್‌ಎಸ್‌ಆರ್ ಲೇಔಟ್‌ನ ಆಕ್ಸ್‌ಫರ್ಡ್ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ “ಐ ಆಮ್ ದಿ ಯೂತ್’ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಯುವಕರಿಗೆ ಹೆಚ್ಚಿನ ಆದ್ಯತೆ ನೀಡಿದ್ದು, ಯುವ ಸಮುದಾಯ ರಾಜಕೀಯ ಪ್ರವೇಶಿಸಲು ಇದು ಸೂಕ್ತ ಸಮಯ. ಇದಕ್ಕಾಗಿ ಮೋದಿ ಅವರು ಸಹ ಕಾತುರರಾಗಿದ್ದಾರೆ ಎಂದರು.
ಬೊಮ್ಮನಹಳ್ಳಿ ಶಾಸಕ ಸತೀಶ್ ರೆಡ್ಡಿ ಜತೆ ವೇದಿಕೆ ಹಂಚಿಕೊಂಡಿದ್ದ ತೇಜಸ್ವಿ ಸೂರ್ಯ, ಪ್ರಮುಖ ಸಮಸ್ಯೆಗಳಾದ ಸಂಚಾರದಟ್ಟಣೆ, ಪ್ರಸಕ್ತ ಶಿಕ್ಷಣ ನೀತಿಗಳು, ಮೂಲಭೂತ ಸಮಸ್ಯೆಗಳು, ನಗರದ ರಸ್ತೆಗಳು, ನೀರಿನ ಸಮಸ್ಯೆ ಕುರಿತು ಚರ್ಚಿಸಿದರು.
ಸಂವಾದಕ್ಕೂ ಮೊದಲು ಜಾಗತಿಕವಾಗಿ ಭಾರತದ ಸ್ಥಿತಿಗತಿಗಳ ಬಗ್ಗೆ ಪ್ರಸ್ತಾಪಿಸಿದ ಅವರು, ಭಾರತ ಕಳೆದ ಐದು ವರ್ಷಗಳಿಂದ ತ್ವರಿತ ಗತಿಯಲ್ಲಿ ಅಭಿವೃದ್ಧಿ ಸಾಧಿಸುತ್ತ, ಸದೃಢ ಆರ್ಥಿಕ ವ್ಯವಸ್ಥೆಯಾಗಿ ಹೊರಹೊಮ್ಮಿದೆ. ಇಷ್ಟು ದಿನ ನಾವು ಮೇಡ್ ಇನ್ ಚೀನಾ, ಮೇಡ್ ಇನ್ ಥೈವಾನ್ ವಸ್ತುಗಳನ್ನೇ ನೋಡುತ್ತಿದ್ದೆವು. ಆದರೆ ಈಗ ಮೇಡ್ ಇನ್ ಇಂಡಿಯಾ ಯುಗ ಶುರುವಾಗಿದೆ. ಕೇಂದ್ರದ ಭ್ರಷ್ಟಾಚಾರ ರಹಿತ ಸರ್ಕಾರ, ಜಿಎಸ್‌ಟಿ, ನೋಟು ಅಮಾನ್ಯಿಕರಣದಿಂದ ದೇಶದ ಆರ್ಥಿಕ ಸ್ಥಿತಿ ಮತ್ತಷ್ಟು ಸುಧಾರಿಸಿದೆ ಎಂದರು.
ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಉತ್ತರಿಸುತ್ತ ಬಯಲುಮುಕ್ತ ಶೌಚಾಲಯ ನಿರ್ಮಾಣ ಕೇಂದ್ರ ಸರ್ಕಾರದ ಬಹುದೊಡ್ಡ ಕೊಡುಗೆ ಎಂದರು. ನಗರದ ನೀರಿನ ಸಮಸ್ಯೆ ಕುರಿತ ಪ್ರಶ್ನೆಗೆ ಉತ್ತರಿಸುತ್ತ, ಇಸ್ರೇಲ್ ಮಾದರಿಯ ಶುದ್ಧ ನೀರಿನ ಸಂಸ್ಕರಣೆ
ವ್ಯವಸ್ಥೆಯನ್ನು ಪರಿಚಯಿಸಿದರೆ ನೀರಿನ ಸಮಸ್ಯೆ ಬಹುತೇಕ ನೀಗುತ್ತದೆ ಎಂದರು.
ಇನ್ಮುಂದೆ ಪ್ರತಿಭಾನ್ವಿತರು ವಿದೇಶಗಳಿಗೆ ಹೋಗುವ ಅನಿವಾರ್ಯ ಪರಿಸ್ಥಿತಿ ಬರುವುದಿಲ್ಲ. ನವಭಾರತ, ನವ ಬೆಂಗಳೂರಿನ ನಿರ್ಮಾಣ ಯುವಕರ ಮೇಲಿದ್ದು, ಜಾಗರೂಕತೆಯಿಂದ ಮತ ಚಲಾವಣೆ ಮಾಡಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. ಇದಕ್ಕೂ ಮುನ್ನ ತೇಜಸ್ವಿಸೂರ್ಯ ಜೆಪಿ ನಗರ, ಪಟ್ಟಾಭಿನಗರ ವಾರ್ಡ್‌ಗಳಲ್ಲಿ ಚುನಾವಣಾ ಪ್ರಚಾರ ಸಭೆಗಳನ್ನು ನಡೆಸಿದರು.