ಮೈಸೂರು: ಮೆದುಳು ನಿಷ್ಕ್ರಿಯಗೊಂಡ ಯುವಕನ ಅಂಗಾಂಗವನ್ನು ದಾನ ಮಾಡುವ ಮೂಲಕ ಯುವಕನ ಕುಟುಂಬ ಐದು ಜನರ ಪ್ರಾಣ ಉಳಿಸಿ ಮಾನವೀಯತೆ ಮೆರೆದಿದೆ. ಜ.18ರಂದು ಅಪಘಾತದಲ್ಲಿ ಗಾಯಗೊಂಡಿದ್ದ ದರ್ಶನ್ (24) ಅವರನ್ನು ನಗರದ ಬಿಜಿಎಸ್ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಪಘಾತದಲ್ಲಿ ಮೆದುಳು ನಿಷ್ಕ್ರಿಯವಾಗಿದ್ದ ಹಿನ್ನೆಲೆ ಯುವಕನ ಕುಟುಂಬಸ್ಥರು ಅಂಗಾಂಗ ದಾನ ಮಾಡಲು ಒಪ್ಪಿಗೆ ಸೂಚಿಸಿದ್ದಾರೆ.
ಏರ್‌ಲಿಫ್ಟ್
ಮೈಸೂರಿನ ಬಿಜಿಎಸ್ ಅಪೋಲೊ ಆಸ್ಪತ್ರೆಯಿಂದ ದರ್ಶನ್ ಅವರ ಹೃದಯವನ್ನು ಚೆನ್ನೈಗೆ ರವಾನಿಸಲಾಯಿತು. ಆಸ್ಪತ್ರೆಯಿಂದ ಜಿರೋ ಟ್ರಾಫಿಕ್ ಮೂಲಕ ಆ್ಯಂಬುಲೆನ್ಸ್‌ನಲ್ಲಿ 10 ನಿಮಿಷದಲ್ಲಿ ಮೈಸೂರು ವಿಮಾನ ನಿಲ್ದಾಣವನ್ನು 2.30ಕ್ಕೆ ತಲುಪಿಸಲಾಗಿದೆ. ಇಲ್ಲಿಂದ ವಿಮಾನದ ಮೂಲಕ ಚೆನ್ನೈನ ಎಂಜಿಎಂ ಹೆಲ್ತ್ ಕೇರ್‌ಗೆ ಹೃದಯವನ್ನು ಕಳುಹಿಸಿಕೊಡಲಾಯಿತು. ಒಂದು ಕಿಡ್ನಿ ಹಾಗೂ ಯಕೃತ್ತು ಅಪೋಲೊ ಬಿಜಿಎಸ್ ಆಸ್ಪತ್ರೆಯಲ್ಲೇ ಕಸಿ ಮಾಡಿದ್ದರೆ, ಇನ್ನೊಂದು ಕಿಡ್ನಿಯನ್ನು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ಕಳುಹಿಸಿಕೊಡಲಾಗಿದೆ.
ಕಾರ್ನಿಯಾ ಅಂಗವನ್ನು ನಗರದ ನೇತ್ರ ಬ್ಯಾಂಕ್‌ಗೆ ನೀಡಲಾಗಿದೆ ಎಂದು ಆಸ್ಪತ್ರೆಯ ಆಡಳಿತ ವಿಭಾಗದ ಉಪಾಧ್ಯಕ್ಷ ಎನ್.ಜಿ.ಭರತೀಶ್ ರೆಡ್ಡಿ ತಿಳಿಸಿದ್ದಾರೆ.
2 ತಿಂಗಳ ಹಿಂದೆ ಮಗು ಜನಿಸಿತ್ತು
ದರ್ಶನ್ ಮೂಲತಃ ಗುಂಡ್ಲುಪೇಟೆಯವರು. ಮೈಸೂರಿನ ಬೆಳವಾಡಿಯಲ್ಲಿ ಎಲೆಕ್ಟ್ರಿಕಲ್ ಕೆಲಸ ಮಾಡುತ್ತಿದ್ದರು. 3 ವರ್ಷಗಳ ಹಿಂದೆ ಮದುವೆ ಯಾಗಿದ್ದ ಇವರಿಗೆ ಎರಡು ತಿಂಗಳ ಮಗು ಇದೆ ಎಂದು ಕುಟುಂಬದವರು ತಿಳಿಸಿದ್ದಾರೆ.