ಬೆಂಗಳೂರು: ನಗರದಲ್ಲಿ ಭಾನುವಾರ ಸುರಿದ ಭಾರೀ ಮಳೆಗೆ ಎರಡನೇ ಬಲಿಯಾಗಿದೆ. ರಾಜಕಾಲುವೆಗೆ ಇಳಿದು ಕೊಚ್ಚಿಕೊಂಡು ಹೋಗಿದ್ದ ಯುವಕನ ಮೃತದೇಹ ನಾಯಂಡಹಳ್ಳಿ ಜಂಕ್ಷನ್ ಬಳಿಯ ರಾಜಕಾಲುವೆಯಲ್ಲಿ ಸೋಮವಾರ ಪತ್ತೆಯಾಗಿದೆ.
ಕೆ.ಪಿ.ಅಗ್ರಹಾರ ನಿವಾಸಿ ಲೋಕೇಶ್ (31) ಮೃತ ದುರ್ದೈವಿ.
ರಾಜಧಾನಿಯಲ್ಲಿ ಭಾನುವಾರ ಸಂಜೆ ಮಳೆ ಸುರಿದ ಸಂದರ್ಭದಲ್ಲಿ ಕಾಲುವೆಯಲ್ಲಿ ಭಾರೀ ಪ್ರಮಾಣದಲ್ಲಿ ನೀರು ಹರಿಯುತ್ತಿತ್ತು. ಈ ವೇಳೆ ಸಾರ್ವಜನಿಕರ ವಿರೋಧದ ನಡುವೆಯೂ ಲೋಕೇಶ್ ನೀರಿನ ಆಳ ನೋಡುವುದಾಗಿ ರಾಜಕಾಲುವೆಗೆ ಇಳಿದಿದ್ದ. ಇಳಿಯುತ್ತಿದ್ದಂತೆ ನೀರಿನ ರಭಸಕ್ಕೆ ಕೊಚ್ಚಿಕೊಂಡು ಹೋಗಿದ್ದಾನೆ. ಸೋಮವಾರ ಲೋಕೇಶ್‌ನ ಮೃತದೇಹ ಮೈಸೂರು ರಸ್ತೆ, ನಾಯಂಡಹಳ್ಳಿ ಜಂಕ್ಷನ್ ಬಳಿಯ ರಾಜಕಾಲುವೆಯಲ್ಲಿ ಪತ್ತೆಯಾಗಿದೆ. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಮೃತದೇಹವನ್ನು ಕುಟುಂಬಸ್ಥರಿಗೆ ನೀಡಲಾಗಿದೆ. ಈ ಸಂಬಂಧ ಕೆ.ಪಿ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿದೆ.
ಏನಿದು ಘಟನೆ?: ಜಿ.ಟಿ. ಮಾಲ್‌ನಲ್ಲಿ ಹೌಸ್ ಕೀಪಿಂಗ್ ಕೆಲಸ ಮಾಡುತ್ತಿದ್ದ ಲೋಕೇಶ್ ಭಾನುವಾರ ರಜೆ ಇದ್ದ ಹಿನ್ನೆಲೆಯಲ್ಲಿ ಮನೆಯಲ್ಲಿಯೇ ಇದ್ದರು. ಸಂಜೆ 4 ಗಂಟೆಯಲ್ಲಿ ಭಾರೀ ಮಳೆ ಸುರಿದಿದ್ದು, ಪರಿಣಾಮ ಎಲ್ಲಾ ರಾಜಕಾಲುವೆಗಳು ಹೊಳೆಯಂತೆ ಹರಿದಿವೆ. ಆಗ ಭುವನೇಶ್ವರಿನಗರ 15 ನೇ ಕ್ರಾಸ್, ಕೆಇಬಿ ಕಚೇರಿ ಮುಂದೆ ರಾಜಕಾಲುವೆಗೆ ಲೋಕೇಶ್ ನೀರಿನ ಆಳ ಪರೀಕ್ಷೆ ಮಾಡಲು ಇಳಿದಿದ್ದರು. ಈ ವೇಳೆ ಸ್ಥಳದಲ್ಲಿದ್ದವರು ಇಳಿಯಬೇಡ ಎಂದು ಎಚ್ಚರಿಕೆ ನೀಡಿದರೂ ಕೇಳದೆ ಇಳಿದಿದ್ದರು ಎಂದು ಹೇಳಲಾಗಿದೆ.
Related Articles
ಇಳಿಯುತ್ತಿದ್ದಂತೆ ನೀರಿನ ರಭಸಕ್ಕೆ ಕೊಚ್ಚಿಕೊಂಡು ಹೋಗಿದ್ದರು. ಬಳಿಕ ಆತನ ಮೃತದೇಹ ಸೋಮವಾರ ಬೆಳಗ್ಗೆ ನಾಯಂಡಹಳ್ಳಿ ಜಂಕ್ಷನ್ ಹತ್ತಿರದ ರಾಜಕಾಲುವೆಯಲ್ಲಿ ಸಿಕ್ಕಿದೆ. ಪೊಲೀಸರು ಈ ಬಗ್ಗೆ ಕುಟುಂಬ ಸದಸ್ಯರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಬಂದ ಕುಟುಂಬ ಸದಸ್ಯರು ಮೃತದೇಹವನ್ನು ಗುರುತಿಸಿದ್ದು, ಬಳಿಕ ಪೊಲೀಸರು ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಿ ಶವ ಪರೀಕ್ಷೆ ನಡೆಸಿ ಕುಟುಂಬ ಸದಸ್ಯರಿಗೆ ಹಸ್ತಾಂತರ ಮಾಡಿದ್ದಾರೆ. ಆದರೆ, ಲೋಕೇಶ್ ಗೊತ್ತಿಲ್ಲದೇ ಕಾಲು ಜಾರಿ ರಾಜಕಾಲುವೆಗೆ ಬಿದ್ದು ಮೃತಪಟ್ಟಿರುವುದಾಗಿ ಆತನ ಪೋಷಕರು ಹೇಳಿದ್ದಾರೆ.
ಪೋಷಕರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
ವರದಿ ನಂತರ ಕ್ರಮ: ಕೆ.ಪಿ.ಆಗ್ರಹಾರದಲ್ಲಿ ಯುವಕ ರಾಜಕಾಲುವೆಗೆ ಕೊಚ್ಚಿ ಹೋಗಿದ್ದಾನೆ ಎಂಬ ಮಾಹಿತಿ ಇದೆ. ಯುವಕ ಮರಣೋತ್ತರ ವರದಿ ಬಂದ ನಂತರ ಪರಿಹಾರ ಧನ ನೀಡುವ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ಪಾಲಿಕೆ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೇಳಿದರು. ಸುದ್ದಿಗಾರರ ಜತೆ ಮಾತನಾಡಿದ ಅವರು ಘಟನೆ ಬಗ್ಗೆ ಮಾಹಿತಿ ಇದೆ. ಮರಣೋತ್ತರ ಪರೀಕ್ಷೆ ಬಂದ ನಂತರ ಮುಂದುವರಿಯಲಾಗುವುದು. ಅಕೌಂಟ್ ಮೂಲಕ ಪರಿಹಾರ ಧನ ಮೊತ್ತ ತಲುಪಿಸಲಾಗುವುದು ಎಂದರು.