ಗಂಗಾವತಿ: ಗಣೇಶ ವಿಸರ್ಜನೆ ಮೆರವಣಿಗೆಯ ಡಿಜೆ ಸೌಂಡ್ ಪರವಾನಿಗೆ ನೀಡುವ ವಿಷಯದಲ್ಲಿ ಜಿಲ್ಲಾ ಪೊಲೀಸ್ ಇಲಾಖೆಯ ದ್ವಂದ್ವ ನಿಲುವಿನಿಂದಾಗಿ ಗಂಗಾವತಿ ನಗರದಲ್ಲಿ ಯುವಕನೋರ್ವ ಮೆರವಣಿಗೆಯಲ್ಲಿ ಡಿಜೆ ಸೌಂಡ್ ಪರಿಣಾಮ ಮೃತಪಟ್ಟ ಘಟನೆ ಹಾಗೂ ನಗರದಲ್ಲಿ ಕೋಮು ಗಲಭೆಗೆ ಕಾರಣವಾಗಿದ್ದು ಜಿಲ್ಲಾಡಳಿತದ ವಿರುದ್ಧ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ.
ಪ್ರಶಾಂತ ನಗರದ ಯುವಕ ಸುದೀಪ್ ರುದ್ರಪ್ಪ ಸಜ್ಜನ (26) ಕುಸಿದು ಬಿದ್ದು ಮೃತಪಟ್ಟವರು.
ಧ್ವನಿವರ್ಧಕ (ಡಿಜೆ) ಬಳಸುವ ಪರವಾನಿಗೆ ನೀಡುವ ಸಂದರ್ಭ ಇಂತಿಷ್ಟು ಪ್ರಮಾಣದಲ್ಲಿ ಧ್ವನಿವರ್ಧಕ ಬಳಸಬೇಕು. ಉದಾಹರಣೆಗಳು ಕಾನೂನಾತ್ಮಕವಾಗಿ ಇದ್ದರೂ ಕೂಡ ಇಲ್ಲಿನ ಜಿಲ್ಲಾಡಳಿತ ಮತ್ತು ಜಿಲ್ಲಾ ಪೊಲೀಸ್ ಇಲಾಖೆ ಅಧಿಕಾರಿಗಳು ನಿರ್ಲಕ್ಷ್ಯ ತೋರಿದ್ದಾರೆ.
ಮಸೀದಿ ಮುಂದೆ ಘರ್ಷಣೆ ನಡೆದು ಎರಡು ಕೋಮಿನ ಯುವಕರ ಕೇಸ್ ದಾಖಲಾಗಿದೆ. ಅದರೊಂದಿಗೆ ಕರ್ತವ್ಯ ನಿರ್ಲಕ್ಷ್ಯ ಹಿನ್ನೆಲೆ ಪಿಐ, ಸಿಪಿಐ ಹಾಗೂ ಪೇದೆಯೊರ್ವನ ಅಮಾನತು ಮಾಡಲಾಗಿದೆ.
ಗಣೇಶೋತ್ಸವ ಪೂರ್ವಭಾವಿ ಸಭೆಯಲ್ಲಿ ಡಿಜೆ ಪರವಾನಿಗೆ ನಿಯಮಾನುಸಾರ ನೀಡಲು ಅವಕಾಶವಿಲ್ಲ ಎಂದು ಹೇಳಿದ ನಂತರವೂ 5ನೇ ದಿನದ ಗಣೇಶ ವಿಸರ್ಜನೆ ವೇಳೆ ಗಣೇಶನ ಸಮಿತಿಯವರು ಹೆಚ್ಚಿನ ಪ್ರಮಾಣದಲ್ಲಿ ಸೌಂಡ್ ಡಿಜೆ ಬಳಸಿದರೂ ನಾಮಕಾವಸ್ತೆ ಎನ್ನುವಂತೆ ಎರಡು ಡಿಜೆಗಳನ್ನು ಟ್ರ್ಯಾಕ್ಟರ್ ಸಮೇತ ವಶಕ್ಕೆ ಪಡೆದು ನಂತರ ಬಿಡುಗಡೆ ಮಾಡಲಾಯಿತು.
13,15 ಮತ್ತು 21 ದಿನಗಳಲ್ಲಿ ಗಣೇಶ ವಿಸರ್ಜನೆ ಮೆರವಣಿಗೆಯಲ್ಲಿ ಅತೀ ಹೆಚ್ಚಿನ ಪ್ರಮಾಣದಲ್ಲಿ ಡಿಜೆ ಸೌಂಡ್ ಬಳಸಿದರೂ ಸ್ಥಳದಲ್ಲಿದ್ದ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳು ಆಕ್ಷೇಪಣೆ ಮಾಡಿಲ್ಲ. ಗಂಗಾವತಿ ಪ್ರಶಾಂತನಗರದ ಈಶ್ವರ ಗಜಾನನ ಯುವಕ ಮಂಡಳಿಯು ಗಣೇಶ ವಿಸರ್ಜನೆ ಸಂದರ್ಭದಲ್ಲಿ ಡಿಜೆ ಬಳಕೆ ಮಾಡಿತ್ತು.
ಡಿಜೆ ಸೌಂಡ್‌ಗೆ ಡ್ಯಾನ್ಸ್ ಮಾಡುತ್ತಿದ್ದ ಸುದೀಪ್ ರುದ್ರಪ್ಪ ಸಜ್ಜನ ಕುಸಿದು ಬಿದ್ದು ಅಸ್ವಸ್ಥನಾಗಿದ್ದು, ಆಸ್ಪತ್ರೆಗೆ ಸಾಗಿಸುವ ಮಧ್ಯೆ ಸಾವನ್ನಪಿದ್ದಾನೆ. ಸುದ್ದಿ ತಿಳಿಯುತ್ತಿದ್ದಂತೆ ಸಮಿತಿಯವರು ಮೆರವಣಿಗೆ ನಿಲ್ಲಿಸಿ ಗಣೇಶನನ್ನು ವಿಸರ್ಜನೆ ಮಾಡಿದ್ದಾರೆ.
ಪೊಲೀಸ್ ವರಿಷ್ಠಾಧಿಕಾರಿ ಯಶೋಧ ವಂಟಗೋಡಿ ನೇತೃತ್ವದಲ್ಲಿ ಸಭೆ ನಡೆಸಿ ಡಿಜೆ ಸೌಂಡ್ ಇಂತಿಷ್ಟು ಇರಬೇಕೆನ್ನುವ ಆದೇಶ ಮಾಡಲಾಗಿತ್ತು.
ಧ್ವನಿವರ್ಧಕ ಪರವಾನಿಗೆ ನೀಡುವ ಸಂದರ್ಭದಲ್ಲಿ ಪೊಲೀಸ್ ಇಲಾಖೆ ಅಧಿಕಾರಿಗಳು ನಿರ್ದೇಶನ ಉಲ್ಲಂಘಿಸಿ ಗಣೇಶನ ಸಮಿತಿಯವರು ಹೆಚ್ಚಿನ ಡಿಜೆ ಸೌಂಡ್ ಬಳಸುತ್ತಿರುವುದನ್ನು ತಡೆಗಟ್ಟದೇ ಮುಂಜಾಗ್ರತೆ ವಹಿಸದ ಹಿನ್ನೆಲೆಯಲ್ಲಿ ಈ ಘಟನೆಗಳು ಜರಗಿವೆ ಎಂದು ಸಾರ್ವಜನಿಕರ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ.