ಸಿನಿಮಾ ಅನ್ನೋದು ಯಾವ ರಂಗದವರನ್ನೂ ಬಿಡಲ್ಲ. ಅದೊಂದು ಸೆಳೆತ. ಈಗಾಗಲೇ ಸಾಫ್ಟ್ವೇರ್ ಕ್ಷೇತ್ರದಲ್ಲಿರುವ ಅನೇಕರು ಸಿನಿಮಾ ರಂಗಕ್ಕೆ ಧುಮುಕಿದ್ದಾರೆ. ಹಾಗೆಯೇ ಪತ್ರಕರ್ತರು ಸಹ ಸಿನಿಮಾದ ಆಳಕ್ಕಿಳಿದು ನೋಡಿದ್ದೂ ಆಗಿದೆ. ಈಗ ಯುವ ಪತ್ರಕರ್ತರು ಸೇರಿ ಕಿರುಚಿತ್ರವೊಂದನ್ನು ಮಾಡಿದ್ದಾರೆ. ಅದಕ್ಕೆ ಅವರೆಲ್ಲಾ ಸೇರಿ ಇಟ್ಟುಕೊಂಡ ಹೆಸರು “ಪ್ರಕರಣ’.
ಇವರ ಪ್ರಯತ್ನ ಮೆಚ್ಚಿಕೊಂಡು ಡಾಲಿ ಧನಂಜಯ್ ಅವರು ಇತ್ತೀಚೆಗೆ ಚಿತ್ರದ “ಪ್ರಕರಣ’ ಕಿರುಚಿತ್ರದ ಪೋಸ್ಟರ್ ಬಿಡುಗಡೆ ಮಾಡಿದ್ದಾರೆ. ಈಗಾಗಲೇ ಚಿತ್ರೀಕರಣ ಮುಗಿಸಿರುವ ಚಿತ್ರತಂಡ, ಭಾನುವಾರ (ಇಂದು) ತಮ್ಮ ಆಪ್ತ ವಲಯಕ್ಕೆ “ಪ್ರಕರಣ’ವನ್ನು ತೋರಿಸುವ ಉತ್ಸಾಹದಲ್ಲಿದೆ. ನಾಗಸಂದ್ರ ಸಮೀಪದ ಸೌಂದರ್ಯನಗರದಲ್ಲಿರುವ ಸಿಡೇದಹಳ್ಳಿ ಸೌಂದರ್ಯ ಕಾಲೇಜ್‌ನಲ್ಲಿ ಮಧ್ಯಾಹ್ನ 2.30 ಹಾಗೂ 4 ಗಂಟೆಗೆ ಕಿರುಚಿತ್ರ ಪ್ರದರ್ಶನ ಏರ್ಪಡಿಸಿದೆ ಚಿತ್ರತಂಡ.
ಈ ಕಿರುಚಿತ್ರವನ್ನು ಟಿ.ಕೆ.ರಾಘವೇಂದ್ರ ನಿರ್ದೇಶಿಸಿದ್ದಾರೆ. ಕಥೆ, ಚಿತ್ರಕಥೆ, ಸಂಭಾಷಣೆ ಜವಾಬ್ದಾರಿಯೂ ಇವರದೇ. ಇನ್ನು, ನಾಗರತ್ನಮ್ಮ, ಎಂ.ಕರಿಯಣ್ಣ ನಿರ್ಮಾಣ ಮಾಡಿದ್ದಾರೆ. ಸಾಮಾಜಿಕ ಮಾಧ್ಯಮಗಳು ಬದುಕನ್ನ ಹೇಗೆ ಹೈರಾಣ ಮಾಡುತ್ತದೆ ಎಂಬ ವಾಸ್ತವ ಅಂಶಗಳಿರುವ ಕಥೆ ಹೆಣೆದು “ಪ್ರಕರಣ’ ದಾಖಲಿಸಿದ್ದಾರೆ.
ಇದರೊಂದಿಗೆ ಗೆಳೆತನ, ಪ್ರೀತಿ, ಜೀವನ ಹಾಗೂ ವಾತ್ಸಲ್ಯದ ಮೌಲ್ಯದ ಹೂರಣ ಕೂಡ ಈ ಕಿರುಚಿತ್ರದಲ್ಲಿದೆ ಎಂಬುದು ಚಿತ್ರತಂಡದ ಮಾತು. 30 ನಿಮಿಷ ಅವಧಿಯ “ಪ್ರಕರಣ’ದಲ್ಲಿ ಬಹುತೇಕ ರಂಗಭೂಮಿಯಲ್ಲಿ ಅನುಭವ ಪಡೆದ ಕಾರ್ಯನಿರತ ಪತ್ರಕರ್ತರು ಒಗ್ಗೂಡಿದ್ದಾರೆ. ಕಿರುಚಿತ್ರದಲ್ಲಿ ಕಿರಣ್‌ಭಟ್, ವನಿತಾ ಜೈನ್, ಅಕ್ಷತಾ ಬಡಿಗೇರ, ರಂಜಿತ್ ಗೌಡ, ಆಕಾಶ್ ಕಮಲ ಇತರರು ನಟಿಸಿದ್ದಾರೆ.
ತೆರೆಯ ಹಿಂದೆ ಪವನ್ ಶ್ರೀನಿವಾಸ್, ರವಿ ಧನ್ಯನ್, ಚೇತನ್ ಇವರುಗಳು ಸಂಭಾಷಣೆ ಮತ್ತು ಚಿತ್ರಕಥೆಯಲ್ಲಿ ಸಹಾಯ ಮಾಡಿದ್ದಾರೆ. ಕಿರುಚಿತ್ರಕ್ಕೆ ರಾಕಿಸೋನು ಸಂಗೀತ ನೀಡಿದರೆ, ಹೇಮೇಶ್ ಚಕ್ರವರ್ತಿ ಛಾಯಾಗ್ರಹಣವಿದೆ. ಟಿ.ಕೆ.ರಾಘವೇಂದ್ರ ಸಂಕಲನ ಮಾಡಿದ್ದಾರೆ.