ಗದಗ: ಮಾದಕ ವಸ್ತುಗಳ ಸೇವನೆ ಮತ್ತು ಅಕ್ರಮ ಕಳ್ಳಸಾಗಾಣಿಕೆ ಜಗತ್ತಿನ ಅತಿದೊಡ್ಡ ಪಿಡುಗಾಗಿ ಕಾಡುತ್ತಿದೆ. ಮಾದಕ ವಸ್ತುಗಳಿಗೆ ಹೆಚ್ಚಾಗಿ ಹದಿ ಹರೆಯದ ಮಕ್ಕಳು ಬಲಿಯಾಗಿ ದೈಹಿಕ, ಮಾನಸಿಕ, ಆರ್ಥಿಕ, ವ್ಯಾಸಂಗ ಇತ್ಯಾದಿ ಆಯಾಮಗಳಲ್ಲಿ ಹಾನಿಯನ್ನುಂಟು ಮಾಡಿಕೊಳ್ಳುತ್ತಿದ್ದಾರೆ. ಹದಿಹರೆಯದ ಮಕ್ಕಳ ಮೇಲಿನ ದುಷ್ಪರಿಣಾಮ ಅರಿತು ಯುವಕರು ಮಾದಕ ವಸ್ತುಗಳ ಸೇವನೆಯಿಂದ ಮುಕ್ತರಾಗಿ ದೇಶದ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಕೆ. ಗುರುಪ್ರಸಾದ ಹೇಳಿದರು.
ನಗರದ ತಾಲೂಕು ಆರೋಗ್ಯಾಧಿಕಾರಿಗಳ ಕಾರ್ಯಾಲಯದ ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಾಕ್ರಮ ವಿಭಾಗ, ಗದಗ ವೈದ್ಯಕೀಯ ಮಹಾವಿದ್ಯಾಲಯ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸಹಯೋಗದಲ್ಲಿ ಅಂತಾರಾಷ್ಟ್ರೀಯ ಮಾದಕ ವಸ್ತುಗಳ ಸೇವನೆ ಮತ್ತು ಅಕ್ರಮ ಕಳ್ಳಸಾಗಾಣೆ ವಿರೋಧಿ ದಿನಾಚರಣೆ ಅಂಗವಾಗಿ ಹಮ್ಮಿಕೊಂಡ ಜಾಗೃತಿ ರಥಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಐಎಂಎ ಅಧ್ಯಕ ಡಾ| ಪ್ಯಾರ ಅಲಿ ನೂರಾನಿ ಮಾತನಾಡಿ, ಭಾರತ ಯುವಕರ ಸಂಖ್ಯೆಯಲ್ಲಿ ಜಗತ್ತಿನಲ್ಲಿ ಮುಂದೆ ಇದ್ದು, ಯುವಕರು ಹೆಚ್ಚಾಗಿ ಮಾದಕ ವಸ್ತುಗಳ ವ್ಯಸನಕ್ಕೆ ಬಲಿಯಾಗಿ ತಮ್ಮ ಭವಿಷ್ಯ ಹಾಗೂ ದೇಶದ ಪ್ರಗತಿ ಹಾಳು ಮಾಡುತ್ತಿದ್ದಾರೆ. ಯುವಕರು ವ್ಯಸನದಿಂದ ದೂರವಾಗಿರಬೇಕು ಎಂದು ಹೇಳಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿ ಡಾ| ಜಗದೀಶ ನುಚ್ಚಿನ ಮಾತನಾಡಿ, ದೇಶದಲ್ಲಿ 15 ವರ್ಷದೊಳಗಿನ 16000 ಮಕ್ಕಳು ಪ್ರತಿವರ್ಷ ಹೊಸದಾಗಿ ತಂಬಾಕು ಸೇವನೆಗೆ ದಾಸರಾಗುತ್ತಿದ್ದಾರೆ. ಇದರಿಂದ ಕ್ಯಾನ್ಸರ್ ನಂತಹ ಕಾಯಿಲೆಗೆ ತುತ್ತಾಗುತ್ತಿದ್ದಾರೆ. ಸುಮಾರು 25 ಲಕ್ಷ ಜನ ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ. ಮದ್ಯಪಾನ ಸೇವನೆಯಿಂದ ಹಲವಾರು ಕಾಯಿಲೆಗಳು ಜನರಲ್ಲಿ ಕಾಣಿಸಿಕೊಳ್ಳುತ್ತಿದ್ದು, ಪ್ರತಿಶತ ಶೇ. 6ರಷ್ಟು ಜನ ಮದ್ಯಪಾನದಿಂದ ಸಾವನಪ್ಪುತ್ತಿದ್ದಾರೆ. ರಸ್ತೆ ಅಪಘಾತದಲ್ಲಿ ಶೇ. 65ರಷ್ಟು ಅಪಘಾತಗಳು ಮದ್ಯಪಾನದಿಂದ ಆಗುತ್ತಿವೆ ಎಂದು ಹೇಳಿದರು.
ಡಾ| ರಾಜೇಂದ್ರ ಬಸರಿಗಿಡದ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕ್ಷಯರೋಗ ನಿಯಂತ್ರಣ ಅಧಿಕಾರಿ ಡಾ| ಅರುಂಧತಿ ಕುಲಕರ್ಣಿ, ಪ್ರಭಾರಿ ತಾಲೂಕು ಆರೋಗ್ಯ ಅಧಿಕಾರಿ ಡಾ| ಪ್ರೀತ ಖೋನಾ, ಡಾ| ಅಮೃತ ಹರಿದಾಸ, ಡಾ| ಮಹೇಶ ಕೊಪ್ಪಳ, ಡಾ| ಸಿ.ಎಸ್. ಹೊಸಮಠ ಇದ್ದರು. ರೂಪಸೇನ ಚವ್ಹಾಣ ಸ್ವಾಗತಿಸಿ, ನಿರೂಪಿಸಿದರು. ಗೀತಾ ಕಾಂಬಳೆ ವಂದಿಸಿದರು.