ಕೊಪ್ಪಳ: ನನ್ನ ಮಗನನ್ನು ಚೆನ್ನಾಗಿ ಓದಿಸಬೇಕು ಅಂತಾ ಹಾಸ್ಟೆಲ್ಗೆ ಸೇರಿಸಿದ್ನೆ ರೀ..ಮನೆಯಲ್ಲಿ ಕಿತ್ತು ತಿನ್ನುವ ಬಡತನ. ಬೇಸತ್ತು ದುಡಿಮೆ ಅರಸಿ ಬೆಂಗಳೂರಿಗೆ ಗುಳೆ ಹೋಗಿದ್ವಿ. ಮಗನ ಮುಖ ನೋಡಲು ಶನಿವಾರವಷ್ಟೇ ಹಿಟ್ನಾಳ್‌ಗೆ ಬಂದಿದ್ವಿ. ರವಿವಾರ ಬೆಳಗ್ಗೆ ಹಾಸ್ಟೆಲ್ಗೆ ಬರಬೇಕು ಅನ್ನೋದ್ರೊಳಗೆ ಮಗನ ಸಾವಿನ ಸುದ್ದಿ ಬಂತ್ರೀ..
ಕೊಪ್ಪಳದ ಬನ್ನಿಕಟ್ಟಿ ಏರಿಯಾದ ಡಿ.ದೇವರಾಜ ಅರಸು ಮೆಟ್ರಿಕ್ ಪೂರ್ವ ವಸತಿ ನಿಲಯದಲ್ಲಿ ವಿದ್ಯುತ್ ಸ್ಪರ್ಶದಿಂದ ಮೃತಪಟ್ಟ ಮಲ್ಲಿಕಾರ್ಜುನ ತಂದೆ ಅಮರೇಶಪ್ಪ ಮೆತಗಲ್ ಅವರ ಆಕ್ರಂದನ ನುಡಿಗಳಿವು.
ನಮಗೆ ದುಡಿಮೆ ಇಲ್ದೆ ಬೇರೆ ಗತಿಯಿಲ್ಲ. ನಮ್ಮ ಕಷ್ಟ ಮಕ್ಕಳಿಗೆ ಬರಬಾರ್ದು ಅಂತಾ ಎಷ್ಟೇ ಕಷ್ಟ ಬಂದ್ರೂ ಮಕ್ಕಳಿಗೆ ಒಳ್ಳೇ ಶಿಕ್ಷಣ ಕೊಡಿಸಬೇಕಂಥಾ ಆತನನ್ನ ಕೊಪ್ಪಳದ ಹಾಸ್ಟೆಲ್ಗೆ ಹಾಕಿದ್ವಿ. ಆತನೂ ಚೆನ್ನಾಗಿ ಅಭ್ಯಾಸ ಮಾಡತಿದ್ದ. ಆದರೆ ಆ ದೇವರು ಆತನನ್ನು ಕಿತ್ತಕೊಂಡು ಬಿಟ್ಟ ಎಂದು ತಂದೆ ಕಣ್ಣೀರಾದರು.
ನನಗೆ ನಾಲ್ವರು ಮಕ್ಕಳು. ಇಬ್ರು ನನ್ನ ಜತೆ ಇದ್ದಾರ. ಒಬ್ಬ ಮಗಳು ಕುಕನೂರಿನಲ್ಲಿ ಓದುತ್ತಿದ್ದು, ಮಲ್ಲಿಕಾರ್ಜುನ ಕೊಪ್ಪಳದ ಹಾಸ್ಟೆಲ್ನಲ್ಲಿ ಓದುತ್ತಿದ್ದ. ನಾವು ದುಡಿಮೆ ಮಾಡಲು ಬೆಂಗಳೂರಿಗೆ ಹೋಗಿದ್ವಿ.. ಶನಿವಾರವಷ್ಟೇ ಮಗನ ಜತೆ ಮಾತನಾಡಲು ಎಲ್ಲರೂ ಬಂದು ಹಿಟ್ನಾಳದಲ್ಲಿ ಸಹೋದರಿ ಮನೆಯಲ್ಲಿದ್ವಿ. ರವಿವಾರ ಹಾಸ್ಟೆಲ್ಗೆ ಬಂದು ಮಗನ ಮುಖ ನೋಡಿ ಮಾತಾಡ್ಸಿ ಹೋಗಬೇಕೆಂದಿದ್ವಿ.. ಆದರೆ ಹಾಸ್ಟೆಲ್ನಿಂದ ಫೋನ್ ಮಾಡಿ ನಿನ್ನ ಮಗನಿಗೆ ಕರೆಂಟ್ ಹಿಡಿದಿದೆ ಅಂದ್ರು.ಎದ್ದು ಬಿದ್ದು ಇಲ್ಲಿಗೆ ಬಂದ್ ನೋಡಿದ್ರ ಮಗ ಹೆಣವಾಗಿದ್ದ ರೀ..ಏನ್ ಮಾಡ್ಬೇಕು ನಮ್ಮ ದೈವಾ ಸರಿಯಿಲ್ಲ ಎಂದು ತಂದೆ ಕಣ್ಣೀರಿಟ್ಟ.
ಗಣೇಶ ಹೆತ್ತವರಿಗೆ ಏಕೈಕ ಪುತ್ರ: ಗಣೇಶ ಕುರಿ ಕೊಪ್ಪಳ ತಾಲೂಕಿನ ಲಾಚನಕೇರಿಯ ನಾಗಪ್ಪ ಹಾಗೂ ಬಸವ್ವ ಅವರ ಏಕೈಕ ಪುತ್ರ, ಓರ್ವ ಪುತ್ರಿ ಇದ್ದು, ಮನೆತನ ಬೆಳಗಿಸಬೇಕಾದ ಮಗನೇ ಇಲ್ಲವೆಂಬ ಸುದ್ದಿ ತಿಳಿದ ಪಾಲಕರ ಆಕ್ರಂದನ ಹೇಳತೀರದು. ಶನಿವಾರ ರಾತ್ರಿಯಷ್ಟೇ ಗಣೇಶ ಪಾಲಕರಿಗೆ ಕರೆ ಮಾಡಿ ಮಾತನಾಡಿದ್ದ. ಅದನ್ನು ನೆನೆಯುತ್ತಲೇ ನಿನ್ನೆ ಫೋನ್ ಮಾಡಿದ್ಯಲ್ಲೋ.. ನಾನು ಆರಾಮ್ ಅದೀನಿ ಅಂತಾ ಹೇಳಿದ್ಯಲ್ಲೋ.. ಈಗ ಎಲ್ಲಿ ಹೋಗಿಯೋ ಎಂದು ತಾಯಿಯ ಕರುಳಿನ ಕೂಗು ಎಲ್ಲರ ಕಣ್ಣಲ್ಲಿ ನೀರು ಹರಿಸಿತು.
ಕುಮಾರ ಶಾಲೆಗೆ ಪಸ್ಟ್: ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಬಿಡ್ನಾಳ ಗ್ರಾಮದ ಕುಮಾರ ಲಚ್ಚಪ್ಪ ನಾಯಕ್ ಲಮಾಣಿ ಕೊಪ್ಪಳ ತಾಲೂಕಿನ ಹೈದರ್ ನಗರದಲ್ಲಿ ಅವರ ಸಂಬಂಧಿಕರ ಮನೆಯಲ್ಲಿದ್ದ. ಓದಿನಲ್ಲಿ ಪ್ರತಿಭಾವಂತನಾಗಿದ್ದ ಈತನಿಗೆ ಹಾಸ್ಟೆಲ್ ಸೌಲಭ್ಯವೂ ದೊರೆತಿತ್ತು. ಕೊಪ್ಪಳದ ಕಾಳಿದಾಸ ಪ್ರೌಢಶಾಲೆಯಲ್ಲಿ 9ನೇ ತರಗತಿ ಓದುತ್ತಿದ್ದ ಈತ ಪ್ರತಿಭಾವಂತನಾಗಿದ್ದ. ಆತನ ಅಕ್ಷರ ಮುತ್ತಿನಂತಿರುತ್ತಿದ್ದವು. ಶಾಲೆಯಲ್ಲಿ ಯಾವಾಗ್ಲೂ ಫಸ್ಟ್ ಬರುತ್ತಿದ್ದ. ತುಂಬಾ ಜಾಣನಾಗಿದ್ದ. ಆ ದೇವರು ಆತನನ್ನು ಕಿತ್ತಕೊಂಡಾಎಂದು ಶಾಲೆಯ ಮುಖ್ಯೋಪಾಧ್ಯಾಯರು ನೋವಿನಿಂದಲೇ ವಿದ್ಯಾರ್ಥಿಯ ಗುಣಗಾನ ಮಾಡಿದರು.
ದೇವರಾಜನೇ ಮನೆಗೆ ಹಿರಿಯ ಮಗನಾಗಿದ್ದ: ಮಾದಿನೂರು ನಿವಾಸಿ ದೇವರಾಜ ಹಡಪದ ಅಜ್ಜಿಯ ಊರು ಹಲಗೇರಿಯಲ್ಲಿ ವಾಸವಾಗಿದ್ದ. ಆತನಿಗೆ ಹಾಸ್ಟೆಲ್ ದೊರೆತಿದ್ದರಿಂದ ಅಲ್ಲಿಯೇ ಅಭ್ಯಾಸ ಮಾಡುತ್ತಿದ್ದ. ನಾಗಪ್ಪ ದೇವಕ್ಕ ದಂಪತಿಯ ಮೂವರು ಮಕ್ಕಳಲ್ಲಿ ದೇವರಾಜನೇ ಹಿರಿಯ ಮಗ. ಮನೆಗೆ ದೀಪವಾಗಬೇಕಾಗಿದ್ದ ಮಗನೇ ಇಲ್ಲದಂತಾಯಿತಲ್ಲೋ ಎಂದು ಪಾಲಕರ ಕಣ್ಣೀರು ಸುರಿಸಿದರು.
ಕುಟುಂಬವೇ ಕಣ್ಣೀರಾಗಿದೆ: ಗಂಗಾವತಿ ತಾಲೂಕಿನ ಮುಕ್ಕುಂಪಿಯ ನಿವಾಸಿ ಟಣಕನಕಲ್ನ ಆದರ್ಶ ಶಾಲೆಯಲ್ಲಿ ಓದುತ್ತಿದ್ದ ಬಸವರಾಜ ಜಲ್ಲಿ, ಲಿಂಗದಳ್ಳಿಯ ಸಂಬಂಧಿಕರ ಮನೆಯಲ್ಲಿದ್ದ. ನಂತರ ಹಾಸ್ಟೆಲ್ ಸೌಲಭ್ಯ ಸಿಕ್ಕಿತ್ತು. ಫಕೀರಪ್ಪ, ಹೊನ್ನಮ್ಮ ದಂಪತಿಗೆ ನಾಲ್ಕು ಮಕ್ಕಳಲ್ಲಿ ಈತನೇ ಹಿರಿಯ ಪುತ್ರ. ಆದರೆ ಈತನು ಇಲ್ಲದ ಸುದ್ದಿ ಕೇಳಿ ಕುಟುಂಬವೇ ಕುಸಿದು ಬಿದ್ದು ರೋಧಿಸುತ್ತಿದೆ.
•ದತ್ತು ಕಮ್ಮಾರ